ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ವರ್ಗಾವಣೆ: ಎರಡು ದಿನಗಳಲ್ಲಿ ವೇಳಾಪಟ್ಟಿ?

Published 31 ಮೇ 2023, 15:41 IST
Last Updated 31 ಮೇ 2023, 15:41 IST
ಅಕ್ಷರ ಗಾತ್ರ

ಬೆಂಗಳೂರು: ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್‌ ಕುಮಾರ್‌ ಸಿಂಗ್ ಅವರು ಇಲಾಖೆಯ ಆಯುಕ್ತರಿಗೆ ಸೂಚಿಸಿದ್ದು, ಎರಡು ದಿನಗಳಲ್ಲಿ ವರ್ಗಾವಣೆಯ ವೇಳಾಪಟ್ಟಿ ಬಿಡುಗಡೆ ಮಾಡಲು ಆಯುಕ್ತರ ಕಚೇರಿ ನಿರ್ಧರಿಸಿದೆ.

ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ–2020 ಜಾರಿಗೊಳಿಸಿ, ರಾಜ್ಯ ಸರ್ಕಾರ ಕಳೆದ ಡಿಸೆಂಬರ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಹಲವು ವರ್ಷಗಳಿಂದ ಬಿಗಿಯಾದ ನೀತಿಗೆ ಒಳಪಟ್ಟಿದ್ದ ಶಿಕ್ಷಕರ ವರ್ಗಾವಣೆ ನಿಯಮಗಳು ಸರಳೀಕರಣಗೊಂಡಿದ್ದವು. ಶಿಕ್ಷಕ ಸ್ನೇಹಿ ವರ್ಗಾವಣೆ ಶಿಕ್ಷಕರ ವಲಯದಲ್ಲಿ ಸಂತಸ ಸೃಷ್ಟಿಸಿತ್ತು. ವರ್ಗಾವಣಾ ವೇಳಾ ಪಟ್ಟಿಯೂ ಬಿಡುಗಡೆಯಾಗಿತ್ತು. ಸುಮಾರು 80 ಸಾವಿರ ಶಿಕ್ಷಕರು ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಮಕ್ಕಳು ಕಡಿಮೆ ಇರುವ ರಾಜ್ಯದ ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳಲ್ಲಿನ 10,500 ಶಿಕ್ಷಕರನ್ನು ‘ಹೆಚ್ಚುವರಿ’ ಎಂದು ಶಿಕ್ಷಣ ಇಲಾಖೆ ಪಟ್ಟಿ ಮಾಡಿತ್ತು. ಹೆಚ್ಚುವರಿ ಶಿಕ್ಷಕರ ಸ್ಥಳ ನಿಯೋಜನೆ ಗೊಂದಲ, ವಿಧಾನಸಭಾ ಚುನಾವಣೆಯಿಂದಾಗಿ ವರ್ಗಾವಣಾ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು. 

ಹಿಂದೆ ಪರಸ್ಪರ ವರ್ಗಾವಣೆಗೆ ಒಂದು ಬಾರಿ ಮಾತ್ರ ಅವಕಾಶ ಇತ್ತು. ಇನ್ನು ಮುಂದೆ ಆ ನಿರ್ಬಂಧ ಇರುವುದಿಲ್ಲ. ಕೆಲಸಕ್ಕೆ ಸೇರಿದ ಮೊದಲ ಐದು ವರ್ಷ ಹಾಗೂ ನಿವೃತ್ತಿಗೆ ಮೊದಲಿನ ಐದು ವರ್ಷಗಳು ವರ್ಗಾವಣೆಗೆ ಅವಕಾಶ ಇರುವುದಿಲ್ಲ. ಒಮ್ಮೆ ವರ್ಗಾವಣೆಯಾದವರು ಮೂರು ವರ್ಷಗಳ ನಂತರ ಮತ್ತೆ ವರ್ಗಾವಣೆಗೆ ಕೋರಿಕೆ ಸಲ್ಲಿಸಲು ಅವಕಾಶವಿದೆ.

10ರಿಂದ 20 ವರ್ಷಗಳು ಕೆಲಸ ನಿರ್ವಹಿಸಿ ಪದೋನ್ನತಿ ಪಡೆದ ಶಿಕ್ಷಕರ ಕೋರಿಕೆಯಂತೆ ಸೇವಾ ಅಂಕಗಳನ್ನು ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ (ಸಿ ವಲಯ) ಸೇವೆ ಸಲ್ಲಿಸಿದವರಿಗೆ ಪ್ರತಿ ವರ್ಷಕ್ಕೆ ಮೂರು ಅಂಕಗಳು, ಅರೆನಗರದ (ಬಿ ವಲಯ) ಶಿಕ್ಷಕರಿಗೆ ಎರಡು ಅಂಕಗಳು ಹಾಗೂ ನಗರ ಪ್ರದೇಶಗಳ (ಎ ವಲಯ) ಶಿಕ್ಷಕರಿಗೆ ಒಂದು ಸೇವಾ ಅಂಕಗಳನ್ನು ನೀಡಲು ಸಮ್ಮತಿಸಲಾಗಿದೆ. 

ಯಾವುದೇ ಒಂದು ಘಟಕ ಹಾಗೂ ವೃಂದದಲ್ಲಿ ಕನಿಷ್ಠ 10 ವರ್ಷ ಅಥವಾ ಎಲ್ಲ ವೃಂದಗಳೂ ಸೇರಿ 15 ವರ್ಷ ಕೆಲಸ ಮಾಡಿದ ಶಿಕ್ಷಕರನ್ನು ಶೇ 25ರಷ್ಟು ಮಿತಿಯ ಒಳಗೆ ಖಾಲಿ ಹುದ್ದೆಗಳಿರುವ ವಲಯಗಳಿಗೆ ವರ್ಗಾವಣೆ ಮಾಡಲು ಅವಕಾಶ ನೀಡಲಾಗಿದೆ. ವಲಯಗಳ ವರ್ಗಾವಣೆ ಪೂರ್ಣಗೊಂಡ ನಂತರ ಹೊರ ಜಿಲ್ಲೆಗಳ ವರ್ಗಾವಣೆ ಕೋರಿಕೆಗಳನ್ನು ಪರಿಗಣಿಸಲಾಗುತ್ತದೆ.

ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳು (371 ಜೆ ಅನ್ವಯ), ಮಲೆನಾಡು ವಲಯ ಹಾಗೂ ನಂಜುಂಡಪ್ಪ ವರದಿಯ ಅನ್ವಯ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶ ಎಂದು ಗುರುತಿಸಲಾಗಿರುವ ತಾಲ್ಲೂಕುಗಳಿಗೆ ಹೋಗಬಯಸುವವರಿಗೆ ವಿಶೇಷ ಆದ್ಯತೆ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT