ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೆನ್‌ಡ್ರೈವ್‌ ಸಂತ್ರಸ್ತೆಯರ ಸಂಕಟ | ಪ್ರಜಾಪ್ರಭುತ್ವ ಇಲ್ಲಿ ನಾಟ್ ರೀಚಬಲ್..!

Published 23 ಮೇ 2024, 0:39 IST
Last Updated 23 ಮೇ 2024, 0:39 IST
ಅಕ್ಷರ ಗಾತ್ರ

ಹಾಸನ: ಪ್ರಜಾಪ್ರಭುತ್ವವನ್ನು ಪಾಳೆಗಾರಿಕೆಯಾಗಿ ಪರಿವರ್ತಿಸಿಕೊಂಡು ರಾಜಕಾರಣ ಮಾಡಿದ ಪರಿವಾರದ ವಿರುದ್ಧ ಪ್ರತಿರೋಧದ ಅಲೆ ಎದ್ದಿದೆ. ‘ಭಯ’ದ ನೆರಳಿನಲ್ಲಿ ದನಿ ಕಳೆದುಕೊಂಡಿದ್ದ ಹೇಮಾವತಿ ನದಿ ತಟದ ಹಳ್ಳಿಗಳು ಮಾತನಾಡತೊಡಗಿವೆ. 

ದೇಶಕ್ಕೆ ಪ್ರಧಾನಿಯನ್ನು ಕೊಟ್ಟು ಭಾರತ ನಕಾಶೆಯಲ್ಲಿ ಮಿನುಗಿದ್ದ ಹಾಸನದ ಹೆಸರಿಗೆ, ಕಪ್ಪುಮಸಿ ಬಳಿದಿರುವ ಸಂಸದ ಪ್ರಜ್ವಲ್ ರೇವಣ್ಣ ಬಗ್ಗೆ ಹಾದಿ–ಬೀದಿಯಲ್ಲಿ ಜನರು ಆಕ್ರೋಶ ವ್ಯಕ್ತಪಡಿಸತೊಡಗಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೆ ಬಲಿಪಶುಗಳಾದ ಸಂತ್ರಸ್ತೆಯರನ್ನೇ ಅಪರಾಧಿಗಳಂತೆ ಬಿಂಬಿಸಲು ಯತ್ನಿಸುತ್ತಿರುವ ರಾಜಕೀಯ ವಿಕೃತಿ ವಿರುದ್ಧ ತೊಡೆತಟ್ಟಿರುವ ಜನರು, ಮೂರು ದಶಕಗಳ ಸರ್ವಾಧಿಕಾರದ ಕೆಳಗೆ ನಡೆದಿರುವ ದುರಾಡಳಿತದ ಕುರಿತು ಬಹಿರಂಗವಾಗಿ ಮಾತನಾಡ ತೊಡಗಿದ್ದಾರೆ.

‘ಭಾರತದಲ್ಲಿ ಪ್ರಜಾಪ್ರಭುತ್ವ ಇದೆ, ಆದರೆ, ಹೊಳೆನರಸೀಪುರದಲ್ಲಿ ಸರ್ವಾಧಿಕಾರ ಇದೆ’ ಎನ್ನುತ್ತ ಮಾತಿಗಿಳಿದರು ಸಾಮಾಜಿಕ ಕಾರ್ಯಕರ್ತ ಧರ್ಮೇಶ್.

ಪ್ರಜಾತಂತ್ರ ವ್ಯವಸ್ಥೆಯ ಅಣಕವನ್ನು ಹಾಸನ ಜಿಲ್ಲೆಯಲ್ಲಿ ಕಾಣಲು ಸಾಧ್ಯ. ಧ್ವನಿ ಎತ್ತಿದವರನ್ನು ಮಣಿಸುವುದೇ ಇಲ್ಲಿನ ತಂತ್ರಗಾರಿಕೆ. ಅಣ್ಣಾವ್ರನ್ನು ವಿರೋಧಿಸಿ ಬದುಕು ನಡೆಸುವುದು ಕಷ್ಟವೆಂಬ ಅನುಭವಜನ್ಯ ಸತ್ಯವನ್ನರಿತು ಜನರು ದಾಸ್ಯಕ್ಕೆ ಶರಣಾಗಿದ್ದಾರೆ’ ಎನ್ನುವಾಗ ಅವರ ದನಿ ಗಡುಸಾಗಿತ್ತು.

‘ಜನಸಾಮಾನ್ಯರ ಜಾತಿ ವ್ಯಾಮೋಹ ಮತ್ತು ಅಧಿಕಾರಸ್ಥರ ಪುತ್ರ ವ್ಯಾಮೋಹ ಇವೆರಡೂ ಇಲ್ಲಿ ಆಡಳಿತವನ್ನು ಕುರುಡಾಗಿಸಿವೆ. ಹಿಟ್ಲರ್‌ ಸಂಸ್ಕೃತಿ ‘ಸಹಜ’ ಎನ್ನುವಷ್ಟರ ಮಟ್ಟಿಗೆ ಹಾಸನದ ಜನರು ಒಗ್ಗಿಕೊಂಡಿದ್ದಾರೆ. ಉಸ್ತುವಾರಿ ಸಚಿವರು ಯಾರೇ ಇರಲಿ, ಹೊಳೆನರಸೀಪುರ ಶಾಸಕರೇ ಇಲ್ಲಿ ಆಡಳಿತ ನಿಯಂತ್ರಕರು. ಹೀಗಾಗಿ, ಹಾಸನದ ರಾಜಧಾನಿ ಹೊಳೆನರಸೀಪುರ ಎಂಬ ಆಡುಮಾತು ನಮ್ಮಲ್ಲಿ ಪ್ರಚಲಿತ’ ಎಂದು ನಸುನಕ್ಕರು ವ್ಯಾಪಾರಿಯೊಬ್ಬರು.

‘ಕ್ಷೇತ್ರಕ್ಕೆ ಕೆಲಸ ತರುವಲ್ಲಿ ಅಣ್ಣಾವ್ರು ಅವರದು ಎತ್ತಿದ ಕೈ. ಸುಸಜ್ಜಿತ ಮೇಲ್ಸೇತುವೆ, ರಸ್ತೆಗಳಿವೆ. ದೇವಾಲಯಗಳು ಜೀರ್ಣೋದ್ಧಾರಗೊಂಡಿವೆ. ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡ ಮೇಲೆ ನೀರಿನ ಬವಣೆ ತಪ್ಪಿದೆ. ಆದರೆ, ದರ್ಪ, ದಬ್ಬಾಳಿಕೆಯ ಆಡಳಿತ ಇವನ್ನೆಲ್ಲ ಗೌಣವಾಗಿಸಿದೆ. ಪಕ್ಷದ ಕಾರ್ಯಕರ್ತರಿಗೆ ಅಣ್ಣಾವ್ರು ಸುಲಭಕ್ಕೆ ಸಿಗುವವರಾದರೂ, ಜನರು ಅರ್ಜಿ ಹಿಡಿದು ಹೋಗುವುದಾದರೆ, ಪಕ್ಷದ ಪ್ರಭಾವಿಗಳ ಜೊತೆಗಿದ್ದರೆ ಮಾತ್ರ ಭೇಟಿಯ ಭಾಗ್ಯ. ಆದರೆ, ಅವರ ಮಗ ಕ್ಷೇತ್ರದಲ್ಲಿ ಕಾಣಸಿಗುವುದೂ ಅಪರೂಪ, ಅವರಿಂದ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿಯೂ ಅಷ್ಟಕ್ಕಷ್ಟೇ’ ಎಂದರು ತರಕಾರಿ ಖರೀದಿಗೆ ಬಂದಿದ್ದ ನಿವೃತ್ತ ಉದ್ಯೋಗಿಯೊಬ್ಬರು.

ಹೀಗಿದ್ದರೂ, ಮತ್ತೆ ಅಧಿಕಾರ ಹಿಡಿಯುತ್ತಿರುವ ಗುಟ್ಟೇನು ಎಂದು ಪ್ರಶ್ನಿಸಿದಾಗ, ಎದುರಾಳಿ ಪಕ್ಷಗಳೇ ಇಲ್ಲದಿರುವುದು, ಚುನಾವಣೆ ವೇಳೆ ಮಾತ್ರ ಉಳಿದ ಪಕ್ಷಗಳು ಸಕ್ರಿಯ ರಾಜಕಾರಣಕ್ಕಿಳಿಯುವುದು, ಏಕಸ್ವಾಮ್ಯದ ಆಡಳಿತ ಮುನ್ನಡೆಯಲು ಸಾಧ್ಯವಾಗಿದೆ. ಅದಿಲ್ಲದಿದ್ದರೆ, ಹಾಲು ಸಂಘಗಳ ಮುಖ್ಯಸ್ಥರಿಗೆ ‘ಮತ ಲೆಕ್ಕಾಚಾರ’ದ ಹೊಣೆ ವಹಿಸಿ, ಚುನಾವಣೆ ಸಂದರ್ಭದಲ್ಲೂ ಜನರ ನಡುವೆ ಕಾಣಿಸಿಕೊಳ್ಳದ ವ್ಯಕ್ತಿಗಳು ಹೇಗೆ ಆಯ್ಕೆಯಾಗಲು ಸಾಧ್ಯ ಎಂದು ಪ್ರಶ್ನಿಸಿ, ನಮಗ್ಯಾಕೆ ದೊಡ್ಡವರ ಉಸಾಬರಿ ಎಂದು ಹೊರಟೇ ಬಿಟ್ಟರು.

ಭೂ ಕಬಳಿಕೆ: ‘ಹೊಳೆನರಸೀಪುರದ ಹಳ್ಳಿಗಳ ಹಲವಾರು ರೈತರು ದಾಖಲೆಯಲ್ಲಿ ಶ್ರೀಮಂತರು. ವಾಸ್ತವದಲ್ಲಿ ಅವರು ಕಾರ್ಮಿಕರು. ರೈತರ ಹೆಸರಿನಲ್ಲಿ ಬೇನಾಮಿ ಆಸ್ತಿಗಳು ಇವೆ. ಇವುಗಳ ದಾಖಲೆಗಳು, ಕ್ರಯಪತ್ರದ ಹಕ್ಕುಗಳು ‘ಗೌಡ’ರ ಕುಟುಂಬದ ಮುಷ್ಟಿಯಲ್ಲಿವೆ. ಈ ಬಗ್ಗೆ ಧ್ವನಿ ಎತ್ತಿದವರನ್ನು ‘ಭಟ’ರ ಪಡೆ ಹತ್ತಿಕ್ಕಿದ ಪ್ರಕರಣಗಳು ಇವೆ. ಆರಂಭದಲ್ಲಿ ಇಂತಹ ಪ್ರಕರಣಗಳು ನಮ್ಮ ಬಳಿ ಬಂದರೂ, ಬಲಾಢ್ಯರನ್ನು ಎದುರಿಸುವ ಶಕ್ತಿಯಿಲ್ಲದೆ ಹೊಂದಾಣಿಕೆಗೆ ಶರಣಾಗುತ್ತಾರೆ. ಈ ರೀತಿಯ ಸರ್ವಾಧಿಕಾರಿ ಮನಃಸ್ಥಿತಿಯೇ ಲೈಂಗಿಕ ದೌರ್ಜನ್ಯ, ರಾಜಕೀಯ ವಿಕೃತಿಗೆ ಎಡೆಮಾಡಿಕೊಟ್ಟಿದೆ’ ಎನ್ನುತ್ತಾರೆ ವಕೀಲರೊಬ್ಬರು.

30ಕ್ಕೂ ಹೆಚ್ಚು ಕರೆಗಳು

ಹಾಸನದಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ರಚಿಸಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಸಹಾಯವಾಣಿಗೆ ಈವರೆಗೆ 30ಕ್ಕೂ ಹೆಚ್ಚು ಕರೆಗಳು ಬಂದಿವೆ. ಹಾಸನದ ಪ್ರಕರಣ ಹೊರತುಪಡಿಸಿ, ಬೇರೆ ರಾಜ್ಯಗಳಿಂದಲೂ ಕರೆಗಳು ಬಂದಿವೆ. ದೌರ್ಜನ್ಯಕ್ಕೆ ಒಳಗಾಗಿರುವ ಸಂತ್ರಸ್ತೆಯರು ಎಸ್‌ಐಟಿ ಸಂಪರ್ಕಿಸಿ ದೂರು ನೀಡಬಹುದು. ಅವರು ಹೇಳಿದ ಸ್ಥಳಕ್ಕೆ ಬಂದು ಮಾಹಿತಿ ಸಂಗ್ರಹಿಸಲು ತಂಡ ಸಿದ್ಧವಿದೆ. ಗುರುತು ಹಾಗೂ ಮಾಹಿತಿ ವಿಷಯದಲ್ಲಿ ಗೋಪ್ಯತೆ ಕಾಪಾಡಲಾಗುತ್ತದೆ. ನೇರವಾಗಿ ಅಧಿಕಾರಿಗಳನ್ನೂ ಸಂಪರ್ಕಿಸಬಹುದು ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಸಹಾಯವಾಣಿ ಸಂಖ್ಯೆ: 6360938947

ಜಾತ್ಯತೀತ ಕವಚದಲ್ಲಿ ಜಾತಿ ವಾದ

‘ಕಾರ್ಯಕ್ರಮವೊಂದಕ್ಕೆ ಶಾಸಕರನ್ನು ಅತಿಥಿಯಾಗಿ ಕರೆದಿದ್ದೆ. ಮುಖತಃ ಭೇಟಿಯಾಗಿ ಆಹ್ವಾನಿಸೋಣ ಎಂದು ಬೆಳಗಿನ ಹೊತ್ತಿನಲ್ಲಿ ಅವರ ಮನೆಗೆ ಹೋಗಿದ್ದೆ. ನನ್ನಡೆಗೆ ದೃಷ್ಟಿ ಬೀರಿದ ಅವರು ಕೈಯೆತ್ತಿ ಬಂದರು. ಕಾರ್ಯಕರ್ತರು, ಅಧಿಕಾರಿಗಳಿಂದ ತುಂಬಿದ್ದ ಸ್ಥಳದಲ್ಲಿ ಸಾರ್ವಜನಿಕ ಅವಮಾನ ಎದುರಿಸಿದ ‍‍ಪರಿಶಿಷ್ಟ ನಾನು’ ಎಂದು 12 ವರ್ಷಗಳ ಹಿಂದಿನ ದೃಷ್ಟಾಂತವನ್ನು ತೆರೆದಿಟ್ಟರು ಮಾದಿಗ ದಂಡೋರ ಸಂಘಟನೆ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್. ‘ಅಣ್ಣಾವ್ರು ಪ್ರತಿದಿನ ಬೆಳಿಗ್ಗೆ ಮೊದಲ ಬಾರಿಗೆ ಮನೆಯಿಂದ ಹೊರಬರುವಾಗ ಪರಿಶಿಷ್ಟರು ಕಣ್ಣಿಗೆ ಬೀಳುವಂತಿಲ್ಲ. ಇದು ಹೊಳೆನರಸೀಪುರದಲ್ಲಿ ಇಂದಿಗೂ ಚಾಲ್ತಿ ಯಲ್ಲಿರುವ ಅಘೋಷಿತ ಕಾನೂನು. ಜಾತ್ಯತೀತ ಎನ್ನುತ್ತಲೇ ಜಾತಿ ಮುಖವಾಡ ತೊಟ್ಟ ಪಾಳೆಗಾರಿಕೆ ಇಲ್ಲಿ ಜೀವಂತವಾಗಿದೆ’ ಎನ್ನುತ್ತ ಹಲವಾರು ಸಂದರ್ಭಗಳಲ್ಲಿ ಪ್ರತಿರೋಧವೊಡ್ಡಿದ್ದನ್ನು ನೆನಪಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT