ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ವರ್ಷಾಚರಣೆ: ಚಲನವಲನ ಕ್ಯಾಮೆರಾಗಳಲ್ಲಿ ಸೆರೆ

ಬ್ರಿಗೇಡ್, ಎಂ.ಜಿ.ರಸ್ತೆ– ಹೆಚ್ಚು ಜನ ಸೇರುವ ನಿರೀಕ್ಷೆ
Last Updated 28 ಡಿಸೆಂಬರ್ 2022, 20:50 IST
ಅಕ್ಷರ ಗಾತ್ರ

ಬೆಂಗಳೂರು: ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ನಗರ ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ, ಹೆಚ್ಚುವರಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ಅವರು ಸಂಭ್ರಮಾಚರಣೆ ನಡೆಯುವ ರಸ್ತೆಗಳಿಗೆ ಬುಧವಾರ ಭೇಟಿ ನೀಡಿ ಭದ್ರತಾ ಕ್ರಮ ಪರಿಶೀಲಿಸಿದರು.

ಬ್ರಿಗೇಡ್ ರಸ್ತೆ, ಚರ್ಚ್‌ ಸ್ಟ್ರೀಟ್, ಎಂ.ಜಿ.ರಸ್ತೆ, ಇಂದಿರಾನಗರ, ಕೋರಮಂಗಲ ಹಾಗೂ ಎಚ್‌ಎಸ್‌ಆರ್‌ ಲೇಔಟ್‌ ರಸ್ತೆಗಳಲ್ಲಿ ಹೊಸ ವರ್ಷ ಸ್ವಾಗತಿಸಲು ಈ ಬಾರಿ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ.

ರಾತ್ರಿ 12ರಿಂದ ರಾತ್ರಿ 1 ಗಂಟೆಯ ತನಕ ಮಾತ್ರ ಸಂಭ್ರಮಕ್ಕೆ ಅವಕಾಶ ನೀಡಲಾಗುವುದು. ಅದಾದ ಮೇಲೆ ರಸ್ತೆಗಳಿಂದ ಜನರು ಮನೆಗಳಿಗೆ ತೆರಳಬೇಕು. ಸಂಭ್ರಮಾಚರಣೆಯ ಎಲ್ಲ ದೃಶ್ಯಗಳೂ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾಗಲಿವೆ. ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸಿ.ಸಿ ಟಿ.ವಿ ಕ್ಯಾಮೆರಾ, ಬಾರ್, ಪಬ್, ಹೋಟೆಲ್‌ನಲ್ಲಿ ಪರಿಶೀಲನೆ ನಡೆಸಲಾಗಿದೆ. ನಿಮಯ ಮೀರಿದರೆ ಕ್ರಮ ಕೈಗೊಳ್ಳಲಾಗುವುದು. ರಸ್ತೆಯ ಎರಡು ಬದಿಯಲ್ಲೂ ಬ್ಯಾರಿಕೇಡ್ ಹಾಕಿ ವಾಹನ ಸಂಚಾರವನ್ನು ಸಂಜೆಯಿಂದಲೇ ನಿರ್ಬಂಧಿಸಲಾಗುವುದು. ಮಾಸ್ಕ್ ಧರಿಸಿದ್ದವರಿಗೆ ಮಾತ್ರ ಪ್ರವೇಶ ನೀಡಲು ಪೊಲೀಸರು ನಿರ್ಧರಿಸಿದ್ದಾರೆ.

ಸಂಭ್ರಮಾಚರಣೆ ನಡೆಯುವ ರಸ್ತೆಗಳ ಪ್ರವೇಶ ದ್ವಾರ, ಪಬ್‌, ರೆಸ್ಟೋರೆಂಟ್‌ ಪ್ರವೇಶ ದ್ವಾರದ ಬಳಿ ಮಾಸ್ಕ್ ತೆಗೆದು ಕ್ಯಾಮೆರಾಕ್ಕೆ ಮುಖ ಚಹರೆ ತೋರಿಸಿಯೇ ಪ್ರವೇಶಿಸಬೇಕು. ಪ್ರತಿ ಪಬ್‌ ಎದುರು ಮಹಿಳಾ ಸಿಬ್ಬಂದಿ, ಪುರುಷ ಸಿಬ್ಬಂದಿ, ಒಂದು ಪೊಲೀಸ್‌ ವಾಹನ ನಿಯೋಜಿಸಲಾಗುವುದು. ಅಹಿತಕರ ಘಟನೆ ನಡೆದರೆ ಕಿಡಿಗೇಡಿಗಳನ್ನು ಸ್ಥಳದಲ್ಲಿಯೇ ಬಂಧಿಸಲಾಗುವುದು. ಓಲಾ, ಉಬರ್‌ಗಳ ಪಾರ್ಕಿಂಗ್‌ಗೆ ಪ್ರತ್ಯೇಕ ಸ್ಥಳ ನಿಗದಿಗೊಳಿಸಲಾಗಿದೆ. ಅದೇ ಸ್ಥಳದಲ್ಲಿ ಪಾರ್ಕಿಂಗ್ ಮಾಡಬೇಕು ಎಂದು ಪೊಲೀಸರು ಹೇಳಿದರು.

ಕೆಲವು ಪ್ರಮುಖ ರಸ್ತೆಗಳನ್ನು ಬಂದ್‌ ಮಾಡುವುದರಿಂದ ಬದಲಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಅವರು ಹೇಳಿದರು.

ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಹಾಜರಿದ್ದರು.

ಆಂಬುಲೆನ್ಸ್ ವ್ಯವಸ್ಥೆ

ಆಗ್ನೇಯ ವಿಭಾಗದಲ್ಲಿ ಸಾಕಷ್ಟು ಸಂಖ್ಯೆಯ ಪಬ್‌ ಹಾಗೂ ರೆಸ್ಟೋರೆಂಟ್‌ಗಳಿದ್ದು, ಪ್ರತಿ ಪಬ್‌ ಎದುರೂ ಸಿಬ್ಬಂದಿ ನಿಯೋಜಿಸಲು ಆ ವಿಭಾಗದ ಪೊಲೀಸರು ತೀರ್ಮಾನಿಸಿದ್ದಾರೆ.

ಸಂಭ್ರಮದ ವೇಳೆ ಅತಿಯಾದ ಮದ್ಯ ಸೇವಿಸಿ ಪ್ರಜ್ಞೆ ತಪ್ಪಿದವರನ್ನು ಆಂಬುಲೆನ್ಸ್‌ನಲ್ಲಿ ಕೂರಿಸಲಾಗುವುದು. ಜತೆಗೆ, ಆಯತಪ್ಪಿಬಿದ್ದರೆ ಹಾಗೂ ಆರೋಗ್ಯ ಸಮಸ್ಯೆ ಎದುರಾದವರಿಗೂ ಸ್ಥಳದಲ್ಲಿರುವ ಆಂಬುಲೆನ್ಸ್‌ನಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಲಾಗುವುದು. ಹೆಚ್ಚಿನ ಆಂಬುಲೆನ್ಸ್‌ ನಿಯೋಜಿಸುವಂತೆ ಆರೋಗ್ಯ ಇಲಾಖೆಗೂ ಮನವಿ ಸಲ್ಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನೈಸ್‌ ರಸ್ತೆ: ಬೈಕ್‌ ಸಂಚಾರ ನಿಷೇಧ

ನೈಸ್‌ ರಸ್ತೆಯಲ್ಲಿ ಡಿ.31ರಂದು ರಾತ್ರಿ 8ರಿಂದ ಜ.1ರ ಬೆಳಿಗ್ಗೆ 6ರ ವರೆಗೆ ನೈಸ್‌ ರಸ್ತೆಯಲ್ಲಿ ಬೈಕ್‌ ಸಂಚಾರ ನಿಷೇಧಿಸಲಾಗಿದೆ.

ಕೆಂಗೇರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ನೈಸ್‌ ರಸ್ತೆಯ ಧನನಾಯಕನಹಳ್ಳಿ ಸೇತುವೆಯಿಂದ ನೈಸ್‌ ರಸ್ತೆಯ ಕಚೇರಿಯ ಸೇತುವೆವರೆಗೆ 8 ಕಿ.ಮೀ ಹಾಗೂ ನೈಸ್‌ ಕಚೇರಿಯ ಸೇತುವೆಯಿಂದ ಡಿಸೋಜಾ ಸೇತುವೆ ತನಕ 8 ಕಿ.ಮೀ ಸೇರಿ ಒಟ್ಟು 16 ಕಿ.ಮೀ ಅಂತರದಲ್ಲಿ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಬೈಕ್‌ ಸವಾರರೇ ಸಾವು, ನೋವಿಗೆ ಒಳಗಾಗುತ್ತಿದ್ದಾರೆ. ಹೊಸ ವರ್ಷಾಚರಣೆ ಕಾರಣದಿಂದ ಈ ಮಾರ್ಗದಲ್ಲಿ ಬೈಕ್ ಸಂಚಾರ ನಿರ್ಬಂಧಿಸಲಾಗಿದೆ. ನೈಸ್‌ ಟೋಲ್‌ ಪ್ರವೇಶ ಹಾಗೂ ನಿರ್ಗಮನದ ಬಳಿ ನೈಸ್‌ ಸಂಸ್ಥೆ
ತಮ್ಮ ಸಿಬ್ಬಂದಿ ನಿಯೋಜಿಸಿ ದ್ವಿಚಕ್ರ ವಾಹನಗಳನ್ನು ಒಳಕ್ಕೆ ಬಾರದಂತೆ ತಡೆಯಬೇಕು ಎಂದು ಕೆಂಗೇರಿ ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT