ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆನ್‌ಡ್ರೈವ್‌ ಸಂತ್ರಸ್ತೆಯರ ಸಂಕಟ | ನೊಂದವರಿಗೆ ಸಿಗಲಿ ಸಮಾಜದ ಸಾಂತ್ವನ

Published 23 ಮೇ 2024, 23:30 IST
Last Updated 23 ಮೇ 2024, 23:30 IST
ಅಕ್ಷರ ಗಾತ್ರ

ಹಾಸನ: ಹಳೆಬೀಡು, ಬೇಲೂರಿನಂತಹ ಐತಿಹಾಸಿಕ ಕ್ಷೇತ್ರಗಳ ಮೂಲಕ ಹೆಸರುವಾಸಿಯಾಗಿದ್ದ ಹಾಸನ ಜಿಲ್ಲೆ, ಘೋರ ಲೈಂಗಿಕ ದೌರ್ಜನ್ಯ ಪ್ರಕರಣದೊಂದಿಗೆ ನಾಡಿನಾದ್ಯಂತ ಗಮನ ಸೆಳೆದಿರುವುದು ಜಿಲ್ಲೆಯ ಜನರು ತಲೆತಗ್ಗಿಸುವಂತೆ ಮಾಡಿದೆ.

ಅಷ್ಟೇ ಇಲ್ಲ, ಇಡೀ ಸಾಮಾಜಿಕ, ರಾಜಕೀಯ ವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಅಲ್ಲಾಡಿಸಿದೆ. ಕ್ಷೇತ್ರದ ಸಂಸದರಿಂದ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣವು ಅಧಿಕಾರಸ್ಥ ಎಲ್ಲರ ಮೇಲೆ ಅನುಮಾನ ಮೂಡಿಸುವ ವಾತಾವರಣ ಸೃಷ್ಟಿಸಿದೆ. ಈ ಹೊತ್ತಿನಲ್ಲಿ, ಇಡೀ ಪ್ರಕರಣವನ್ನು ರಾಜಕೀಯ ಮೇಲಾಟಕ್ಕೆ ಬಲಿಯಾಗಲು ಬಿಡದೆ, ಅಪರಾಧಿಯು ಶಿಕ್ಷೆಯ ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ಆಡಳಿತ ವರ್ಗ ಪಾರದರ್ಶಕ ತನಿಖೆ ನಡೆಸಿ, ಸಂತ್ರಸ್ತರಾದವರಿಗೆ ನ್ಯಾಯ ಒದಗಿಸಬೇಕಾಗಿದೆ.

ಪ್ರಕರಣದಿಂದ ಸಂತ್ರಸ್ತರಾಗಿರುವ ಹೆಣ್ಣು ಜೀವಗಳು, ಅವರ ಕುಟುಂಬದವರು, ಒಡನಾಡಿಗಳು ಹಾಗೂ ಇಡೀ ಸಮಾಜ ದಲ್ಲಿ ವಿಶ್ವಾಸದ ಬೇರನ್ನು ಬಲಗೊಳಿಸಿ ಮತ್ತೆ ಅವರಲ್ಲಿ ಜೀವಚೈತನ್ಯ ತುಂಬಿ, ಭರವಸೆ ಬಿತ್ತಬೇಕಾದ ಹೊಣೆಗಾರಿಕೆ ಪ್ರಜ್ಞಾವಂತರ ಮೇಲಿದೆ. ಈ ನಿಟ್ಟಿನಲ್ಲಿ ನಾಡಿನ ವಿವಿಧ ಕ್ಷೇತ್ರಗಳ ಪ್ರಮುಖರು ‘ಪ್ರಜಾವಾಣಿ’ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಧೈರ್ಯವೊಂದೇ ಮಾರ್ಗ: ಮೂಲತಃ ಹೆಣ್ಣು ಮಕ್ಕಳು ತಾವಾಗಿ ದಾರಿ ತಪ್ಪುವವ ರಲ್ಲ, ಅಪವಾದಗಳು ಇದ್ದೇ ಇರುತ್ತವೆ, ಬಿಡಿ. ಅವರ ಬದುಕಿನ ನೂರಾರು ಬಗೆಯ ಒತ್ತಡ ಅನಿವಾರ್ಯತೆ ಕಷ್ಟ, ಕಾರ್ಪಣ್ಯಗಳ ಪರಿಹಾರ ಮಾರ್ಗದಲ್ಲಿ ಅವರು ಸುಳಿಯೊಳಗೆ ಸಿಕ್ಕಿಬೀಳುವ ಪ್ರಸಂಗಗಳು ಉದ್ದಕ್ಕೂ ಎಷ್ಟು ಬೇಕು! ಅಂದಿನಿಂದಲೂ ಲಜ್ಜೆಗೇಡಿ ಪುರುಷರ ವಿಕೃತ ಪೈಶಾಚಿಕ ವರ್ತನೆಗಳ ಎದುರು ನಲುಗುವವಳು ಹೆಣ್ಣು. ಜೀವ ತೆರುವವಳು ಹೆಣ್ಣು, ಒಂದಿಷ್ಟೂ ಪರಿತಾಪ ಪಡದೆ ಮೆರೆಯುವವನು, ಸಿಕ್ಕಿಬಿದ್ದೂ ತಪ್ಪಿಸಿಕೊಳ್ಳುವವನು ಗಂಡು. ಸಮಾಜ ಹೆಣ್ಣನ್ನು ಬಗ್ಗುಬಡಿಯುವುದರಲ್ಲಿ ಮೈ ಮರೆಯುತ್ತಿದೆ ಎನ್ನುತ್ತಾರೆ ಸಾಹಿತಿ ವೈದೇಹಿ

‘ ಮಾನವೀಯ ಸ್ಪರ್ಶ ಇರಲಿ’

ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಾ, ಆ ಪೆನ್‌ಡ್ರೈವ್ ಹುಟ್ಟು ಪಡೆದ ಜಾಗದಿಂದಲೇ ದೂರ ದೂರ ಹೋಗುತ್ತ ದಿಕ್ಕು ತಪ್ಪುತ್ತಿದೆ, ಇದಾಗಬಾರದಿತ್ತು. ಎಲ್ಲಕ್ಕಿಂತ ಮೊದಲು ಪ್ರಜ್ವಲ್ ಭಾರತಕ್ಕೆ ಬರಬೇಕು. ಆತನ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ಹಾಗೂ ರೆಡ್ ಕಾರ್ನರ್ ನೋಟಿಸ್ ನೀಡುವುದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕಿದೆ. ಕೇಂದ್ರ ಸರ್ಕಾರ ಇನ್ನೂ ವಿಳಂಬಿಸಿದರೆ, ಅದರ ನಡೆ ಅನುಮಾನಕ್ಕೆಡೆಗೊಡುತ್ತದೆ.

ಮನೋವಿಕಾರದ ಚಟಕಾಮದ ದೌರ್ಜನ್ಯಕ್ಕೆ ಬಲಿಪಶುಗಳಾದ ಕುಟುಂಬಗಳಲ್ಲಿ ಅಲ್ಲೋಲ ಕಲ್ಲೋಲ ಆಗುತ್ತಿರುವಾಗ, ಇದಕ್ಕೆಲ್ಲ ಮೂಲ ಕಾರಣನಾದವನು ಸಂಸದ ಪ್ರಜ್ವಲ್ ಎನ್ನುವುದನ್ನು ಗೌಣ ಮಾಡಿ, ಆತನ ಕುಟುಂಬದವರು- ‘ಇದೆಲ್ಲಾ ತಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ’ ಎಂದು ಗೋಳಾಡುವುದು ಕ್ರೂರ ನಡೆ.

ನಾವು ಈ ಕ್ಷಣದಲ್ಲಿ ಬಲಿಪಶುಗಳಾದ, ಬೇಯುತ್ತಿರುವ ನೊಂದ ಜೀವಿಗಳು ಯಾರೇ ಆಗಿರಲಿ, ಅವರು ನಮ್ಮ ಕುಟುಂಬದಲ್ಲೇ ಒಬ್ಬರು ಎಂದು ಭಾವಿಸಿ, ನಮ್ಮ ನೋಟ, ನುಡಿ, ನಡೆಗಳಲ್ಲಿ ಮಾನವೀಯತೆ, ಅಂತಃಕರಣವನ್ನು ಪಳಗಿಸಿಕೊಳ್ಳಬೇಕಾಗಿದೆ.

 – ದೇವನೂರ ಮಹಾದೇವ, ಸಾಹಿತಿ

‘ಗಂಡು ಮಕ್ಕಳಿಗೂ ನೈತಿಕ ಶಿಕ್ಷಣ ಅಗತ್ಯ’

‘ಜನರು ಬಟ್ಟೆ ಬದಲಾಯಿಸುವಾಗ ಇಣುಕುವುದು, ಲೈಂಗಿಕ ಕ್ರಿಯೆಯನ್ನು ಕದ್ದು ನೋಡುವುದು, ಲೈಂಗಿಕ ಕ್ರಿಯೆ ವಿಡಿಯೊ, ಚಿತ್ರಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಕ್ರಿಮಿನಲ್ ಅಪರಾಧ. ಇದಕ್ಕೆ ಕ್ಷಮೆ ಇರುವುದಿಲ್ಲ. ವೈದ್ಯಕೀಯ ವಿಜ್ಞಾನದಲ್ಲಿ ಇಂತಹ ದುರಭ್ಯಾಸಕ್ಕೆ ವೋಯೆರಿಸ್ಟಿಕ್ ಡಿಸ್‌ಆರ್ಡರ್ (voyeuristic disorder) ಎನ್ನುತ್ತಾರೆ. ಆತ್ಮವಿಶ್ವಾಸ, ಆತ್ಮಗೌರವದ ಕೊರತೆ, ಸಮಾಜ ಘಾತುಕ ವ್ಯಕ್ತಿತ್ವದಿಂದಲೂ ಇಂತಹ ಕಾಯಿಲೆ ಬರಬಹುದು’ ಎನ್ನುತ್ತಾರೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಕನ್ಸಲ್ಟೆಂಟ್ ಕ್ಲಿನಿಕಲ್ ಸೈಕಾಲಜಿಸ್ಟ್ ಡಾ. ಸಿ.ಆರ್. ಸತೀಶ್ ಕುಮಾರ್.

ಅರಿವು ಮೂಡುವ ಮುನ್ನ, ಚಿಕ್ಕಂದಿನಲ್ಲಿ ಲೈಂಗಿಕ ಕ್ರಿಯೆ, ನಗ್ನ ಚಿತ್ರಗಳ ವೀಕ್ಷಣೆ, ದೈಹಿಕ ದೌರ್ಜನ್ಯಕ್ಕೆ ಒಳಗಾದರೂ ಇಂತಹ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇದಕ್ಕೆ ಕೌನ್ಸೆಲಿಂಗ್ ಜೊತೆಗೆ ವೈದ್ಯಕೀಯ ಚಿಕಿತ್ಸೆ ಅಗತ್ಯವಿರುತ್ತದೆ ಎಂಬುದು ಅವರ ಸಲಹೆ.ನೈತಿಕ, ಮೌಲಿಕ ಶಿಕ್ಷಣ ಹೆಣ್ಣು ಮಕ್ಕಳಿಗೆ ಸೀಮಿತವಲ್ಲ, ಇದೇ ಶಿಕ್ಷಣವನ್ನು ಪಾಲಕರು ಗಂಡು ಮಕ್ಕಳಿಗೂ ನೀಡಬೇಕು. ಅತಿಯಾದ ಮುದ್ದು, ಶಿಸ್ತಿಲ್ಲದ ಜೀವನ, ವ್ಯಸನ ಇವೆಲ್ಲ ಹರೆಯದಲ್ಲಿ ಅನಾಹುತಕ್ಕೆ ಎಡೆಮಾಡಿಕೊಡುತ್ತವೆ. ಸಣ್ಣ ವಯಸ್ಸಿನಲ್ಲಿ ಮಕ್ಕಳಿಗೆ ಪಾಲಕರ ಮಾರ್ಗದರ್ಶನದ ಕೊರತೆಯಾದರೆ, ಅಪರಾಧ ಕೃತ್ಯಗಳು ಹೆಚ್ಚುತ್ತವೆ ಎಂದು ಎಚ್ಚರಿಸಿದರು.

‘ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು’
ಯಾವ ಸಮಾಜ ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಕ್ಕಳನ್ನು ಅರ್ಥ ಮಾಡಿಕೊಂಡಿದೆ? ಆದರದಿಂದ ಕಂಡಿದೆ? ಸ್ತ್ರೀಪರ ಸಮಾಜ ಹುಟ್ಟುವವರೆಗೂ ಇದು ಹೀಗೆಯೇ ನಡೆಯುತ್ತದೆ. ಇದನ್ನು ಅರಿತ ಹೆಣ್ಣು, ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಅವಳು ಧೈರ್ಯ ತಾಳಬೇಕಾದ್ದು ಈ ಸಮಯದ ತುರ್ತು. ಜೀವ ಕಳೆದುಕೊಳ್ಳಬೇಕಾದವರು ನಾಚಿಕೆ, ಮರ್ಯಾದೆ ಇಲ್ಲದೆ ಸರೋವರದಲ್ಲಿ ಅಡಗುತ್ತಾರೆ. ಹೆಣ್ಣು ಧೈರ್ಯವಂತೆ. ಪರಿಸ್ಥಿತಿಯನ್ನು ಸ್ತಬ್ಧ ಮನಸ್ಥಿತಿಯಲ್ಲಿ ಎದುರಿಸಬೇಕು. ತನ್ನೊಳಗೇ ಚಿಂತಿಸಬೇಕು. ತನಗೆ ತಾನೇ ಸಂತೈಸಿಕೊಳ್ಳಬೇಕು. ದುರ್ಬಲ ಗೊಳಿಸುವ ಸಮಾಜದ ಬಗ್ಗೆ ನಿರ್ಲಿಪ್ತವಾಗಿರಬೇಕಾದ ಸಧ್ಯಸ್ಥಿತಿ ಅವಳದು. ...ಇದು ಸುಲಭವಲ್ಲ, ನಿಜ. ಆದರೆ ಹೆಣ್ಣಿನ ಬದುಕೇ ಸುಲಭವಲ್ಲವಲ್ಲ? -ವೈದೇಹಿ, ಸಾಹಿತಿ

‘ಮನೆತನದ ಎಚ್ಚರ ಇರಲಿ’

ಇಂತಹ ಪ್ರಸಂಗಗಳು ಹಿಂದೆಯೂ ಸಾಕಷ್ಟು ನಡೆದಿವೆ. ಕೆಲವು ದಿನ ಬಾಯಲ್ಲಿ ಹರಿದಾಡಬಹುದು, ಜನರು ಬೇಗ ಮರೆಯುತ್ತಾರೆ. ಚಿಕ್ಕವಯಸ್ಸಿನಲ್ಲಿ ಅಧಿಕಾರ, ದುಡ್ಡು ಸಿಕ್ಕಿದರೆ ದಾರಿ ತಪ್ಪುವ ಸಾಧ್ಯತೆ ಇರುತ್ತದೆ. ಅಧಿಕಾರದ ದರ್ಪದಲ್ಲಿ ಮುಳುಗಿದರೆ ಅನಾಹುತಗಳು ಸಂಭವಿಸುತ್ತವೆ. ಅಧಿಕಾರದಲ್ಲಿದ್ದವರು
ಮೈಯೆಲ್ಲ ಕಣ್ಣಾಗಿದ್ದು ತಪ್ಪು ಹೆಜ್ಜೆ ಇಡದಂತೆ ಎಚ್ಚರವಹಿಸಬೇಕು. ಇದಕ್ಕಿಂತ ಮುಖ್ಯವಾಗಿ ತಮ್ಮ ಮನೆತನದ ಪ್ರಜ್ಞೆ ಸದಾ ಜಾಗೃತವಾಗಿದ್ದರೆ, ತಮ್ಮ ತಪ್ಪಿನಿಂದ ಹಿರಿಯರು ನೊಂದುಕೊಳ್ಳಬಹುದೆಂಬ ಅರಿವಿದ್ದರೆ, ಇಂತಹ ಕೃತ್ಯಗಳು ಘಟಿಸುತ್ತಿರಲಿಲ್ಲ.

–ಲೀಲಾದೇವಿ ಪ್ರಸಾದ್, ರಾಜಕಾರಣಿ

‘ಕಾರುಣ್ಯದ ನೋಟ ಸಮಾಜಕ್ಕೆ ಬರಲಿ’

ಪ್ರಕೃತಿಯ ಮನೋರಚನೆಗೆ ಹತ್ತಿರದ, ಚಲನಶೀಲ, ಸಶಕ್ತ ಸೃಷ್ಟಿ- ಹೆಣ್ಣು! ಗಾಸಿಗೊಳಗಾದಾಗಲೂ, ನಿಧಾನವಾಗಿಯಾದರೂ ತನ್ನಷ್ಟಕ್ಕೇ ಅದಮ್ಯ ಶಕ್ತಿಯಿಂದ ಪುಟಿದೇಳಲು ಶಕ್ತಳು. ಆದರೆ ಅನಾದಿಯಿಂದ ಪುರುಷಾಹಂಕಾರಕ್ಕೆ ಸಿಕ್ಕು ರೋಗಗ್ರಸ್ತವಾಗಿರುವ ನಮ್ಮ ಸಮಾಜದ ಹಲವು ವಿಕೃತ ಕಾಯಿಲೆ ನಿರ್ನಾಮ ಮಾಡಲು- ಸರ್ಕಾರ, ನ್ಯಾಯಾಂಗ, ಆಡಳಿತ ವ್ಯವಸ್ಥೆ, ಸಂಘಟನೆಗಳು... ಇನ್ನಾದರೂ ಹಲವು ಆಯಾಮಗಳಲ್ಲಿ ಸಶಕ್ತ ಕಾರ್ಯಯೋಜನೆ ರೂಪಿಸಬೇಕು. ಲೈಂಗಿಕ ದೌರ್ಜನ್ಯಗಳು ಘಟಿಸದಂತೆ ತಡೆಯಲು, ಈಗಾಗಲೇ ಇರುವ ಸರ್ಕಾರಿ ಆದೇಶಗಳು, ನಿಯಮಗಳು ವಿಕೇಂದ್ರೀಕೃತವಾಗಿ ಕಡ್ಡಾಯವಾಗಿ ಜಾರಿಯಾಗಬೇಕು. ಶಿಕ್ಷಣದಲ್ಲಿ ಲಿಂಗ ಸಮಾನತೆ, ಸೂಕ್ಷ್ಮತೆ, ಸಂವೇದನೆಗಳ ಪರಿಣಾಮಕಾರಿ ಅಳವಡಿಕೆಯಾಗಬೇಕು. ದೌರ್ಜನ್ಯಕ್ಕೆ ಒಳಗಾದ ಹೆಣ್ಣು ನಿರ್ಭೀತಿಯಿಂದ ಪ್ರಕರಣ ದಾಖಲಿಸುವ ವಾತಾವರಣ ಉಂಟುಮಾಡಿ, ತುರ್ತಾಗಿ ನಿಷ್ಪಕ್ಷಪಾತ ವಿಚಾರಣೆ ನಡೆದು, ಅಪರಾಧಿಗೆ ಶಿಕ್ಷೆಯಾಗಬೇಕು. ಲೈಂಗಿಕ ದೌರ್ಜನ್ಯಕ್ಕೊಳಗಾದವರನ್ನು ಕಾರುಣ್ಯದಿಂದ ನೋಡುವ ನೋಟ, ಮೊದಲಿಗೆ ಸಮಾಜಕ್ಕೆ ಬರಬೇಕು.

-ರೂಪ ಹಾಸನ, ಹೋರಾಟಗಾರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT