ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಸೆರೆ: ಭವಾನಿ ಕಣ್ಮರೆ

ಸಂಸದನ ಮೊಬೈಲ್ ಜಪ್ತಿ; ಅಪ್ಪ, ಅಮ್ಮ, ಮಗ ವಿಚಾರಣೆ
Published 31 ಮೇ 2024, 19:30 IST
Last Updated 31 ಮೇ 2024, 23:21 IST
ಅಕ್ಷರ ಗಾತ್ರ

ಬೆಂಗಳೂರು: ಹಾಸನದ ಜೆಡಿಎಸ್‌ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ‘ಲೈಂಗಿಕ ದೌರ್ಜನ್ಯ, ಅತ್ಯಾಚಾರ ಹಾಗೂ ಸಂತ್ರಸ್ತೆ ಅಪಹರಣ’ ಪ್ರಕರಣದಲ್ಲಿ ಬಂಧಿಸಿರುವ ಸಿಐಡಿ ಅಧಿಕಾರಿಗಳು, ಸೆಲ್‌ನಲ್ಲಿ ಇರಿಸಿ ವಿಚಾರಣೆ ಮುಂದುವರಿಸಿದ್ದಾರೆ. ಇದೇ ಪ್ರಕರಣದ ಆರೋಪಿ ಎನ್ನಲಾದ ಪ್ರಜ್ವಲ್‌ ಅವರ ತಾಯಿ ಭವಾನಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದು, ಅವರ ಬಂಧನಕ್ಕೂ ಎಸ್‌ಐಟಿ ಅಧಿಕಾರಿಗಳು ಹುಡುಕಾಟ ಆರಂಭಿಸಿದ್ದಾರೆ.

‘ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ, ಮಗ ಪ್ರಜ್ವಲ್ ಹಾಗೂ ಇತರರ ವಿರುದ್ಧ ಈಗಾಗಲೇ ನಾಲ್ಕು ಪ್ರತ್ಯೇಕ ಎಫ್‌ಐಆರ್ ದಾಖಲಾಗಿವೆ. ಈ ಪ್ರಕರಣದಲ್ಲಿ ಭವಾನಿ ಪಾತ್ರವೂ ಇರುವುದಕ್ಕೆ ಪುರಾವೆಗಳು ಸಿಕ್ಕಿವೆ. ಹೀಗಾಗಿ, ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಗುರುವಾರ ನೋಟಿಸ್ ನೀಡಲಾಗಿದೆ. ಶುಕ್ರವಾರ ವಿಚಾರಣೆಗೆ ಬಾರದೇ ಅವರು ತಲೆಮರೆಸಿಕೊಂಡಿದ್ದಾರೆ ಎಂದು ಅರ್ಥ. ಅವರನ್ನು ಪತ್ತೆ ಮಾಡಲು ವಿಶೇಷ ತಂಡ ಈಗಾಗಲೇ ಸಕ್ರಿಯವಾಗಿದೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

‘35 ದಿನಗಳಿಂದ ತಲೆಮರೆಸಿಕೊಂಡಿದ್ದ ಪ್ರಜ್ವಲ್, ಜರ್ಮನಿಯ ಆಪ್ತರ ಮನೆಯಲ್ಲಿ ವಾಸವಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಪ್ರಜ್ವಲ್ ಅವರ ಮೊಬೈಲ್ ಜಪ್ತಿ ಮಾಡಲಾಗಿದ್ದು, ಅಸಲಿ ವಿಡಿಯೊಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಜೊತೆಗೆ, ಆಶ್ರಯ ಕೊಟ್ಟವರ ವಿರುದ್ಧವೂ ಕ್ರಮ ಜರುಗಿಸಲು ಚಿಂತನೆ ನಡೆಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

‘ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ತಡರಾತ್ರಿ ಪ್ರಜ್ವಲ್‌ ಅವರನ್ನು ಬಂಧಿಸಿದ್ದ ಎಸ್‌ಐಟಿ ಅಧಿಕಾರಿಗಳು, ಶುಕ್ರವಾರ ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ನಂತರ, ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದುಕೊಂಡರು.

ರೇವಣ್ಣ ಅರ್ಜಿ: ಪ್ರಾಸಿಕ್ಯೂಷನ್‌ಗೆ ನೋಟಿಸ್

ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎನ್ನಲಾದ ಮನೆ ಕೆಲಸದಾಕೆಯನ್ನು ಅಪಹರಿಸಿದ ಆರೋಪ ಪ್ರಕರಣದಲ್ಲಿ ಶಾಸಕ ಎಚ್.ಡಿ‌.ರೇವಣ್ಣ ಸಲ್ಲಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ರಾಜ್ಯ ಪ್ರಾಸಿಕ್ಯೂಷನ್‌ಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.

ಈ ಕುರಿತಂತೆ ರೇವಣ್ಣ ಸಲ್ಲಿಸಿರುವ ಅರ್ಜಿಗಳನ್ನು, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯ‍ಪೀಠ ದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಪೀಠವು ಶುಕ್ರವಾರ ವಿಚಾರಣೆ ನಡೆಸಿತು.

ರೇವಣ್ಣ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಹಾಗೂ ಪ್ರಾಸಿಕ್ಯೂಷನ್ ಪರ ಹಿರಿಯ ವಕೀಲ ರವಿವರ್ಮ ಕುಮಾರ್ ಹಾಜರಿದ್ದರು. ಮೈಸೂರು ಜಿಲ್ಲೆಯ ಕೆ.ಆರ್‌.ನಗರ ಮತ್ತು ಹಾಸನ‌ ಜಿಲ್ಲೆಯ ಹೊಳೆನರಸೀಪುರ ಟೌನ್ ಪೊಲೀಸ್‌ ಠಾಣೆಗಳಲ್ಲಿ ರೇವಣ್ಣ ವಿರುದ್ಧ ದಾಖಲಾಗಿರುವ 2 ಪ್ರತ್ಯೇಕ ಪ್ರಕರಣ ಗಳನ್ನು ರದ್ದುಪಡಿಸಲು ಕೋರಿದ್ದಾರೆ.

ಭವಾನಿ ಅರ್ಜಿ ತಿರಸ್ಕಾರ

‘ಪ್ರಜ್ವಲ್‌  ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣದಲ್ಲಿನ ಸಂತ್ರಸ್ತೆಯೊಬ್ಬರ ಅಪಹರಣದ ಆರೋಪದಡಿ ಭವಾನಿ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನಪ್ರತಿನಿಧಿ ಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.

ಈ ಅರ್ಜಿಯ ವಿಚಾರಣೆ ನಡೆಸಿದ್ದ, ‘ಶಾಸಕರು– ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ (ಸಿಸಿಎಚ್‌–82) ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಶುಕ್ರವಾರ ಸಂಜೆ ಆದೇಶ ಪ್ರಕಟಿಸಿದರು.

ಪ್ರಾಸಿಕ್ಯೂಷನ್‌ ವಾದಕ್ಕೆ ಮನ್ನಣೆ: ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಬಿ.ಎನ್‌.ಜಗದೀಶ್‌ ಅವರ ವಾದವನ್ನು ನ್ಯಾಯಾಲಯ ಮನ್ನಿಸಿದೆ.

‘ಪ್ರಕರಣದ ಅನೇಕ ಆರೋಪಿಗಳ ಜೊತೆ ಭವಾನಿ ಫೋನ್‌ ಸಂಭಾಷಣೆ ನಡೆಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಈ ಸಂಭಾಷಣೆಯಲ್ಲಿ ಭವಾನಿಯವರ ಪಾತ್ರವೇನು ಎಂಬುದನ್ನು ನಿರೂಪಿಸುವ ಹಲವು ಸ್ವಾರಸ್ಯಕರ ಅಂಶಗಳಿವೆ. ಇವುಗಳನ್ನೆಲ್ಲಾ ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ಸಲ್ಲಿಸಲಾಗಿದೆ’ ಎಂದು ಅರುಹಿದ್ದರು. ಈ ಅಂಶಗಳ ಸಹಿತ ಪ್ರಾಸಿಕ್ಯೂಷನ್‌ನ ಇನ್ನುಳಿದ ವಾದಾಂಶವನ್ನೂ ಮನ್ನಿಸಿರುವ ನ್ಯಾಯಾಧೀಶರು ಭವಾನಿ ಅರ್ಜಿ ತಿರಸ್ಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT