ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆಗೈದ ಕನ್ನಡಿಗರು

Last Updated 25 ಸೆಪ್ಟೆಂಬರ್ 2021, 20:39 IST
ಅಕ್ಷರ ಗಾತ್ರ

ಬೆಂಗಳೂರು:ಕೇಂದ್ರ ಲೋಕಸೇವಾ ಆಯೋಗವು2020ರ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದೆ.

ರೈತನ ಮಗನ ಸಾಧನೆ
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಹಳ್ಳದಮಾದಹಳ್ಳಿಯ ರೈತ ದಂಪತಿರುದ್ರಾರಾಧ್ಯ ಹಾಗೂ ಮಮತಾಮಣಿ ಅವರ ಪುತ್ರ ಎಚ್‌.ಆರ್‌.ಪ್ರಮೋದ್‌ ಆರಾಧ್ಯ, ಯುಪಿಎಸ್‌ಸಿ ಪರೀಕ್ಷೆಯಲ್ಲಿ 601ನೇ ರ‍್ಯಾಂಕ್‌ ಪಡೆದಿದ್ದಾರೆ.

ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವೀಧ ರರಾಗಿರುವ ಅವರು ಮೂರನೇ ಪ್ರಯತ್ನದಲ್ಲಿ ಈ ಸಾಧನೆ ಮಾಡಿದ್ದಾರೆ.

‘ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ದೊರಕಿದ ವಿದ್ಯಾರ್ಥಿ ವೇತನವು ದೆಹಲಿಯಲ್ಲಿ ತರಬೇತಿ ಪಡೆಯಲು ನೆರವಾಯಿತು. ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಚಿಕ್ಕ ಜಿಲ್ಲೆಯಿಂದ ಯುಪಿಎಸ್‌ಸಿಗೆ ಆಯ್ಕೆಯಾಗಿರುವುದಕ್ಕೆ ಸಂತಸವಾಗಿದೆ. ಕೃಷಿಯಲ್ಲಿ ತೊಡಗಿರುವಪೋಷಕರು ಬೆಂಬಲ ನೀಡಿದರು. ಸ್ನೇಹಿತರು ಹಾಗೂ ಬೋಧಕರ ಮಾರ್ಗ ದರ್ಶನ, ಸಲಹೆಯಿಂದ ಈ ಸಾಧನೆ ಸಾಧ್ಯವಾಗಿದೆ’ ಎಂದು ಪ್ರಮೋದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿ.ವಿ.ಶ್ರೀದೇವಿಗೆ 573ನೇ ರ‍್ಯಾಂಕ್‌
ಹಗರಿಬೊಮ್ಮನಹಳ್ಳಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‍ಸಿ)ದ ನಾಗರಿಕ ಸೇವೆಗಳ ನೇಮಕಾತಿ ಪರೀಕ್ಷೆ ಯಲ್ಲಿ ತಾಲ್ಲೂಕಿನ ಬನ್ನಿಕಲ್ಲು ಗ್ರಾಮದ ಬಿ.ವಿ.ಶ್ರೀದೇವಿ ಅವರು 573ನೇ ರ‍್ಯಾಂಕ್‌ ಪಡೆದಿದ್ದಾರೆ.

ಪಟ್ಟಣದ ವಕೀಲರಾದ ಬಿ.ವಿ.ಶಿವಯೋಗಿ ಮತ್ತು ಬಿ.ವಿ. ಇಂದಿರಾ ಅವರ ಪುತ್ರಿಯಾಗಿರುವ ಇವರು ಪಟ್ಟಣದರಾಷ್ಟ್ರೋತ್ಥಾನ ಪರಿಷತ್‍ನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ವಿದ್ಯಾಭ್ಯಾಸವನ್ನು, ಪದವಿ ಪೂರ್ವ ಶಿಕ್ಷಣವನ್ನು ಹುಬ್ಬಳ್ಳಿಯ ಚೇತನಾ ಕಾಲೇಜ್, ಮೈಸೂರಿನ ಜೆ.ಸಿ.ಇ ಕಾಲೇಜ್‍ನಲ್ಲಿ ಬಿ.ಇ(ಇ ಅಂಡ್ ಸಿ)ವಿದ್ಯಾಭ್ಯಾಸ ಮಾಡಿ ಸದ್ಯ ಗುಜರಾತ್‍ನ ಐಎಫ್‍ಎಸ್‍ಎ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎರಡನೇ ಯತ್ನದಲ್ಲಿಯೇ ಅವರು ಪಾಸಾಗಿದ್ದಾರೆ.

115ನೇ ರ್‍ಯಾಂಕ್‌ ಪಡೆದ ಯತೀಶ್‌
ರಾಮನಗರ: ಕನಕಪುರದವರಾದ ಆರ್‌. ಯತೀಶ್‌ ಈ ಬಾರಿಯ ಯುಪಿಎಸ್‌ಸಿ ಪರೀಕ್ಷೆಯಲ್ಲಿ 115ನೇ ರ್‍ಯಾಂಕ್‌ ಪಡೆದಿದ್ದು, ರ್‍ಯಾಂಕ್‌ ಪಟ್ಟಿಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಯತೀಶ್‌ 2017ರಿಂದ ಯುಪಿಎಸ್‌ಸಿ ಪರೀಕ್ಷೆ ಬರೆಯುತ್ತಿದ್ದು, 2019ರಲ್ಲಿ ತಮ್ಮ ಎರಡನೇ ಪ್ರಯತ್ನದಲ್ಲಿ ಐಪಿಎಸ್ ಹುದ್ದೆಗಳಿಸಿ ಅಸ್ಸಾಂ–ಮೇಘಾಲಯ ಕೇಡಾರ್ ಅಧಿಕಾರಿಯಾಗಿ ನೇಮಕಗೊಂಡಿದ್ದರು. ನಂತರ ಕರ್ತವ್ಯದಿಂದ ರಜೆ ಪಡೆದು, ಮೂರನೇ ಪ್ರಯತ್ನದಲ್ಲಿ ಐಎಎಸ್‌ ಅಧಿಕಾರಿಯಾಗುವ ಕನಸು ನನಸು ಮಾಡಿಕೊಂಡಿದ್ದಾರೆ.

ಕನಕಪುರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಮುಂದಿನ ಓದಿಗಾಗಿ ಬೆಂಗಳೂರಿನತ್ತ ಮುಖ ಮಾಡಿದರು. ಆರ್.ವಿ. ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್‌ ಮತ್ತು ಕಮ್ಯುನಿಕೇಶನ್‌ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಅವರ ತಂದೆ ರಾಧಾಕೃಷ್ಣ ನಿವೃತ್ತ ಅಧಿಕಾರಿ ಹಾಗೂ ತಾಯಿ ರಜನಿ ಗೃಹಿಣಿ. ‘ರ್‍ಯಾಂಕ್ ಆಧಾರದ ಮೇಲೆ ಈ ಬಾರಿ ಐಎಎಸ್ ಅಧಿಕಾರಿಯಾಗಿ ಆಯ್ಕೆ ಆಗುವ ಸಾಧ್ಯತೆ ಇದ್ದು, ಕರ್ನಾಟಕದಲ್ಲೇ ಸೇವೆ ಸಲ್ಲಿಸುವ ಹಂಬಲ ಇದೆ’ ಎಂದರು.

ಅಮೆರಿಕಾದಿಂದ ವಾಪಸ್ಸಾದ ಟೆಕ್ಕಿಗೆ 235ನೇ ರ‍್ಯಾಂಕ್
ದಾವಣಗೆರೆ: ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಮಲೇಬೆನ್ನೂರು ಮೂಲದ ಶ್ರೀನಿವಾಸ್ ಎಂ.ಪಿ. ಅವರು ಯುಪಿಎಸ್‌ಸಿ ಪರೀಕ್ಷೆ ಯಲ್ಲಿ 235ನೇ ರ‍್ಯಾಂಕ್ ಪಡೆದಿದ್ದಾರೆ.

ಬೆಂಗಳೂರಿನ ಆರ್.ವಿ. ಕಾಲೇಜಿ ನಲ್ಲಿ ಎಂಜಿನಿಯರಿಂಗ್ ಮುಗಿಸಿ ಸಿಯಾಟಲ್‌ನ ವಾಷಿಂಗ್ಟನ್‌ ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕೆಲ ವರ್ಷಗಳ ಕಾಲ ಅಲ್ಲಿನ ರಸೆಲ್‌ ಇನ್‌ವೆಸ್ಟ್‌ಮೆಂಟ್‌ನಲ್ಲಿ ಕರ್ತವ್ಯ ನಿರ್ವಹಿಸಿ ಹುಬ್ಬಳ್ಳಿಯಲ್ಲಿ ನೆಲೆಸಿ 5ನೇ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದ್ದಾರೆ.

‘ಪ್ರಜಾವಾಣಿ’ ಅಚ್ಚುಮೆಚ್ಚು: ‘ನಾನು ಮೊದಲಿನಿಂದಲೂ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆ ಓದುತ್ತಿದ್ದೇನೆ. ಸಾಹಿತ್ಯ ಪುರವಣಿಯಲ್ಲಿನ ಅನೇಕ ವಿಷಯಗಳು ಪರೀಕ್ಷೆಯಲ್ಲಿ ಅನುಕೂಲಕ್ಕೆ ಬಂದವು. ಸಂಪಾದಕೀಯ ಪುಟದಲ್ಲಿನ ಎಲ್ಲಾ ವಿಷಯಗಳನ್ನು ಅಭ್ಯಸಿಸಿದ್ದೇನೆ’ ಎಂದು ಶ್ರೀನಿವಾಸ್ ಮೆಚ್ಚುಗೆ ವ್ಯಕ್ತಪಡಿಸಿದರು. ಸದ್ಯ ಅವರು ಹುಬ್ಬಳ್ಳಿಯಲ್ಲಿ ತಂದೆಯ ಜೊತೆಗೆ ನೆಲೆಸಿದ್ದಾರೆ.

ಮಮತಾಗೆ 707ನೇ ರ್‍ಯಾಂಕ್‌
ಹೊಸದುರ್ಗ:
ತಾಲ್ಲೂಕಿನ ದೇವಪುರ ಭೋವಿಹಟ್ಟಿ ಗ್ರಾಮದ ಗೋವಿಂದಪ್ಪ ಚಂದ್ರಮ್ಮ ಅವರ ಪುತ್ರಿ ಜಿ. ಮಮತಾ ಈ ಬಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 707ನೇ ರ್‍ಯಾಂಕ್‌ ಪಡೆದಿದ್ದಾರೆ.

ಈ ಗ್ರಾಮಕ್ಕೆ ಇಂದಿಗೂ ಸಾರಿಗೆ ಸೌಲಭ್ಯವಿಲ್ಲ.ಬೆಂಗಳೂರಿನ ಆರ್‌.ವಿ. ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸಿವಿಲ್‌ ಎಂಜಿನಿಯರಿಂಗ್‌ ಪದವಿ ಪಡೆದಿರುವ ಇವರು ಬೆಂಗಳೂರಿನಲ್ಲಿ ಇದ್ದುಕೊಂಡೇ ಯುಪಿಎಸ್‌ಸಿ ಪರೀಕ್ಷೆಗೆ 10 ತಿಂಗಳು ತರಬೇತಿ ಪಡೆದು ಯಶಸ್ಸು ಕಂಡಿದ್ದಾರೆ.

ಹೆದ್ದುರ್ಗದ ಅಮೃತ್‌ಗೆ 752ನೇ ರ್‍ಯಾಂಕ್
ಹಾಸನ: ಆಲೂರು ತಾಲ್ಲೂಕಿನ ಹೆದ್ದುರ್ಗದ ಎಚ್‌.ವಿ. ಅಮೃತ್‌ ಯುಪಿಎಸ್‌ಸಿ ಪರೀಕ್ಷೆಯಲ್ಲಿ 752ನೇ ರ್‍ಯಾಂಕ್‌ ಪಡೆದಿದ್ದಾರೆ.

ಕಾಫಿ ಬೆಳೆಗಾರ ವಿಶ್ವನಾಥ್‌ ಮತ್ತು ಲೇಖಕಿ ನಂದಿನಿ ಹೆದ್ದುರ್ಗ ದಂಪತಿ ಪುತ್ರ ಅಮೃತ್‌ ಬಿಇ ಪದವೀಧರ.

‘ಪ್ರಿಲಿಮ್ಸ್‌ಗಾಗಿ ದಿನಕ್ಕೆ ಎಂಟು ತಾಸು ಓದುತ್ತಿದ್ದೆ. ಮುಖ್ಯ ಪರೀಕ್ಷೆಯಲ್ಲಿ 12–14 ತಾಸುಅಧ್ಯಯನ ಮಾಡುತ್ತಿದ್ದೆ. 400 ರೊಳಗಿನ ರ್‍ಯಾಂಕ್‌ ನಿರೀಕ್ಷಿಸಿದ್ದೆ. ಕೆಲ ತಪ್ಪುಗಳಿಂದ ಅದು ಸಾಧ್ಯವಾಗಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆತಿಳಿಸಿದರು.

‘ಯುಪಿಎಸ್‌ಸಿಗಾಗಿ ಯಾವುದೇ ಕೋಚಿಂಗ್‌ ತೆಗೆದುಕೊಂಡಿಲ್ಲ. ಮಾನವಶಾಸ್ತ್ರ ವಿಷಯವನ್ನು ಆಯ್ಕೆ ಮಾಡಿಕೊಂಡು ವ್ಯಾಸಂಗ ಆರಂಭಿಸಿದೆ. ಮೊದಲ ಎರಡು ಪ್ರಯತ್ನದಲ್ಲಿ ಫಲ ದೊರೆಯಲಿಲ್ಲ. ಮೂರನೇ ವಯತ್ನದಲ್ಲಿ ಯಶಸ್ಸು ಸಿಕ್ಕಿದೆ. ಐಆರ್‌ಎಸ್‌ ಹುದ್ದೆ ದೊರೆಯುವ ನಿರೀಕ್ಷೆಯಿದೆ’ ಎಂದರು.

ಸಾಗರ ವಾಡಿಗೆ385ನೇ ರ‍್ಯಾಂಕ್‌
ವಿಜಯಪುರ: ಜಿಲ್ಲೆಯ ಇಂಡಿ ತಾಲ್ಲೂಕಿನ ಹಿಂಗಣಿ ಗ್ರಾಮದ ಸಾಗರ್‌ ವಾಡಿ ಅವರಿಗೆ ಯುಪಿಎಸ್‌ಸಿಯಲ್ಲಿ 385ನೇ ರ‍್ಯಾಂಕ್ ಲಭಿಸಿದೆ. ಅವರು ಸದ್ಯ ಕೇಂದ್ರ ಸರ್ಕಾರದ ಇಂಧನ ಇಲಾಖೆಯಲ್ಲಿ ಡೆಪ್ಯುಟಿ ಮ್ಯಾನೇಜರ್‌ ಆಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ಐಎಎಸ್‌ ಅಧಿಕಾರಿಯಾಗಬೇಕೆನ್ನುವುದು ಕನಸಾಗಿತ್ತು. ತಂದೆ, ತಾಯಿ ಪ್ರೋತ್ಸಾಹ ದಿಂದ ನನಸಾಗಿದೆ. ಪ್ರತಿದಿನ ‘ಪ್ರಜಾವಾಣಿ’ ಓದುತ್ತಿದ್ದೆ, ಇದರಿಂದ ಪರೀಕ್ಷೆ ಪಾಸಾಗಲು ಸಹಾಯವಾಯಿತು’ ಎಂದರು. ಇವರ ತಂದೆ ಅಮಗೊಂಡ ವಾಡಿ ಸರ್ಕಾರಿ ಪ್ರಾಥಮಿಕ ಕನ್ನಡ ಶಾಲೆಯ ಶಿಕ್ಷಕರಾಗಿದ್ದಾರೆ.

‘ಆಟ–ಪಾಠ ಸಮತೋಲನವಾಗಿ ನಿಭಾಯಿಸಿದ್ದೆ’
ಬೆಂಗಳೂರು: ‘ಪ್ರತಿಭೆ, ಪರಿಶ್ರಮ ಮತ್ತು ಸಮರ್ಪಣಾ ಮನೋಭಾವ ಇದ್ದರೆ ಮಾತ್ರ ಯಶಸ್ಸು ಸಾಧ್ಯ’ ಎಂದು ಯುಪಿಎಸ್‌ಸಿ ಪರೀಕ್ಷೆಯಲ್ಲಿ 204ನೇ ರ‍್ಯಾಂಕ್‌ ಗಳಿಸಿರುವ ಬೆಂಗಳೂರಿನ ಸಿರಿವೆನ್ನೆಲ ಅವರು ತಮ್ಮ ಯಶಸ್ಸಿನ ವಿವರ ಬಿಚ್ಚಿಟಿದ್ದಾರೆ.

2017ರಲ್ಲೂ 560 ರ‍್ಯಾಂಕ್‌ ಪಡೆದಿದ್ದ ಸಿರಿವೆನ್ನೆಲ ಅವರು, ಪ್ರಸ್ತುತ ನಾಗಪುರದಲ್ಲಿರುವ ಇಂಡಿಯನ್‌ ಡಿಫೆನ್ಸ್‌ ಅಕೌಂಟ್ಸ್‌ ಸರ್ವಿಸ್‌ ನಲ್ಲಿ (ಐಡಿಎಎಸ್‌) ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಿ.ಎಸ್ಸಿ. (ಸಸ್ಯ ವಿಜ್ಞಾನ, ಪ್ರಾಣಿ ವಿಜ್ಞಾನ, ಮನೋವಿಜ್ಞಾನ) ಪದವಿ ಪಡೆದಿರುವ ಸಿರಿವೆನ್ನೆಲ ಅವರು, 2017ರಲ್ಲಿ ವಲಯ ಸಂರಕ್ಷಣಾಧಿಕಾರಿ (ಆರ್‌ಎಫ್‌ಒ) ಹುದ್ದೆಗೂ ಆಯ್ಕೆಯಾಗಿದ್ದರು.

‘ಚಿಕ್ಕ ವಯಸ್ಸಿನಿಂದಲೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸ ಬೇಕು ಎನ್ನುವ ಗುರಿ ಇತ್ತು. ಅದೇ ಛಲ ಇಟ್ಟುಕೊಂಡು ಬೆಂಗಳೂರಿನ ಎಂ.ವಿ.ಎಸ್‌. ಕಾಲೇಜಿನಲ್ಲಿ ಬಿ.ಎಸ್ಸಿ. ಪದವಿ ಮುಗಿದ ತಕ್ಷಣದಿಂದಲೇ ಅಧ್ಯಯನ ನಡೆಸಿದ್ದೆ. ನನಗೆ ಕ್ರಿಕೆಟ್‌ ಬಗ್ಗೆ ಹೆಚ್ಚು ಆಸಕ್ತಿ. ಕಾಲೇಜು ತಂಡದ ಉಪನಾಯಕನಾಗಿದ್ದೆ. ಜತೆಗೆ ವೈಎಂಸಿಎ ಕ್ಲಬ್‌ ಅನ್ನು ವಿಭಾಗೀಯ ಮಟ್ಟ ದಲ್ಲಿ ಪ್ರತಿನಿಧಿಸಿದ್ದೆ. ಆಟ ಮತ್ತು ಪಾಠ ಎರಡನ್ನೂ ಸಮತೋಲನವಾಗಿ ನಿಭಾಯಿಸಿದ್ದೆ’ ಎಂದು ವಿವರಿಸಿದರು.

ಸಿರಿವೆನ್ನೆಲ ಅವರು ಕಥೆಗಾರ ಕೇಶವರೆಡ್ಡಿ ಹಂದ್ರಾಳ ಅವರ ಪುತ್ರ. ತಮ್ಮ ಪುತ್ರನ ಸಾಧನೆಯ ಬಗ್ಗೆ ಕೇಶವರೆಡ್ಡಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

‘ಪಿಯು ಮುಗಿದ ನಂತರ ವೈದ್ಯಕೀಯ ಅಥವಾ ಎಂಜಿನಿಯರಿಂಗ್‌ ಸೀಟು ಸಿರಿವೆನ್ನೆಲಗೆ ಸಿಗುತ್ತಿತ್ತು. ಆದರೆ, ಆತನ ಆಸಕ್ತಿಯೇ ಬೇರೆಯಾಗಿತ್ತು. ಹೀಗಾಗಿ, ಅವರೆಡನ್ನೂ ಕೈಬಿಟ್ಟು ನಿರಂತರ ಅಧ್ಯಯನ ನಡೆಸಿದ’ ಎಂದು ತಿಳಿಸಿದ್ದಾರೆ.

‘ನನಗೆ ಅಣ್ಣನೇ ಮಾರ್ಗದರ್ಶಕ’
ಬೀದರ್‌: ‘ಅಣ್ಣ ಐಪಿಎಸ್‌ ಅಧಿಕಾರಿ ಫೈಜಾನ್‌ ಅಹಮ್ಮದ್‌ ಅವರ ಮಾರ್ಗದರ್ಶನದಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದು ಪಾಸಾದ ಖುಷಿ ನನಗಿದೆ. 2018ರಲ್ಲಿ ಬೆಂಗಳೂರಿನ ರಾಮಯ್ಯ ಎಂಜಿನಿಯರಿಂಗ್‌ ಕಾಲೇಜಿನಿಂದ ಪದವಿ ಪಡೆದು 2019ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದೆ'

'ಮೊದಲ ಪ್ರಯತ್ನ ದಲ್ಲಿ ಯಶ ದೊರಕದಿದ್ದರೂ ಸಾಕಷ್ಟು ಅನುಭವ ಲಭಿಸಿತು. ಎರಡನೇ ಪ್ರಯತ್ನದಲ್ಲಿ ಯಶಸ್ಸು ದೊರೆಯಿತು.ಪೋಷಕರ ಬೆಂಬಲದಿಂದಲೇ ಯಶಸ್ಸು ಸಾಧಿಸಲು ಸಾಧ್ಯವಾಗಿದೆ’ ಎಂದು ಯುಪಿಎಸ್‌ಸಿ ಪರೀಕ್ಷೆಯಲ್ಲಿ 270ನೇ ರ್‍ಯಾಂಕ್‌ ಪಡೆದ ಮಹಮ್ಮದ್‌ ಹಾರಿಸ್‌ ಸುಮೈರ್‌ ಹೇಳುತ್ತಾರೆ.

ಚಿಂತಾಮಣಿಯ ಮೂವರ ಸಾಧನೆ
ಮೂರನೇ ಪ್ರಯತ್ನದಲ್ಲಿ ಯಶಸ್ಸು
ಜಿ.ಎಸ್. ಅರ್ಜುನ್ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಗಡಿಗವಾರಹಳ್ಳಿಯ ಜಿ.ವಿ. ಸುಬ್ಬಾರೆಡ್ಡಿ ಮತ್ತು ಕೆ.ಪಿ. ಶಾರದಮ್ಮ ದಂಪತಿಯ ಪುತ್ರ. ಅವರು ಬೆಂಗಳೂರಿನ ಪಿಇಎಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದರು. ಕಳೆದ ನಾಲ್ಕು ವರ್ಷಗಳಿಂದ ಮುಂಬೈನಲ್ಲಿರುವ ನಬಾರ್ಡ್‌ ಸಂಸ್ಥೆಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

‘ಕೃಷಿಕ ಕುಟುಂಬದಿಂದ ಬಂದಿದ್ದೇನೆ. ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಬೇಕು ಎನ್ನುವುದು ನನ್ನ ಗುರಿ. ನಾಲ್ಕು ವರ್ಷಗಳ ಸತತ ಪ್ರಯತ್ನದ ಫಲವಾಗಿ 452ನೇ ರ‍್ಯಾಂಕ್ ಪಡೆದಿದ್ದೇನೆ. ಈ ಹಿಂದೆ ಎರಡು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದೆ’ ಎಂದು ತಿಳಿಸಿದರು.

ರೈತರ ಪುತ್ರಿಯ ಸಾಧನೆ
504ನೇ ರ‍್ಯಾಂಕ್ ಪಡೆದಿರುವ ಎಂ.ವಿ. ಮಾಲಾಶ್ರೀ ಚಿಂತಾಮಣಿ ತಾಲ್ಲೂಕಿನ ಮಿಂಡಿಗಲ್ ಗ್ರಾಮದ ಕೃಷಿಕ ಎಂ.ವೈ. ವೆಂಕಟೇಶ್ ಮತ್ತು ರಾಮಲಕ್ಷ್ಮಮ್ಮ ದಂಪತಿಯ ಪುತ್ರಿ. ಬೆಂಗಳೂರಿನ ಪಿಇಎಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

‘ತಂದೆ, ತಾಯಿ ಮತ್ತು ಸ್ನೇಹಿತರ ಪ್ರೋತ್ಸಾಹವೇ ಯುಪಿಎಸ್‌ಸಿ ಪರೀಕ್ಷೆ ಬರೆಯಲು ಪ್ರೇರಣೆ. ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಬೇಕು. ಕೃಷಿಕರ ಹಾಗೂ ಗ್ರಾಮೀಣ ಜನರ ಬದುಕನ್ನು ಉತ್ತಮ ಪಡಿಸಲು ಕೆಲಸ ಮಾಡಬೇಕು ಎನ್ನುವುದು ನನ್ನ ಮಹದಾಸೆ. ರ‍್ಯಾಂಕಿಂಗ್ ಉತ್ತಮಪಡಿಸಿಕೊಳ್ಳಲು ಈ ವರ್ಷವೂ ಪರೀಕ್ಷೆ ತೆಗೆದುಕೊಳ್ಳುವೆ’ ಎನ್ನುತ್ತಾರೆ ಮಾಲಾಶ್ರೀ.

‘ಮತ್ತೆ ಪರೀಕ್ಷೆ ಬರೆಯುವೆ’
ಚಿಂತಾಮಣಿ ತಾಲ್ಲೂಕಿನ ಕೈವಾರ ಹೋಬಳಿಯ ಬನಹಳ್ಳಿಯ ನಿವೃತ್ತ ಪೊಲೀಸ್ ಅಧಿಕಾರಿ
ಬಿ.ಎಂ. ನಾರಾಯಣಸ್ವಾಮಿ ಮತ್ತು ಸುಶೀಲಮ್ಮ ದಂಪತಿ ಪುತ್ರ ಬಿ.ಎನ್. ಅಭಿಷೇಕ್ 3ನೇ ಪ್ರಯತ್ನದಲ್ಲಿ 708‌ನೇ ರ‍್ಯಾಂಕ್ ಗಳಿಸಿದ್ದಾರೆ. ಅಭಿಷೇಕ್ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ.

‘ಮೊದಲ ಬಾರಿ ಪರೀಕ್ಷೆ ತೆಗೆದುಕೊಂಡಿದ್ದಾಗ ಹೆಚ್ಚಿನ ಅವಕಾಶ ಸಿಗಲಿಲ್ಲ. ಎರಡನೇ ಬಾರಿ ಉತ್ತೀರ್ಣನಾದರೂ ಕಡಿಮೆ ಅಂಕದ ಕಾರಣ ಸಂದರ್ಶನದ ಅವಕಾಶ ದೊರೆಯಲಿಲ್ಲ. 3ನೇ ಪ್ರಯತ್ನದಲ್ಲಿ ರ‍್ಯಾಂಕ್ ಪಡೆದಿದ್ದೇನೆ. ಈ ವರ್ಷವೂ ಪರೀಕ್ಷೆ ತೆಗೆದುಕೊಂಡು ರ‍್ಯಾಂಕ್ ಉತ್ತಮಪಡಿಸಿಕೊಳ್ಳುವೆ’ ಎಂದು ಅಭಿಷೇಕ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT