ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್‌ಗೆ ಯಾರ ‘ರಹದಾರಿ’?: ಕಾಂಗ್ರೆಸ್‌–ಬಿಜೆಪಿ ನಾಯಕರ ವಾಕ್ಸಮರ ತಾರಕಕ್ಕೆ

Published 2 ಮೇ 2024, 0:04 IST
Last Updated 2 ಮೇ 2024, 0:04 IST
ಅಕ್ಷರ ಗಾತ್ರ
ನೂರಾರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವ ಆರೋಪಕ್ಕೆ ಗುರಿಯಾಗಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ, ದೇಶದಿಂದ ಪರಾರಿಯಾಗಲು ಯಾರು ಕಾರಣ ಎಂಬ ವಿಷಯ ಬುಧವಾರ ಚರ್ಚೆಯ ಮುನ್ನೆಲೆಗೆ ಬಂದಿದೆ.  ‘ಚುನಾವಣೆ ಮುಗಿಯುವವರೆಗೆ ಸುಮ್ಮನಿದ್ದ ಕಾಂಗ್ರೆಸ್‌ನವರು, ಘೋರ ಅಪರಾಧ ಮಾಡಿದವರು (ಪ್ರಜ್ವಲ್‌ ರೇವಣ್ಣ) ಓಡಿ ಹೋಗಲು ಅವಕಾಶ ನೀಡಿದರು’ ಎಂದು ಗೃಹ ಸಚಿವ ಅಮಿತ್ ಶಾ ಕಿಡಿಕಾರಿದರು.‘ದೇವೇಗೌಡರೇ ಯೋಜನೆ ರೂಪಿಸಿದ್ದಾರೆ’ ಎಂದು ಆಪಾದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಪ್ರಜ್ವಲ್ ವಾಪಸ್ ಕರೆತರಲು ನೆರವು ನೀಡಿ’ ಎಂದು ಕೋರಿ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ.

ದೇವೇಗೌಡರ ಯೋಜನೆ: ಸಿದ್ದರಾಮಯ್ಯ

ಬೆಂಗಳೂರು/ಯಾದಗಿರಿ: ‘ಲೈಂಗಿಕ ಹಗರಣದ ಆರೋಪಿಯಾಗಿರುವ ತಮ್ಮ ಮೊಮ್ಮಗ ಪ್ರಜ್ವಲ್‌ ರೇವಣ್ಣನನ್ನು ವಿದೇಶಕ್ಕೆ ಕಳುಹಿಸಿಕೊಡಲು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರೇ ಯೋಜನೆ ರೂಪಿಸಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಾಸನದ ಬಿಜೆಪಿ–ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿದ್ದ ಪ್ರಜ್ವಲ್‌ ಏಪ್ರಿಲ್‌ 26ರಂದು ಮತದಾನ ಮುಗಿದ ಬಳಿಕ ಜರ್ಮನಿಗೆ ಪರಾರಿಯಾಗಿದ್ದಾನೆ ಎನ್ನಲಾಗುತ್ತಿದೆ. ವಿದೇಶಕ್ಕೆ ಹೋಗಲು ಆತನಿಗೆ ಯಾರು ವೀಸಾ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ? ಕೇಂದ್ರ ಸರ್ಕಾರವೇ ಮಾಡಿಕೊಟ್ಟಿರಬೇಕಲ್ಲವೇ? ಕೇಂದ್ರ ಸರ್ಕಾರದ ಗಮನಕ್ಕೆ ಬಾರದೇ ವಿದೇಶಕ್ಕೆ ಹೋಗಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು. ‘ಮಾತೃಶಕ್ತಿ ಬಗ್ಗೆ ಮಾತನಾಡುವ ಬಿಜೆಪಿಯವರಿಗೆ ನಿಜವಾಗಿಯೂ ಮಹಿಳೆಯರ ಬಗ್ಗೆ ಕಾಳಜಿ ಇದ್ದರೆ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್‌ನನ್ನು ಏಕೆ ಕಣಕ್ಕೆ ಇಳಿಸಿದರು? ವಿಡಿಯೊಗಳ ಬಗ್ಗೆ ಮೊದಲೇ ಮಾಹಿತಿ ಇದ್ದರೂ ಜೆಡಿಎಸ್‌ ಜೊತೆಗೆ ಏಕೆ ಮೈತ್ರಿ ಮಾಡಿಕೊಂಡರು? ಈ ಬಗ್ಗೆ ವಿವರಣೆ ನೀಡಲಿ’ ಎಂದರು.

‘ಪ್ರಜ್ವಲ್‌ ಚಾಲಕ ಕಾರ್ತಿಕ್‌ ವಿಡಿಯೊಗಳಿದ್ದ ಪೆನ್‌ ಡ್ರೈವ್‌ ಅನ್ನು ಬಿಜೆಪಿ ಮುಖಂಡ ಜಿ. ದೇವರಾಜೇಗೌಡರಿಗೆ ಕೊಟ್ಟಿರುವುದಾಗಿ ಹೇಳಿದ್ದಾನೆಯೇ ಹೊರತು ಡಿ.ಕೆ. ಶಿವಕುಮಾರ್‌ಗೆ ನೀಡಿರುವುದಾಗಿ ಹೇಳಿಲ್ಲ. ಈ ಪ್ರಕರಣಕ್ಕೂ ಶಿವಕುಮಾರ್‌ಗೂ ಯಾವುದೇ ಸಂಬಂಧವಿಲ್ಲ’ ಎಂದರು.

ಹಾಸನ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಹಿಳೆಯರ ಪರವಾಗಿ ಕೊನೆಗೂ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದಗಳು.
ಸಿದ್ದರಾಮಯ್ಯ, ಮುಖ್ಯಮಂತ್ರಿ

ಪ್ರಜ್ವಲ್ ಪರಾರಿಗೆ ಸಿ.ಎಂ ಕಾರಣ: ಶಾ

ಹುಬ್ಬಳ್ಳಿ: ‘ಒಕ್ಕಲಿಗರ ಪ್ರಾಬಲ್ಯವಿರುವ ಪ್ರದೇಶಗಳ ಚುನಾವಣೆ ಮುಗಿಯುವವರೆಗೆ ಸುಮ್ಮನಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ. ಅವರಿಗೆ (ಪ್ರಜ್ವಲ್‌ ರೇವಣ್ಣ) ಓಡಿ ಹೋಗಲು ಅವಕಾಶ ನೀಡಿದ್ದೀರಿ. ಘೋರ ಅಪರಾಧ ಮಾಡಿದವರು ಓಡಿಹೋದರು’ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಗೃಹ ಸಚಿವ ಅಮಿತ್ ಶಾ ಹರಿಹಾಯ್ದರು,

ಇಲ್ಲಿನ ನೆಹರೂ ಮೈದಾನದಲ್ಲಿ ಬುಧವಾರ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇಲ್ಲಿ ನಿಮ್ಮ ಸರ್ಕಾರ ಇದೆ. ನೀವು ಕ್ರಮ ಕೈಗೊಳ್ಳಬೇಕಾಗಿತ್ತು ಎಂದರು.

‘ಕರ್ನಾಟಕದಲ್ಲಿ ಜೆಡಿಎಸ್‌ ಜೊತೆ ನಮ್ಮ ಮೈತ್ರಿ ಇದೆ. ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಹೊರಬಿದ್ದಿದ್ದೆ ತಡ, ಬಿಜೆಪಿ ಮೇಲೆ ಕಾಂಗ್ರೆಸ್‌ ಮುಗಿಬಿದ್ದಿದೆ. ಅತ್ಯಾಚಾರಿ ಯಾರೇ ಆಗಿದ್ದರೂ ಬಿಜೆಪಿ ಅವರ ಪರ ಇರಲ್ಲ’ ಎಂದರು.

‘ಮಹಿಳೆಯರ ಮೇಲೆ ಅತ್ಯಾಚಾರ ಮಾಡುವಂತಹವರ ಜೊತೆ ಬಿಜೆಪಿ ಇರಲ್ಲ. ನಮ್ಮ ಜೊತೆಗಾರರೇ ಕೃತ್ಯದಲ್ಲಿ ಭಾಗಿಯಾಗಿದ್ದರೂ ಅತ್ಯಂತ ಕಠೋರ ಶಿಕ್ಷೆ ಕೊಡಬೇಕು’ ಎಂದು ಶಾ ಒತ್ತಾಯಿಸಿದರು.

ಇತ್ತ ಬೆಂಗಳೂರಿನಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ
ಆರ್. ಅಶೋಕ, ಪ್ರಜ್ವಲ್ ವಿದೇಶಕ್ಕೆ ಹೋಗುವವರೆಗೆ ರಾಜ್ಯದ ಪೊಲೀಸರು ಏನು ಮಾಡುತ್ತಿದ್ದರು? ಗುಪ್ತಚರ ದಳ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ದಾವಣಗೆರೆಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ‘ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ಪರಾರಿಯಾಗುವವರೆಗೂ ರಾಜ್ಯ ಸರ್ಕಾರ ಮಲಗಿಗೊಂಡಿತ್ತಾ? ಈ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುವ ಯತ್ನ ನಡೆದಿದೆ’ ಎಂದು ಟೀಕಿಸಿದರು.

ವಾಪಸ್‌ ಕರೆತರಲು ನೆರವಾಗಿ: ಮೋದಿಗೆ ಮುಖ್ಯಮಂತ್ರಿ ಪತ್ರ

‌‘ಪ್ರಜ್ವಲ್ ಅವರನ್ನು ವಾಪಸ್ ಕರೆತಂದು, ಈ ನೆಲದ ಕಾನೂನಿನ ಅನ್ವಯ ವಿಚಾರಣೆಗೆ ಗುರಿಪಡಿಸುವುದು ದೇಶಕ್ಕೆ ಅತ್ಯಂತ ಪ್ರಮುಖವಾದ ವಿಷಯ. ಆತನ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಪಡಿಸಿ, ವಿದೇಶದಿಂದ ಕರೆತರಲು ಸಹಕಾರ ನೀಡಬೇಕು’ ಎಂದು ಸಿದ್ದರಾಮಯ್ಯ ಅವರು, ಪ್ರಧಾನಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

‘ಪೊಲೀಸ್‌ ತನಿಖೆ ಹಾಗೂ ಬಂಧನ ಭೀತಿಯಿಂದ ಪ್ರಜ್ವಲ್ ಅವರು, ರಾಜತಾಂತ್ರಿಕ ಪಾಸ್‌ಪೋರ್ಟ್‌ ಬಳಸಿಕೊಂಡು ವಿದೇಶಕ್ಕೆ ತೆರಳಿದ್ದಾರೆ. ಭಾರತ ಸರ್ಕಾರದ ರಾಜತಾಂತ್ರಿಕ ವ್ಯವಸ್ಥೆ, ಪೊಲೀಸರು ಹಾಗೂ ಇಂಟರ್‌ಪೋಲ್‌ ಪೊಲೀಸರನ್ನು ಬಳಸಿಕೊಂಡು ಅವರನ್ನು ಮರಳಿ ಕರೆತರಲು ವಿದೇಶಾಂಗ ವ್ಯವಹಾರಗಳು ಮತ್ತು ಗೃಹ ಸಚಿವಾಲಯದ ನೆರವಿನ ಅಗತ್ಯವಿದೆ. ಸೂಕ್ತ ಸಹಕಾರ ನೀಡುವಂತೆ ವಿದೇಶಾಂಗ ಸಚಿವಾಲಯ ಮತ್ತು ಕೇಂದ್ರ ಗೃಹ ಇಲಾಖೆಗೆ ಸೂಚಿಸಬೇಕು’ ಎಂದು ಮನವಿ ಮಾಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT