ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂತ್ರಸ್ತೆಯರ ಸಂಕಟ: ಪೆನ್‌ಡ್ರೈವ್ ಹಂಚಿದವರ ಬಂಧಿಸಿಲ್ಲ ಏಕೆ?

ಸಿಡಿದೆದ್ದ ಸ್ತ್ರೀ ಸಮುದಾಯ: ಬಿಜೆಪಿ, ಕಾಂಗ್ರೆಸ್ ವಿರುದ್ಧ ವ್ಯಾಪಕವಾಗಿ ಕೇಳಿಬರುತ್ತಿರುವ ಆರೋಪ
Published 24 ಮೇ 2024, 23:30 IST
Last Updated 24 ಮೇ 2024, 23:30 IST
ಅಕ್ಷರ ಗಾತ್ರ

ಹಾಸನ: ರಾಜಕೀಯ ಹಗೆತನ, ಕುಟುಂಬಗಳ ನಡುವಿನ ವಿರಸ, ಸ್ವಾರ್ಥ ಸಾಧನೆಗಾಗಿ ಹೆಣ್ಣಿನ ಘನತೆಯನ್ನು ಬೀದಿಗೆಳೆದ ಪುರುಷ ವಿಕೃತಿಯ ವಿರುದ್ಧ ಜಿಲ್ಲೆಯ ಸ್ತ್ರೀ ಸಮುದಾಯ ಸಿಡಿದೆದ್ದಿದೆ.

ಜಿಲ್ಲೆಯಲ್ಲಿ ತಲ್ಲಣ ಸೃಷ್ಟಿಸಿದ ಲೈಂಗಿಕ ದೌರ್ಜನ್ಯ ಮತ್ತು ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ ವಿಕೃತಿ ಮೆರೆದ ಅಪರಾಧಿ ಮತ್ತು ವಿಡಿಯೊ, ಚಿತ್ರಗಳನ್ನು ಹಂಚಿರುವ ಅಪರಾಧಿಗಳು, ಇಬ್ಬರಿಗೂ ಸಮಾನ ಶಿಕ್ಷೆಯಾಗಬೇಕು ಎಂಬುದು ಮಹಿಳಾಪರ ಸಂಘಟನೆಗಳು, ಹೋರಾಟಗಾರ ಒತ್ತಾಸೆಯಾಗಿದೆ.

ಅಶ್ಲೀಲ ವಿಡಿಯೊಗಳ ತುಣುಕು ಹರಿಬಿಟ್ಟು ‘ವ್ಯಾಪಾರ’ ಕುದುರಿಸಿದವವರು, ಮಧ್ಯವರ್ತಿಗಳು, ಮನುಷ್ಯತ್ವ ಮರೆತು ನಗ್ನಚಿತ್ರಗಳನ್ನು ಮೊಬೈಲ್ ಫೋನ್‌ ಮೂಲಕ ಹಂಚಿದವರು, ಇವುಗಳ ಸೂತ್ರಧಾರರನ್ನು ಯಾಕೆ ಬಂಧಿಸುತ್ತಿಲ್ಲ ಎಂಬುದು ಅವರ ಬಹಿರಂಗ ಪ್ರಶ್ನೆಯಾಗಿದೆ.

‘ಮೂರು ಹಂತಗಳಲ್ಲಿ ಹರಿಯ ಬಿಟ್ಟಿರುವ ಅಶ್ಲೀಲ ವಿಡಿಯೊ, ಚಿತ್ರಗಳನ್ನು ಪಳಗಿದ ಕೈಗಳು ಎಡಿಟ್‌ ಮಾಡಿವೆ. ಹಾಸನದ ಮಹಿಳೆಯರನ್ನು ಅದರಲ್ಲೂ ಒಂದು ಪಕ್ಷಕ್ಕೆ ಸೇರಿದ ಮಹಿಳೆಯರನ್ನೇ ಬಲಿಪಶುಗಳನ್ನಾಗಿ ಮಾಡಲಾಗಿದೆ. ಜಿಲ್ಲೆಯಲ್ಲಿ ಪ್ರಬಲವಾಗಿರುವ ಜೆಡಿಎಸ್‌ ಅನ್ನು ಮಣಿಸಲು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಹೆಣ್ಣನ್ನು ಕೆಟ್ಟರೀತಿ ಬಳಸಿಕೊಂಡಿವೆ. ಎಲ್ಲಾ ಕಾಲದಲ್ಲೂ ಶೋಷಣೆಗೆ ಒಳಗಾಗುವವಳು ಹೆಣ್ಣು. ಇಲ್ಲೂ ಶೋಷಣೆ, ಬ್ಲ್ಯಾಕ್‌ಮೇಲ್ ಬಲೆಗೆ ಸಿಲುಕಿದವಳು ಹೆಣ್ಣು’ ಎಂದು ಬೇಸರಿಸಿದರು ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುವ ಮಹಿಳಾ ಅಧಿಕಾರಿಯೊಬ್ಬರು.

‘ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿ ಕ್ಷಮೆಗೆ ಅರ್ಹನಲ್ಲ. ಅದೇ ರೀತಿ ಈ ದೌರ್ಜನ್ಯ ಪ್ರಕರಣದ ಚಿತ್ರ, ವಿಡಿಯೊಗಳನ್ನು ಪೆನ್‌ಡ್ರೈವ್ ಮೂಲಕ ಹರಿಬಿಟ್ಟು ಸಮಾಜದಲ್ಲಿ ಹೆಣ್ಣು ತಲೆಎತ್ತಿ ತಿರುಗಾಡದಂತೆ ಮಾಡಿರುವ ಹಂಚಿಕೆದಾರರು, ಅದರ ಹಿಂದಿರುವ ಕಾಣದ ಕೈಗಳು ಅಷ್ಟೇ ಘೋರ ಅಪರಾಧ ಮಾಡಿವೆ. ನಿಜವಾದ ಕಳಕಳಿ, ಸಂವೇದನೆ ಇದ್ದಿದ್ದರೆ, ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಗೋಪ್ಯತೆ ಕಾಪಾಡಬಹುದಿತ್ತಲ್ಲ? ಪೆನ್‌ಡ್ರೈವ್ ಹಂಚಿಕೆಯ ಮೂಲಕ ಹೆಣ್ಣಿನ ಮಾನ ಹರಾಜಿಗಿಟ್ಟು, ಕುಟುಂಬ ಛಿದ್ರಗೊಳಿಸಿರುವ ಕಾರ್ತಿಕ್, ನವೀನ್ ಹಾಗೂ ಇವರಿಗೆ ಬಲತುಂಬಿದ ರಾಜಕೀಯ ಶಕ್ತಿಗಳನ್ನು ಬಯಲಿಗೆಳೆದು, ಶಿಕ್ಷೆ ವಿಧಿಸಿದರೆ ಮಾತ್ರ ಮಹಿಳೆಯರಿಗೆ ನ್ಯಾಯ ಸಿಕ್ಕಂತಾಗುತ್ತದೆ’ ಎನ್ನುತ್ತಾರೆ ಅನನ್ಯ ಟ್ರಸ್ಟ್‌ನ ಸ್ಥಾಪಕಿ ಕೆ.ಟಿ. ಜಯಶ್ರೀ.

‘ಪೆನ್‌ಡ್ರೈವ್‌ ಹೆಸರಿನಲ್ಲಿ ಹೆಣ್ಣು ಮಕ್ಕಳಿಗೆ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ. ಮಾನಕ್ಕೆ ಅಂಜಿ ಅವರು ಮೌನಕ್ಕೆ ಜಾರಿದ್ದಾರೆ. ಅಶ್ಲೀಲ ವಿಡಿಯೊ ಹಂಚಿದವರನ್ನು ಮೊದಲ ಅಪರಾಧಿಯಾಗಿ ಪರಿಗಣಿಸಬೇಕು. ಒಪ್ಪಿತ ಲೈಂಗಿಕ ಕ್ರಿಯೆ ಅಥವಾ ಒತ್ತಡದ ಲೈಂಗಿಕ ಕ್ರಿಯೆ ಯಾವುದೇ ಇರಲಿ, ಅದರ ಚಿತ್ರಗಳನ್ನು ಹರಿಬಿಟ್ಟು ಹೆಣ್ಣಿನ ಖಾಸಗಿತನಕ್ಕೆ ಧಕ್ಕೆ ತಂದವರು ಪೆನ್‌ಡ್ರೈವ್ ಹಂಚಿದವರು. ಅಪರಾಧ ಪ್ರಕರಣಗಳಲ್ಲಿ ಪುರುಷಾಪರಾಧಿಗಳ ಮುಖವನ್ನೇ ಮಸುಕು ಮಾಡಲಾಗುತ್ತದೆ. ಆದರೆ, ಇಲ್ಲಿ ಹೆಣ್ಣಿನ ನಗ್ನ ಚಿತ್ರಗಳನ್ನು ಹಂಚಿದ ವಿಕೃತ ರಾಜಕೀಯ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಬೇಕು‘ ಎಂದು ಆಗ್ರಹಿಸಿದರು ಸ್ನೇಹ ಸಂಪದ ಮಹಿಳಾ ಸಮಿತಿಯ ಮಮತಾ ಶಿವು.

ಪುರುಷರ ‘ಲಕ್ಷ್ಮಣ ರೇಖೆ’
‘ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯರು ಮನೆಯಲ್ಲಿ ಬಂದಿಯಾಗಿದ್ದಾರೆ. ಅವರ ಒಡನಾಟದ ಹೆಣ್ಣು ಮಕ್ಕಳು ಕೂಡ ಮುಕ್ತವಾಗಿ ಓಡಾಡುವ ಪರಿಸ್ಥಿತಿ ಉಳಿದಿಲ್ಲ. ‘ಏನಮ್ಮಾ ನಿನ್ನದೂ ವಿಡಿಯೊ ಇದೆಯಾ’ ಎಂದು ಪ್ರಶ್ನಿಸುವ ವಿಕೃತ ಮನಸ್ಸುಗಳು ಅವರ ಆತ್ಮವಿಶ್ವಾಸವನ್ನೇ ಕುಗ್ಗಿಸುತ್ತಿವೆ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಮಹಿಳೆಯರಿಗೆ ಕುಟುಂಬದ ಪುರುಷರೇ ಲಕ್ಷ್ಮಣ ರೇಖೆ ಹಾಕುತ್ತಿದ್ದಾರೆ. ಹೆಣ್ಣನ್ನು ಹತ್ತಿಕ್ಕಲು ಈ ಪ್ರಕರಣ ನೆಪವಾಗುತ್ತಿದೆ’ ಎಂದು ಬೇಸರಿಸಿದರು ಸ್ನೇಹ ಸಂಪದ ಮಹಿಳಾ ಸಮಿತಿಯ ಮಮತಾ ಶಿವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT