ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Political Analysis| ವೈರಿಯ ಅಪ್ಪುವ ರಾಜಕೀಯ ಲೆಕ್ಕಾಚಾರ

Last Updated 10 ನವೆಂಬರ್ 2021, 2:21 IST
ಅಕ್ಷರ ಗಾತ್ರ

ಮೈಸೂರು: ಶಾಸಕ ಜಿ.ಟಿ.ದೇವೇಗೌಡ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ನಡುವಿನ ರಾಜಕೀಯ ವೈರತ್ವ ಮರೆತು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಸೌಹಾರ್ದ ಪ್ರದರ್ಶಿಸಿರುವುದು ಮೈಸೂರು ಭಾಗದಲ್ಲಿ ಕುತೂಹಲ ಮೂಡಿಸಿದೆ. ಜೊತೆಗೆ, ಆ ಮೂಲಕ ಇಬ್ಬರೂ ಜೆಡಿಎಸ್‌ ಮತ್ತು ಕಾಂಗ್ರೆಸ್‌ಗೆ ನೀಡಿರುವ ಸಂದೇಶ ಏನು ಎಂಬ ಪ್ರಶ್ನೆಯನ್ನೂ ಎತ್ತಿದೆ.

2018ರ ಚುನಾವಣೆಯಲ್ಲಿ ಆಗಿರುವ ಗಾಯಗಳು ಆರದೇ ಇದ್ದರೂ, ವೇದಿಕೆ ಯನ್ನು ಹಂಚಿಕೊಂಡು ಸಂಭ್ರಮಿಸಿರುವುದು ಇಬ್ಬರ ರಾಜಕೀಯ ಜೀವನದಲ್ಲಿ ಆಶಾದಾಯಕ ಬೆಳವಣಿಗೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ, ತಮ್ಮ ತವರು ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಅತಿ ಹೆಚ್ಚಿನ ಸ್ಥಾನ ಗಳಿಸಿಕೊಳ್ಳಬೇಕಾದ ಜವಾಬ್ದಾರಿಯೂ ಸಿದ್ದರಾಮಯ್ಯ ಅವರಿಗಿದೆ. ಈ ಭಾಗದ ರಾಜಕಾರಣದಲ್ಲಿ ತಾವೊಬ್ಬ ಪ್ರಬಲ ನಾಯಕ ಎಂಬುದನ್ನು ಮತ್ತೆ ಸಾಬೀತುಪಡಿಸಲು ಹಾಗೂ ಮತ್ತೆ ಮುಖ್ಯಮಂತ್ರಿಯಾಗುವ ಅವಕಾಶವನ್ನು ಪಡೆಯಲು ಅದು ಅಗತ್ಯ ಕೂಡ. ‘ಅವರದ್ದು ದೊಡ್ಡ ಕನಸು. ಹೀಗಾಗಿ, ದೊಡ್ಡ ಪ್ರಯತ್ನ ಶುರುವಾಗಿದೆ. ಜಿ.ಟಿ.ದೇವೇಗೌಡರಂಥ ರಾಜಕೀಯ ವೈರಿಯೊಂದಿಗೆ ಕಾಣಿಸಿ ಕೊಂಡಿರುವುದು ಅದರ ಮೊದಲ ಭಾಗ’ ಎಂದೇ ಹೇಳಲಾಗುತ್ತಿದೆ.

ನಿರ್ಲಕ್ಷ್ಯದ ಕಾರಣಕ್ಕೆ ಜೆಡಿಎಸ್‌ನಿಂದ ಹೊರಕ್ಕೆ ಬರುವ ಇಂಗಿತ ವ್ಯಕ್ತಪಡಿಸಿರುವ ಜಿ.ಟಿ.ದೇವೇಗೌಡರಿಗಿಂತಲೂ ಮುಂಚೆಯೇ ಸಿದ್ದರಾಮಯ್ಯ ಆ ಪಕ್ಷದ ನಾಯಕರಿಂದ ನೋವುಂಡು ಹೊರಬಂದವರು. ಆ ನೋವು ಅವರಿಗೆ ಚೆನ್ನಾಗಿ ಗೊತ್ತು. ಹೀಗಾಗಿ, ಒಂದು ಕಾಲದ ಮಿತ್ರ ಮತ್ತು ಸದ್ಯ ರಾಜಕೀಯ ವೈರಿ ಜಿ.ಟಿ.ದೇವೇಗೌಡರನ್ನು ಅಪ್ಪುವ ಮೂಲಕ ಜೆಡಿಎಸ್‌ ವರಿಷ್ಠರ ಮೇಲಿನ ಸೇಡು ತೀರಿಸಿಕೊಂಡು, ಆ ಪಕ್ಷದ ಬಲವನ್ನು ಕುಗ್ಗಿಸುವ ಪ್ರಯತ್ನವನ್ನೂ ಮಾಡಬಹುದು. ಆ ಮೂಲಕವೇ ಕಾಂಗ್ರೆಸ್‌ ಪಕ್ಷವನ್ನು ಮತ್ತಷ್ಟು ಬಲಶಾಲಿಗೊಳಿಸಲೂಬಹುದು.

ಇನ್ನೊಂದೆಡೆ, ಈ ಅಪ್ಪುಗೆಯ ಮೂಲಕ, ‘ಅಹಿಂದ ರಾಜಕಾರಣಿ’ ಎಂಬ ತಮ್ಮ ಮೇಲಿನ ಆರೋಪಕ್ಕೆ ಉತ್ತರ ನೀಡುವಂತೆ, ಜಿ.ಟಿ.ದೇವೇಗೌಡರೊಂದಿಗೆ ಸೇರಿಕೊಂಡು ಒಕ್ಕಲಿಗ ಸಮುದಾಯವನ್ನು ಓಲೈಸುವ ಅವಕಾಶವೂ ಅವರಿಗೆ ತೆರೆದುಕೊಳ್ಳಲಿದೆ.

ಹೀಗಾಗಿ, ದೇವೇಗೌಡರೊಂದಿಗೆ ಸೌಹಾರ್ದ ರೂಪಿಸಿಕೊಳ್ಳುವುದರ ಜೊತೆಗೆ, ಅವರು ಪ್ರತಿನಿಧಿಸುವ ಸಮುದಾಯವನ್ನೂ ಒಳಗೊಳ್ಳುವಂಥ ಪ್ರಯತ್ನಗಳು ನಡೆಯಬೇಕು. ಇದು ಏಕಕಾಲಕ್ಕೆ ಅವಕಾಶ ಮತ್ತು ಸವಾಲು. ಹೀಗಾಗಿಯೇ ‘ಜೆಡಿಎಸ್‌ ಜೊತೆಗಿದ್ದರೆ ಅಧಿಕಾರ ಸಿಗುವುದಿಲ್ಲ. ಕಾಂಗ್ರೆಸ್‌ ಸೇರಿದರಷ್ಟೇ ಅಧಿಕಾರ’ ಎಂಬ ಪರೋಕ್ಷ ಸಂದೇಶವನ್ನೂ ಸಿದ್ದರಾಮಯ್ಯ ಮಂಗಳವಾರ ನೀಡಿದ್ದಾರೆ. ಆ ಪ್ರಯತ್ನದ ಭಾಗವಾಗಿಯೇ ಅವರು ಜಿ.ಟಿ.ದೇವೇಗೌಡರೊಂದಿಗೆ ಕಾಣಿಸಿಕೊಂ ಡಿದ್ದಾರೆ ಎಂಬ ಚರ್ಚೆಯೂ ನಡೆದಿದೆ.

ಜಿ.ಟಿ.ದೇವೇಗೌಡರು ಜೆಡಿಎಸ್‌ ತೊರೆದ ಬಳಿಕ ಬಿಜೆಪಿ ಸೇರಿ ಒಮ್ಮೆ ಸೋತಿದ್ದರು. ನಂತರ ಮತ್ತೆ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರೂ ಎರಡೂವರೆ ವರ್ಷದಿಂದ ಪಕ್ಷದ ವರಿಷ್ಠರೊಂದಿಗೆ ಅವರ ಸಂಬಂಧ ಹಳಸಿದೆ. ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರತ್ತಲೂ ಅವರು ಗಮನ ಹರಿಸಿಲ್ಲ. ಪಕ್ಷ ಸಂಘಟನೆಯನ್ನು ಬಹುತೇಕ ಮರೆತಂತಾಗಿದೆ. ’ಜೆಡಿಎಸ್‌ ನಲ್ಲೇ ಉಳಿದರೆ ಮತ್ತೆ ಒಳ್ಳೆಯ ದಿನಗಳು ಬರಲಾರವು’ ಎಂಬ ಪರಿಸ್ಥಿತಿಯಲ್ಲಿ, ಅವರು ಕಾಂಗ್ರೆಸ್‌ ಸೇರುವುದು ಅನಿವಾರ್ಯ ಎಂಬಂತಾಗಿದೆ.

‘ರಾಜಕೀಯ ಮುನ್ನೋಟವನ್ನು ಕಾಣಬಲ್ಲ ಚಾಣಕ್ಯನಾಗಿರುವ ಅವರು ತಮ್ಮ ಭವಿಷ್ಯದ ಜೊತೆಗೆ, ಮಗ ಹರೀಶ್‌ ಗೌಡರ ಭವಿಷ್ಯದ ಬಗ್ಗೆಯೂ ಯೋಚಿಸಿಯೇ ಕಾಂಗ್ರೆಸ್‌ ಕಡೆಗೆ ಹೆಜ್ಜೆ ಇಟ್ಟಿದ್ದಾರೆ’ ಎಂಬುದು ಕ್ಷೇತ್ರದ ವಿಸ್ತಾರವನ್ನು ಬಲ್ಲವರ ಅನಿಸಿಕೆ.

ಚಾಮುಂಡೇಶ್ವರಿ ಕ್ಷೇತ್ರ ಈಗ ಮೊದಲಿನಂತಿಲ್ಲ. ಗ್ರಾಮೀಣ ಮತದಾರರೊಂದಿಗೆ ನಗರ ಪ್ರದೇಶದ ಮತದಾರರೂ ಸೇರ್ಪಡೆಗೊಂಡಿರು ವುದರಿಂದ, ಒಕ್ಕಲಿಗ ಸಮುದಾಯದ ಜೊತೆಗೆ ವಿವಿಧ ಸಮುದಾಯಗಳನ್ನೂ ಓಲೈಸದಿದ್ದರೆ ಚುನಾವಣೆಯನ್ನು ಎದುರಿಸಿ ಗೆಲ್ಲುವುದು ಕಷ್ಟ ಸಾಧ್ಯ ಎಂಬ ಅರಿವಿನಲ್ಲೇ ಅವರು ಜಾಣ ಹೆಜ್ಜೆಗಳನ್ನಿಡುತ್ತಿದ್ದಾರೆ. ಇಬ್ಬರು ನಾಯಕರ ಈ ನಡೆಯು ಎರಡೂ ಪಕ್ಷಗಳಲ್ಲಿ ತರಬಲ್ಲ ಬದಲಾವಣೆಗಳತ್ತ ಎಲ್ಲರ ಕಣ್ಣು ನೆಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT