ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದಲ್ಲಿ ಗೋಬಿ, ಕಾಟನ್‌ ಕ್ಯಾಂಡಿಗಳಲ್ಲಿ ಕೃತಕ ಬಣ್ಣಗಳ ಬಳಕೆಗೆ ನಿರ್ಬಂಧ‌

ಆಹಾರ ಸುರಕ್ಷತೆ ಕಾಯ್ದೆ ಉಲ್ಲಂಘಿಸಿದರೆ 7 ವರ್ಷಗಳಿಂದ ಜೀವಾವಧಿವರೆಗೆ ಜೈಲು, ₹ 10 ಲಕ್ಷವರೆಗೆ ದಂಡ
Published 11 ಮಾರ್ಚ್ 2024, 0:09 IST
Last Updated 11 ಮಾರ್ಚ್ 2024, 0:09 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಗೋಬಿ ಮಂಚೂರಿ ತಯಾರಿಕೆಯಲ್ಲಿ ಕೃತಕ ಬಣ್ಣ ಬಳಸುವುದನ್ನು ಮತ್ತು ಕಾಟನ್‌ ಕ್ಯಾಂಡಿ‌ಯಲ್ಲಿ (ಬೊಂಬಾಯಿ ಮಿಠಾಯಿ) ‘ರೋಡಮೈನ್‌–ಬಿ’ ಹಾಗೂ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಕೃತಕ ಬಣ್ಣ ಬಳಸುವುದನ್ನು ನಿರ್ಬಂಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ರಾಜ್ಯದಾದ್ಯಂತ ಮಾರಾಟ ಮಾಡಲಾಗುತ್ತಿರುವ ಗೋಬಿ ಮಂಚೂರಿ ಮತ್ತು ಕಾಟನ್‌ ಕ್ಯಾಂಡಿಗಳ ಮಾದರಿಗಳನ್ನು ಸಂಗ್ರಹಿಸಿ ರಾಜ್ಯ ಪ್ರಯೋಗಾಲಯಗಳಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಇವುಗಳಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕೃತಕ ಬಣ್ಣಗಳು ಕಂಡುಬಂದಿವೆ. ಕೃತಕ ಬಣ್ಣಗಳು ಕಂಡುಬಂದ ಮಾದರಿಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳು ಕಾಯ್ದೆ– 2006 ರ ನಿಯಮ 3(1)ರ ಅನ್ವಯ ಅಸುರಕ್ಷಿತ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

ಕೃತಕ ಬಣ್ಣಗಳ ಬಳಕೆಯೂ ಸೇರಿದಂತೆ ಯಾವುದೇ ರೀತಿಯ ಉಲ್ಲಂಘನೆ ಪ್ರಕರಣ ಕಂಡುಬಂದರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ–2006ರ ನಿಯಮ 59 ರಡಿ ಕನಿಷ್ಠ ಏಳು ವರ್ಷಗಳಿಂದ ಜೀವಾವಧಿವರೆಗಿನ ಜೈಲು ಶಿಕ್ಷೆ ಮತ್ತು ₹10 ಲಕ್ಷದವರೆಗೂ ದಂಡ ವಿಧಿಸಲು ಅವಕಾಶವಿದೆ. ಕಾಯ್ದೆ ಉಲ್ಲಂಘಿಸಿದರೆ ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸಲು ಇಲಾಖೆ ತೀರ್ಮಾನಿಸಿದೆ.

ಕೃತಕ ಬಣ್ಣಗಳನ್ನು ಬಳಸಿರುವ ತಿಂಡಿ- ತಿನಿಸುಗಳನ್ನು ದೀರ್ಘಕಾಲ ಬಳಸುವುದರಿಂದ ಮಕ್ಕಳೂ ಸೇರಿದಂತೆ ಬಳಕೆದಾರರು ಕಾನ್ಸರ್‌ನಂಥ ಮಾರಕ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಆದ್ದರಿಂದ ಕೃತಕ ಬಣ್ಣ ಬಳಸಿ ತಯಾರಿಸುವ ತಿಂಡಿ ತಿನಿಸುಗಳನ್ನುಸಾರ್ವಜನಿಕರು ಸೇವಿಸಬಾರದು ಅಥವಾ ಮಿತವಾಗಿ ಸೇವಿಸಬೇಕು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ತಿಳಿಸಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳು (ಆಹಾರ ಉತ್ಪನ್ನಗಳ ಗುಣಮಟ್ಟ ಮತ್ತು ಆಹಾರ ಸೇರ್ಪಡೆಗಳು) ನಿಯಂತ್ರಣ, 2011ರ ನಿಯಮ 16ರ ಅನ್ವಯ ಗೋಬಿ ಮಂಚೂರಿ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣ ಉಪಯೋಗಿಸುವಂತೆ ಇಲ್ಲ. ಇದೇ ನಿಯಮಗಳ ಅನ್ವಯ ಕಾಟನ್‌ ಕ್ಯಾಂಡಿಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಕೃತಕ ಬಣ್ಣ ಉಪಯೋಗಿಸಲು ಹಾಗೂ ಬಳಸಲು ಅವಕಾಶವೇ ಇಲ್ಲದಿರುವ ಕೃತಕ ಬಣ್ಣಗಳನ್ನು ಉಪಯೋಗಿಸುವಂತಿಲ್ಲ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT