ಸಾಗರ ವನ್ಯಧಾಮಕ್ಕೆ ಅಪಾಯ:
ಭಟ್ಕಳ ತಾಲ್ಲೂಕಿನ ಮಂಕಿಯಿಂದ ಹೊನ್ನಾವರ ತಾಲ್ಲೂಕಿನ ಕಾಸರಕೋಡಿನವರೆಗಿನ 7.5 ಕಿ.ಮೀ. ಉದ್ದದ ವ್ಯಾಪ್ತಿಯಲ್ಲಿ ಕಡಲತೀರ, ಇದರ ಸುತ್ತಮುತ್ತಲಿನ 835.02 ಹೆಕ್ಟೇರ್ ಅರಣ್ಯಪ್ರದೇಶ ಹಾಗೂ ಅರಬ್ಬೀ ಸಮುದ್ರದ 6 ಕಿ.ಮೀ. ಜಲ ಪ್ರದೇಶದಲ್ಲಿನ 5124.302 ಹೆಕ್ಟೇರ್ ಪ್ರದೇಶ ಒಳಗೊಂಡು ಅಪ್ಸರಕೊಂಡ–ಮುಗಳಿ ಸಾಗರ ವನ್ಯಜೀವಿ ಧಾಮವನ್ನು ಘೋಷಿಸಲಾಗಿದೆ. ವಿಭಿನ್ನ ಮೀನುಗಳು, ಸಮುದ್ರ ಸೌತೆ, ಡಾಲ್ಫಿನ್ ಸಹಿತ ಅಪರೂಪದ ಜಲಚರಗಳ ಸಂರಕ್ಷಣೆ ಹಾಗೂ ಸಂವರ್ಧನೆಗೆ ಸಹಾಯಕವಾಗಲೆಂದು ಘೋಷಿಸಲಾದ ಈ ವನ್ಯಧಾಮದಿಂದ ಕೇವಲ 5 ಕಿ.ಮಿ ದೂರದಲ್ಲಿ ನಿಟ್ಟಡಗಿ ಅರಣ್ಯ ಪ್ರದೇಶವಿದೆ. ಈ ಕಾರಣದಿಂದಲೇ ಗಣಿ ಯೋಜನೆಗೆ ಇಲ್ಲಿ ಬಲವಾದ ವಿರೋಧ ವ್ಯಕ್ತವಾಗುತ್ತಿದೆ.