ಚುನಾವಣೆಗಳಲ್ಲಿ ಪ್ರತಿ ಬಾರಿ ಸೋತಾಗಲೂ ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗದ ಮೇಲೆ ಆರೋಪ ಹೊರಿಸುತ್ತದೆ. ಆದಾಗ್ಯೂ ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಇದೇ ಚುನಾವಣಾ ಆಯೋಗ ಚುನಾವಣೆ ನಡೆಸಿತ್ತು. ಆದರೆ ಆಗ ಯಾವುದೇ ಆಕ್ಷೇಪ ವ್ಯಕ್ತವಾಗಿರಲಿಲ್ಲ. ಸಾಮಾನ್ಯ ಜನರ ವಿಶ್ವಾಸ ಗಳಿಸಿರುವ ಬಿಜೆಪಿಯು ಚುನಾವಣೆಗಳಲ್ಲಿ ಗೆಲ್ಲುತ್ತಿದೆ. ನಮ್ಮ ಪಕ್ಷವು ದೀರ್ಘಕಾಲ ಅಧಿಕಾರದಲ್ಲಿ ಉಳಿಯಲಿದೆ.
– ರವಿಶಂಕರ್ ಪ್ರಸಾದ್, ಬಿಜೆಪಿ ಸಂಸದ
ಕೇಂದ್ರದ ಬಿಜೆಪಿ ಸರ್ಕಾರವು ಚುನಾವಣಾ ಆಯೋಗದ ಸ್ವಾತಂತ್ರ್ಯವನ್ನು ವ್ಯವಸ್ಥಿತವಾಗಿ ನಾಶಪಡಿಸುತ್ತಿದೆ. ನಿಷ್ಪಕ್ಷಪಾತ ಚುನಾವಣಾ ಅಂಪೈರ್ ಕಲ್ಪನೆಯನ್ನು ಬಹಿರಂಗವಾಗಿ ಪುಡಿಪುಡಿ ಮಾಡಲಾಗಿದೆ. ಚುನಾವಣಾ ಆಯೋಗವು ಈಗ ರಾಜಕೀಯ ಒತ್ತಡದಲ್ಲಿ ಕುಸಿದು ಬಿದ್ದು ಪಕ್ಷಪಾತಿಯಾಗಿದೆ. ಮತದಾನದ ಹಕ್ಕು ಯಾವುದೇ ಸರ್ಕಾರವು ನೀಡುವ ದಯೆಯಲ್ಲ. ಅದು ಪ್ರಜಾಪ್ರಭುತ್ವದ ಮೂಲಭೂತ ತತ್ವ.
– ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ಸಂಸದ
ಪ್ರಧಾನಿ ನರೇಂದ್ರ ಮೋದಿ ಅವರು ಇವಿಎಂಗಳನ್ನು ಹ್ಯಾಕ್ ಮಾಡಿಲ್ಲ. ಅವರು ಜನರ ಹೃದಯಗಳನ್ನು ಕದ್ದಿದ್ದಾರೆ. ಕಾಂಗ್ರೆಸ್ ನಾಯಕರು ಚುನಾವಣಾ ಸೋಲುಗಳನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಹೀಗಾಗಿ ಅವರು ಸದನದ ಕಲಾಪಗಳಿಗೆ ನಿರಂತರ ಅಡ್ಡಿ ಮಾಡುತ್ತಿದ್ದಾರೆ. ವಿರೋಧ ಪಕ್ಷದ ಸಂಸದರು ಪ್ರತಿ ಅಧಿವೇಶನವನ್ನು ರಂಗಮಂದಿರವಾಗಿ ಪರಿವರ್ತಿಸುತ್ತಿದ್ದಾರೆ.
– ಕಂಗನಾ ರನೌತ್, ಬಿಜೆಪಿ ಸಂಸದೆ
ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆಯು ಹಿಂಬಾಗಿಲಿನ ಎನ್‌ಆರ್‌ಸಿ. ಧರ್ಮದ ಆಧಾರದಲ್ಲಿ ಜನರನ್ನು ಮತದಾನದ ಹಕ್ಕನ್ನು ಕಸಿದುಕೊಳ್ಳುವ ದುರುದ್ದೇಶಪೂರಿತವಾದ ಕೆಟ್ಟ ಪ್ರಕ್ರಿಯೆ. ಭಾರತದ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್ ಮತ್ತು ಸಂಸತ್ತಿಗಿಂತ ದೊಡ್ಡದಾಗಿ ಇರಲು ಸಾಧ್ಯವಿಲ್ಲ.