ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಕಾಂಬಿಕಾ ದೇಗುಲ: ಜಮೀನು ಸ್ವಾಧೀನ–ಯಥಾಸ್ಥಿತಿಗೆ ಹೈಕೋರ್ಟ್‌ ಆದೇಶ

Published 21 ಫೆಬ್ರುವರಿ 2024, 20:16 IST
Last Updated 21 ಫೆಬ್ರುವರಿ 2024, 20:16 IST
ಅಕ್ಷರ ಗಾತ್ರ

ಬೆಂಗಳೂರು: ‘ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಕೈಗೊಂಡಿರುವ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು’ ಎಂದು ಹೈಕೋರ್ಟ್‌ ಆದೇಶಿಸಿದೆ.

‘ದೇವಾಲಯ ಸುತ್ತಲಿನ ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು’ ಎಂದು ಕೋರಿ ಸ್ಥಳೀಯ ನಿವಾಸಿ ಗುರುಪ್ರಸಾದ್ ಸಲ್ಲಿಸಿರುವ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ. ಅರ್ಜಿದಾರರ ಪರ ವಕೀಲ ವೆಂಕಟೇಶ್‌ ಪಿ.ದಳವಾಯಿ ವಾದ ಮಂಡಿಸಿದರು.

ಪ್ರಕರಣವೇನು?: ಬೈಂದೂರು ತಾಲ್ಲೂಕಿನ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಪಕ್ಕದಲ್ಲೇ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು ದೇವಾಲಯದ ಸುತ್ತಲಿನ ಸರ್ವೇ ನಂಬರ್ 12ರಲ್ಲಿ ಜಮೀನು ಸ್ವಾಧೀನಪಡಿಸಿಕೊಳ್ಳಲು ಸಚಿವಾಲಯ 2023ರ ಅಕ್ಟೋಬರ್ 10 ರಂದು ಅಧಿಸೂಚನೆ ಹೊರಡಿಸಿದೆ. ‘ದೇವಸ್ಥಾನದ ಸಮೀಪದಲ್ಲೇ ಹೆದ್ದಾರಿ ನಿರ್ಮಾಣವಾಗಲಿದೆ. ಈ ಮಾರ್ಗದಲ್ಲಿ ನಿತ್ಯ 15 ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತವೆ. ಇದರಿಂದ ದೇವಸ್ಥಾನದ ಕಟ್ಟಡಕ್ಕೆ ಅಪಾಯ ಒದಗಲಿದೆ. ಗರ್ಭಗುಡಿ ಕಂಪಿಸಲಿದೆ. ಹಾಗೆಯೇ, ದೇವಸ್ಥಾನದ ಧಾರ್ಮಿಕ ರಥೋತ್ಸವ ನೇರವೇರಿಸಲು ಅಡ್ಡಿಯಾಗುತ್ತದೆ’ ಎಂದು ಅರ್ಜಿದಾರರು ಅಧಿಸೂಚನೆಯನ್ನು ಆಕ್ಷೇಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT