ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಬರ| ಖಾದರ್ ಓಡಾಟಕ್ಕೆ ಹೊಸ ಫಾರ್ಚೂನರ್ ಕಾರು ಬೇಕಿತ್ತಾ: ಯತ್ನಾಳ ಕಿಡಿ

Published 14 ಫೆಬ್ರುವರಿ 2024, 6:59 IST
Last Updated 14 ಫೆಬ್ರುವರಿ 2024, 6:59 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಅವರ ಓಡಾಟಕ್ಕೆ ಹೊಸ ಮಾದರಿಯ, ಕಪ್ಪು ಬಣ್ಣದ ಐಷಾರಾಮಿ ಫಾರ್ಚೂನರ್ ಕಾರು ಖರೀದಿಸಿರುವುದಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ‘ಪ್ರಜಾವಾಣಿ’ ವರದಿ ಉಲ್ಲೇಖಿಸಿ ಪೋಸ್ಟ್ ಮಾಡಿರುವ ಅವರು, ‘ದುಂದುವೆಚ್ಚಗಳನ್ನು ಕಡಿಮೆ ಮಾಡಿ, ಇರುವ ವಾಹನವನ್ನೇ ಮಾರ್ಪಾಡು ಮಾಡಿಕೊಂಡು ಬಳಸಿ ಬೊಕ್ಕಸಕ್ಕೆ ಹೊರೆಯಾಗದೆ ಇರುವ ಹಾಗೆ ಮಾಡಿ ಮೇಲ್ಪಂಕ್ತಿ ಹಾಕಿಕೊಡಬೇಕಾಗಿದ್ದ ಸಭಾಧ್ಯಕ್ಷರು ಐಷಾರಾಮಿ ಕಾರನ್ನು ಖರೀದಿ ಮಾಡುವ ಅವಶ್ಯವಿರಲಿಲ್ಲ’ ಎಂದು ಹೇಳಿದ್ದಾರೆ.

‘ರಾಜ್ಯ ಭೀಕರ ಬರದಿಂದ ಕಂಗೆಟ್ಟಿರುವ ಸಂದರ್ಭದಲ್ಲಿ 223 ತಾಲೂಕುಗಳು ಬರ ಪೀಡಿತವೆಂದು ಸರ್ಕಾರವೇ ಘೋಷಣೆ ಮಾಡಿರುವಾಗ ಈ ರೀತಿಯಾದ ಅನುತ್ಪಾದಕ ವೆಚ್ಚಗಳಿಗೆ ಕಡಿವಾಣ ಹಾಕಬೇಕಿತ್ತು’ ಎಂದು ಬರೆದುಕೊಂಡಿದ್ದಾರೆ.

ಯು.ಟಿ. ಖಾದರ್ ಅವರಿಗೆ ವಿಧಾನಸಭೆ ಸಚಿವಾಲಯದಿಂದ ಹೊಸ ಕಾರು (ಕೆಎ 11 ಜಿಎ 1) ಒದಗಿಸಲಾಗಿದ್ದು, ವಿಶೇಷ ವಿನ್ಯಾಸ ಮಾಡಿರುವುದರಿಂದ ₹41 ಲಕ್ಷ ವೆಚ್ಚ ಆಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

360 ಡಿಗ್ರಿ ಕ್ಯಾಮೆರಾ, ಪ್ರಯಾಣದ ಸಂದರ್ಭದಲ್ಲಿ ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳುವವರ ಮುಖಕ್ಕೆ ಬೆಳಕು‌‌ ನೀಡುವ ವಿಶೇಷ ಎಲ್‌ಇಡಿ ಲೈಟ್ ಸೌಲಭ್ಯವನ್ನು ಈ ಕಾರು ಹೊಂದಿದೆ. ಜಿಆರ್ ಕಿಟ್ ಅಳವಡಿಸುವ ಮೂಲಕ ಕಾರಿಗೆ ವಿಶೇಷ ವಿನ್ಯಾಸ ಕೂಡಾ ಮಾಡಲಾಗಿದೆ.

ಇನ್ನು ಕಾರು ಮುಂಭಾಗ ಹಾಗೂ ಹಿಂಭಾಗದಲ್ಲಿ ಗಂಡಭೇರುಂಡ ಲಾಂಛನ ಹೊಂದಿದೆ. ರಾಜ್ಯಪಾಲರ ಹೊರತಾಗಿ ವಿಧಾನ ಸಭಾಧ್ಯಕ್ಷರಿಗೆ ಮಾತ್ರ ಈ ಲಾಂಛನ ಅಳವಡಿಸಲು ಅವಕಾಶವಿದೆ.

ಸಿದ್ದರಾಮಯ್ಯ ಸಂಪುಟದ 33 ಸಚಿವರಿಗೆ ಕಳೆದ ಅಕ್ಟೋಬರ್‌ನಲ್ಲಿ ಇನೋವಾ ಕ್ರಿಸ್ಟಾ ಹೈಬ್ರಿಡ್‌ ಕಾರು ಖರೀದಿಸಲಾಗಿದೆ. 33 ಕಾರುಗಳನ್ನು ತಲಾ ₹30 ಲಕ್ಷ ದರದಲ್ಲಿ ಟೊಯೊಟಾ ಕಿರ್ಲೋಸ್ಕರ್‌ ಮೋಟಾರ್‌ ಪ್ರೈವೇಟ್‌ ಲಿಮಿಟೆಡ್‌ನಿಂದ ನೇರವಾಗಿ ಖರೀದಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆ (ಕೆಟಿಪಿಪಿ) ಸೆಕ್ಷನ್‌ 4–ಜಿ ಅಡಿಯಲ್ಲಿ ವಿನಾಯಿತಿ ನೀಡಿ ಆರ್ಥಿಕ ಇಲಾಖೆ ಆದೇಶ ಹೊರಡಿಸಿತ್ತು.

‘ರಾಜ್ಯದ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಸರ್ಕಾರವೇ ಘೋಷಿಸಿರುವ ಈ ಸಮಯದಲ್ಲಿ ಐಷಾರಾಮಿ ಕಾರುಗಳ ಖರೀದಿ ಅಗತ್ಯ ಇತ್ತೇ’ ಎಂದು ವಿಪಕ್ಷ ನಾಯಕರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT