ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿ ಇಲಾಖೆ ಭೂವಿಜ್ಞಾನಿ ಪ್ರತಿಮಾ ಕೊಲೆ: ಬಾಗಿಲು ಬಳಿ ಬಿದ್ದಿದ್ದ ಬ್ಯಾಗ್, ಕನ್ನಡಕ

ಬೆಂಗಳೂರು ಪೊಲೀಸರ ಪ್ರಾಥಮಿಕ ತನಿಖೆಯ ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ..
Published 5 ನವೆಂಬರ್ 2023, 14:42 IST
Last Updated 5 ನವೆಂಬರ್ 2023, 14:42 IST
ಅಕ್ಷರ ಗಾತ್ರ

ಬೆಂಗಳೂರು: ‘ಮನೆಯ ಹೊರಭಾಗದಲ್ಲಿದ್ದ ಕಬ್ಬಿಣದ ಗೇಟ್‌ ತೆರೆದಿದ್ದ ಪ್ರತಿಮಾ, ನಂತರ ಮನೆಯ ಮುಖ್ಯ ಬಾಗಿಲು ತೆರೆದು ಒಳಗೆ ಕಾಲಿಟ್ಟಿದ್ದರು. ಇದೇ ಸಂದರ್ಭದಲ್ಲಿ ಹಿಂದಿನಿಂದ ಬಂದಿದ್ದ ಇಬ್ಬರು ದುಷ್ಕರ್ಮಿಗಳು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ’

ಇದು ಬೆಂಗಳೂರಿನಲ್ಲಿ ಕೊಲೆಯಾಗಿರುವ ಗಣಿ ಇಲಾಖೆ ಭೂವಿಜ್ಞಾನಿ ಕೆ.ಎಸ್ ಪ್ರತಿಮಾ ಕೊಲೆ ಬಗ್ಗೆ ತಿಳಿದು ಬಂದಿರುವ ಪ್ರಾಥಮಿಕ ಮಾಹಿತಿಗಳು.

‘ಮನೆಯ ಮುಖ್ಯ ಬಾಗಿಲು ಬಳಿ ಊಟದ ಬ್ಯಾಗ್ ಹಾಗೂ ಕನ್ನಡಕ ಬಿದ್ದಿತ್ತು. ಅದೇ ಬಾಗಿಲು ಬಳಿ ದುಷ್ಕರ್ಮಿಗಳು, ಪ್ರತಿಮಾ ಅವರನ್ನು ಹಿಂದಿನಿಂದ ಹಿಡಿದುಕೊಂಡು ತಳ್ಳಿಕೊಂಡು ಹೋಗಿ ಉಸಿರುಗಟ್ಟಿಸಿದ್ದಾರೆ. ಚಾಕುವಿನಿಂದ ಕತ್ತು ಕೊಯ್ದಿದ್ದಾರೆ. ನಂತರ, ಬೆಡ್‌ ಮೇಲೆ ಮೃತದೇಹ ಇರಿಸಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.’

‘ಸ್ಥಳ ಪರಿಶೀಲನೆ ನಡೆಸಿದಾಗ, ಈಗಾಗಲೇ ಕೊಲೆ ಎಸಗಿರುವ ಆರೋಪಿಗಳೇ ಈ ಕೃತ್ಯದಲ್ಲಿ ಭಾಗಿಯಾಗಿರುವ ಅನುಮಾನವಿದೆ’ ಎಂದು ತಿಳಿಸಿವೆ.

ಮನೆ ಬಳಿ ಇಲ್ಲ ಸಿ.ಸಿ.ಟಿ.ವಿ ಕ್ಯಾಮೆರಾ: ದೃಶ್ಯಗಳಿಗಾಗಿ ಪೊಲೀಸರ ಹುಡುಕಾಟ

ಹಿರಿಯ ಭೂ ವಿಜ್ಞಾನಿ ಕೆ.ಎಸ್. ಪ್ರತಿಮಾ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಆರೋಪಿಗಳ ಪತ್ತೆಗಾಗಿ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಹುಡುಕಾಡುತ್ತಿದ್ದಾರೆ. ಆದರೆ, ಪ್ರತಿಮಾ ಮನೆ ಬಳಿ ಕ್ಯಾಮೆರಾಗಳಿರಲಿಲ್ಲವೆಂಬುದು ಗೊತ್ತಾಗಿದೆ.

‘ಪ್ರತಿಮಾ ಅವರ ಮನೆ ಹಾಗೂ ಸುತ್ತಮುತ್ತ ಯಾವುದೇ ಸ್ಥಳದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳಿಲ್ಲ. ಕೃತ್ಯ ನಡೆಯುತ್ತಿದ್ದಂತೆ ಕ್ಯಾಮೆರಾಗಳಿಗಾಗಿ ಹುಡುಕಾಟ ನಡೆಸಲಾಯಿತು. ಮನೆಯಿಂದ 1 ಕಿ.ಮೀ ದೂರದಲ್ಲಿರುವ ಬೇರೆ ಸ್ಥಳಗಳಲ್ಲಿ ಕ್ಯಾಮೆರಾಗಳಿವೆ. ಎಲ್ಲ ಕ್ಯಾಮೆರಾ ದೃಶ್ಯಗಳನ್ನು ಸಂಗ್ರಹಿಸಿ ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ತಮಿಳುನಾಡಿನಿಂದ ಬರುವ ವಾಹನ ಪರಿಶೀಲಿಸಲು ಹೇಳಿದ್ದೆ ಎಂದ ಜಿಲ್ಲಾಧಿಕಾರಿ

‘ಅಕ್ರಮವಾಗಿ ಜಲ್ಲಿಕಲ್ಲು ಹಾಗೂ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ದೂರುಗಳಿದ್ದವು. ಈ ಬಗ್ಗೆ ಚರ್ಚಿಸಲು ತಿಂಗಳ ಹಿಂದೆಯಷ್ಟೇ ಸಭೆ ನಡೆಸಿದ್ದೆ. ಈ ಸಭೆಯಲ್ಲಿ ಪ್ರತಿಮಾ ಅವರೂ ಹಾಜರಾಗಿದ್ದರು. ತಮಿಳುನಾಡಿನಿಂದ ಬರುವ ವಾಹನಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ಸೂಚಿಸಿದ್ದೆ’ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಹೇಳಿದರು.

ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪ್ರತಿಮಾ, ಉತ್ತಮ ಅಧಿಕಾರಿ. ಕೆಲಸದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಜೊತೆಗೆ, ಯಾವುದೇ ದೂರುಗಳೂ ಬಂದಿರಲಿಲ್ಲ. ಯಾವ ಕಾರಣಕ್ಕೆ ಕೊಲೆ ನಡೆದಿದೆ ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT