ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಇಟ್ಟಿದ್ದೇವೆ: ಜಿ. ಪರಮೇಶ್ವರ

Published 9 ಜನವರಿ 2024, 6:22 IST
Last Updated 9 ಜನವರಿ 2024, 6:22 IST
ಅಕ್ಷರ ಗಾತ್ರ

ಬೆಂಗಳೂರು: ‘ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಿದರೆ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲ ಆಗಲಿದೆ ಎಂದು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲ ಅವರಿಗೆ ಸಲಹೆ ನೀಡಿದ್ದೇವೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಲೋಕಸಭೆ ‌ಚುನಾವಣೆ ಬರುತ್ತಿದೆ. ನೀವು ಹಿರಿಯರು. ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಚರ್ಚೆ ಮಾಡಲು ಸಚಿವರನ್ನು ಅವರು ಆಹ್ವಾನಿಸಿದ್ದರು. ಆಗ ಕೆಲವು ಸಚಿವರು ಉಪ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ’ ಎಂದರು.

‘ಉಪ ಮುಖ್ಯಮಂತ್ರಿ ಮಾಡಿದರೆ ಅನುಕೂಲ ಆಗುತ್ತದೆ ಎಂದು ಕೆಲವು ಸಚಿವರು ಹೇಳಿದರು. ಹೈಕಮಾಂಡ್‌ ಜೊತೆ ಈ ವಿಚಾರವಾಗಿ ಚರ್ಚಿಸುವುದಾಗಿ ಸುರ್ಜೇವಾಲ ಹೇಳಿದರು. ಉಪ ಮುಖ್ಯಮಂತ್ರಿ ಹುದ್ದೆ ವಿಷಯವಾಗಿಯೇ ಚರ್ಚಿಸಲು ಅವರು ಸಭೆ ಕರೆದಿರಲಿಲ್ಲ’ ಎಂದರು.

‘ಹೆಚ್ಚುವರಿ ಉಪ ಮುಖ್ಯಮಂತ್ರಿ ಮಾಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ‌. ನಾವು ಸಲಹೆ ಮಾಡಬಹುದು. ಸಲಹೆ ತೆಗೆದುಕೊಳ್ಳುವುದು, ಬಿಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಉಪ ಮುಖ್ಯಮಂತ್ರಿ ಹುದ್ದೆ ವಿಚಾರ ಪಕ್ಷದ ಆಂತರಿಕ ವಿಷಯ. ಸಾಧಕ-ಬಾಧಕ ನೋಡಿ ಹೈಕಮಾಂಡ್‌ ತೀರ್ಮಾನ ಮಾಡಲಿದೆ’ ಎಂದೂ ಹೇಳಿದರು.

‘ನಾವು ಲೋಕಸಭೆ ಬಗ್ಗೆ ಚರ್ಚೆ ಮಾಡಿದ್ದೇವೆ. ಅಭ್ಯರ್ಥಿಗಳು, ಚುನಾವಣಾ ತಂತ್ರಗಾರಿಕೆ ಹೇಗಿರಬೇಕು ಎಂಬ ಬಗ್ಗೆಯೂ ವಿಚಾರ ವಿನಿಮಯ ಮಾಡಿದ್ದೇವೆ. ನಾನು ಎರಡು ಬಾರಿ ಕೆಪಿಸಿಸಿ ಅಧ್ಯಕ್ಷನಾಗಿ ಎರಡು ಚುನಾವಣೆ ಎದುರಿಸಿದ್ದೆ. ಅ ವಿಚಾರಗಳನ್ನು ತಿಳಿಸಿದ್ದೇನೆ. ಅದು ಬಿಟ್ಟು ದೊಡ್ಡ ಪ್ರಮಾಣದ ಚರ್ಚೆ ಆಗಿಲ್ಲ’ ಎಂದರು. 

‘ಸಚಿವರ ಸ್ಪರ್ಧೆ ವಿಚಾರ ಸಭೆಯಲ್ಲಿ ಚರ್ಚೆ ಆಗಿಲ್ಲ. ಆದರೆ, ಸಚಿವರು ಸ್ಪರ್ಧೆ ಮಾಡುವ ಪರಿಸ್ಥಿತಿ ಬಂದರೆ ಸ್ಪರ್ಧಿಸಬೇಕಾಗುತ್ತದೆ ಎಂದು ಸುರ್ಜೇವಾಲ ಹೇಳಿದ್ದಾರೆ. ಕಳೆದ ಬಾರಿ ಕೃಷ್ಣ ಬೈರೇಗೌಡ ಅವರು ಸ್ಪರ್ಧೆ ಮಾಡಿರುವುದನ್ನು ಅವರು ಉದಾಹರಣೆ ಕೊಟ್ಟು ಹೇಳಿದ್ದಾರೆ’ ಎಂದರು.

11ರಂದು ದೆಹಲಿಗೆ: ‘28 ಸಚಿವರನ್ನು ದೆಹಲಿಗೆ ಬರಲು ವರಿಷ್ಠರು ಹೇಳಿದ್ದಾರೆ. ಇದೇ 11ರಂದು ಎಲ್ಲರೂ ಹೋಗುತ್ತೇವೆ. ಒಬ್ಬೊಬ್ಬ ಸಚಿವರಿಗೆ ಒಂದೊಂದು ಲೋಕಸಭೆ ಕ್ಷೇತ್ರ ಜವಾಬ್ದಾರಿ ಕೊಟ್ಟಿದ್ದಾರೆ. ಅವರೆಲ್ಲರನ್ನೂ ಕರೆದು ಸಲಹೆ ಸೂಚನೆ ಕೊಡುತ್ತಾರೆ. ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿ ತರಲು ಹೇಳಿದ್ದಾರೆ. ನಮ್ಮ ಕ್ಷೇತ್ರದ ಆಕಾಂಕ್ಷಿಗಳ ಬಗ್ಗೆ ಮಾಹಿತಿ ಕೊಡುತ್ತೇವೆ. ಅಂತಿಮವಾಗಿ ಹೈಕಮಾಂಡ್ ಯಾರು ಅಭ್ಯರ್ಥಿ ಎಂದು ನಿರ್ಧರಿಸಲಿದೆ. ಅಭ್ಯರ್ಥಿಗಳ ಪಟ್ಟಿ ಯಾವಾಗ ಬಿಡುಗಡೆಯಾಗುತ್ತದೊ ಗೊತ್ತಿಲ್ಲ. ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಮನವಿ ಮಾಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT