ಬುಧವಾರ, ಫೆಬ್ರವರಿ 8, 2023
18 °C
ವಸಾಹತುಶಾಹಿಯ ಲೂಟಿಯಿಂದ ಸೊರಗಿಹೋಗಿದ್ದ ದೇಶ ಈಗ ಮತ್ತಷ್ಟು ನಜ್ಜುಗುಜ್ಜಾಗಲು ಕಾರಣವೇನು?

ವಿಶ್ಲೇಷಣೆ | ಹೈಟಿ ಬವಣೆ ಮತ್ತು ‘ಗ್ಯಾಂಗ್‌’ ಅಟ್ಟಹಾಸ

ಟಿ.ಎಸ್‌. ವೇಣುಗೋಪಾಲ್‌ Updated:

ಅಕ್ಷರ ಗಾತ್ರ : | |

ಹೈಟಿ, ಪುಟ್ಟದಾದ ಕೆರಿಬಿಯನ್ ದೇಶ. ತುಂಬಾ ಬಡದೇಶ. ಹೈಟಿಯ ಶೇಕಡ 60ರಷ್ಟು ಜನ ದಟ್ಟದಾರಿದ್ರ್ಯದಲ್ಲಿ ಬದುಕುತ್ತಿದ್ದಾರೆ. 1.2 ಕೋಟಿಗೂ ಹೆಚ್ಚು ಜನ ತೀವ್ರ ಹಸಿವೆಯಲ್ಲಿ ನರಳುತ್ತಿದ್ದಾರೆ. ವಿದ್ಯುತ್, ಚರಂಡಿ ಯಾವುದೂ ಸರಿಯಾಗಿಲ್ಲ. ಇನ್ನು ಆಸ್ಪತ್ರೆ, ಶಾಲೆಗಳನ್ನು ಸರ್ಕಾರೇತರ ಸಂಸ್ಥೆಗಳು ನಡೆಸುತ್ತಿವೆ. ಅಲ್ಲಿ ಸರ್ಕಾರ ಅನ್ನುವುದು ನಿಜವಾಗಿ ಇದೆಯೇ ಎನ್ನುವುದೇ ಅನುಮಾನ.

ದೇಶದ ಹಿಂದಿನ ಅಧ್ಯಕ್ಷ ಜೊವೆನೆಲ್ ಮೋಯ್ಸ್ ಮನೆಗೆ ಕೆಲವು ಬಂದೂಕುಧಾರಿಗಳು ನುಗ್ಗಿ ಸಲೀಸಾಗಿ ಅವರನ್ನು ಕೊಂದರು. ಯಾರೂ ಅವರನ್ನು ತಡೆಯಲಿಲ್ಲ. ಯಾರು ಕೊಂದರು? ಯಾಕೆ ಕೊಂದರು? ಸ್ಪಷ್ಟವಿಲ್ಲ. ನಂತರ ಏರಿಯಲ್ ಹೆನ್ರಿ ಅಧ್ಯಕ್ಷರಾದರು. ಜೊವೆನೆಲ್ ಕೊಲೆಯಲ್ಲಿ ಈತನ ಕೈವಾಡ ಇದೆ ಎಂಬ ಗುಮಾನಿ ಇದೆ.

ಒಂದರ್ಥದಲ್ಲಿ ಅಲ್ಲಿ ನಿಜವಾಗಿ ಆಳ್ವಿಕೆ ನಡೆಸುತ್ತಿರುವುದು ವಿಭಿನ್ನ ಗ್ಯಾಂಗುಗಳು. ಅವುಗಳನ್ನು ಸಾಕಿ ಬೆಳೆಸಿದ್ದು ಈ ರಾಜಕೀಯ ಪಕ್ಷಗಳು. ಆ ಗ್ಯಾಂಗುಗಳು ಈಗ ಪ್ರಬಲವಾಗಿ ಬೆಳೆದಿವೆ. ಸರ್ಕಾರ ಉದ್ಯೋಗ ಕೊಡುತ್ತಿಲ್ಲ. ಸದ್ಯಕ್ಕೆ ಯುವಕರಿಗೆ ಕೆಲಸ ಕೊಡುತ್ತಿರುವುದು ಈ ಗ್ಯಾಂಗುಗಳು. ಬಡತನದ ಒತ್ತಡದಿಂದ ಯುವಕರು ಒಂದಲ್ಲ ಒಂದು ಗ್ಯಾಂಗಿಗೆ ಸೇರುತ್ತಾರೆ. ದಿನಬೆಳಗಾದರೆ ನಡೆಯುವ ಲೂಟಿಯ ಪಾಲಿನಲ್ಲಿ ಹೊಟ್ಟೆ ಹೊರೆಯುತ್ತಿದ್ದಾರೆ.

ಈ ಗ್ಯಾಂಗ್ ಹಿಂಸೆಯಲ್ಲಿ ಹೈಟಿ ಪ್ರತಿವರ್ಷ ಸುಮಾರು 400 ಕೋಟಿ ಡಾಲರ್ ಅಂದರೆ ದೇಶದ ಜಿಡಿಪಿಯ ಶೇಕಡ 30ರಷ್ಟು ನಷ್ಟ ಅನುಭವಿಸುತ್ತಿದೆ. ಸಾವಿರಾರು ಜನ ನೆಲೆ ಕಳೆದುಕೊಳ್ಳುತ್ತಿದ್ದಾರೆ. ಸರ್ಕಾರ ಈಗ ಲೂಟಿಕೋರರನ್ನು ನಿಯಂತ್ರಿಸಲು ಸೈನ್ಯವನ್ನು ಕಳುಹಿಸಲು ಬೇರೆ ದೇಶಗಳನ್ನು ಕೇಳಿಕೊಳ್ಳುತ್ತಿದೆ. ಅದು ಸಮಸ್ಯೆಗೆ ನಿಜವಾದ ಪರಿಹಾರವಾಗದೇ ಇರಬಹುದು. ಜನರಿಗೆ ಒಳ್ಳೆಯ ಕೆಲಸ ಸಿಕ್ಕರೆ, ಜೀವನಮಟ್ಟ ಸುಧಾರಿಸಿದರೆ ಅವರು ಈ ಗ್ಯಾಂಗುಗಳನ್ನು ಸೇರುವುದಿಲ್ಲ. ಗ್ಯಾಂಗುಗಳನ್ನು ದುರ್ಬಲ ಗೊಳಿಸಲು ಇರುವ ಸೂಕ್ತ ಮಾರ್ಗ ಅದೇ. ಆದರೆ ಸದ್ಯಕ್ಕೆ ಹೈಟಿಯ ಆರ್ಥಿಕತೆ ಆ ಸ್ಥಿತಿಯಲ್ಲಿಲ್ಲ.

ಹೈಟಿಯಂತಹ ದೇಶಗಳು ಏಕೆ ಈ ಸ್ಥಿತಿಯಲ್ಲಿವೆ? ಯುರೋಪ್ ಹಾಗೂ ಅಮೆರಿಕದ ಸಂಪತ್ತಿನ ಕೇಂದ್ರೀಕರಣಕ್ಕೂ ಈ ದೇಶಗಳ ದಾರಿದ್ರ್ಯಕ್ಕೂ ಕಾರಣ ಒಂದೇ- ಗುಲಾಮಗಿರಿ ಹಾಗೂ ವಸಾಹತುಶಾಹಿ ಆಳ್ವಿಕೆ. ಇದನ್ನು ಹಲವು ಅಧ್ಯಯನಗಳು ತಿಳಿಸಿವೆ.

ಅರ್ಥಶಾಸ್ತ್ರಜ್ಞ ಥಾಮಸ್ ಪಿಕೆಟ್ಟಿ ಅವರು ಗುರುತಿಸುವಂತೆ, 18ನೇ ಶತಮಾನದ ಕೊನೆಯ ವೇಳೆಗೆ ಯುರೋಪ್ ತನ್ನ ಎಲ್ಲಾ ಸಂಪನ್ಮೂಲಗಳನ್ನು ಹಾಳುಮಾಡಿಕೊಂಡಿತ್ತು. ಕಾಡುಗಳು ಕಣ್ಮರೆಯಾಗಿದ್ದವು. 1500ರಲ್ಲಿ ಶೇಕಡ 40ರಷ್ಟಿದ್ದ ಅರಣ್ಯ ಪ್ರದೇಶವು 1800ರ ವೇಳೆಗೆ ಶೇಕಡ 10ಕ್ಕೆ ಇಳಿದಿತ್ತು. ಆದರೆ ಅದರ ಮಿಲಿಟರಿ ಸಾಮರ್ಥ್ಯ ಅಪಾರವಾಗಿ ಬೆಳೆದಿತ್ತು. ಫ್ರಾನ್ಸ್ ಹಾಗೂ ಬ್ರಿಟನ್‌ ಈ ಎರಡೂ ದೇಶಗಳ ಒಟ್ಟು ಯೋಧರ ಸಂಖ್ಯೆ 1550ರಲ್ಲಿ 1.40 ಲಕ್ಷ ಇದ್ದುದು, 1780ರ ವೇಳೆಗೆ 4.50 ಲಕ್ಷ ದಾಟಿತ್ತು. ಉಳಿದ ದೇಶಗಳಿಗಿಂತ ಅಲ್ಲಿ ಏಳೆಂಟು ಪಟ್ಟು ಹೆಚ್ಚು ತೆರಿಗೆ ಸಂಗ್ರಹವಾಗುತ್ತಿತ್ತು. ಹಾಗಾಗಿ ಹೆಚ್ಚಿನ ಸೈನಿಕರನ್ನು ನೇಮಿಸಿಕೊಳ್ಳುವುದಕ್ಕೆ ಸಾಧ್ಯವಾಗಿತ್ತು. ಪ್ರಬಲವಾದ ಮಿಲಿಟರಿ ನೆರವಿನಿಂದ ವಸಾಹತುಗಳನ್ನು ನಿಯಂತ್ರಿಸುವುದು ಸುಲಭವಾಗಿತ್ತು. ಹೆಚ್ಚೆಚ್ಚು ಗುಲಾಮರನ್ನು ಬಳಸಿಕೊಂಡು ಜಗತ್ತಿನ ವಿವಿಧ ಕಡೆಗಳಿಂದ ನೈಸರ್ಗಿಕ ಸಂಪನ್ಮೂಲಗಳನ್ನು ಸಂಗ್ರಹಿಸತೊಡಗಿದವು. ಹಾಗಾಗಿಯೇ 1750 ಹಾಗೂ 1860ರ ಅವಧಿಯಲ್ಲಿ ಬಟ್ಟೆ ಉತ್ಪಾದನೆಯಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಾಬಲ್ಯ ಗಳಿಸುವುದಕ್ಕೆ ಫ್ರಾನ್ಸಿಗೆ ಸಾಧ್ಯವಾಗಿದ್ದು.

ಸುಮಾರಿಗೆ ಆ ಸಮಯದಲ್ಲಿ ಹೈಟಿಯು ಸಕ್ಕರೆ, ಕಾಫಿ ಹಾಗೂ ಹತ್ತಿಯ ಉತ್ಪಾದನೆಯಿಂದಾಗಿ ಅತ್ಯಂತ ಸಮೃದ್ಧವಾದ ಹಾಗೂ ಲಾಭದಾಯಕವಾದ ವಸಾಹತು ಆಗಿತ್ತು. ಅದೇ ಕಾರಣಕ್ಕೆ ಹೈಟಿಯು ಫ್ರೆಂಚ್ ವಸಾಹತು ರತ್ನ ಎನಿಸಿಕೊಂಡಿತ್ತು. ಹೈಟಿಯ ಒಟ್ಟು ಜನಸಂಖ್ಯೆಯ ಶೇಕಡ 90ರಿಂದ 95ರಷ್ಟು ಗುಲಾಮರಿದ್ದರು. ಎಲ್ಲಾ ಒಂದೇ ಕಡೆ ಇದ್ದುದರಿಂದ, ಹೆಚ್ಚು ಸಂಖ್ಯೆಯಲ್ಲಿ ಇದ್ದುದರಿಂದ ಸಂಘಟಿತರಾದರು. 1971ರಲ್ಲಿ ದಂಗೆ ಎದ್ದರು. ಇದೊಂದು ಮಹತ್ವದ ಹೋರಾಟ. ಫ್ರಾನ್ಸಿನಿಂದ ಬಂದ ಮಿಲಿಟರಿಯಿಂದಲೂ ಇದನ್ನು ಹತ್ತಿಕ್ಕಲು ಆಗಲಿಲ್ಲ. ಹೋರಾಟಗಾರರು ಪ್ಲಾಂಟೇಷನ್ನುಗಳನ್ನು ವಶಕ್ಕೆ ತೆಗೆದುಕೊಂಡರು.

1804ರಲ್ಲಿ ಹೈಟಿ ಸ್ವತಂತ್ರ ರಾಷ್ಟ್ರ ಎಂದು ಘೋಷಿಸಿಕೊಂಡು ತನ್ನದೇ ಸರ್ಕಾರ ನಡೆಸತೊಡಗಿದರೂ ಫ್ರಾನ್ಸ್ ಅದನ್ನು ಮಾನ್ಯ ಮಾಡಲಿಲ್ಲ. ಅದನ್ನು ಸದೆಬಡಿಯಲು ಪ್ರಯತ್ನಿಸುತ್ತಲೇ ಇತ್ತು. ಕೊನೆಗೆ 1825ರಲ್ಲಿ ಅದರ ಸ್ವಾತಂತ್ರ್ಯವನ್ನು ಮಾನ್ಯ ಮಾಡಿ, ಇನ್ನು ದಾಳಿ ಮಾಡುವುದಿಲ್ಲವೆಂದು ಒಪ್ಪಿಕೊಂಡಿತು. ಆದರೆ ಗುಲಾಮರ ಒಡೆಯರಿಗೆ ಆದ ನಷ್ಟವನ್ನು ಹೈಟಿ ಸರ್ಕಾರ ತುಂಬಿಕೊಡಬೇಕೆಂಬ ಷರತ್ತನ್ನು ವಿಧಿಸಿತು. ಬೇರೆ ದಾರಿಯಿಲ್ಲದೆ, ಗುಲಾಮರ ಒಡೆಯರಿಗೆ ಆದ ಆಸ್ತಿಯ (ಗುಲಾಮರ) ನಷ್ಟಕ್ಕೆ ಬದಲಾಗಿ 1,500 ಲಕ್ಷ ಚಿನ್ನದ ಫ್ರಾಂಕುಗಳನ್ನು ಕೊಡಲು ಹೈಟಿ ಸರ್ಕಾರ ಒಪ್ಪಿಕೊಂಡಿತು. ಫ್ರಾನ್ಸಿನ ಮಿಲಿಟರಿ ಬಲ ಅಷ್ಟಿತ್ತು. ಅದು ಕೊಡಲು ಒಪ್ಪಿಕೊಂಡ ಹಣ ಹೈಟಿಯ ರಾಷ್ಟ್ರೀಯ ವರಮಾನದ ಶೇಕಡ 300ರಷ್ಟು. ಅದನ್ನು ಒಮ್ಮೆಲೇ ಕೊಡುವುದು ಸಾಧ್ಯವೇ ಇರಲಿಲ್ಲ. ಹಾಗಾಗಿ ಒಂದು ಬ್ಯಾಂಕ್ ವ್ಯವಸ್ಥೆಯ ಮೂಲಕ ಪ್ರತಿವರ್ಷ ಕಂತಿನಲ್ಲಿ ಕಟ್ಟುವುದಾಗಿ ಒಪ್ಪಂದ ಮಾಡಿಕೊಳ್ಳಲಾಯಿತು. ಅದಕ್ಕೆ ಹೈಟಿ ಸರ್ಕಾರ ಬ್ಯಾಂಕಿಗೆ ಬಡ್ಡಿ ತೆರುತ್ತಿತ್ತು. 1840ರಿಂದ 75 ವರ್ಷಗಳ ಕಾಲ ಹೈಟಿ ನಿರಂತರವಾಗಿ ಫ್ರಾನ್ಸಿಗೆ ಈ ಹಣವನ್ನು ಕಟ್ಟುತ್ತಾ ಹೋಯಿತು. ಅಮೆರಿಕ ಕೂಡ ಹೈಟಿಯನ್ನು ಆಳಿತ್ತು. ಹಾಗಾಗಿ ಅಮೆರಿಕಕ್ಕೂ ಹಲವು ವರ್ಷ ನಷ್ಟ ತುಂಬಿಕೊಟ್ಟಿದೆ. ಗುಲಾಮರ ಬಿಡುಗಡೆಗಾಗಿ ಹೈಟಿ ಸುಮಾರು 100 ವರ್ಷಗಳ ಕಾಲ ಹಣ ಕಟ್ಟಿದೆ. ನಿಜವಾಗಿ ನೋಡಿದರೆ ಪುಕ್ಕಟೆ ದುಡಿಸಿಕೊಂಡಿದ್ದಕ್ಕೆ ಗುಲಾಮರಿಗೇ ಹಣ ಕೊಡಬೇಕಿತ್ತು.

ಮೊದಲೇ ವಸಾಹತುಶಾಹಿಯ ಲೂಟಿಯಿಂದ ಸೊರಗಿಹೋಗಿದ್ದ ಹೈಟಿ ಆರ್ಥಿಕವಾಗಿ ಚೇತರಿಸಿಕೊಳ್ಳಲೇ ಇಲ್ಲ. ಇತ್ತೀಚಿನ ಕಾಲರಾ, ಭೂಕಂಪ, ಗ್ಯಾಂಗ್ ಹಾವಳಿಗಳು ಅದನ್ನು ನಜ್ಜುಗುಜ್ಜು ಮಾಡಿವೆ. ಫ್ರಾನ್ಸ್‌ನಂತಹ ಸರ್ಕಾರಗಳಿಗೆ ಈಗ ಈ ದೇಶಕ್ಕೆ ನೆರವಾಗಬೇಕಾದ ನೈತಿಕ ಹೊಣೆಗಾರಿಕೆಯಿದೆ. ಅವರಿಂದ ಬಲವಂತವಾಗಿ ಪಡೆದುಕೊಂಡಿರುವ ಹಣವನ್ನು ಮರುಪಾವತಿಸಬೇಕು. ಹೈಟಿ ಸರ್ಕಾರವೂ ಇದಕ್ಕೆ ಒತ್ತಾಯಿಸುತ್ತಿದೆ. ಈ ನ್ಯಾಯಯುತ ಬೇಡಿಕೆಯನ್ನು ಫ್ರಾನ್ಸ್ ಒಪ್ಪಿಕೊಳ್ಳಬೇಕು.

ಇದಕ್ಕೆ ಒಪ್ಪಿಕೊಂಡರೆ ಫ್ರಾನ್ಸ್ ಎಷ್ಟು ಹಣ ಕೊಡಬೇಕು ಅನ್ನುವುದು ಪ್ರಶ್ನೆ. ಪಿಕೆಟ್ಟಿಯ ಸಲಹೆಯೆಂದರೆ, ಕನಿಷ್ಠ ಹೈಟಿಯ 2020ರ ರಾಷ್ಟ್ರೀಯ ವರಮಾನದ ಶೇಕಡ 300ರಷ್ಟನ್ನಾದರೂ ಕೊಡಬೇಕು. ಅದು ಫ್ರಾನ್ಸಿನ ಒಟ್ಟು ಸಾಲದ ಕೇವಲ ಶೇಕಡ 1ರಷ್ಟು. ಅದು ಫ್ರಾನ್ಸಿಗೆ ಏನೂ ಅಲ್ಲ. ಆದರೆ ಹೈಟಿಗೆ ದೊಡ್ಡ ಮೊತ್ತವಾಗಬಲ್ಲದು. ಹೂಡಿಕೆ ಹಾಗೂ ಮೂಲ ಸೌಕರ್ಯ ನಿರ್ಮಾ ಣದ ದೃಷ್ಟಿಯಿಂದ ದೊಡ್ಡ ವ್ಯತ್ಯಾಸ ಉಂಟುಮಾಡುತ್ತದೆ.

ಇದು ಹೈಟಿಯ ವಿಷಯದಲ್ಲಿ ಮಾತ್ರವಲ್ಲ, ಗುಲಾಮಗಿರಿಯ ಪಾಡನ್ನು ಅನುಭವಿಸಿದ ಎಲ್ಲಾ ದೇಶಗಳ ವಿಷಯದಲ್ಲೂ ಆಗಬೇಕು. ಈ ಬಗ್ಗೆ ಚರ್ಚೆ ನಡೆಯಬೇಕು. ಆದರೆ ಹೀಗೆ ಹಣದ ಮರುಪಾವತಿಯಿಂದ ಅವರ ಸಮಸ್ಯೆಗಳೆಲ್ಲಾ ತೀರಿಹೋಗಿಬಿಡುತ್ತವೆಯೇ ಅಂದರೆ ಖಂಡಿತಾ ಇಲ್ಲ. ಇದು ಹೆಚ್ಚು ವ್ಯಾಪಕವಾದ ಪ್ರಶ್ನೆ. ದೇಶಗಳ ನಡುವಿನ ಅಸಮಾನತೆಯನ್ನು ಕಡಿಮೆ ಮಾಡುವುದಕ್ಕೆ ನಾವು ಜಾಗತಿಕ ಮಟ್ಟದಲ್ಲಿ ವ್ಯವಸ್ಥೆಯನ್ನು ಬದಲಿಸುವ ದಿಸೆಯಲ್ಲಿ ಚಿಂತಿಸಬೇಕು.

ಪಿಕೆಟ್ಟಿ ಒಂದು ಹೆಜ್ಜೆ ಮುಂದೆ ಹೋಗಿ, ‘ಪ್ರತಿಯೊಂದು ದೇಶಕ್ಕೂ ಈ ಭೂಮಿಯ ಪ್ರತಿಯೊಬ್ಬ ನಾಗರಿಕನಿಗೂ ಬಹುರಾಷ್ಟ್ರೀಯ ಕಂಪನಿಗಳಿಂದ ಹಾಗೂ ಜಗತ್ತಿನ ಬಿಲಿಯನೇರುಗಳಿಂದ ಸಂಗ್ರಹಿಸಿದ ತೆರಿಗೆಯಲ್ಲಿ ಒಂದು ಪಾಲು ಸಿಗಬೇಕು. ಯಾಕೆಂದರೆ ಪ್ರತಿಯೊಬ್ಬ ಮಾನವನಿಗೂ ಕನಿಷ್ಠ ಆರೋಗ್ಯ, ಶಿಕ್ಷಣ ಹಾಗೂ ಬೆಳವಣಿಗೆಯ ಹಕ್ಕು ಇರಬೇಕು. ಎರಡನೆಯದಾಗಿ, ಬಡದೇಶಗಳು ಇಲ್ಲದೇ ಹೋಗಿದ್ದರೆ ಶ್ರೀಮಂತ ದೇಶಗಳಿಗೆ ಸಂಪತ್ತನ್ನು ಪೇರಿಸಿಕೊಳ್ಳಲು ಸಾಧ್ಯವೇ ಆಗುತ್ತಿರಲಿಲ್ಲ. ಅದು ಸಾಧ್ಯವಾಗಿದ್ದೇ ಅಂತರರಾಷ್ಟ್ರೀಯ ಶ್ರಮ ವಿಭಜನೆ ಹಾಗೂ ಜಾಗತಿಕವಾಗಿ ನೈಸರ್ಗಿಕ ಹಾಗೂ ಮಾನವ ಸಂಪನ್ಮೂಲದ ಲೂಟಿಯಿಂದ. ಜಗತ್ತಿನಲ್ಲಿ ಸಂಪತ್ತಿನ ಕ್ರೋಡೀಕರಣ ಸಾಧ್ಯವಾಗಿದ್ದು ಒಂದು ಅಂತರರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯಿಂದ. ಹಾಗಾಗಿ ನ್ಯಾಯದ ಪ್ರಶ್ನೆಯೂ ಅಂತರರಾಷ್ಟ್ರೀಯ ಮಟ್ಟದಲ್ಲೇ ನಿರ್ಧಾರವಾಗಬೇಕು’.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು