ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಳ ಮೀಸಲಾತಿ: ಲಾಠಿ ಬೀಸಿದ ಪೊಲೀಸರು, ಹಲವರ ಬಂಧನ

Published : 11 ಡಿಸೆಂಬರ್ 2022, 14:06 IST
ಫಾಲೋ ಮಾಡಿ
Comments

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಪ್ರಮಾಣ ಹೆಚ್ಚಿಸಿದ ಬೆನ್ನಲ್ಲೇ ಒಳ ಮೀಸಲಾತಿ ಕೂಗು ಜೋರಾಗಿದೆ. ಹರಿಹರದಿಂದ ಕಾಲ್ನಡಿಗೆಯಲ್ಲಿ ಬಂದ ಹೋರಾಟಗಾರರು ರಾಜಧಾನಿಯಲ್ಲಿ ಭಾನುವಾರ ಗಟ್ಟಿ ಧ್ವನಿ ಮೊಳಗಿಸಿದರು. ಪ್ರತಿಭಟನೆನಿರತ ನೂರಾರು ಮಂದಿಯನ್ನು ಲಾಠಿ ಬೀಸಿ ಚದುರಿಸಿದ ಪೊಲೀಸರು, ಹಲವರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.

ಮನವಿ ಸ್ವೀಕರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರಲಿಲ್ಲವೆಂದು ಆಕ್ರೋಶಗೊಂಡು, ಅವರ ಮನೆಗೆ ತೆರಳಲು ಮುಂದಾದ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದು ಬಸ್‌ಗಳಲ್ಲಿ ಕರೆದೊಯ್ದರು. ಲಾಠಿ ಏಟಿನಿಂದ ಕರಿಯಪ್ಪ ಗುಡಿಮನಿ ಅವರ ತಲೆಗೆ ಗಾಯವಾಗಿದ್ದು, ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹರಿಹರದಲ್ಲಿರುವ ಬಿ.ಕೃಷ್ಣಪ್ಪ ಅವರ ಸಮಾಧಿ ಬಳಿಯಿಂದ ನ. 28ರಂದು ಆರಂಭಗೊಂಡಿದ್ದ ಪಾದಯಾತ್ರೆ 360 ಕಿಲೋ ಮೀಟರ್ ಕ್ರಮಿಸಿ, ಭಾನುವಾರ ನಗರಕ್ಕೆ ತಲುಪಿತು. ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಮಂದಿ ತಮಟೆ ಬಡಿದು ಕ್ರಾಂತಿಗೀತೆಗಳನ್ನು ಹಾಡಿ, ಒಳಮೀಸಲಾತಿಗೆ ಆಗ್ರಹಿಸಿದರು. ಜಡಿ ಮಳೆ ನಡುವೆಯೂ ನೀಲಿ ಬಾವುಟ ಹಿಡಿದು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.

‘ಮುಖ್ಯಮಂತ್ರಿ ಸ್ಥಳಕ್ಕೆ ಬಂದು ಭರವಸೆ ನೀಡಿದರೂ, ಅದಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಡಿ.28ರ ತನಕ ಗಡುವು ನೀಡಲಾಗುವುದು. ಬೆಳಗಾವಿ ಅಧಿವೇಶನ ಮುಗಿಯುವಷ್ಟರಲ್ಲಿ ತೀರ್ಮಾನ ಕೈಗೊಳ್ಳಬೇಕು. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರೂ ಅಧಿವೇಶನದಲ್ಲಿ ಒಳಮೀಸಲಾತಿ ವಿಚಾರದಲ್ಲಿ ಬದ್ಧತೆ ಪ್ರದರ್ಶಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಪಕ್ಷಗಳಿಗೆ ತಕ್ಕ ಪಾಠ ಕಲಿಸಲಾಗುವುದು’ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಭೂಪರಭಾರೆ ನಿಷೇಧ(ಪಿಟಿಸಿಎಲ್) ಕಾಯ್ದೆಗೆ ತಿದ್ದುಪಡಿ ತಂದು ದಲಿತರ ಭೂಮಿ ರಕ್ಷಣೆ ಮಾಡಬೇಕು. ಸಫಾಯಿ ಕರ್ಮಚಾರಿಗಳನ್ನು ಮುಖ್ಯವಾಹಿನಿಗೆ ತರಲು ಐಪಿಡಿ ಸಾಲಪ್ಪ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂದೂ ಒತ್ತಾಯಿಸಿದರು.‌

ಎಡ–ಬಲ ಒಮ್ಮತದ ಹೋರಾಟ
ಒಳ ಮೀಸಲಾತಿಗಾಗಿ ಪರಿಶಿಷ್ಟ ಜಾತಿಯಲ್ಲಿನ ಎಡಗೈ ಮತ್ತು ಬಲಗೈ ಸಮುದಾಯಗಳು ಒಟ್ಟಾಗಿ ಹೋರಾಟ ನಡೆಸಿದವು.

ಬಿ. ಗೋಪಾಲ್, ಮಾವಳ್ಳಿ ಶಂಕರ್, ಹೆಣ್ಣೂರು ಶ್ರೀನಿವಾಸ್, ಬಸವರಾಜ ಕೌತಾಳ್, ಎನ್. ಮೂರ್ತಿ, ವೆಂಕಟಗಿರಿಯಯ್ಯ, ಆರ್. ಮೋಹನ್‌ರಾಜ್, ಆ.ರಾ. ಮಹೇಶ್, ಜಂಬೂದ್ವೀಪ ಸಿದ್ಧರಾಜು, ಅಂಬಣ್ಣ ಅರೋಲಿ, ಕರಿಯಪ್ಪ ಗುಡ್ಡಿಮನಿ, ಎಸ್.ಮಾರಪ್ಪ, ಭಾಸ್ಕರ್ ಪ್ರಸಾದ್, ಎಂ. ಗು‌ರುಮೂರ್ತಿ, ಪಾವಗಡ ಶ್ರೀರಾಮ್ ಮುಂತಾದವರು ಹೋರಾಟದಲ್ಲಿದ್ದರು.

‘ಒಳ ಮೀಸಲಾತಿ ಜಾರಿ ವಿಷಯದಲ್ಲಿ ಬಲಗೈ ಸಮುದಾಯದ ವಿರೋಧ ಇಲ್ಲ. ಎಲ್ಲರೂ ಒಟ್ಟಾಗಿಯೇ ಹೋರಾಟ ನಡೆಸುತ್ತಿದ್ದೇವೆ’ ಎಂದು ಮಾವಳ್ಳಿ ಶಂಕರ್ ಹೇಳಿದರು.

ಸೋಮಣ್ಣಗೆ ‘ಗೋ ಬ್ಯಾಕ್’ ಘೋಷಣೆ
ಮನವಿ ಪತ್ರ ಸ್ವೀಕರಿಸಲು ಬಂದಿದ್ದ ವಸತಿ ಸಚಿವ ವಿ. ಸೋಮಣ್ಣ ವಿರುದ್ಧ ಪ್ರತಿಭಟನಕಾರರು, ‘ಗೋ ಬ್ಯಾಕ್’ ಘೋಷಣೆ ಕೂಗಿದರು.‌ ಹೋರಾಟದ ವೇದಿಕೆಗೆ ಸೋಮಣ್ಣ ಅವರು ಬರುತ್ತಿದ್ದಂತೆ ಪ್ರತಿಭಟನಕಾರರು ಒಮ್ಮೆಲೆ ಘೋಷಣೆ ಕೂಗಿದರು. ‘ಸೋಮಣ್ಣ ಅವರನ್ನು ವೇದಿಕೆಯಿಂದ ಕೆಳಗಿಳಿಸಬೇಕು. ಮುಖ್ಯಮಂತ್ರಿಯೇ ಬಂದು ಮನವಿ ಸ್ವೀಕರಿಸಬೇಕು’ ಎಂದು ಪಟ್ಟು ಹಿಡಿದರು. ಬೇಸರಗೊಂಡ ವಿ. ಸೋಮಣ್ಣ ವೇದಿಕೆಯಿಂದ ಕೆಳಗಿಳಿದು ಕೆಲಕಾಲ ನಿಂತಿದ್ದರು. ಬಳಿಕ ವಾಪಸ್ ಹೋದರು.

‘ಅಧಿಕಾರಕ್ಕೆ ಬಂದರೆ ಕೇಂದ್ರಕ್ಕೆ ಶಿಫಾರಸು’
‘ಒ‌ಳ ಮೀಸಲಾತಿಗೆ ಒತ್ತಾಯಿಸಿ ಹೋರಾಟ ನಡೆಸುತ್ತಿರುವವರನ್ನು ಬಂಧಿಸಿರುವುದು ಖಂಡನೀಯ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆದು ಸದಾಶಿವ ಆಯೋಗ ವರದಿ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಟ್ವೀಟ್ ಮಾಡಿರುವ ಅವರು, ‘ಪ್ರತಿಭಟನಾನಿರತರನ್ನು ಮಾತುಕತೆಗೆ ಆಹ್ವಾನಿಸುವುದನ್ನು ಬಿಟ್ಟು ಪೊಲೀಸರ ಮೂಲಕ ಹಣಿಯಲು ನಡೆಸಿದ ಪ್ರಯತ್ನ ಪ್ರಜಾಪ್ರಭುತ್ವ ವಿರೋಧಿ ನಡೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT