ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದ ಉದ್ಯಮಿಗಳ ಪಟ್ಟಿಯಲ್ಲಿ ಜಾಕ್‌ಮಾಗಿಲ್ಲ ಸ್ಥಾನ: ಜಗತ್ತಿನ ಅನುಮಾನಕ್ಕೆ ಬಲ

Last Updated 2 ಫೆಬ್ರುವರಿ 2021, 11:45 IST
ಅಕ್ಷರ ಗಾತ್ರ

ಶಾಂಘೈ: ಚೀನಾ ಸರ್ಕಾರಿ ಮಾಧ್ಯಮ ಪ್ರಕಟಿಸಿದ ದೇಶದ ಉದ್ಯಮಶೀಲರ ಪಟ್ಟಿಯಲ್ಲಿ ಖ್ಯಾತ ಉದ್ಯಮಿ, ಅಲಿಬಾಬಾ ಗ್ರೂಪ್‌ ಆಫ್‌ ಕಂಪನಿ ಸಂಸ್ಥಾಪಕಜಾಕ್‌ ಮಾ ಅವರ ಹೆಸರೇ ಇಲ್ಲ. ಇದರೊಂದಿಗೆ ಚೀನಾ ಉದ್ದೇಶಪೂರ್ಕವಾಗಿ ಜಾಕ್‌ ಮಾ ಅವರನ್ನು ನಿಗ್ರಹಿಸುವ ಪ್ರಯತ್ನ ಮಾಡುತ್ತಿದೆ ಎಂಬ ಜಾಗತಿಕನ ಅನುಮಾನಕ್ಕೆ ಬಲ ಸಿಕ್ಕಿದೆ.

'ಶಾಂಘೈ ಸೆಕ್ಯುರಿಟೀಸ್ ನ್ಯೂಸ್' ಮಂಗಳವಾರ ತನ್ನ ಮುಖಪುಟದ ಲೇಖನದಲ್ಲಿ ಚೀನಾದ ಹಲವು ಉದ್ಯಮಿಗಳನ್ನು ಹೆಸರಿಸಿದೆ. ಹುವಾವೇ ಟೆಕ್ನಾಲಜೀಸ್‌ನ ರೆನ್ ಜೆಂಗ್‌ಫೀ, ಶಿಯೋಮಿ ಕಾರ್ಪ್‌ನ ಲೀ ಜುನ್ ಮತ್ತು ಬಿವೈಡಿನ ವಾಂಗ್ ಚುವಾನ್‌ಫು ಅವರ ಕೊಡುಗೆಗಳನ್ನು ಹಾಡಿ ಹೊಗಳಲಾಗಿದೆ. ಆದರೆ, ಜಾಗತಿಕವಾಗಿ ಚಿರಪರಿಚಿತರಾದ ಜಾಕ್‌ಮಾ ಅವರ ಹೆಸರು ಎಲ್ಲಿಯೂ ಇಲ್ಲ. ಗಮನಿಸಬೇಕಾದ ವಿಚಾರವೆಂದರೆ, ಮಂಗಳವಾರವಷ್ಟೇ ಅಲಿಬಾಬಾದ ತ್ರೈಮಾಸಿಕ ಗಳಿಕೆ ವರದಿಯು ಬಿಡುಗಡೆಯಾಗಿದೆ.

ಈ ಕುರಿತ ಪ್ರತಿಕ್ರಿಯೆಗೆ ಅವರು ತಕ್ಷಣಕ್ಕೆ ಲಭ್ಯರಾಗಿಲ್ಲ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್‌ ವರದಿ ಮಾಡಿದೆ.

ಪಟ್ಟಿ ಬಗ್ಗೆ ಹೇಳಿದ್ದೇನು ಮಾಧ್ಯಮ?

ಇನ್ನು, ಜಾಕ್‌ಮಾ ಅವರನ್ನು ಹೊರಗಿಟ್ಟು ಸಿದ್ಧಪಡಿಸಿದ ಉದ್ಯಮಪತಿಗಳ ಪಟ್ಟಿಯನ್ನು ಶಾಂಘೈ ಸೆಕ್ಯುರಿಟಿಸ್‌ ನ್ಯೂಸ್‌ ಸಮರ್ಥಿಸಿಕೊಂಡಿದೆ. ಹಳೆಯ, ಕಠಿಣ ಅರ್ಥವ್ಯವಸ್ಥೆಯನ್ನು ಬೇಧಿಸಿ, ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಯಮಗಳನ್ನು ಗೌರವಿಸುತ್ತಾ ಸಮೂಹ ಸಂಸ್ಥೆಗಳನ್ನು ಕಟ್ಟಿದ ಉದ್ಯಮಿಗಳನ್ನು ನಾವು ಪಟ್ಟಿ ಮಾಡಿದ್ದೇವೆ ಎಂದು ಹೇಳಿದೆ.

ಟೀಕೆ ನಂತರ ಸಂಕಷ್ಟ

ನೇರ ನುಡಿಯ ವ್ಯಕ್ತಿತ್ವದಿಂದ ಹೆಸರಾದ ಜಾಕ್ ಮಾ, ಚೀನಾದ ಕಮ್ಯುನಿಸ್ಟ್ ಸರ್ಕಾರವನ್ನು ಬಹಿರಂಗವಾಗಿ ಟೀಕಿಸಿದ್ದರು. ಅಕ್ಟೋಬರ್ 24 ರಂದು ಶಾಂಘೈ ಸಮ್ಮೇಳನದಲ್ಲಿ ಚೀನಾದಲ್ಲಿ ನಾವಿನ್ಯತೆಯನ್ನು ನಿಗ್ರಹಿಸಲಾಗುತ್ತಿದೆ ಎಂದು ಟೀಕಿಸಿದ್ದರು. ಚೀನಾದ ಬ್ಯಾಂಕ್‌ಗಳು ಗಿರವಿ ಅಂಗಡಿಗಳಂತಾಗಿವೆ, ಹೆಚ್ಚು ಠೇವಣಿ ಇಟ್ಟವರಿಗೆ ಮಾತ್ರ ಸಾಲ ನೀಡಲಾಗುತ್ತಿದೆ ಎಂದು ಜರಿದಿದ್ದರು. ವಿಶ್ವದ ಅತಿ ದೊಡ್ಡ ಐಪಿಒ ಅನಾವರಣಗೊಳಿಸುವ ಯೋಜನೆಯಲ್ಲಿದ್ದ ಜಾಕ್ ಮಾ, ಇದಕ್ಕೂ ಒಂದು ತಿಂಗಳ ಮುಂಚೆ ಚೀನಾ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು.

ಇದಾದ ಒಂದು ತಿಂಗಳ ಬಳಿಕ ಅಲಿಬಾಬಾ ಸಂಸ್ಥೆ ವಿರುದ್ಧ ಚೀನಾ ಸರ್ಕಾರ ಏಕಸ್ವಾಮ್ಯ ವಿರೋಧಿ ತನಿಖೆ ಆರಂಭಿಸಿತು. ಅಂದಿನಿಂದ ಚೀನಾ ಹೆಜ್ಜೆ ಹೆಜ್ಜೆಗೂ ಜಾಕ್ ಮಾ ಟೆಕ್ ಸಾಮ್ರಾಜ್ಯವನ್ನು ನಿಗ್ರಹಿಸುವ ಪ್ರಯತ್ನ ನಡೆಸಿದೆ. ಕೋವಿಡ್ ಕಾಲದಲ್ಲಿ ಅಧಿಕ ನಷ್ಟ ಅನುಭವಿಸಿದ್ದ ಅಲಿಬಾಬಾ ಗ್ರೂಪ್ ಚೇತರಿಕೆಗೆ ಜಾಕ್ ಮಾ ಆಡಿದ ಮಾತುಗಳೇ ಮುಳುವಾಗಿವೆ. ಬಾಯಿ ಜಾರಿದ ಪದಗಳಿಂದಾಗಿ ಚೀನಾ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಚೀನಾದಲ್ಲಿ ಕಮ್ಯುನಿಸ್ಟ್ ಸರ್ಕಾರದ ವಿರುದ್ಧ ಧ್ವನಿ ಎತ್ತಿದವರನ್ನು ನಿಗ್ರಹಿಸಿದ ಹಲವು ಉದಾಹರಣೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT