ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟಿನ್ ಮತ್ತೆ 6 ವರ್ಷ ಅಧ್ಯಕ್ಷ: ರಷ್ಯಾ ಅಧ್ಯಕ್ಷೀಯ ಚುನಾವಣೆ ಹೇಗೆ ನಡೆಯುತ್ತೆ?

ರಷ್ಯಾದಲ್ಲಿ ಕಳೆದ ವಾರ ನಡೆದ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಹಂಗಾಮಿ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್ ಮತ್ತೆ ವಿಜಯ ಸಾಧಿಸಿದ್ದಾರೆ.
Published 18 ಮಾರ್ಚ್ 2024, 6:32 IST
Last Updated 18 ಮಾರ್ಚ್ 2024, 6:32 IST
ಅಕ್ಷರ ಗಾತ್ರ

ಬೆಂಗಳೂರು: ರಷ್ಯಾದಲ್ಲಿ ಕಳೆದ ವಾರ ನಡೆದ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಹಂಗಾಮಿ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್ ಮತ್ತೆ ವಿಜಯ ಸಾಧಿಸಿದ್ದಾರೆ.

ಪುಟಿನ್ ತಮ್ಮ ಗೆಲುವನ್ನು ಘೋಷಿಸಿಕೊಂಡಿದ್ದಾರೆ ಎಂದು ಹಲವು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಚಲಾವಣೆಗೊಂಡ ಒಟ್ಟು ಮತಗಳಲ್ಲಿ ಪುಟಿನ್ ಶೇ 87.34 ರಷ್ಟು ಮತಗಳನ್ನು ಪಡೆದು ವಿಜಯ ಸಾಧಿಸಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಒಟ್ಟು ಶೇ 99.47 ರಷ್ಟು ಮತದಾನ ನಡೆದಿತ್ತು. ಆನ್‌ಲೈನ್‌ನಲ್ಲೂ ಮತದಾನ ನಡೆದಿತ್ತು.

ಇದರೊಂದಿಗೆ ಪುಟಿನ್ ಮತ್ತೆ 6 ವರ್ಷ ರಷ್ಯಾ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.

ಕಳೆದ ಮಾರ್ಚ್ 15ರಿಂದ 17ರವರೆಗೆ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಇದು ರಷ್ಯಾದ 8ನೇ ಅಧ್ಯಕ್ಷೀಯ ಚುನಾವಣೆ.

ಈ ಚುನಾವಣೆಯಲ್ಲಿ 71 ವರ್ಷದ ಪುಟಿನ್‌ ತಮ್ಮೊಂದಿಗೆ ಸ್ನೇಹ ಹೊಂದಿರುವ ಪಕ್ಷಗಳ ಮೂವರು ಪ್ರತಿಸ್ಪರ್ಧಿ ಗಳನ್ನು ಎದುರಿಸಿದ್ದರು. ಆದರೆ ಅವರು ಶೇಕಡಾವಾರು ಮತ ಪಡೆಯುವುದಲ್ಲಿ ಒಂದಕ್ಕಿಯನ್ನೂ ದಾಟಿಲ್ಲ. ಹೀಗಾಗಿ ಇದನ್ನು ಅಮೆರಿಕ ಸೇರಿದಂತೆ ಅನೇಕ ಪಾಶ್ಚಿಮಾತ್ಯ ದೇಶಗಳು ‘ಪ್ರಜಾಪ್ರಭುತ್ವದ ಅಣಕ’ ಎಂದು ವ್ಯಂಗ್ಯವಾಡಿವೆ.

ರಷ್ಯಾ ಅಧ್ಯಕ್ಷ ಸ್ಥಾನದ ಚುನಾವಣೆ ಹೇಗೆ ನಡೆಯುತ್ತದೆ?

ಪೂರ್ವ ನಿಗದಿಯ ವೇಳಾಪಟ್ಟಿಯಂತೆ ರಷ್ಯಾ ಅಧ್ಯಕ್ಷ ಆಯ್ಕೆಗೆ ಚುನಾವಣೆ ನಡೆಯುತ್ತದೆ. ಅಧ್ಯಕ್ಷೀಯ ಚುನಾವಣೆಗಾಗಿ ದೇಶದ ವಿವಿಧ ವಲಯಗಳಲ್ಲಿ ಹಂತ ಹಂತವಾಗಿ ಒಟ್ಟು ಮೂರು ದಿನ ಮತದಾನ ನಡೆಯುತ್ತದೆ.

35 ವರ್ಷ ವಯಸ್ಸು ಮೀರಿದವರು, 25 ವರ್ಷದಿಂದ ರಷ್ಯಾ ನಿವಾಸಿಗಳು ಆಗಿರುವವರು, ಹೊರದೇಶದ ನಾಗರಿಕತ್ವ ಹೊಂದಿರದವರು ಯಾರು ಬೇಕಾದರೂ ರಷ್ಯಾ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಬಹುದು.

ಅಧ್ಯಕ್ಷ ಸ್ಥಾನಕ್ಕೆ ರಾಜಕೀಯ ಪಕ್ಷದ ವತಿಯಿಂದ ನಾಮನಿರ್ದೇಶನ ನಡೆಯುತ್ತದೆ. ರಷ್ಯಾದ ಕೆಳಮನೆಯಾದ ಸ್ಟೇಟ್‌ ಆಫ್‌ ಡುಮಾದಲ್ಲಿನ (ಶಾಸನಸಭೆ) ಅಧಿಕೃತ ಪಕ್ಷಗಳು ತಮ್ಮ ಇಷ್ಟದ ಒಬ್ಬ ಅಭ್ಯರ್ಥಿಯನ್ನು ನಾಮ ನಿರ್ದೇಶನ ಮಾಡಬಹುದು.

ಅಲ್ಲದೇ ಸ್ವತಂತ್ರರಾಗಿ ಸ್ಪರ್ಧಿಸಬಹುದು. ನಾಮಪತ್ರ ಸಲ್ಲಿಸಲು ಕನಿಷ್ಠ 500 ಮತದಾರರ ಬೆಂಬಲ ಬೇಕು.

ಆದರೆ, ಸೇನೆ ಹಾಗೂ ರಷ್ಯಾದ ಗುಪ್ತಚರ ಇಲಾಖೆಯ ಮಾಜಿ ಅಧಿಕಾರಿಯಾಗಿರುವ ವ್ಲಾದಿಮಿರ್‌ ಪುಟಿನ್ ಅವರು ಯಾವುದೇ ಪಕ್ಷಕ್ಕೆ ಸಂಬಂಧಿಸಿಲ್ಲ. ಅವರು ಸ್ವತಂತ್ರ ಅಭ್ಯರ್ಥಿಯಾಗಿಯೇ ಕಳೆದ 2012ರಿಂದ ಸತತವಾಗಿ ರಷ್ಯಾ ಅಧ್ಯಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸಿಕೊಂಡು ಬಂದಿದ್ದಾರೆ.

ಪುಟಿನ್ ರಷ್ಯಾದ ಬಹುತೇಕ ರಾಜಕೀಯ ಪಕ್ಷಗಳ ಜೊತೆ ಸ್ನೇಹ ಹೊಂದಿದ್ದಾರೆ.

ರಷ್ಯಾದ ಸಂಸತ್ತು (ಫೆಡರಲ್ ಅಸೆಂಬ್ಲಿ), ಫೆಡರೇಷನ್ ಕೌನ್ಸಿಲ್ (ಮೇಲ್ಮನೆ) ಮತ್ತು ಸ್ಟೇಟ್ ಆಪ್ ಡುಮಾ (ಕೆಳಮನೆ) ಎಂಬ ವ್ಯವಸ್ಥೆಯನ್ನು ಹೊಂದಿದೆ. ಇದು ಅಲ್ಲಿನ ಶಾಸಕಾಂಗ.

ಅದರೆ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾಗುವ ಅಧ್ಯಕ್ಷರೇ ಅಲ್ಲಿನ ಕಾರ್ಯಾಂಗ ಹಾಗೂ ದೇಶದ ಎಲ್ಲ ಸಶಸ್ತ್ರ ಪಡೆಗಳ ಮುಖ್ಯಸ್ಥರಾಗಿರುತ್ತಾರೆ. ಫೆಡರಲ್ ಸ್ಟೇಟ್ ಕೌನ್ಸಿಲ್‌ (ಸಚಿವ ಸಂಪುಟ)ದ ಅಧ್ಯಕ್ಷರಾಗಿಯೂ ರಷ್ಯಾ ಅಧ್ಯಕ್ಷರು ಆಡಳಿತವನ್ನು ನೋಡಿಕೊಳ್ಳುತ್ತಾರೆ.

USSRನಿಂದ ಅನೇಕ ರಾಷ್ಟ್ರಗಳು ಹೊರ ಹೋದ ನಂತರ ಈಗಿನ ರಷ್ಯಾ (ರಷಿಯನ್ ಫೆಡರೇಷನ್) 1991ರಲ್ಲಿ ಉದಯವಾಯಿತು. 1991 ರಿಂದ ಇಲ್ಲಿವರೆಗೆ 8 ಅಧ್ಯಕ್ಷೀಯ ಚುನಾವಣೆಗಳು ನಡೆದಿವೆ. ಮುಂದಿನ ಅಧ್ಯಕ್ಷೀಯ ಚುನಾವಣೆ 2030ರ ಮಾರ್ಚ್‌ನಲ್ಲಿ ನಿಗದಿಯಾಗಿದೆ.

ವಿರೋಧದ ನಡುವೆಯೂ ಗೆಲುವು ಸಂಭ್ರಮಿಸಿದ ಪುಟಿನ್

ಜಗತ್ತಿನ ದೊಡ್ಡ ರಾಷ್ಟ್ರದ ಅಧ್ಯಕ್ಷ ಸ್ಥಾನವನ್ನು ಸತತವಾಗಿ ಗೆಲ್ಲುತ್ತಿರುವ ಪುಟಿನ್‌ಗೆ ಜನಪ್ರಿಯತೆ ಜೊತೆಗೆ ವಿರೋಧವು ಕಂಡು ಬರುತ್ತಿದೆ. ಅದು ಈ ಚುನಾವಣೆಯಲ್ಲೂ ವ್ಯಕ್ತವಾಗಿದೆ.

ಪುಟಿನ್ ಅವರು ವಿರೋಧದ ನಡುವೆಯೂ ತಮ್ಮ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಮಹಿಳೆಯೊಬ್ಬರು ಮತದಾನ ಕೇಂದ್ರದ ಪ್ರವೇಶದ್ವಾರದಲ್ಲಿ ಫೈರ್‌ಬಾಂಬ್ ಎಸೆದಿದ್ದು, ನಂತರ ಆಕೆಯನ್ನು ಬಂಧಿಸಲಾಯಿತು. ಮತಪೆಟ್ಟಿಗೆಗಳಿಗೆ ಸ್ಯಾನಿಟೈಸರ್‌, ಶಾಯಿ ಎಸೆದಿದ್ದಕ್ಕಾಗಿ ದೇಶಾದ್ಯಂತ ಹಲವು ಮಂದಿಯನ್ನು ಬಂಧಿಸಲಾಗಿದೆ.  ಪುಟಿನ್ ಅಥವಾ ಯುದ್ಧದ ಬಗ್ಗೆ ಅಸಮಾಧಾನ ಹೊಂದಿರುವವರು ಭಾನುವಾರ ಮಧ್ಯಾಹ್ನ ಮತದಾನಕ್ಕೆ ಬರುವ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸುವಂತೆ ರಷ್ಯಾದ ಕೆಲ ವಿರೋಧ ಪಕ್ಷಗಳು ಒತ್ತಾಯಿಸಿದ್ದವು.

ಪುಟಿನ್‌ ಅವರ ರಾಜಕೀಯ ಕಡು ವೈರಿ, ವಿಪಕ್ಷ ನಾಯಕ ಅಲೆಕ್ಸ್‌ ನವಾಲ್ನಿ ಅವರು ಕಳೆದ ತಿಂಗಳು ಆರ್ಕ್ಟಿಕ್ ಜೈಲಿನಲ್ಲಿ ನಿಧನ ಹೊಂದಿದದ್ದರಿಂದ ಪುಟಿನ್‌ ಅವರಿಗೆ ಈ ಚುನಾವಣೆಯಲ್ಲಿ ಪ್ರಬಲ ಪ್ರತಿಸ್ಪರ್ಧಿಗಳೇ ಇಲ್ಲದಂತಾಗಿತ್ತು.

ಪುಟಿನ್ ಅವರನ್ನು ಅಮೆರಿಕ ಸೇರಿದಂತೆ ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು ಸರ್ವಾಧಿಕಾರಿ ಎಂದು ಆರೋಪಿಸುತ್ತವೆ.

ಉಕ್ರೇನ್ ಮೇಲೆ ಯುದ್ಧ ಸಾರಿರುವ ಪುಟಿನ್, ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನ್‌ಗೆ ಸಹಾಯ ಮಾಡಲು ಬಯಸಿದರೆ ಮೂರನೇ ಮಹಾಯುದ್ಧ ಆಗಬಹುದು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT