ಬುಧವಾರ, ಅಕ್ಟೋಬರ್ 21, 2020
26 °C

PV web exclusive| ಪ್ರತಿ ದಿನ ನಾಯಿಯನ್ನು ಕಚ್ಚುವ ಮನುಷ್ಯ!

ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

‘ನಾಯಿ ಮನುಷ್ಯನಿಗೆ ಕಚ್ಚಿದರೆ ಅದು ಸುದ್ದಿಯಲ್ಲ. ಮನುಷ್ಯನೇ ನಾಯಿಗೆ ಕಚ್ಚಿದರೆ ಅದು ಸುದ್ದಿ‘. ಬಹುತೇಕ ಪತ್ರಿಕೋದ್ಯಮ ಕಾಲೇಜುಗಳಲ್ಲಿ ಕಲಿಸುವ ಸುದ್ದಿಯ ಮೊದಲ ಪಾಠ ಇದು. ಅಂದರೆ ಮಾಮೂಲಿಯಾಗಿ ನಡೆಯುವುದು ಅಥವಾ ಸಹಜ ಕ್ರಿಯೆ ಯಾವುದೋ ಅದು ಸುದ್ದಿಯಾಗುವುದಿಲ್ಲ. ಅಸಹಜವಾಗಿದ್ದರೆ ಅಥವಾ ಏನಾದರೂ ವಿಶೇಷವಾಗಿದ್ದರೆ ಮಾತ್ರ ಅದು ಸುದ್ದಿಯಾಗುತ್ತದೆ ಎಂದು ಮಕ್ಕಳಿಗೆ ತಿಳಿಸಲು ಈ ಪಾಠ ಮಾಡಲಾಗುತ್ತದೆ. ಆದರೆ ಈಗ ಮಾಧ್ಯಮದ ಸ್ಥಿತಿ ಏನಾಗಿದೆ ಎಂದರೆ ಅಸಹಜ ಮತ್ತು ಸಹಜದ ಗೆರೆಯೇ ಇಲ್ಲ. ಈಗ ಪ್ರತಿ ದಿನವೂ ಮನುಷ್ಯನೇ ನಾಯಿಗೆ ಕಚ್ಚುತ್ತಾನೆ. ಅದೊಂದು ಮಾಮೂಲು ಕ್ರಿಯೆಯಾಗಿದೆ. ಆದರೂ ಅನಾದಿಕಾಲದಲ್ಲಿ ನಾವು ಕಲಿತ ಪಾಠದಂತೆ ಅದನ್ನೇ ಸುದ್ದಿ ಎಂದು ವರದಿ ಮಾಡುತ್ತಿದ್ದೇವೆ. ಇಡೀ ಮಾಧ್ಯಮ ಕ್ಷೇತ್ರದ ಬಗ್ಗೆ ಜನರು ಭ್ರಮನಿರಸನಗೊಂಡಿದ್ದರೂ ನಾವು ಮಾತ್ರ ಈ ಚಟವನ್ನು ಬಿಟ್ಟೇ ಇಲ್ಲ. ಇದರ ಒಟ್ಟರ್ಥ ಏನೆಂದರೆ ಮಾಧ್ಯಮ ಲೋಕ ಕಾಲಕ್ಕೆ ತಕ್ಕಂತೆ ಬದಲಾಗಿಲ್ಲ.

ಬದಲಾವಣೆ ಎಂದರೆ ತಾಂತ್ರಿಕ ಬದಲಾವಣೆಯಲ್ಲ. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಕ್ಷೇತ್ರಗಳಲ್ಲಿ ತಾಂತ್ರಿಕ ಬದಲಾವಣೆ ಸಾಕಷ್ಟಾಗಿದೆ. ಬಣ್ಣದ ಪುಟಗಳು ಹೆಚ್ಚಾಗಿವೆ. ವಿದ್ಯುನ್ಮಾನ ಮಾಧ್ಯಮದಲ್ಲಿ ನೇರ ಪ್ರಸಾರ ಹೆಚ್ಚಾಗಿದೆ. ಡಿಜಿಟಲ್ ಮಾಧ್ಯಮ ಸಾಕಷ್ಟು ಮುಂದುವರಿದಿದೆ. ಸಾಮಾಜಿಕ ಜಾಲತಾಣಗಳಿಗಂತೂ ಲಂಗುಲಗಾಮುಗಳಿಲ್ಲದೆ ನಾಗಾಲೋಟದಲ್ಲಿ ಮುಂದುವರಿಯುತ್ತಿದೆ. ಆದರೂ ಸುದ್ದಿಯ ವಿಚಾರಕ್ಕೆ ಬಂದರೆ ನಾವಿನ್ನೂ ಓಬಿರಾಯನ ಕಾಲದಲ್ಲಿಯೇ ಇದ್ದೇವೆ.

ನಮ್ಮ ಸುತ್ತಲೂ ಎಲ್ಲವೂ ಬದಲಾಗಿದೆ. ಓದುಗರು, ನೋಡುಗರು ಎಲ್ಲರೂ ಬದಲಾಗಿದ್ದಾರೆ. ಓದುಗರ ಜೀವನ ಶೈಲಿ ಬದಲಾಗಿದೆ. ನಮ್ಮ ಜೀವನ ಶೈಲಿ, ಓದುವ ರೀತಿ ಎಲ್ಲವೂ ಬದಲಾಗಿದೆ. ಆದರೆ ಬದಲಾಗದೇ ಇರುವ ಎರಡು ಕ್ಷೇತ್ರ ಎಂದರೆ ಒಂದು ಮಾಧ್ಯಮ ಇನ್ನೊಂದು ರಾಜಕೀಯ. ಬದಲಾಗಿರುವ ಓದುಗನಿಗೆ ಬದಲಾದ ಪತ್ರಿಕೆ ಬೇಕು. ಬದಲಾದ ಮತದಾರನಿಗೆ ಬದಲಾದ ರಾಜಕೀಯ ಬೇಕು. ಆದರೆ ನಾವು ಎರಡನ್ನೂ ಕೊಡುತ್ತಿಲ್ಲ.

ಈಗ ಸುದ್ದಿಗಾಗಿ ಸುದ್ದಿ ಪತ್ರಿಕೆ ಅಲ್ಲ. ಯಾಕೆಂದರೆ ಬಹುತೇಕ ಓದುಗರಿಗೆ ಸುದ್ದಿ ಗೊತ್ತಿರುತ್ತದೆ. ನಮ್ಮ ಕೈಯನ್ನು ಅಲಂಕರಿಸಿರುವ ಮೊಬೈಲ್ ಎಂಭ ಯಂತ್ರ ವಿಶ್ವದ ಎಲ್ಲ ಸುದ್ದಿಯನ್ನೂ ನಮ್ಮ ಅಂಗೈಗೆ ಪ್ರತಿ ಕ್ಷಣ ತಲುಪಿಸುತ್ತಿದೆ. ಹಾಗಿರುವಾಗ ನಿನ್ನೆಯ ಸುದ್ದಿಯನ್ನು ಸುದ್ದಿಯಾಗಿ ಅಷ್ಟೇ ಇಂದು ಬೆಳಿಗ್ಗೆ ಓದುವ ಕುತೂಹಲವಾಗಲೀ, ಓದುವ ಅಗತ್ಯವಾಗಲೀ ಓದುಗನಿಗೆ ಇರುವುದಿಲ್ಲ. ಅಂದರೆ ಈಗ ಸುದ್ದಿಗಿಂತ ಜಾಸ್ತಿ ವಿಷಯ ನಮ್ಮ ಓದುಗನಿಗೆ ಬೇಕು. ಅದರ ಅರ್ಥ ಏಕಮುಖದ ವಿಶ್ಲೇಷಣೆ ಬೇಕು ಎಂದಲ್ಲ. ಎಲ್ಲ ಮುಖದ ವಿಶ್ಲೇಷಣೆ ಬೇಕು. ಎಲ್ಲವನ್ನೂ ತೆರೆದಿಡಬೇಕು. ಓದುಗನಿಗೆ ಆಯ್ಕೆ ಇರಬೇಕು.

ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು. ಇಂದು ಬೆಳಿಗ್ಗೆ ತೀರ್ಪು ಬಂದಿದೆ. ಎಲ್ಲ ಆರೋಪಿಗಳನ್ನೂ ಖುಲಾಸೆ ಮಾಡಲಾಗಿದೆ ಎನ್ನುವುದು ತೀರ್ಪು ಬಂದ ಕೆಲವೇ ಕ್ಷಣಗಳಲ್ಲಿ ಇಡೀ ಪ್ರಪಂಚಕ್ಕೆ ಗೊತ್ತಾಗಿದೆ. ಆದರೂ ನಾವು ಇದೇ ಸುದ್ದಿಯನ್ನು ನಾಳೆ ಬೆಳಗಿನ ಪತ್ರಿಕೆಯಲ್ಲಿ ಪ್ರಕಟಿಸುತ್ತೇವೆ. ಹೀಗೇ ಅದೇ ಸುದ್ದಿಯನ್ನು ಪ್ರಕಟಿಸುವ ಬದಲು ತೀರ್ಪು ಬಂದ ನಂತರ ಏನೇನು ಆಯ್ತು? ತೀರ್ಪಿನ ಪರಿಣಾಮ ಏನು? ತೀರ್ಪಿನ ಬಗ್ಗೆ ಯಾರು ಏನೇನು ಹೇಳುತ್ತಾರೆ? ತೀರ್ಪಿನ ಒಳಗೆ ಏನಿದೆ? ಅದು ಏನನ್ನು ಧ್ವನಿಸುತ್ತದೆ ಎನ್ನುವುದನ್ನು ವಿವರವಾಗಿ ನೀಡಿದರೆ ಜನರು ಪತ್ರಿಕೆ ಓದುವುದನ್ನು ಇನ್ನಷ್ಟು ದಿನ ಮುಂದುವರಿಸಬಹುದು.

ಇನ್ನೊಂದು ಉದಾಹರಣೆಯನ್ನು ನೋಡೋಣ. ಹೊಸ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತ ಸಂಘಟನೆಗಳು ರಾಜ್ಯ ಬಂದ್ ಕರೆ ನೀಡಿದ್ದವು. ಬಂದ್ ಮಾರನೇ ದಿನ ಬಹುತೇಕ ಎಲ್ಲ ಪತ್ರಿಕೆಗಳು ಬಂದ್ ವಿಷಯವನ್ನೇ ಪ್ರಮುಖವಾಗಿ ಪ್ರಕಟಿಸಿದವು. ಅದು ಸರಿ. ಆ ದಿನದ ಮಟ್ಟಿಗೆ ಬಂದ್ ಪ್ರಮುಖವಾದ ಸುದ್ದಿ. ಆದರೆ ಎಲ್ಲ ಪತ್ರಿಕೆಗಳ ಅಂದಿನ ವರದಿಗಾರಿಕೆ ಶೈಲಿಯನ್ನು ಗಮನಿಸಿ. ಬಹುತೇಕ ಪತ್ರಿಕೆಗಳಲ್ಲಿ ಬಂದ್ ಹೇಗಾಯ್ತು, ಎಲ್ಲೆಲ್ಲಿ ರಸ್ತೆ ತಡೆ ನಡೆಸಲಾಯಿತು. ಎಲ್ಲಿ ಅಹಿತಕರ ಘಟನೆಗಳು ನಡೆದವು ಎನ್ನುವುದನ್ನು ಸಂಗ್ರಹಿಸಿ ಪ್ರಕಟಿಸಿವೆ. ನಮ್ಮ ಪತ್ರಿಕೆಯೂ ಸೇರಿದಂತೆ ಎಲ್ಲ ಪತ್ರಿಕೆಗಳಲ್ಲಿಯೂ ಸರಿಸುಮಾರು ಒಂದೇ ರೀತಿಯ ವರದಿ ಇದ್ದವು.

‘ಅಲ್ಲಲ್ಲಿ ಕಲ್ಲು ತೂರಾಟ, ರಸ್ತ ತಡೆಯಂತಹ ಕೆಲವು ಅಹಿತಕರ ಘಟನೆಗಳನ್ನು ಬಿಟ್ಟರೆ ಉಳಿದಂತೆ ರಾಜ್ಯದ ಎಲ್ಲೆಡೆ ಬಂದ್ ಶಾಂತಿಯುತವಾಗಿತ್ತು’ ಎಂಬ ವಾಕ್ಯವೂ ಇತ್ತು. ಸುಮ್ಮನೆ ಕುತೂಹಲಕ್ಕೆ ಈಗ 25 ವರ್ಷ ಅಥವಾ 50 ವರ್ಷದ ಹಿಂದೆ ರಾಜ್ಯದಲ್ಲಿ ನಡೆದ ಇದೇ ರೀತಿಯ ಬಂದ್ ವರದಿಗಾರಿಕೆಯನ್ನು ನೋಡಿ. ಅಂದೂ ಇದೇ ವಾಕ್ಯ ಇತ್ತು. ಅಂದರೆ ಬಂದ್ ವರದಿಗಾರಿಕೆ ಇನ್ನೂ ಬದಲಾಗಿಯೇ ಇಲ್ಲ. ಕನಿಷ್ಠ ಬರವಣಿಗೆ ಅಥವಾ ವಿನ್ಯಾಸದ ರೀತಿಯಲ್ಲಿಯೂ ಬದಲಾಗಿಲ್ಲ.

ಸುದ್ದಿ ಮೂಲಗಳನ್ನು ಗಮನಿಸಿ. ಈಗಲೂ ಸುದ್ದಿ ಮೂಲ ಎಂದರೆ ವಿಧಾನಸೌಧ, ಪೊಲೀಸ್ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ ಹೀಗೆ ಶತಮಾನಗಳಿಂದ ಅನುಸರಿಸಿಕೊಂಡು ಬಂದ ಮೂಲಗಳೇ ಆಗಿವೆ. ಟ್ವೀಟ್, ವಾಟ್ಸ ಆಪ್, ಫೇಸ್ ಬುಕ್ ಎಲ್ಲ ಸೇರಿವೆ ನಿಜ. ಅವೂ ಕೂಡ ಇದೇ ಮೂಲಗಳನ್ನು ಆಧರಿಸಿವೆ. ಒಟ್ಟರ್ಥದಲ್ಲಿ ಈಗಲೂ ಅಧಿಕಾರ ಕೇಂದ್ರವೇ ಸುದ್ದಿ ಮೂಲ. ಆಗಲೂ ಅದೇ ಇತ್ತು. ಮೇಲಿಂದ ಸುದ್ದಿಯನ್ನು ಹುಡುಕುವ ಬದಲು ಕೆಳಗಿನಿಂದ ಸುದ್ದಿಯನ್ನು ಹುಡುಕಲು ಆರಂಭಿಸಿದರೆ ಒಂದಿಷ್ಟು ಹೊಸ ಹೊಸ ಸುದ್ದಿಗಳು ಸಿಗಬಹುದೇನೋ?

ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ, ನರೇಂದ್ರ ಮೋದಿ, ಡೊನಾಲ್ಡ್ ಟ್ರಂಫ್ ಏನು ಮಾಡ್ತಾರೆ ಎನ್ನುವುದು ನಮಗೆ ಗೊತ್ತಾಗುತ್ತದೆ. ದೆಹಲಿ, ಬೆಂಗಳೂರು, ಬೀಜಿಂಗ್, ನ್ಯೂಯಾರ್ಕ್ ನಲ್ಲಿ ಏನೇನು ನಡೆಯುತ್ತದೆ ಎನ್ನುವುದು ನಮಗೆ ತಿಳಿಯುತ್ತದೆ. ಈಗಿನ ನಮ್ಮ ದೊಡ್ಡ ಸಮಸ್ಯೆ ಏನೆಂದರೆ ನಮ್ಮ ಪಕ್ಕದ ಬೀದಿಯಲ್ಲಿ ಏನು ನಡೆಯುತ್ತದೆ? ನಮ್ಮ ಪಕ್ಕದ ಅಪಾರ್ಟ್ ಮೆಂಟ್ ನಲ್ಲಿ ಏನು ಸಂಭವಿಸಿದೆ ಎನ್ನುವುದು ತಿಳಿಯುವುದಿಲ್ಲ. ಕೆಟ್ಟದ್ದು ಎಲ್ಲಿಯೇ ನಡೆದರೂ ಕ್ಷಣ ಮಾತ್ರದಲ್ಲಿ ವಿಶ್ವದ ಎಲ್ಲೆಡೆ ತಲುಪುತ್ತದೆ. ಆದರೆ ಒಳ್ಳೆಯದು ನಮ್ಮ ಕಣ್ಣಿಗೆ ಕಾಣುವುದೂ ಇಲ್ಲ. ಪ್ರಚಾರವೂ ಆಗುವುದಿಲ್ಲ. ಈಗ ನಾವು ಒಳ್ಳೆಯದನ್ನು ಹುಡುಕಲು ಹೊರಡೋಣವೇ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು