ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರದ ಕೇಂದ್ರೀಕರಣ ಭಾರತದ ಪ್ರಗತಿಗೆ ಪೂರಕವಲ್ಲ

ಜನರ ಹಿತ, ಪ್ರಾದೇಶಿಕ ಅಸ್ಮಿತೆಯನ್ನು ಕಾಯಲು ಸಾಧ್ಯವಿರುವುದು ಪ್ರಾದೇಶಿಕ ಪಕ್ಷಗಳಿಗೋ ರಾಷ್ಟ್ರೀಯ ಪಕ್ಷಗಳಿಗೋ?
Last Updated 7 ಮೇ 2021, 20:30 IST
ಅಕ್ಷರ ಗಾತ್ರ

ದೇಶ ಮತ್ತು ಪ್ರದೇಶ ಇವುಗಳ ನಡುವೆ ಕೇವಲ ಒಂದೇ ಅಕ್ಷರದ ಅಂತರವಿದೆ. ಪ್ರದೇಶಗಳಿಲ್ಲದೆ (ಅಂದರೆ ರಾಜ್ಯ) ದೇಶವಿಲ್ಲ. ದೇಶದ ಐಕ್ಯತೆ ಮತ್ತು ಸಂರಕ್ಷಣೆಗಳಿಲ್ಲದೆ ಪ್ರದೇಶಗಳಿಗೆ ಪ್ರತ್ಯೇಕ ಅಸ್ತಿತ್ವವೂ ಇಲ್ಲ, ಭೂತ ಭವಿಷ್ಯಗಳೂ ಇಲ್ಲ. ನಮ್ಮ ಸಂವಿಧಾನದ ಮೊದಲ ಕಲಮಿನಲ್ಲಿಯೇ ಹೇಳಿರುವುದೇನೆಂದರೆ ‘ಭಾರತವು ರಾಜ್ಯಗಳ ಒಕ್ಕೂಟವಾಗಿದೆ’. ಭಾರತದ ಐತಿಹಾಸಿಕ ವೈವಿಧ್ಯ ಮತ್ತು ಬಹುತ್ವಗಳನ್ನು ಸರಿಯಾಗಿ ಗುರುತಿಸಿ ದೇಶ ಮತ್ತು ಪ್ರದೇಶಗಳ ಸಂಬಂಧ ಅವಿಭಾಜ್ಯವಾಗಿರಬೇಕು ಎಂಬುದು ನಮ್ಮ ಸಂವಿಧಾನದ ಅಡಿಪಾಯ.

ಆದರೆ, ಕಾಂಗ್ರೆಸ್‌ ಸಂಘಟನೆಯೇ ಸ್ವಾತಂತ್ರ್ಯ ಚಳವಳಿಯ ಮುಂಚೂಣಿಯಲ್ಲಿ ಇದ್ದ ಕಾರಣದಿಂದಾಗಿ 1947ರ ನಂತರ ದೇಶ ಮತ್ತು ಪ್ರದೇಶಗಳಲ್ಲಿ ಆ ಪಕ್ಷದ ಪ್ರಭುತ್ವ ಸ್ಥಾಪನೆಯಾಯಿತು. 1967ರ ಸಾರ್ವತ್ರಿಕ ಚುನಾವಣೆಯಲ್ಲಿ ಈ ಏಕಪಕ್ಷೀಯ ರಾಜಕೀಯ–ಆಡಳಿತ ಪ್ರಭುತ್ವಕ್ಕೆ ಸವಾಲು ಹುಟ್ಟಿಕೊಂಡಿತು. ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ಸೇತರ ಸರ್ಕಾರಗಳು ಪ್ರಜಾಪ್ರಭುತ್ವ ಮಾರ್ಗದಿಂದ ಆಯ್ಕೆಗೊಂಡವು. ಆ ನಂತರ ಹಲವು ದಶಕಗಳವರೆಗೆ ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದರೂ ಅನೇಕ ರಾಜ್ಯಗಳಲ್ಲಿ ಅದು ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತಾ ಹೋಯಿತು. ಆದರೆ, ಪ್ರದೇಶದಲ್ಲಿ ಜನಬೆಂಬಲ ಕಳೆದುಕೊಂಡರೆ ದೇಶದಲ್ಲಿ ಅದು ಅಧಿಕಾರದಲ್ಲಿ ಉಳಿದೀತೇ? ಒಂದು ಕಡೆಗೆ ಪ್ರಾದೇಶಿಕ ಪಕ್ಷಗಳು ಹುಟ್ಟಿ ಬೆಳೆದು ಕಾಂಗ್ರೆಸ್‌ಗೆ ಸವಾಲು ಹಾಕಿದರೆ, ಮತ್ತೊಂದು ಕಡೆಗೆ ಭಾರತೀಯ ಜನತಾ ಪಕ್ಷವು ರಾಷ್ಟ್ರೀಯ ಪಕ್ಷವಾಗಿ ತನ್ನ ಪ್ರಭಾವ ವಲಯವನ್ನು ವಿಶಾಲಗೊಳಿಸಿತು.

1990ರ ದಶಕದಲ್ಲಿ ಅಲ್ಪ ಕಾಲದವರೆಗೆ ಪ್ರಾದೇಶಿಕ ಪಕ್ಷಗಳೇ ಕೇಂದ್ರದಲ್ಲಿ ಸರ್ಕಾರ ಸ್ಥಾಪಿಸಿದರೂ ಆ ಪ್ರಯೋಗ ವಿಫಲವಾಯಿತು. ಈ ವೈಫಲ್ಯದಿಂದಾಗಿ ಬಿಜೆಪಿಗೆ ಬೆಳೆಯಲು ಇನ್ನೂ ಹೆಚ್ಚು ಆಸ್ಪದ ದೊರೆಯಿತು. ಕಾಂಗ್ರೆಸ್‌ ಮತ್ತು ಬಿಜೆಪಿ ಕೆಲವು ಕಾಲ ಭಾರತದ ಕೇಂದ್ರೀಯ ರಾಜಕಾರಣದಲ್ಲಿ ಎರಡು ಪ್ರಮುಖ ಧ್ರುವಗಳಾಗಿ ಕಂಡು ಬಂದರೂ 2014ರ ಲೋಕಸಭೆ ಚುನಾವಣೆಯ ನಂತರ, ಈ ದ್ವಿ–ಧ್ರುವೀಯ ವಾಸ್ತವವು ಏಕ–ಧ್ರುವೀಯವಾಗಿ ಬದಲಾವಣೆಗೊಂಡಿತು. ಈ ಪರಿವರ್ತನೆಯ ಶ್ರೇಯ ನರೇಂದ್ರ ಮೋದಿಯವರಿಗೇ ಹೋಗಬೇಕು.

ಆದರೆ, ಈಗ ಮತ್ತೊಮ್ಮೆ ಇತಿಹಾಸ ಚಕ್ರ ಬೇರೆ ದಿಕ್ಕಿನಲ್ಲಿ ತಿರುಗುತ್ತಿರುವ ಲಕ್ಷಣಗಳು ಕಂಡು ಬರುತ್ತಿವೆ. ಮೋದಿಯವರ ನೇತೃತ್ವದಲ್ಲಿ ಹಾಗೂ ಅಮಿತ್‌ ಶಾ ಅವರ ಸಂಘಟನಾತ್ಮಕ ಮುಂದಾಳುತ್ವದಲ್ಲಿ ಕೇಂದ್ರ ಮತ್ತು ಬಹುತೇಕ ಪ್ರದೇಶಗಳಲ್ಲಿ ತನ್ನದೇ ಆದ ಪ್ರಭುತ್ವ ಸ್ಥಾಪಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ‘ಕಾಂಗ್ರೆಸ್‌ಮುಕ್ತ ಭಾರತ’– ಈ ಘೋಷಣೆಯೊಂದಿಗೆ ಕಾಂಗ್ರೆಸ್‌ ಪಕ್ಷವನ್ನು ತೀರಾ ದುರ್ಬಲಗೊಳಿಸುವುದರಲ್ಲಿ ತಾತ್ಪೂರ್ತಿಕವಾಗಿಯಾದರೂ ಬಿಜೆಪಿಗೆ ಸಾಕಷ್ಟು ಯಶಸ್ಸು ಸಿಕ್ಕಿದೆ. ಇದಕ್ಕೆ ‘ಆಪರೇಷನ್‌ ಕಮಲ’ದಂತಹ ಅನೈತಿಕ ಮತ್ತು ಕುತಂತ್ರಕಾರಿ ಮಾರ್ಗವನ್ನು ಬಿಜೆಪಿ ಅನುಸರಿಸಿದ್ದು ಎಷ್ಟು ಕಾರಣವೋ, ಕಾಂಗ್ರೆಸ್‌ ಪಕ್ಷದಲ್ಲಿ ನಿರಂತರವಾಗಿ ಇರುವ ನೇತೃತ್ವ ಸಂಕಟವೂ ಅಷ್ಟೇ ಕಾರಣ.

ಕಾಂಗ್ರೆಸ್‌ ಪಕ್ಷವೆಂಬ ಬಲಾಢ್ಯ ಮಹಾಮರವನ್ನು ಕಡಿದು ಹಾಕುವಲ್ಲಿ ನಮಗೆ ಯಶ ಸಿಕ್ಕಿರುವಾಗ ಈ ಪ್ರಾದೇಶಿಕ ಪಕ್ಷಗಳು ಯಾವ ಮೂಲೆಯ ಕಸಗಳು ಎಂಬ ದರ್ಪ ಬಿಜೆಪಿಯಲ್ಲಿ ಬೆಳೆಯಿತು. ಯಾವ ಪ್ರಾದೇಶಿಕ ಪಕ್ಷಗಳು ತನ್ನ ಮಾತನ್ನು ಕೇಳುತ್ತವೆಯೋ (ಒಡಿಶಾದಲ್ಲಿ ಬಿಜೆಡಿ, ತಮಿಳುನಾಡಿನಲ್ಲಿ ಜಯಲಲಿತಾ ನಂತರದ ಎಐಎಡಿಎಂಕೆ) ಅವುಗಳಿಗೆ ಸಂರಕ್ಷಣೆ ನೀಡುವುದು; ಅವಕಾಶ ಇದ್ದಲ್ಲಿ ಜಾರಿ ನಿರ್ದೇಶನಾಲಯ, ಸಿಬಿಐ ಮುಂತಾದ ಸಂಸ್ಥೆಗಳ ದುರುಪಯೋಗದಿಂದ ಹೆದರಿಸಿ, ಬಾಗಿಸಿ ಪ್ರಾದೇಶಿಕ ಪಕ್ಷಗಳನ್ನು ಹತೋಟಿಯಲ್ಲಿಡುವುದು (ಉತ್ತರ ಪ್ರದೇಶದಲ್ಲಿ ಮಾಯಾವತಿ, ಆಂಧ್ರ ಪ್ರದೇಶದಲ್ಲಿ ಜಗನ್‌ ರೆಡ್ಡಿ, ತೆಲಂಗಾಣದಲ್ಲಿ ಕೆ.ಚಂದ್ರಶೇಖರ ರಾವ್‌)– ಇಂಥ ರಣನೀತಿಯನ್ನು ಬಿಜೆಪಿ ಅನುಸರಿಸಿತು.

ಇಷ್ಟಾದರೂ ಉಳಿದೆಲ್ಲ ಪ್ರಾದೇಶಿಕ ಪಕ್ಷಗಳನ್ನು ಸೋಲಿಸುವುದಕ್ಕಾಗಲಿ, ಹೆದರಿಸಿ ಬೆದರಿಸಿ ತನ್ನ ನಿಯಂತ್ರಣಕ್ಕೆ ತರುವುದಕ್ಕಾಗಲಿ ಬಿಜೆಪಿಗೆ ಸಾಧ್ಯವಾಗಿಲ್ಲ. ಇದಕ್ಕೆ ಉದಾಹರಣೆಗಳೆಂದರೆ, ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಅವರ ಶಿವಸೇನಾ, ತಮಿಳುನಾಡಿನಲ್ಲಿ ಡಿಎಂಕೆ, ಕೇರಳದಲ್ಲಿ ಸಿಪಿಎಂ ಹಾಗೂ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌.

ಪ್ರಾದೇಶಿಕ ಪಕ್ಷಗಳನ್ನು ಹತ್ತಿಕ್ಕುವ ಬಿಜೆಪಿಯ ಪ್ರಯತ್ನಗಳುಕಳೆದ ತಿಂಗಳು ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಗಳಿಗೆ ನಡೆದ ಚುನಾವಣೆಯ ಫಲಿತಾಂಶದ ನಂತರ ಇನ್ನೂ ಕಷ್ಟಕರವಾಗಲಿವೆ. ಅಸ್ಸಾಂ ಮತ್ತು ಪುಟ್ಟ ಪುದುಚೇರಿ ಬಿಟ್ಟರೆ ಉಳಿದ ಮೂರು ರಾಜ್ಯಗಳಲ್ಲಿ (ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ) ಬಿಜೆಪಿ ಭಾರಿ ಸೋಲುಣ್ಣಬೇಕಾಯಿತು. ಬಂಗಾಳದಲ್ಲಿಯಂತೂ ಇನ್ನೇನು ತನ್ನ ಸರ್ಕಾರವೇ ಬರಲಿದೆ ಎಂಬ ಅತಿ ವಿಶ್ವಾಸದಿಂದ ‘ಮೋದಿ ವಿರುದ್ಧ ಮಮತಾ’ ಎಂಬಂತೆ ಬಿಜೆಪಿ ಕಾಳಗ ನಡೆಸಿತು. ಬಿಜೆಪಿಯ ಹಿಂದೂ–ಮುಸ್ಲಿಂ ವಿಭಜನಕಾರಿ ರಾಜಕಾರಣ ಪರಮಾವಧಿಗೆ ಮುಟ್ಟಿತು. ಚುನಾವಣಾ ಆಯೋಗವನ್ನು ದುರುಪಯೋಗಪಡಿಸಲಾಯಿತು. ಹೀಗಾಗಿಯೂ ಮಮತಾ ಹೆಚ್ಚಿನ ಬಹುಮತದೊಂದಿಗೆ ಆರಿಸಿ ಬಂದರು.ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿಗೆ ಹಿನ್ನಡೆ ಆಗಿದ್ದರಿಂದ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ ಅವರ ಸರ್ಕಾರ ಹೋಗುವ ಸಾಧ್ಯತೆಗಳು ದಟ್ಟವಾಗಿವೆ.

ಇವೆಲ್ಲದರ ಅರ್ಥವೆಂದರೆ, ಕೇಂದ್ರದಲ್ಲಿಯೂ ಪ್ರದೇಶದಲ್ಲಿಯೂ ತಾನೇ ಸರ್ವಸ್ವವಾಗಿ ಆಡಳಿತ ನಡೆಸಬೇಕು ಮತ್ತು ಈ ರಾಜಕೀಯ ಶಕ್ತಿಯನ್ನುಪಯೋಗಿಸಿ ದೇಶದ ಸಂವಿಧಾನವನ್ನೇ ಬದಲಿಸಿ ಭಾರತವನ್ನು ‘ಹಿಂದೂ ರಾಷ್ಟ್ರ’ವಾಗಿ ಘೋಷಿಸುವ ಬಿಜೆಪಿಯ ದೂರದೃಷ್ಟಿಪರ ಯೋಜನೆಗೆ ಹೊಡೆತ ಬಿದ್ದಿದೆ. ಇದೇ ಸಂದರ್ಭದಲ್ಲಿ ಕೋವಿಡ್‌ ಸಾಂಕ್ರಾಮಿಕ ರೋಗದ ಎರಡನೇ ಅಲೆಯನ್ನು ಎದುರಿಸುವಲ್ಲಿ ಮೋದಿ ಸರ್ಕಾರ ಪೂರ್ತಿಯಾಗಿ ವಿಫಲವಾಗಿರುವುದರಿಂದ ಪ್ರಧಾನಿಯವರ ಜನಪ್ರಿಯತೆ ಕುಗ್ಗುತ್ತಿದೆ. ಕೋವಿಡ್‌ ವೈಫಲ್ಯದ ಜತೆಗೆ ತೀವ್ರಗೊಳ್ಳುತ್ತಿರುವ ಆರ್ಥಿಕ ಸಂಕಟವನ್ನು, ಬೆಲೆ ಏರಿಕೆಯನ್ನು ಹಾಗೂ ನಿರುದ್ಯೋಗವನ್ನು ಹಿಂದಕ್ಕೆ ಹಾಕುವಲ್ಲಿಯೂ ಮೋದಿ ಸರ್ಕಾರ ವಿಫಲಗೊಳ್ಳುತ್ತಿರುವುದು ಕಾಣುತ್ತಿದೆ. ಹೀಗಾಗಿ 2024ಕ್ಕೆ ಮೊದಲು ಮತ್ತು ನಂತರ ದೇಶದ ರಾಜಕಾರಣದಲ್ಲಿ ಭಾರಿ ಬದಲಾವಣೆಗಳಾಗಲಿವೆ.

ಈ ಬದಲಾವಣೆಗಳ ಒಂದು ಮಹತ್ವದ ಸ್ವರೂಪವೆಂದರೆ ಮುಂಬರುವ ವರ್ಷಗಳಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಹೆಚ್ಚಾಗಲಿದೆ. ಮೋದಿಯವರ ಕಳೆದ ಏಳು ವರ್ಷಗಳ ಆಳ್ವಿಕೆಯಲ್ಲಿ ಕೇಂದ್ರ–ರಾಜ್ಯ ಸಂಬಂಧಗಳು ಎಷ್ಟು ಹದಗೆಟ್ಟಿವೆಯೆಂದರೆ, ಸ್ವತಂತ್ರ ಭಾರತದ ಇತಿಹಾಸದಲ್ಲಿ ಎಂದೂ ಇಷ್ಟು ಹದಗೆಟ್ಟಿರಲಿಲ್ಲ. ಪ್ರಧಾನಿಯವರು ಯಾವುದೇ ಮುಖ್ಯಮಂತ್ರಿಗೆ (ತಮ್ಮದೇ ಪಕ್ಷದ ಮುಖ್ಯಮಂತ್ರಿಗಳಿಗೆ ಕೂಡ) ಮಾನ–ಮಹತ್ವ ಕೊಡುವುದಿಲ್ಲ. ಸರ್ಕಾರದ ಎಲ್ಲ ಯೋಜನೆಗಳಲ್ಲಿಯೂ ಅವರೊಬ್ಬರದೇ ಹೆಸರು, ಅವರೊಬ್ಬರಿಗೇ ಪ್ರಚಾರ. ಭಾರತವನ್ನು ಪರೋಕ್ಷವಾಗಿ ಪುಟಿನ್‌ ಅವರು ರಷ್ಯಾದಲ್ಲಿ ತಂದಂತಹ ಅಧ್ಯಕ್ಷೀಯ ವ್ಯವಸ್ಥೆಯ ಕಡೆಗೆ ಒಯ್ಯುವ ಪ್ರಯತ್ನವನ್ನು ಮೋದಿಯವರು ಮಾಡುತ್ತಿದ್ದಾರೆ. ಇದರಿಂದಾಗಿ, ಮೊದಲು ಹೇಳಿದಂತೆ ‘ಭಾರತ ದೇಶ–ಪ್ರದೇಶಗಳ ಒಕ್ಕೂಟ’ ಎಂಬ ಸಂವಿಧಾನದ ಆದೇಶವನ್ನೇ ಅವರು ಉಲ್ಲಂಘಿಸುತ್ತಿದ್ದಾರೆ.

ಆದರೆ, ಭಾರತದಲ್ಲಿ ಪ್ರಜಾಪ್ರಭುತ್ವ ಇನ್ನೂ ಜೀವಂತವಾಗಿರುವುದರಿಂದ ಮೋದಿಯವರ ಈ ಸರ್ವಾಧಿಕಾರದ ಕುತಂತ್ರಕ್ಕೆ ಜನರು ‘ಇದನ್ನು ನಾವು ಮಾಡಗೊಡುವುದಿಲ್ಲ’ ಎಂದು ದಿಟ್ಟವಾಗಿ ಹೇಳುತ್ತಿ ದ್ದಾರೆ. ಇನ್ನೂ ಜೋರಾಗಿ ಇನ್ನು ಮುಂದೆ ಹೇಳಲಿದ್ದಾರೆ. ಈ ದನಿಗಳನ್ನು ಎತ್ತುವುದರಲ್ಲಿ ಪ್ರಾದೇಶಿಕ ಪಕ್ಷಗಳ ಕಾರ್ಯ ಹೆಚ್ಚಾಗಲಿದೆ. ಕಾಂಗ್ರೆಸ್ ಪ್ರಾದೇಶಿಕ ಪಕ್ಷವಲ್ಲ, ಆದರೆ ಅತ್ಯಂತ ಕ್ಷೀಣಗೊಂಡ ರಾಷ್ಟ್ರೀಯ ಪಕ್ಷವಾಗಿ ಉಳಿದಿದೆ. ಅದು ಕೂಡ ಚೇತರಿಸಿಕೊಂಡು, ಪುನರುಜ್ಜೀವಿತಗೊಂಡರೆ ಮುಂಬರುವ ವರ್ಷಗಳಲ್ಲಿ ಭಾರತದ ಪ್ರಜಾಪ್ರಭುತ್ವ ಉಳಿಯಲು, ಸಂವಿಧಾನದ ಆಶಯಗಳು ಸುರಕ್ಷಿತವಾಗಿರಲು ಹಾಗೂ ದೇಶ–ಪ್ರದೇಶಗಳ ಸಂತುಲಿತ ಪ್ರಗತಿಯಾಗಲು ಸಾಧ್ಯವಾಗುತ್ತದೆ.

(ಲೇಖಕ: ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT