ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರದಲ್ಲಿನ ನಿರ್ಬಂಧ, ಬಂಧನಗಳನ್ನು ನಿಲ್ಲಿಸಿ: ಅಮೆರಿಕ ಸಂಸತ್‌ನಲ್ಲಿ ನಿರ್ಣಯ

Last Updated 8 ಡಿಸೆಂಬರ್ 2019, 5:03 IST
ಅಕ್ಷರ ಗಾತ್ರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಹನ ಜಾಲಗಳ ಮೇಲೆ ವಿಧಿಸಿರುವ ನಿರ್ಬಂಧವನ್ನು ಭಾರತ ಸರ್ಕಾರ ಕೂಡಲೇ ತೆರವುಗೊಳಿಸಬೇಕು, ಬಂಧನಕ್ಕೊಳಗಾಗಿರುವವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಭಾರತ ಮೂಲದ ಅಮೆರಿಕದ ಸಂಸದೆ ಪ್ರಮೀಳಾ ಜೈಪಾಲ್‌ ಅವರುಅಲ್ಲಿನ ಸಂಸತ್‌ನಲ್ಲಿ ಶುಕ್ರವಾರ ಉಭಯಪಕ್ಷೀಯ ನಿರ್ಣಯವೊಂದನ್ನು ಮಂಡಿಸಿದ್ದಾರೆ.

ಡೆಮಕ್ರಟಿಕ್‌ ಪಕ್ಷದಪ್ರಮೀಳಾ ಜೈಪಾಲ್‌ ಮತ್ತು ರಿಪಬ್ಲಿಕನ್‌ ಪಕ್ಷದ ಸಂಸದ ಸ್ಟೀವ್‌ ವ್ಯಾಟ್ಕಿನ್ಸ್‌ ಅವರು ಅಮೆರಿಕ ಸಂಸತ್‌ನಲ್ಲಿ ಈ ನಿರ್ಣಯ ಮಂಡನೆ ಮಾಡಿದ್ದಾರೆ.

ಇನ್ನಷ್ಟೇ ಮತಕ್ಕೆ ಒಳಪಡಬೇಕಿರುವ ಈ ನಿರ್ಣಯ ಹೀಗಿದೆ.. ‘ಜಮ್ಮು ಕಾಶ್ಮೀರದಲ್ಲಿ ಸಂವಹನ ಮತ್ತು ಅಂತರ್ಜಾಲ ಸೇವೆ ಮೇಲೆ ವಿಧಿಸಿರುವ ನಿರ್ಬಂಧವನ್ನು ಆದಷ್ಟು ಬೇಗನೆ ತೆರವು ಮಾಡಬೇಕು. ಸಂವಹನ ಜಾಲವನ್ನು ಪುನರ್‌ ಸ್ಥಾಪನೆ ಮಾಡಬೇಕು. ಅನಿಯಂತ್ರಿತವಾಗಿ ನಡೆಯುತ್ತಿರುವ ಬಂಧನಗಳು ನಿಲ್ಲಬೇಕು. ಮತ್ತು, ಈಗಾಗಲೇ ಬಂಧನಕ್ಕೊಳಗಾಗಿರುವವರನ್ನು ಬಿಡುಗಡೆ ಮಾಡಬೇಕು. ಅಂತರರಾಷ್ಟ್ರೀಯ ಮಾನವ ಹಕ್ಕುಗಳ ವೀಕ್ಷಕರು ಮತ್ತು ಪತ್ರಕರ್ತರಿಗೆ ಜಮ್ಮು ಕಾಶ್ಮೀರ ಪ್ರವೇಶಿಸಲು ಅನುಮತಿ ನೀಡಬೇಕು. ಇದಿಷ್ಟೇ ಅಲ್ಲದೆ, ದೇಶಾದ್ಯಂತ ನಡೆಯುತ್ತಿರುವ ಮತೀಯ ಗಲಭೆಗಳನ್ನು ಖಂಡಿಸುತ್ತೇವೆ. ಮತೀಯ ಅಲ್ಪಸಂಖ್ಯಾತರ ಮೇಲಿನ ದಾಳಿಯನ್ನು ತಡೆಯಬೇಕು,’ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಈ ಕುರಿತು ಟ್ವೀಟ್‌ ಮಾಡಿರುವ ಪ್ರಮೀಳಾ ಜೈಪಾಲ್‌, ‘ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯಕ್ಕಾಗಿ ನಾನು ಈ ವರೆಗೆ ಹೋರಾಡಿದ್ದೇನೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಜನರನ್ನು ಯಾವುದೇ ಆರೋಪಗಳಿಲ್ಲದೇ ಬಂಧಿಸುತ್ತಿರುವುದು, ಸಂವಹನ ಜಾಲವನ್ನು ನಿರ್ಬಂಧಿಸುತ್ತಿರುವುದು, ಕಾಶ್ಮೀರ ಪ್ರವೇಶಕ್ಕೆ ಮೂರನೇ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ನಿರ್ಬಂಧ ಹೇರುತ್ತಿರುವುದು ನಮ್ಮ ದ್ವಿಪಕ್ಷೀಯ ಬಾಂಧವ್ಯಕ್ಕೆ ಧಕ್ಕೆ ತರುತ್ತದೆ. ಭಾರತೀಯ ಸರ್ಕಾರ ಕೂಡಲೇ ನಿರ್ಬಂಧಗಳನ್ನು ತೆರವುಗೊಳಿಸಬೇಕು.

ಬಂಧನಕ್ಕೊಳಗಾಗಿರುವವರನ್ನು ಕೂಡಲೇ ಬಿಡುಗಡೆ ಮಾಡಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಬೇಕು ಮತ್ತು ಶಾಂತಿಯುತ ಹೋರಾಟಗಳಿಗೆ ರಕ್ಷಣೆ ನೀಡಬೇಕು. ಮುಖ್ಯವಾಗಿ, ಭಾರತದ ಎಲ್ಲೆಡೆ ನಡೆಯುತ್ತಿರುವ ಮತೀಯ ಗಲಭೆ, ಅಶಾಂತಿಯನ್ನು ನಾನು ಖಂಡಿಸುತ್ತೇನೆ,‘ ಎಂದು ಅವರು ಬರೆದುಕೊಂಡಿದ್ದಾರೆ.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370 ವಿಧಿ ರದ್ದುಗೊಳಿಸಿದ ನಂತರ ಅಲ್ಲಿ ಸಂವಹನ ಜಾಲದ ಮೇಲೆ ನಿರ್ಬಂಧ ವಿಧಿಸಲಾಗಿತ್ತು. ಮೂವರು ಮಾಜಿ ಮುಖ್ಯಮಂತ್ರಿಗಳಿಗೆ ಗೃಹಬಂಧನ ವಿಧಿಸಲಾಗಿದೆ. ಜೊತೆಗೆ ಸಾವಿರಾರು ಮಂದಿಯನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT