ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕಾರಗೊಳ್ಳದ ‘ಗ್ರಾಮ ಸರ್ಕಾರ’ದ ಕನಸು

Published 4 ಡಿಸೆಂಬರ್ 2023, 0:22 IST
Last Updated 4 ಡಿಸೆಂಬರ್ 2023, 0:22 IST
ಅಕ್ಷರ ಗಾತ್ರ

ಬೆಂಗಳೂರು: 2016ರಲ್ಲಿ ತಿದ್ದುಪಡಿಯಾಗಿದ್ದ ಕರ್ನಾಟಕ ರಾಜ್ಯ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್ ಕಾಯ್ದೆಗೆ ಏಳು ವರ್ಷಗಳಾದರೂ ಸರ್ಕಾರ ಸೂಕ್ತ ನಿಯಮ ರೂಪಿಸದ ಕಾರಣ ’ಗ್ರಾಮ ಸರ್ಕಾರ‘ದ ಆಶಯ ಸಾಕಾರಗೊಂಡಿಲ್ಲ.

ಕಾಯ್ದೆಯ ಅನುಷ್ಠಾನದ ವಿಳಂಬ ನೀತಿಯಿಂದಾಗಿ ಗ್ರಾಮ ಸರ್ಕಾರದ ಆಶಯದ ಜತೆಗೆ, ಸ್ಥಳೀಯ ಸಂಸ್ಥೆಗಳಲ್ಲಿ ಪರಿಶಿಷ್ಟರು, ಹಿಂದುಳಿದ ವರ್ಗಗಳು, ಮಹಿಳೆಯರಿಗೆ ನೀಡಿದ್ದ ಮೀಸಲಾತಿಯ ಉದ್ದೇಶವೂ ವ್ಯರ್ಥವಾಗಿದೆ. ಮೀಸಲಾತಿ ಬಳಸಿಕೊಂಡು ರಾಜ್ಯದ ನೂರಾರು ಸಣ್ಣಪುಟ್ಟ ಸಮುದಾಯಗಳ ಜನರು ಗ್ರಾಮ ಗದ್ದುಗೆಯ ಮೇಲೆ ಕುಳಿತರೂ, ಸಮರ್ಪಕ ಅಧಿಕಾರ ಹಂಚಿಕೆಯ ಸೂತ್ರಗಳಿಲ್ಲದೇ ನಾಮಕಾವಾಸ್ತೆಯ ಆಡಳಿತ ನಡೆಸುವಂತಾಗಿದೆ.

ಸಂವಿಧಾನದ 73 ಮತ್ತು 74ನೇ ತಿದ್ದುಪಡಿ ಮೂಲಕ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ನೀಡಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿತ್ತು. ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯಯವರ ಈ ಆಶಯ 1993ರಲ್ಲಿ ಈಡೇರಿತ್ತು. ಇದಕ್ಕೂ ಮೊದಲೇ ರಾಜ್ಯದಲ್ಲೂ ಅಂದಿನ ರಾಮಕೃಷ್ಣ ಹೆಗಡೆ ಸರ್ಕಾರ ಮೊದಲ ಬಾರಿ 1987ರಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಮೂಲಕ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ಸಾಕಾರಗೊಳಿಸಿತ್ತು. ಆದರೆ, ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಇಲ್ಲದ ಕಾರಣ ಅಂದು ಪ್ರಬಲ ಜಾತಿಗೆ ಸೇರಿದವರೇ ಅಧಿಕಾರ ಅನುಭವಿಸಿದರು. ಸಂವಿಧಾನ ತಿದ್ದುಪಡಿಯ ನಂತರ ರಾಜ್ಯದಲ್ಲೂ ’ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಕಾಯ್ದೆ–1993‘ ಜಾರಿಗೊಳಿಸಲಾಯಿತು. 

ರಾಜ್ಯದಲ್ಲಿ 1993ರಲ್ಲೇ ಕಾಯ್ದೆ ಜಾರಿಯಾದರೂ ಸ್ಥಳೀಯ ಸಂಸ್ಥೆಗಳಿಗೆ ಅಗತ್ಯವಿದ್ದ ಜವಾಬ್ದಾರಿ, ಜವಾಬ್ದಾರಿಗೆ ಪೂರಕವಾಗಿ ಹಣಕಾಸು, ಅಧಿಕಾರ, ಮಾನವ ಸಂಪನ್ಮೂಲ ಸಮರ್ಪಕವಾಗಿ ನೀಡಲಿಲ್ಲ. ಆಯಾ ಸ್ಥಳೀಯ ಸಂಸ್ಥೆಗಳ ಅಧೀನಕ್ಕೆ ಇಲಾಖೆಗಳನ್ನು ನೀಡಲಿಲ್ಲ. ಇಂತಹ ನ್ಯೂನತೆಗಳನ್ನು ಸರಿಪಡಿಸಿ, ಗ್ರಾಮ ಸರ್ಕಾರದ ಆಶಯ ಈಡೇರಿಸಲು ಅಗತ್ಯವಾದ ವರದಿ ನೀಡುವಂತೆ 2013ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ಕೆ.ಆರ್‌.ರಮೇಶ್‌ಕುಮಾರ್‌ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತ್ತು.

ಸಮಿತಿಯ ಶಿಫಾರಸಿನಂತೆ ’ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಕಾಯ್ದೆ‘ಗೆ ತಿದ್ದುಪಡಿ ತಂದರು. ಗ್ರಾಮಗಳನ್ನು ಸಬಲಗೊಳಿಸುವ, ರಾಜ್ಯಕ್ಕೆ ಅಗತ್ಯವಾದ ನೀತಿ, ನಿಯಮ ರೂಪಿಸುವ ಹೊಣೆಗಾರಿಕೆ ಗ್ರಾಮಗಳಿಗೇ ನೀಡುವ ಮಹತ್ವದ ಆಶಯವನ್ನು ಕಾಯ್ದೆ ಒಳಗೊಂಡಿದ್ದರೂ, ಅವುಗಳ ಸಮರ್ಪಕ ಅನುಷ್ಠಾನಕ್ಕೆ ಅಗತ್ಯವಾದ ರೂಪುರೇಷೆಗಳನ್ನು ಸರ್ಕಾರ ರೂಪಿಸಿಲ್ಲ.

ಸಾಮಾನ್ಯ ಜನರು ಇಷ್ಟು ವರ್ಷ ಪ್ರಬಲರಿಗೇ ಅಧಿಕಾರ ನೀಡಿದ್ದಾರೆ. ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸುವ ಮೂಲಕ ಸಾಮಾನ್ಯರ ಋಣ ತೀರಿಸುವ ಕೆಲಸವನ್ನು ಮಾಡಬೇಕಿದೆ.
–ಡಿ.ಆರ್‌.ಪಾಟೀಲ ಮಾಜಿ ಶಾಸಕ.
ಪ್ರತಿ ಗ್ರಾಮವೂ ಭಿನ್ನ. ಒಂದು ಭಾಗಕ್ಕೆ ರೂಪಿಸಿದ ಯೋಜನೆ ಮತ್ತೊಂದಕ್ಕೆ ಹೊಂದಿಕೆಯಾಗದೇ ಇರಬಹುದು. ಹಾಗಾಗಿ ತಮಗೆ ಬೇಕಾದ ಕ್ರಿಯಾಯೋಜನೆ ರೂಪಿಸುವ ಅಧಿಕಾರ ಗ್ರಾಮಗಳಿಗೆ ನೀಡಬೇಕು. 
–ಡಿ.ಎಸ್. ಅರುಣ್‌ ವಿಧಾನ ಪರಿಷತ್‌ ಸದಸ್ಯ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) 
ಮೇಲಿನ ಹಂತದಲ್ಲೇ ಎಲ್ಲವೂ ನಿರ್ಧಾರ
ಗ್ರಾಮ ಸ್ವರಾಜ್‌ ಕಾಯ್ದೆಯಂತೆ ಗ್ರಾಮ ಸಭೆಗಳಿಗೆ ಪರಮಾಧಿಕಾರವಿದೆ. ಕೇಂದ್ರ ರಾಜ್ಯದ ಯೋಜನೆಗಳು ತಮ್ಮ ಗ್ರಾಮದಲ್ಲಿ ಎಲ್ಲಿ ಅನುಷ್ಠಾನಗೊಳ್ಳಬೇಕು. ತಮಗೆ ಅಗತ್ಯವಾದ ಯಾವ ಯೋಜನೆಗಳನ್ನು ನೀಡಬೇಕು ಎಂದು ನಿರ್ಧರಿಸುವ ಅನುದಾನ ಪಡೆಯುವ ಅನುಷ್ಠಾನಗೊಳಿಸುವ ಮೇಲುಸ್ತುವಾರಿ ಅಧಿಕಾರ ನೀಡಲಾಗಿದೆ. ಕಾನೂನು ಚೌಕಟ್ಟಿನಲ್ಲಿ ತೆಗೆದುಕೊಂಡ ಹಳ್ಳಿಗಳ ಸಭೆಯ ನಿರ್ಣಯವನ್ನು ತಿರಸ್ಕರಿಸುವ ಅಧಿಕಾರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೂ ಇಲ್ಲ. ’ವಾಸ್ತವದಲ್ಲಿ ಸರ್ಕಾರ ಯೋಜನೆಗಳನ್ನು ಮೇಲು ಹಂತದ ಅಧಿಕಾರಿಗಳೇ ರೂಪಿಸಿ ಗ್ರಾಮಗಳ ಒಪ್ಪಿಗೆ ಇಲ್ಲದೇ ಅನುಷ್ಠಾನಗೊಳಿಸುವ ಪ್ರವೃತ್ತಿ ನಡೆಯುತ್ತಿದೆ. ಅಧಿಕಾರಿಗಳ ಒತ್ತಡಕ್ಕೆ ಮಣಿದು ಗ್ರಾಮ ಪಂಚಾಯತಿ ಅಧ್ಯಕ್ಷರು ಸಹಿ ಹಾಕುವ ಪರಿಪಾಟ ಬೆಳೆಸಿಕೊಂಡಿದ್ದಾರೆ. ಪಂಚಾಯಿತಿಗಳಿಗೆ ಬೇಕಾದ ಪೆನಾಯಿಲ್‌ ಬ್ಲೀಚಿಂಗ್‌ ಪೌಡರ್‌ಗಳೂ ಸಹ ಮೇಲಿನ ಹಂತದಲ್ಲಿ ಖರೀದಿಯಾಗಿ ಪಂಚಾಯಿತಿಗಳಿಗೆ ಬರುತ್ತವೆ. ಪಿಡಿಒಗಳು ಪ್ರತಿನಿಧಿಗಳನ್ನು ಒಪ್ಪಿಸಿಕೊಂಡು ಹಣ ನೀಡುತ್ತಾರೆ. ಶಾಸಕರು ಸಂಸದರ ನಿಧಿ ಬಳಕೆಯಲ್ಲೂ ಗ್ರಾಮಗಳನ್ನು ಕಡೆಗಣಿಸಲಾಗುತ್ತಿದೆ. ಒಂದು ರೀತಿ ಸ್ಥಳೀಯ ಸಂಸ್ಥೆಗಳು ಸರ್ಕಾರದ ಶಾಖಾ ಕಚೇರಿಗಳಂತೆ ಕೆಲಸ ಮಾಡುತ್ತಿವೆ‘ ಎನ್ನುತ್ತಾರೆ ನಲ್ಲೂರು ಗ್ರಾಮ ಪಂಚಾಯಿತಿ ಸದಸ್ಯ ಆರ್‌.ಮಂಜಪ್ಪ.
ಆಶಯ ಸಾಕಾರಕ್ಕೆ ಮುಖ್ಯಮಂತ್ರಿಗೆ ಪತ್ರ
2016ರ ತಿದ್ದುಪಡಿ ಕಾಯ್ದೆಯಂತೆ ಎಲ್ಲ ಅಧಿಕಾರಗಳನ್ನು ಗ್ರಾಮ ಪಂಚಾಯಿತಿಗೆ ನೀಡಬೇಕು. ಆ ಮೂಲಕ ಮೀಸಲಾತಿಯಿಂದ ದೊರೆತ ಅಧಿಕಾರವನ್ನು ಪರಿಶಿಷ್ಟರು ಹಿಂದುಳಿದ ವರ್ಗಗಳು ಅನುಭವಿಸಲು ಅವಕಾಶ ಮಾಡಿಕೊಡಬೇಕು. ಎಲ್ಲ ಇಲಾಖೆ ಅಧಿಕಾರಿಗಳು ಹಾಗೂ ಅಧಿಕಾರವನ್ನು ಸ್ಥಳೀಯ ಸಂಸ್ಥೆಗಳಿಗೆ ವರ್ಗಾಯಿಸಬೇಕು. ಸಂವಿಧಾನ ಜಾರಿಗೆ ಬಂದ ಅಮೃತ ಮಹೋತ್ಸವದ ಗಳಿಗೆ ಆರಂಭಕ್ಕೆ ಒಂದೂವರೆ ತಿಂಗಳು ಬಾಕಿ ಉಳಿದಿದೆ. ಗ್ರಾಮ ಸ್ವರಾಜ್ಯದ ಕನಸು ಕಂಡಿದ್ದ ಗಾಂಧೀಜಿ ಎಐಸಿಸಿ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿಯಲ್ಲಿ ನಡೆಯುತ್ತಿರುವ ಈ ಅಧಿವೇಶನದಲ್ಲೇ ಈ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮಾಜಿ ಶಾಸಕ ಡಿ.ಆರ್ ಪಾಟೀಲ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಪ್ರತ್ಯೇಕ ಪತ್ರಗಳನ್ನು ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT