ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಯುವಚೇತನಗಳ ಶಿಕ್ಷಣ ಕ್ರಾಂತಿ

ಒಡಿಶಾದ ಎರಡು ಜಿಲ್ಲೆಗಳಲ್ಲಿ ಈಗ ಸಣ್ಣ ಮಕ್ಕಳಿಗೆ ಕಾಲೇಜು ವಿದ್ಯಾರ್ಥಿಗಳೇ ‘ಗುರು’ಗಳು
Last Updated 15 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಕೊರೊನಾ ಸೋಂಕು ಕಾರಣದಿಂದ ಶಾಲೆಗಳೆಲ್ಲ ಸಾಮೂಹಿಕವಾಗಿ ಮುಚ್ಚಿದಾಗ, ಅನುಕೂಲಇದ್ದವರೆಲ್ಲ ಆನ್‍ಲೈನ್ ಪಾಠಕ್ಕೆ ಮೊರೆ ಹೋದರು. ಆಗದವರು ‘ಬದುಕುಳಿದರೆ ಶಾಲೆ, ಓದು’ ಎಂಬ ನಿರ್ಧಾರ ತಳೆದರು. ಇಂಟರ್ನೆಟ್‌ ಸಂಪರ್ಕ ಇಲ್ಲದ ಹಳ್ಳಿ ಮಕ್ಕಳು ಶಾಲೆಯನ್ನು ಮರೆತೇಬಿಟ್ಟರು. ಆದರೆ ಒಡಿಶಾ ರಾಜ್ಯದ,ದೇಶದಲ್ಲೇ ಅತ್ಯಂತ ಹಿಂದುಳಿದ ಜಿಲ್ಲೆಗಳಾದ ರಾಯಗಡ ಮತ್ತು ಕಾಳಹಂದಿಯಲ್ಲಿ ಮಾತ್ರ ಪರಮಾಶ್ಚರ್ಯ ಮತ್ತು ಪವಾಡವೇನೋ ಎಂಬಂತೆ, ಕೊರೊನಾದ ಗಂಭೀರ ಪರಿಸ್ಥಿತಿಯ ನಡುವೆಯೂ 237 ಶಾಲೆಗಳಲ್ಲಿ, ಕಳೆದ ಆರು ತಿಂಗಳುಗಳಿಂದ ವಿದ್ಯಾರ್ಥಿಗಳ ಪೂರ್ತಿ ಹಾಜರಾತಿಯೊಂದಿಗೆ ಎರಡೆರಡು ಶಿಫ್ಟ್‌ಗಳಲ್ಲಿ ತರಗತಿಗಳು ನಡೆಯುತ್ತಿವೆ.

ಮಕ್ಕಳ ತಂದೆ– ತಾಯಿಗೆ ಆನ್‍ಲೈನ್ ಕ್ಲಾಸ್‍ಗಳಿಗಾಗಿ ಮೊಬೈಲು, ಟ್ಯಾಬ್ ಕೊಳ್ಳಲು ಶಕ್ತಿ ಇರಲಿಲ್ಲ. ಎರಡು ಹೊತ್ತಿನ ಊಟ ಹೊಂದಿಸುವುದೇ ದುಸ್ತರವಾಗಿತ್ತು. ಆಗ ಅವರ ಕೈ ಹಿಡಿದದ್ದು ಟಾಟಾ ಸಮೂಹದ ಲಿವೊಲಿಂಕ್ ಫೌಂಡೇಶನ್. ಈ ಸಂಸ್ಥೆಯು ಹಳ್ಳಿಗಳ ಅಂಗನವಾಡಿ, ಗ್ರಾಮ ಪಂಚಾಯಿತಿಗಳ ಸಹಯೋಗದಲ್ಲಿ ‘ಕೋವಿಡ್ ಸಮುದಾಯ ಶಿಕ್ಷಣ ಗುಂಪು’ಗಳನ್ನು ರಚಿಸಿ, ಶಾಲೆ ವಂಚಿತ ಮಕ್ಕಳಿಗೆ ತರಗತಿ ನಡೆಸಲು ನಿರ್ಧರಿಸಿತು. ಸೋಂಕಿಗೆ ಹೆದರಿ ಮತ್ತು ಸರ್ಕಾರ ವಹಿಸಿದ ‘ಕೋವಿಡ್ ಕರ್ತವ್ಯ’ದಲ್ಲಿ ಬ್ಯುಸಿಯಾದ ಶಿಕ್ಷಕರು ಶಾಲೆಗಳತ್ತ ಸುಳಿಯಲಿಲ್ಲ. ಆಗ ನೆರವಿಗೆ ಬಂದವರು ಕಾಲೇಜು ವಿದ್ಯಾರ್ಥಿಗಳು.

ನಗರಗಳು ಸಂಪೂರ್ಣ ಲಾಕ್‍ಡೌನ್ ಆದ ತಕ್ಷಣ ಕಾಲೇಜು ತರಗತಿಗಳು ಸ್ಥಗಿತಗೊಂಡು, ಯುವ ವಿದ್ಯಾರ್ಥಿಗಳು ತಂತಮ್ಮ ಊರು- ಹಳ್ಳಿಗಳಿಗೆ ಮರಳಿದ್ದರು. ಅವರಲ್ಲಿ ಹಲವರು ಗ್ರಾಮ ಪಂಚಾಯಿತಿ ಸದಸ್ಯ– ಅಧ್ಯಕ್ಷರ ಮಕ್ಕಳು, ಸಂಬಂಧಿಗಳೇ ಇದ್ದರು. ಕೋವಿಡ್ ಕಮ್ಯುನಿಟಿ ಎಜುಕೇಶನ್ ಗ್ರೂಪ್‌ನ ಬೇಡಿಕೆಗೆ ಸ್ಪಂದಿಸಿದ ಯುವಕರನ್ನು ‘ವಿಲೇಜ್ ವಾಲಂಟೀರ್ಸ್’ ಎಂದು ಕರೆದು, ಪಾಠ ಮಾಡುವ ಜವಾಬ್ದಾರಿಯನ್ನು ಅವರಿಗೆ ಒಪ್ಪಿಸಿದರು. ಕಷ್ಟಕಾಲದಲ್ಲಿ ತಮ್ಮ ಹಳ್ಳಿಯ ಎಳೆಯರಿಗೆ ಸಹಾಯ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಧನ್ಯವಾದ ಹೇಳಿದ ವಿದ್ಯಾರ್ಥಿಗಳು ‘ತಾತ್ಕಾಲಿಕ ಶಿಕ್ಷಕ’ ವೃತ್ತಿಗಿಳಿದರು.

ಕಲಿಯುವ ಮಕ್ಕಳಿಗೆ ಪಠ್ಯಪುಸ್ತಕಗಳಿರಲಿಲ್ಲ. ಎಲ್ಲ ಸರಿಯಾಗಿದ್ದರೆ ಸರ್ಕಾರವೇ ಮಕ್ಕಳಿಗೆ ಉಚಿತವಾಗಿ ಪುಸ್ತಕ ಹಂಚುತ್ತಿತ್ತು. ಜವಾಬ್ದಾರಿ ಹೊತ್ತಿದ್ದ ಲಿವೊಲಿಂಕ್ ಫೌಂಡೇಶನ್ ಜಿಲ್ಲಾ ಆಡಳಿತವನ್ನು ಸಂಪರ್ಕಿಸಿ, ಅಗತ್ಯವಾದ ಪಠ್ಯಪುಸ್ತಕಗಳನ್ನು ಸಂಗ್ರಹಿಸಿ ಮಕ್ಕಳಿಗೆ ಹಂಚಿ, ಶಾಲೆಗೆ ಬರುವಂತೆ ತಿಳಿವಳಿಕೆ ನೀಡಿತು. ತಾಲ್ಲೂಕು ಶಿಕ್ಷಣಾಧಿಕಾರಿಗಳು, ‘ಹೊಸ ಶಿಕ್ಷಕರಿಗೆ’ ಪ್ರಾಥಮಿಕ ತರಬೇತಿ ಮತ್ತು ಪ್ರೋಗ್ರಾಂ ಆಫ್ ವರ್ಕ್ ನೀಡಿ, ಇಂತಿಷ್ಟು ಪಾಠಗಳನ್ನು ಹೀಗೆ ಮಾಡಿ ಎಂದು ಸೂಚಿಸಿದರು.

ಸರ್ಕಾರವು ಶಾಲೆಗಳಿಗೆ ಬೀಗ ಹಾಕಿದ್ದರಿಂದ ಬಯಲಲ್ಲೇ ಶಾಲೆಗಳು ಶುರುವಾದವು. ಮನೆಯ ಚಾಪೆ, ಜಮಖಾನ, ದುಪ್ಪಟಿಗಳೆಲ್ಲ ಹೊರಬಂದು ಮರದ ನೆರಳು, ಊರಿನ ಮಂಟಪ, ಗುಡಿ ಗುಂಡಾರಗಳ ಹಾಸುಗಳಾದವು. ದಾನಿಗಳು ಚಪ್ಪರ ಹಾಕಿಸಿಕೊಟ್ಟರು. ಸಾಮುದಾಯಿಕ ಮೈದಾನದಲ್ಲಿ ಟೆಂಟ್ ಹಾಕಿ ಶಾಲೆ ಶುರು ಮಾಡಲಾಯಿತು. ಸೋಂಕಿನ ಭಯವಿದ್ದೂ ಮನೆ ಮನೆಗೆ ಓಡಾಡಿದ ಅಂಗನವಾಡಿ ಕಾರ್ಯಕರ್ತರು, ಶಾಲೆಯಿಂದ ದೂರವಾಗಿದ್ದ ಎಲ್ಲ ಮಕ್ಕಳನ್ನೂ ತರಗತಿಗೆ ಬರುವಂತೆ ಮಾಡುವಲ್ಲಿ ಯಶಸ್ವಿಯಾದರು.

ಪಠ್ಯ ಪುಸ್ತಕಗಳು ಸಿಗುವುದು ತಡವಾದ ಹಳ್ಳಿಗಳಲ್ಲಿ, ಪುಸ್ತಕಗಳಲ್ಲಿ ಏನೇನಿದೆ ಎಂಬುದು ಗೊತ್ತಿದ್ದ ಯುವ ಶಿಕ್ಷಕರು ನೈಸರ್ಗಿಕ ಸಂಪನ್ಮೂಲಗಳಾದ ನೆಲ, ನೀರಿನ ಝರಿ, ಹೂವು, ಎಲೆ, ಕಾಂಡ, ಬೊಡ್ಡೆಗಳನ್ನೇ ಬಳಸಿ ಪಾಠದಲ್ಲಿ ಆಸಕ್ತಿ ಹುಟ್ಟಿಸಿದರು. ತಮ್ಮ ಲ್ಯಾಪ್‌ಟಾಪ್‌, ಟ್ಯಾಬ್‍ಗಳಲ್ಲಿ ವಿಡಿಯೊ ತೋರಿಸಿ ಪಾಠ ಮಾಡಿ ಮಕ್ಕಳಿಗೆ ಹೊಸ ಜಗತ್ತನ್ನೇ ಪರಿಚಯಿಸಿದರು. ತಮ್ಮ ಕಾಲೇಜುಗಳ ಪ್ರಾಚಾರ್ಯರನ್ನು ಕಂಡು, ನಿರುಪಯೋಗಿ ಎನಿಸಿದ್ದ ಪ್ರಯೋಗಾಲಯದ ಸಾಮಾನು ಪಡೆದುಕೊಂಡು ಹಳ್ಳಿಗೆ ತಂದು, ಪ್ರಯೋಗ ಮಾಡಿ ತೋರಿಸಿ ಮಕ್ಕಳ ಮನಸ್ಸು ಗೆದ್ದರು. ಬಯಲಿನಲ್ಲಿ ಶಾಲೆ ನಡೆಯುತ್ತಿದ್ದುದರಿಂದ ಸಾಮಾಜಿಕ ಅಂತರ ಕಾಪಾಡಿಕೊಂಡು, ಒಬ್ಬರನ್ನೊಬ್ಬರು ನೋಡುತ್ತ, ಮಾತನಾಡಿಸುತ್ತ, ಸಂಭ್ರಮಿಸುತ್ತಾ ಕಲಿಯುವುದನ್ನು ರೂಢಿಸಿಕೊಂಡರು. ಯುವಜನರ ನಿಸ್ವಾರ್ಥ ಸೇವೆ ಕಂಡ ಹಲವು ಸ್ವಯಂಸೇವಾ ಸಂಸ್ಥೆಗಳು ಅವರ ಊಟ– ತಿಂಡಿಯ ವ್ಯವಸ್ಥೆ ನೋಡಿಕೊಂಡವು.

ಗುರುರಾಜ್ ಎಸ್. ದಾವಣಗೆರೆ
ಗುರುರಾಜ್ ಎಸ್. ದಾವಣಗೆರೆ

‘ನಗರಗಳಿಂದ ಹಿಂತಿರುಗಿ ಊರಿಗೆ ಬಂದ ಯುವ ಜನರನ್ನು ಬಳಸಿಕೊಂಡು ಶಿಕ್ಷಣ ನೀಡಬೇಕೆನ್ನುವ ನಮ್ಮ ಯೋಜನೆ ಇಷ್ಟೊಂದು ಫಲಪ್ರದವಾಗುತ್ತದೆಂಬ ಕಲ್ಪನೆಯೇ ನಮಗಿರಲಿಲ್ಲ’ ಎಂದಿರುವ ತಿಗಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಮೋಹಿನಿ ಮೋಹನ್, ಕೊರೊನಾ ಸಂಕಷ್ಟದ ಕಾಲದಲ್ಲಿ ಮಕ್ಕಳಿಗೆ ಪಾಠ ಹೇಳಿದ ಯುವಕರ ಸೇವೆಯನ್ನು ಎಷ್ಟು ಕೊಂಡಾಡಿದರೂ ಸಾಲದು ಎಂದು ಹನಿಗಣ್ಣಾಗುತ್ತಾರೆ. ಕಾಳಹಂದಿ ಜಿಲ್ಲೆಯ ಚಂಕು ಪದಾರ್ ಹಳ್ಳಿಯ ರೈತ ಕೃಷ್ಣ ವಡಾಕ, ಶಾಲೆ ನಡೆಯುವ ಜಾಗಕ್ಕೆ ಬಂದು ದಿನಕ್ಕೆ ನಾಲ್ಕು ಗಂಟೆಯಂತೆ ಸ್ವಯಂಸೇವಕರಾಗಿ ಕೆಲಸ ಮಾಡುತ್ತ, ಮಕ್ಕಳ ಊಟ– ತಿಂಡಿಯ ಡಬ್ಬಿಗಳನ್ನು ಸ್ವಚ್ಛ ಮಾಡಿಕೊಟ್ಟು ಅವರ ಶೈಕ್ಷಣಿಕಚಟುವಟಿಕೆಗಳಿಗೆ ತಮ್ಮ ಸಮಯವನ್ನು ಮೀಸಲಿಟ್ಟಿದ್ದಾರೆ.

‘ದೇಶದೆಲ್ಲೆಡೆ ಪ್ರಾಥಮಿಕ ಶಾಲೆ ಬಂದ್ ಆಗಿದ್ದರೂ ಇಲ್ಲಿ ಶಾಲೆ ನಡೆಯುತ್ತಿರುವುದು ತುಂಬಾ ಖುಷಿ ನೀಡಿದೆ. ಅದರಲ್ಲೂ ಹೆಣ್ಣು ಮಕ್ಕಳೂ ಕಲಿಯುತ್ತಿರುವುದು ಡಬ್ಬಲ್ ಖುಷಿ ನೀಡಿದೆ’ ಎನ್ನುತ್ತಾರೆ. ಮೊದಲಿಗಿಂತ ಈ ಶಾಲೆಯೇ ಚೆನ್ನಾಗಿದೆ ಎಂದಿರುವ ಹಲವು ಮಕ್ಕಳು, ನಮಗೆ ಈಗ ಪಾಠ ಹೇಳುತ್ತಿರುವ ಶಿಕ್ಷಕರೇ ಇರಲಿ ಎನ್ನುತ್ತಿದ್ದಾರೆ.

ಅಲ್ಲಿಗೆ ಹೋಲಿಸಿದರೆ ಸಾಕಷ್ಟು ಅನುಕೂಲ ಹೊಂದಿರುವ ನಾವೆಲ್ಲ ಇಲ್ಲಿ ಪ್ರಾಥಮಿಕ ಶಾಲೆಗಳನ್ನು ತೆರೆಯಬೇಕೋ ಬೇಡವೋ ಎಂದು ಉನ್ನತ ಸಮಿತಿ ಗಳನ್ನು ರಚಿಸಿ ಅವುಗಳ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ. ಮುಂದೊಂದು ದಿನ ದೇಶವನ್ನು ‘ಜ್ಞಾನ ರಾಜಧಾನಿ’ ಯನ್ನಾಗಿ ಮಾಡಬಲ್ಲ ಶಕ್ತಿಯಿರುವ ಎಳೆಯರನ್ನು ಮನೆಯಲ್ಲಿ ಕೂಡಿಹಾಕಿ ಮೊಬೈಲು, ಟ್ಯಾಬ್‌ಗಳದಾಸರನ್ನಾಗಿಸಿದ್ದೇವೆ. ಶಾಲೆಯ ಸಹಜ ವಾತಾವರಣದಲ್ಲಿ ಸ್ವಚ್ಛಂದವಾಗಿ ವಿಹರಿಸಿ ಗೆಳೆಯ, ಗೆಳತಿಯರ ಸಹವಾಸ ದಲ್ಲಿ ಇರಬೇಕಾದ ಮಕ್ಕಳು ತಂದೆ–ತಾಯಿಯರ ಒತ್ತಡ ನೋಡಿ ತಾವೂ ಗಾಬರಿಗೊಂಡಿದ್ದಾರೆ. ಗುಡಿ–ಗುಂಡಾರ, ಮಾರ್ಕೆಟ್‍ಗಳನ್ನೆಲ್ಲಾ ಅಪ್ಪ ಅಮ್ಮಂದಿರೊಂದಿಗೆ ಸುತ್ತುತ್ತಿರುವ ಅನುಕೂಲಸ್ಥ ಮಕ್ಕಳು ಈಗಾಗಲೇ ಶಾಲೆ– ಕಾಲೇಜಿಗೆ ಹೋಗುತ್ತಿರುವ ಹೈಸ್ಕೂಲು, ಕಾಲೇಜಿನ ಅಕ್ಕಂದಿರು, ಅಣ್ಣಂದಿರನ್ನು ನೋಡಿ, ‘ನಮಗೇಕೆ ಶಾಲೆ ಇಲ್ಲ, ನಮ್ಮನ್ನೂ ಕಳಿಸಿ’ ಎಂದು ದುಂಬಾಲು ಬಿದ್ದಿದ್ದಾರೆ.

ಹಳ್ಳಿಯ ಬಡಮಕ್ಕಳು ಹೊಲ, ಗದ್ದೆಗಳಲ್ಲಿ ಕಡಿಮೆ ಕೂಲಿಯ ಕೆಲಸ ಹಿಡಿದಿದ್ದಾರೆ. ಕೆಲಸ ಸಿಗದ ಕೆಲವರು ಭಿಕ್ಷಾಟನೆಗಿಳಿದಿದ್ದಾರೆ. ಇನ್ನೆಂದೂ ಪರಿಸ್ಥಿತಿ ಸುಧಾರಿಸುವು ದಿಲ್ಲವೇನೋ ಎಂಬ ಆತಂಕದ ಕೆಲವರು ತಮ್ಮ ಎಳೆ ಪ್ರಾಯದ ಹೆಣ್ಣುಮಕ್ಕಳಿಗೆ ಬಾಲ್ಯವಿವಾಹದ ಸಂಕೋಲೆ ತೊಡಿಸಿದ್ದಾರೆ. ಸರ್ಕಾರಗಳು ತಮಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅವಮಾನ ಆಗಿದೆಯೆಂದೋ ಪ್ರತಿನಿಧಿಗಳು ತಮಗೆ ಬೇಕಾದ ಮಂತ್ರಿಗಿರಿ ಸಿಕ್ಕಿಲ್ಲ ಅಂತಲೋ ಗಂಟಲು ಹರಿದುಕೊಳ್ಳುತ್ತಿದ್ದಾರೆಯೇ ಹೊರತು ದೇಶದನಿಜವಾದ ಶಕ್ತಿಯನ್ನು ಮೂಲೆಗೆ ತಳ್ಳಿ ತಮಾಷೆ ನೋಡುತ್ತಿರುವುದು ಅವರ ಅರಿವಿಗೆ ಬರುತ್ತಿಲ್ಲ ಅಥವಾ ಜಾಣ ಕಿವುಡು – ಕುರುಡು ಪ್ರದರ್ಶಿಸುತ್ತಿದ್ದಾರೇನೊ.

ಒಟ್ಟಿನಲ್ಲಿ ಇಡೀ ದೇಶದ ಶಿಕ್ಷಣ ತಜ್ಞರು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಮಂಥನ ನಡೆಸುತ್ತಿದ್ದರೆ, ಒಡಿಶಾದ ಹಳ್ಳಿಗಳಲ್ಲಿ ಶಿಕ್ಷಣ ಕ್ರಾಂತಿಯೇ ಜರುಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT