ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ: ಬಾಂಬರ್ ಸುಳಿವು ನೀಡಿದರೆ ₹10 ಲಕ್ಷ ಬಹುಮಾನ

Published 6 ಮಾರ್ಚ್ 2024, 10:53 IST
Last Updated 6 ಮಾರ್ಚ್ 2024, 10:53 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ‘ದಿ ರಾಮೇಶ್ವರಂ ಕೆಫೆ’ಯಲ್ಲಿ ನಡೆದಿದ್ದ ಬಾಂಬ್‌ ಸ್ಫೋಟ ಪ್ರಕರಣದ ತನಿಖೆ ಆರಂಭಿಸಿರುವ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಶಂಕಿತ ಆರೋಪಿ ಫೋಟೊವನ್ನು ಬಿಡುಗಡೆ ಮಾಡಿ, ಸುಳಿವು ನೀಡಿದವರಿಗೆ ₹10 ಲಕ್ಷ ಬಹುಮಾನ ಘೋಷಿಸಿದೆ.

ರಸ್ತೆ, ಬಸ್‌ ನಿಲ್ದಾಣ, ಕೆಫೆಯಲ್ಲಿ ಅಳವಡಿಸಿದ್ದ ಸಿ.ಸಿ.ಟಿ.ವಿ. ಕ್ಯಾಮೆರಾದ ದೃಶ್ಯಾವಳಿ ಆಧಾರದಲ್ಲಿ ಆರೋಪಿಯ ಫೋಟೊ ಬಿಡುಗಡೆ ಮಾಡಲಾಗಿದೆ. ಆರೋಪಿಯು ಹ್ಯಾಟ್‌ ಹಾಗೂ ಕನ್ನಡಕ ಧರಿಸಿದ್ದು, ಮುಖ ಗುರುತಿಸಲು ಸಾಧ್ಯವಾಗುವಂತಹ ಫೋಟೊ ಬಿಡುಗಡೆ ಮಾಡಲಾಗಿದೆ. 

ಸಾರ್ವಜನಿಕ ಪ್ರಕಟಣೆ ಹೊರಡಿಸಿರುವ ಎನ್‌ಐಎ, ಮಾಹಿತಿ ನೀಡಿದವರ ಹೆಸರನ್ನು ಗೋಪ್ಯವಾಗಿ ಇಡಲಾಗುವುದು ಎಂದು ತಿಳಿಸಿದೆ.

ಶಂಕಿತನ ಸುಳಿವು ಲಭಿಸಿದ ಕೂಡಲೇ 080 29510900, 8904241100 ಹಾಗೂ ಇ–ಮೇಲ್‌ ವಿಳಾಸ info.blr.nia@gov.inಗೆ ಮಾಹಿತಿ ನೀಡಬಹುದು ಅಥವಾ ವಿಳಾಸ: ಎಸ್‌ಪಿ, ರಾಷ್ಟ್ರೀಯ ತನಿಖಾ ದಳ, 3ನೇ ಮಹಡಿ, ಬಿಎಸ್‌ಎನ್‌ಎಲ್ ಟೆಲಿಫೋನ್ ಎಕ್ಸ್‌‌ಚೇಂಜ್, 80 ಅಡಿ ರಸ್ತೆ, ಎಚ್‌ಎಎಲ್ 2ನೇ ಹಂತ, ಇಂದಿರಾನಗರ, ಬೆಂಗಳೂರು 08 –ಇಲ್ಲಿಗೆ ಕಳುಹಿಸಬಹುದು ಎಂದು ಅಧಿಕಾರಿಗಳು ಕೋರಿದ್ದಾರೆ.

ಎನ್‌ಐಎ, ಸಿಸಿಬಿ ಹಾಗೂ ಸ್ಥಳೀಯ ಪೊಲೀಸರಿಂದ ಪ್ರತ್ಯೇಕವಾಗಿ ತನಿಖೆ ನಡೆಯುತ್ತಿದೆ. ತನಿಖಾ ತಂಡಕ್ಕೆ ಆರೋಪಿ ಕುರಿತು ಕೆಲವು ಮಹತ್ವದ ಸುಳಿವುಗಳು ದೊರೆತಿವೆ ಎಂದು ಮೂಲಗಳು ತಿಳಿಸಿವೆ.

ಪದೇ ಪದೇ ಬಸ್ ಬದಲಾವಣೆ: ಕೆಫೆಯಲ್ಲಿ ಬ್ಯಾಗ್‌ ಇಟ್ಟ ಬಳಿಕ ಶಂಕಿತ ಎರಡು ಕಿ.ಮೀ. ದೂರದವರೆಗೆ ನಡೆದು ಬಳಿಕ ಬಸ್‌ ಏರಿದ್ದಾನೆ. ಪದೇ ಪದೇ ಬಸ್‌ ಬದಲಾವಣೆ ಮಾಡಿರುವುದು ಸಿ.ಸಿ.ಟಿ.ವಿ. ಕ್ಯಾಮೆರಾದ ದೃಶ್ಯಾವಳಿಯಿಂದ ಗೊತ್ತಾಗಿದೆ. ಸುಳಿವು ಸಿಗದಿರಲೆಂದು ಆರೋಪಿ ಈ ರೀತಿ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ಧಾರೆ.

ಎಂಟು ತಂಡಗಳಿಂದ ಕಾರ್ಯಾಚರಣೆ: ಶಂಕಿತನ ಪತ್ತೆಗೆ ಒಟ್ಟು ಎಂಟು ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿ, ಮೊಬೈಲ್ ನೆಟ್‌ವರ್ಕ್ ಶೋಧನೆ, ಆರೋಪಿ ತೆರಳಿರುವ ಮಾರ್ಗದ ಪತ್ತೆಗಾಗಿ ಪ್ರತ್ಯೇಕ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಇದುವರೆಗೂ ಸಿಸಿಬಿ ನಡೆಸಿದ ತನಿಖೆಯ ವಿವರವನ್ನು ಎನ್‌ಐಎ ಅಧಿಕಾರಿಗಳು ಪಡೆದುಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಕೆಫೆ ಆರಂಭ ಸಾಧ್ಯತೆ?: ಕುಂದಲಹಳ್ಳಿ ಸಮೀಪದ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್‌ 1ರಂದು ಮಧ್ಯಾಹ್ನ 12.55ಕ್ಕೆ ಕಚ್ಚಾ ಬಾಂಬ್‌ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಮಹಿಳೆ ಸೇರಿದಂತೆ 9 ಮಂದಿ ಗಾಯಗೊಂಡಿದ್ದರು. ಸ್ಫೋಟ ನಡೆದ ಬಳಿಕ ಕೆಫೆ ಬಂದ್ ಆಗಿತ್ತು. ಸ್ಥಳೀಯ ಪೊಲೀಸರು ಹಾಗೂ ಎನ್‌ಐಎ ಅಧಿಕಾರಿಗಳು ಸ್ಥಳ ಮಹಜರು ಕಾರ್ಯ ಪೂರ್ಣಗೊಳಿಸಿದ್ದು, ಕೆಫೆ ಪುನರಾರಂಭಕ್ಕೆ ಅನುಮತಿ ನೀಡಲಾಗಿದೆ. ಬುಧವಾರದಿಂದಲೇ ಸ್ವಚ್ಛತಾ ಕಾರ್ಯ ಆರಂಭವಾಗಿದೆ. ಶುಕ್ರವಾರದಿಂದ ಕೆಫೆ ಆರಂಭಗೊಳ್ಳುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT