ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಎಂಗೆ ಮಾನಸಿಕವಾಗಿ ನೋವಾಗಿದೆ, ನಾನು ಬಂಡೆಯಂತೆ ನಿಲ್ಲುವೆ: ಡಿ.ಕೆ.ಶಿವಕುಮಾರ್‌

Published : 8 ಆಗಸ್ಟ್ 2024, 15:22 IST
Last Updated : 8 ಆಗಸ್ಟ್ 2024, 15:22 IST
ಫಾಲೋ ಮಾಡಿ
Comments

ಮೈಸೂರು: ‘ಬಿಜೆಪಿ–ಜೆಡಿಎಸ್‌ನವರು ಸುಳ್ಳುಗಳನ್ನು ಹೇಳಿ ಇಲ್ಲಸಲ್ಲದ್ದನ್ನು ಬಿಂಬಿಸುತ್ತಿದ್ದಾರಲ್ಲ ಎಂಬ ನೋವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿದೆ. ಅವರ ಪರವಾಗಿ ಬಂಡೆಯಾಗಿ ನಿಲ್ಲುತ್ತೇನೆ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ಆಯೋಜಿಸಿರುವ ಕಾಂಗ್ರೆಸ್ ಜನಾಂದೋಲನ ವೇದಿಕೆಯನ್ನು ಗುರುವಾರ ಪರಿಶೀಲಿಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಸಿದ್ದರಾಮಯ್ಯ ಭಾವನಾತ್ಮಕ ಜೀವಿ. 2ನೇ ಬಾರಿಗೆ ಮುಖ್ಯಮಂತ್ರಿ ಆಗಿರುವ ಒಬ್ಬ ಹಿಂದುಳಿದ ವರ್ಗದ ನಾಯಕನ ತೇಜೋವಧೆಗೆ ಬಿಜೆಪಿ–ಜೆಡಿಎಸ್‌ ಹೊರಟಿರುವುದರಿಂದಾಗಿ ಇಡೀ ಸರ್ಕಾರ ಹಾಗೂ ಮಲ್ಲಿಕಾರ್ಜುನ ಖರ್ಗೆ ನೇತೃತ್ವ ಮತ್ತು ರಾಹುಲ್ ಗಾಂಧಿ ಅವರ ಮಾರ್ಗದರ್ಶನದಲ್ಲಿ ಇಡೀ ಪಕ್ಷ ಸಿದ್ದರಾಮಯ್ಯ ಪರವಾಗಿ ನಿಂತಿದ್ದೇವೆ. ಕೆಪಿಸಿಸಿ ಅಧ್ಯಕ್ಷನಾಗಿ ಬಂಡೆಯೋ, ಬಲವೋ ಅಥವಾ ತೋಳಾಗಿಯೋ... ಅವರ ಪರವಾಗಿದ್ದೇನೆ; ಮುಂದೆಯೂ ಇರುತ್ತೇನೆ’ ಎಂದು ಹೇಳಿದರು.

‘ಮುಡಾದಲ್ಲಿ ಅವರು ನಿವೇಶನ ಪಡೆದಿದ್ದು ಹಗರಣ ಆಗಿದ್ದರೆ ಹೊರಗಡೆ ಬರುತ್ತಿತ್ತು. ಆಗಿಲ್ಲವಲ್ಲ? ಮೈಸೂರು ಚಲೋ ಪಾದಯಾತ್ರೆಯುದ್ದಕ್ಕೂ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಆ ಹಗರಣದ ಬಗ್ಗೆ ಮಾತಾಡಲೇ ಇಲ್ಲವಲ್ಲ ಏಕೆ?’ ಎಂದು ಟೀಕಿಸಿದರು.

‘ಪಾದಯಾತ್ರೆ ಅವಶ್ಯಕತೆ ಇಲ್ಲ ಎಂದು ಅವರೇ ಹೇಳಿದ್ದರು. ಒತ್ತಡದಿಂದಾಗಿ ಭಾಗವಹಿಸಿದ್ದಾರಷ್ಟೆ. ಸಚಿವ ಸ್ಥಾನ ಹೋದೀತೆಂಬ ಭಯದಲ್ಲಿ ಪಾದಯಾತ್ರೆಗೆ ಬಂದಿದ್ದಾರೆ. ಶತ್ರುವಿನ ಶತ್ರು ಮಿತ್ರ ಎಂಬ ಸ್ಥಿತಿಯಲ್ಲಿ ಜೆಡಿಎಸ್–ಬಿಜೆಪಿಯವರಿದ್ದಾರೆ. ಅವರ ಹೋರಾಟದಲ್ಲಿ ಎಲ್ಲಾ ಕಡೆಯೂ ಜಗಳವಿದೆ’ ಎಂದು ಲೇವಡಿ ಮಾಡಿದರು.

‘ಭ್ರಷ್ಟಾಚಾರಿಗಳಾದ ಬಿಜೆಪಿ–ಜೆಡಿಎಸ್‌ನವರು ಅವರ ಭ್ರಷ್ಟಾಚಾರ ಮುಚ್ಚಿ ಹಾಕಿಕೊಳ್ಳಲು ಪಾಪದ ಪಾದಯಾತ್ರೆ ನಡೆಸುತ್ತಿದ್ದಾರೆ. ಅದಕ್ಕೆ ಉತ್ತರ ಕೊಡಲು ಹಾಗೂ ಪ್ರಶ್ನೆಗಳನ್ನು ಕೇಳಲು ನಾವು ಜನಾಂದೋಲನ ಸಮಾವೇಶ ಹಮ್ಮಿಕೊಂಡಿದ್ದೇವೆ. ಬಿಜೆಪಿ ಸರ್ಕಾರದಲ್ಲಿ 25 ಹಗರಣಗಳು, ಕುಮಾರಸ್ವಾಮಿ ಕುಟುಂಬದ ಹಗರಣಗಳಿಗೆ ಸಂಬಂಧಿಸಿದಂತೆ ಉತ್ತರವನ್ನು ಕೊಡಲಾಗುವುದು’ ಎಂದು ಹೇಳಿದರು.

‘ನೀವು ಸಮಾವೇಶಕ್ಕೆ ಬರುವುದು ಬೇಡ, ಜೆಡಿಎಸ್–ಬಿಜೆಪಿಯನ್ನು ನಾವೇ ಎದರಿಸುತ್ತೇವೆ ಎಂದು ಸಿದ್ದರಾಮಯ್ಯ ಅವರಿಗೆ ಹೇಳಿದ್ದೆ. ತವರಲ್ಲಿ ನಡೆಯುತ್ತಿರುವ ಕಾರಣದಿಂದ ಪಾಲ್ಗೊಳ್ಳಲಿದ್ದಾರೆ. ಬಹಳಷ್ಟು ವಿಚಾರಗಳನ್ನು ಹೇಳಲಿದ್ದಾರೆ. ವಿರೋಧಪಕ್ಷಗಳ ವಿರುದ್ಧ ಹೇಳಲು ನಮಗೂ ಬಹಳಷ್ಟು ವಿಷಯಗಳಿವೆ. ಅದೆಲ್ಲವನ್ನೂ ಒಂದೊಂದಾಗಿ ತಿಳಿಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT