ಭಾನುವಾರ, ಆಗಸ್ಟ್ 1, 2021
22 °C
ಪ್ಯಾಲೆಸ್ಟೀನ್– ಇಸ್ರೇಲ್ ಸಮಸ್ಯೆಗೆ ಶಾಂತಿಯುತ ಸಹಬಾಳ್ವೆಯಿಂದಷ್ಟೇ ಶಾಶ್ವತ ಪರಿಹಾರ

ವಿಶ್ಲೇಷಣೆ | ಇಸ್ರೇಲ್‌: ಸತ್ಯಕ್ಕೆ ಎರಡು ಮುಖ

ಸುಧೀಂದ್ರ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಇಸ್ರೇಲ್‌ ಅಸಾಮಾನ್ಯ ರಾಷ್ಟ್ರ. ಅದರ ಭೌಗೋಳಿಕ ಕ್ಷೇತ್ರ ವ್ಯಾಪ್ತಿಯು ಕರ್ನಾಟಕದ ಎಂಟನೇ ಒಂದು ಭಾಗ ಮಾತ್ರ. ಜನಸಂಖ್ಯೆಯು ಬೆಂಗಳೂರಿನ ಜನಸಂಖ್ಯೆಗಿಂತ ಕಡಿಮೆ. ಆದರೂ ಕೃಷಿ, ಉದ್ಯೋಗ, ವಿಜ್ಞಾನ- ತಂತ್ರಜ್ಞಾನದಲ್ಲಿ ಅದರ ಯಶಸ್ಸು ಭಾರತಕ್ಕೂ ಮೀರಿದ್ದು. ಇದುವರೆಗೆ ಇಸ್ರೇಲ್ ಗಳಿಸಿದ ನೊಬೆಲ್ ಪಾರಿತೋಷಕಗಳು 12. ಜನಜೀವನದ ಎಲ್ಲ ಕ್ಷೇತ್ರಗಳಲ್ಲೂ ಹೈಟೆಕ್ ಸೌಲಭ್ಯ. ಅರಬ್‌ ದೇಶಗಳ ಪೈಕಿ ಒಟ್ಟು ಪಿಎಚ್.ಡಿ ಪಡೆದವರ ಸಂಖ್ಯೆ ಏಕಮೇವ ಇಸ್ರೇಲ್‌ನಲ್ಲಿನ ಪಿಎಚ್‌.ಡಿ ಪದವೀಧರರಿಗಿಂತ ಕಡಿಮೆ. ಈ ಪುಟ್ಟ ದೇಶದ ಮಹಾನ್ ಸಾಧನೆಗಳಿಂದಾಗಿ ಅದನ್ನು ನಾವು ಮೆಚ್ಚಲೇಬೇಕು.

ಆದರೆ ಇಂದು ಭಾರತದಲ್ಲಿ, ವಿಶೇಷವಾಗಿ ಸಂಘ ಪರಿವಾರದವರಲ್ಲಿ ಇಸ್ರೇಲ್‌ ಬಗ್ಗೆ ವ್ಯಕ್ತವಾಗುತ್ತಿರುವ ಪ್ರಶಂಸೆ ಕೇವಲ ಈ ಕಾರಣಗಳಿಗಾಗಿ ಅಲ್ಲ. ಅದರ ಸರ್ಕಾರ ಮತ್ತು ಸೇನೆಯು ಸ್ವರಕ್ಷಣೆಗಾಗಿ ಯಾವುದೇ ಹಿಂಜರಿಕೆಯಿಲ್ಲದೇ ಯಾವುದೇ ಸಂಧಾನಕ್ಕೆ ಮುಂದಾಗದೇ ತಪ್ಪು-ಒಪ್ಪುಗಳ ಬಗ್ಗೆ ಯೋಚನೆ ಮಾಡದೇ ಪ್ಯಾಲೆಸ್ಟೀನಿನ ಮುಸ್ಲಿಂ ಸಮುದಾಯವನ್ನು ಹತ್ತಿಕ್ಕಲು ಮಾಡಿರುವ ದೃಢ ಸಂಕಲ್ಪವೇ ಅದಕ್ಕೆ ಮುಖ್ಯ ಕಾರಣ.

‘ಭಾರತವೂ ಇದೇ ರೀತಿ ರಾಷ್ಟ್ರೀಯ ಸುರಕ್ಷಾ ನೀತಿಯನ್ನು ಅಳವಡಿಸಿಕೊಳ್ಳಬೇಕು...’ ಎಂಬುದು ಇಸ್ರೇಲ್‌ ಸಮರ್ಥಕರಲ್ಲಿ ಹೆಚ್ಚಿನವರ ಮನದಾಸೆಯಾಗಿರುವುದು ಶೋಚನೀಯ.

ಇಸ್ರೇಲ್- ಅರಬ್, ವಿಶೇಷವಾಗಿ ಇಸ್ರೇಲ್-ಪ್ಯಾಲೆಸ್ಟೀನ್‌ ನಡುವಿನ ಸಮಸ್ಯೆ ಇಂದು ನಿನ್ನೆಯದಲ್ಲ. ಎರಡನೇ ಮಹಾಯುದ್ಧದ ಕಾಲದಿಂದ ಅದು ನಡೆದು ಬಂದಿದೆ. ಈ ಸಮಸ್ಯೆಯ ಮೂಲ ಇರುವುದು, ಇಸ್ರೇಲ್‌ ಅನ್ಯಾಯವಾದ ರೀತಿಯಲ್ಲಿ ಅಸ್ತಿತ್ವಕ್ಕೆ ಬಂದ ಬಗೆಯಲ್ಲಿ. ಈ ರಾಷ್ಟ್ರ ಜನ್ಮ ತಳೆದದ್ದು 1948ರಲ್ಲಿ. ಎರಡನೇ ಮಹಾಯುದ್ಧದಲ್ಲಿ ಹಿಟ್ಲರ್‌ ಸುಮಾರು 60 ಲಕ್ಷ ಯಹೂದಿಯರನ್ನು ನರಸಂಹಾರ ಮಾಡಿದ ನಂತರ ತಮ್ಮದೇ ಆದ ಸ್ವತಂತ್ರ ರಾಷ್ಟ್ರವಿರಬೇಕು ಎಂಬ ಸಂಕಲ್ಪದಿಂದ, ಜಗತ್ತಿನ ಬೇರೆ ಬೇರೆ ಮೂಲೆಗಳಿಂದ ವಲಸೆ ಬಂದವರು ಇಸ್ರೇಲ್‌ನ ಸ್ಥಾಪನೆ ಮಾಡಿದರು. ಆದರೆ ಅವರು ಅದಕ್ಕಾಗಿ ಆಯ್ದುಕೊಂಡ ನೆಲದಲ್ಲಿ ಪ್ರಮುಖವಾಗಿ ಅರಬ್ಬರು (ಪ್ಯಾಲೆಸ್ಟೀನಿಯನ್ನರು) ಕಾಲಾಂತರದಿಂದ ವಾಸಿಸುತ್ತಿದ್ದರು. ಆಗ ಯಹೂದಿಯರು ಅಲ್ಲಿ ಅಲ್ಪಸಂಖ್ಯಾತರಾಗಿದ್ದರು. ಹಂತಹಂತವಾಗಿ ಅರಬ್ಬರನ್ನು ಹೊರಕ್ಕೆ ಹಾಕುತ್ತ ಇಸ್ರೇಲ್ ತನ್ನ ಪ್ರದೇಶವನ್ನು ವಿಸ್ತರಿಸಿಕೊಳ್ಳುತ್ತಾ ಹೋಯಿತು. ಈಗ ಪ್ಯಾಲೆಸ್ಟೀನಿಯನ್ನರಿಗೆ ವಾಸಿಸಲು ಇರುವುದು ಎರಡು ಪರಸ್ಪರ ಲಗತ್ತಾಗದ ತುಂಡುಗಳು ಮಾತ್ರ- ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿ.

ಈ ಸಮಸ್ಯೆಯನ್ನು ಇನ್ನೂ ಗಂಭೀರಗೊಳಿಸಿರುವ ಸಂಗತಿಯೆಂದರೆ, ಜಗತ್ತಿನ ಮುಸ್ಲಿಂ ಸಮುದಾಯಕ್ಕೆ ಮೂರನೇ ಅತಿ ಪವಿತ್ರವಾದ ಅಲ್ ಅಕ್ಸಾ ಮಸೀದಿ ಇರುವ ಪೂರ್ವ ಜೆರುಸಲೇಮ್‌ ಅನ್ನು ಕೂಡ ಇಸ್ರೇಲ್ ವಶಪಡಿಸಿಕೊಂಡಿರುವುದು. ಇಷ್ಟೇ ಅಲ್ಲದೆ ಗಾಜಾ ಪಟ್ಟಿಯನ್ನು ಇಸ್ರೇಲ್ 2007ರಿಂದ ಸಂಪೂರ್ಣವಾಗಿ ದಿಗ್ಬಂಧನದಲ್ಲಿ ಇಟ್ಟುಕೊಂಡಿದೆ.

ತಮ್ಮ ಪ್ರದೇಶವನ್ನು ಮರಳಿ ಪಡೆಯುವುದಕ್ಕಾಗಿ ಪ್ಯಾಲೆಸ್ಟೀನ್‌ ಜನತೆ ಅವಿರತವಾಗಿ ಸಂಘರ್ಷಕ್ಕೆ ಇಳಿದಿದ್ದಾರೆ. ಈ ಸಂಘರ್ಷದಲ್ಲಿ ಹಮಾಸ್ ಸಂಘಟನೆಯು ಭಯೋತ್ಪಾದಕ ಮಾರ್ಗವನ್ನು ಅನುಸರಿಸಿರುವುದರಿಂದ ಹಾಗೂ ಹಮಾಸ್ ಅನ್ನು ಹತ್ತಿಕ್ಕಲು ಇಸ್ರೇಲ್ ಸೇನೆ ವಿಧ್ವಂಸಕಾರಿ ಆಕ್ರಮಣ ನಡೆಸುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಗಮನಾರ್ಹ ಸಂಗತಿಯೆಂದರೆ, ಇಸ್ರೇಲಿ ದೌರ್ಜನ್ಯಕ್ಕೆ ಇದುವರೆಗೆ ಸಾವಿರಾರು ಪ್ಯಾಲೆಸ್ಟೀನ್ ಹಾಗೂ ಇತರ ಅರಬ್ಬಿ ಜನ ಸಾವಿಗೀಡಾಗಿದ್ದಾರೆ. ತುಲನಾತ್ಮಕವಾಗಿ ಇಸ್ರೇಲಿ ನಾಗರಿಕರು ಅರಬ್ಬರ ಹಿಂಸಾಚಾರಕ್ಕೆ ಬಲಿಯಾದದ್ದು ಬಹಳ ಕಡಿಮೆ. ಆದ್ದರಿಂದ ಇಸ್ರೇಲಿಯರ ನೋವನ್ನು ಪ್ಯಾಲೆಸ್ಟೀನ್‌ ಜನರ ನೋವಿನೊಂದಿಗೆ ಹೋಲಿಸುವುದು ತಪ್ಪು.

ಮತ್ತೊಂದು ವ್ಯತ್ಯಾಸವೆಂದರೆ, ಇಸ್ರೇಲಿಗೆ ಅಣ್ವಸ್ತ್ರಸಜ್ಜಿತವಾದ ಸೇನೆಯಿದೆ. ಬಹುಮುಖ್ಯವಾಗಿ ಅಮೆರಿಕದ ಸಂಪೂರ್ಣ ಬೆಂಬಲ ಇದಕ್ಕಿದೆ. ಪ್ರತಿವರ್ಷ ಅಮೆರಿಕದಿಂದ ಆರ್ಥಿಕ ನೆರವೂ ಲಭಿಸುತ್ತದೆ. ಅಮೆರಿಕದಲ್ಲಿ ನೆಲೆಸಿರುವ ಅತಿ ಶ್ರೀಮಂತ ಹಾಗೂ ಭಾರಿ ಒಗ್ಗಟ್ಟಿನ ಯಹೂದಿ ಸಮುದಾಯದ ಒತ್ತಡದಿಂದಾಗಿ ಅಲ್ಲಿಯ ಯಾವ ಅಧ್ಯಕ್ಷರೂ ಇಸ್ರೇಲ್‌ ಅನ್ನು ವಿರೋಧಿಸುವ ಸಾಹಸ ಮಾಡುವುದಿಲ್ಲ. ಪ್ಯಾಲೆಸ್ಟೀನಿಯನ್ನರದು ಒಂದು ರಾಷ್ಟ್ರವಿಲ್ಲದ, ಸ್ವರಕ್ಷಣೆಗೆ ಸೇನೆ ಕೂಡ ಇಲ್ಲದ ಸಮುದಾಯವಾಗಿದೆ.

ನೂರಕ್ಕೂ ಹೆಚ್ಚು ಬಾರಿ ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ವಿಶ್ವಸಂಸ್ಥೆಯು ಇಸ್ರೇಲ್‌ ವಿರುದ್ಧ ಖಂಡನಾ ನಿರ್ಣಯವನ್ನು ಅಂಗೀಕರಿಸಿದೆ. ಭಾರತವೂ ಸೇರಿ 138 ದೇಶಗಳು ಪ್ಯಾಲೆಸ್ಟೀನ್‌ಗೆ ಮನ್ನಣೆ ಕೊಟ್ಟಿದ್ದಷ್ಟೇ ಅಲ್ಲ, ಇಸ್ರೇಲ್ ಹಾಗೂ ಪ್ಯಾಲೆಸ್ಟೀನ್ ಶಾಂತಿಯುತವಾಗಿ, ಸುರಕ್ಷಿತವಾಗಿ ಇರಬೇಕೆಂದು ‘ದ್ವಿ-ರಾಷ್ಟ್ರ ಪರಿಹಾರ’ (Two-State Solution) ಸೂಚಿಸಿವೆ. ಆದರೆ ಇಸ್ರೇಲ್ ಮತ್ತು ಅಮೆರಿಕ ಇದನ್ನು ಒಪ್ಪುತ್ತಿಲ್ಲ.

ಪ್ಯಾಲೆಸ್ಟೀನಿಯನ್ನರ ರಾಷ್ಟ್ರೀಯ ಸ್ವಾತಂತ್ರ್ಯದ ಬೇಡಿಕೆಯನ್ನು ನ್ಯಾಯಯುತ ಎಂದು ಪರಿಗಣಿಸಿದ ಪ್ರಮುಖರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರೂ ಸೇರಿರುವುದು ಗಮನಾರ್ಹ. 1977ರಲ್ಲಿ ಜನತಾ ಪಾರ್ಟಿಯ ಮೊರಾರ್ಜಿ ದೇಸಾಯಿ ನೇತೃತ್ವದ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದಾಗಲೂ ಅವರದು ಇದೇ ಧೋರಣೆಯಾಗಿತ್ತು. ಆಗ ದೆಹಲಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅವರು ಈ ಕುರಿತು ಮಾಡಿದ ಭಾಷಣವನ್ನು ಯುಟ್ಯೂಬ್‌ನಲ್ಲಿ ಕೇಳಿದರೆ, ಅವರೆಷ್ಟು ನಿಸ್ಸಂದಿಗ್ಧವಾಗಿ, ನೈತಿಕಪೂರ್ಣವಾಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರು ಎಂಬುದು ಗೊತ್ತಾಗುತ್ತದೆ.

‘ನಾನು ಜನಸಂಘದವ, ಜನಸಂಘವು ಮುಸ್ಲಿಂ ವಿರೋಧಿ ಹಾಗೂ ಜನತಾ ಪಾರ್ಟಿಯ ಮೇಲೆ ಜನಸಂಘದ್ದೇ ಪ್ರಭಾವ, ಹೀಗಾಗಿ ಜನತಾ ಪಾರ್ಟಿ ನೇತೃತ್ವದ ಸರ್ಕಾರದ ಬೆಂಬಲವು ಕೇವಲ ಇಸ್ರೇಲಿಗೆ ವಿನಾ ಅರಬ್ಬರಿಗೆ ಅಲ್ಲ ಎಂಬ ಅಪಪ್ರಚಾರ ನಡೆದಿದೆ. ಅರಬ್‌ ಜನರಿಗೆ ಸೇರಿದ ಭೂಮಿಯನ್ನು ಇಸ್ರೇಲ್ ವಾಪಸ್ ಕೊಡಲೇಬೇಕು. ಪಶ್ಚಿಮ ಏಷ್ಯಾದಲ್ಲಿ ಸ್ಥಿರವಾದ ಶಾಂತಿ ಸ್ಥಾಪನೆಯಾಗಬೇಕು’.

ಇದೇ ಬಗೆಯ ಸಮದೃಷ್ಟಿಯ ನಿಲುವನ್ನು ಜನಸಂಘ- ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕರಾದ ಪಂಡಿತ್‌ ದೀನದಯಾಳ ಉಪಾಧ್ಯಾಯ ಅವರೂ ಪ್ರತಿಪಾದಿಸಿದ್ದರು. 1967ರ ಅರಬ್‌- ಇಸ್ರೇಲ್ ಯುದ್ಧದ ಸಮಯದಲ್ಲಿ ಅವರು, ‘ಕಾಂಗ್ರೆಸ್ ಪಕ್ಷ ಕುರುಡಾಗಿ ಅರಬ್ಬರ ಪರವಾಗಿದೆ ಎಂದಮಾತ್ರಕ್ಕೆ ಜನಸಂಘ ಕುರುಡಾಗಿ ಇಸ್ರೇಲ್‌ಗೆ ಬೆಂಬಲ ನೀಡಬಾರದು. ಪ್ರತಿಯೊಂದು ವಿಷಯವನ್ನೂ ಅದರ ಸತ್ಯಾಸತ್ಯತೆ ಮತ್ತು ಅರ್ಹತೆಯ ಆಧಾರದ ಮೇಲೆ ಪರೀಕ್ಷಿಸಬೇಕು’ ಎಂದಿದ್ದರು.

ಈ ಸಮಸ್ಯೆಯ ಬಗ್ಗೆ ಗಾಂಧೀಜಿಯವರ ವಿಚಾರವೂ ನೈತಿಕಪೂರ್ಣವಾಗಿತ್ತು. ‘ಹರಿಜನ’ ಪತ್ರಿಕೆಯಲ್ಲಿ ಬರೆದಿದ್ದ ಲೇಖನದಲ್ಲಿ ಅವರು, ‘ಬ್ರಿಟನ್ ಮತ್ತು ಅಮೆರಿಕದ ಸಹಾಯದಿಂದ ಪ್ಯಾಲೆಸ್ಟೀನಿಯನ್ನರ ಜಮೀನನ್ನು ಬಲವಂತವಾಗಿ ವಶಪಡಿಸಿಕೊಂಡು ಯಹೂದಿಯರು ದೊಡ್ಡ ತಪ್ಪು ಮಾಡುತ್ತಿದ್ದಾರೆ’ ಎಂದಿದ್ದರು.

ಈ ಮೂವರೂ ಪ್ರಮುಖರ ಮಾತುಗಳಿಗೆ ಈಗ ಅನೇಕ ದಶಕಗಳು ಸಂದಿವೆ. ಆನಂತರ ಆ ಪ್ರದೇಶದಲ್ಲಿ ಅನೇಕ ಯುದ್ಧಗಳೂ ಹಿಂಸಾತ್ಮಕ ಘಟನೆಗಳೂ ಸಂಧಾನಕ್ಕಾಗಿ ವಿಫಲ ಯತ್ನಗಳೂ ಆಗಿಹೋಗಿವೆ. ಆದರೆ ಈ ಸತ್ಯಕ್ಕೆ ಎರಡು ಮುಖಗಳಿವೆ ಎಂಬ ಮೂಲ ಮಾತು ಮಾತ್ರ ಬದಲಾಗಿಲ್ಲ. ‘ಇಸ್ರೇಲ್ ಅನ್ನು ನಾಶಗೊಳಿಸಬೇಕು’ ಎನ್ನುವ ಹಮಾಸ್ ಮತ್ತು ಅದಕ್ಕೆ ಬೆಂಬಲ ನೀಡುವ ಇರಾನ್‌ನಂತಹ ಮುಸ್ಲಿಂ ರಾಷ್ಟ್ರಗಳ ನಿಲುವು ನಿಂದನೀಯ. ಆದರೆ ‘ಸ್ವತಂತ್ರ ಪ್ಯಾಲೆಸ್ಟೀನ್ ರಾಷ್ಟ್ರ ಬೇಡ’ ಅನ್ನುವ ಯಹೂದಿಗಳ ಹಟಮಾರಿತನವೂ ನಿಂದನೀಯವೇ. ಈ ಎರಡೂ ಮುಖಗಳನ್ನು ಗುರುತಿಸಿ, ತಪ್ಪು ಒಪ್ಪಿಕೊಂಡು, ಎರಡೂ ಶಾಂತಿಯುತ ವಾತಾವರಣದಲ್ಲಿ ಜೊತೆಜೊತೆಯಾಗಿ ದ್ವಿ-ರಾಷ್ಟ್ರ ವ್ಯವಸ್ಥೆಯಲ್ಲಿ ಬಾಳುವ, ಬೆಳೆಯುವ ಅಗತ್ಯವನ್ನು ಮನಗಂಡಾಗಲೇ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯ. ಇದಕ್ಕಾಗಿ ಭಾರತ ಸೇರಿದಂತೆ ಅಂತರರಾಷ್ಟ್ರೀಯ ಸಮುದಾಯದ ಮುಖಂಡರು ಗಂಭೀರವಾಗಿ ಪ್ರಯತ್ನಿಸಬೇಕು. ಕೇವಲ ಬಲಪ್ರಯೋಗದಿಂದ ಮಾನವನ ಇತಿಹಾಸದಲ್ಲಿ ಯಾವ ಸಮಸ್ಯೆಯೂ ಬಗೆಹರಿದಿಲ್ಲ ಎಂಬುದನ್ನು ಎಲ್ಲರೂ- ವಿಶೇಷವಾಗಿ ‘ಇಸ್ರೇಲೇ ಭಾರತಕ್ಕೆ ಮಾದರಿ’ ಎಂದು ನಂಬಿರುವವರು ತಿಳಿದುಕೊಳ್ಳಬೇಕಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು