ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ: ಕೃಷಿಕರಿಗೇಕೆ ಹೆಣ್ಣು ಸಿಗುತ್ತಿಲ್ಲ?

ಗಂಡುಮಕ್ಕಳು ತಮ್ಮ ವೃತ್ತಿ ಆಯ್ಕೆಗಳೇನೇ ಇದ್ದರೂ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತೆರೆದುಕೊಳ್ಳುವುದು ಸೂಕ್ತ
Published : 8 ಮೇ 2023, 19:30 IST
Last Updated : 8 ಮೇ 2023, 19:30 IST
ಫಾಲೋ ಮಾಡಿ
Comments

ಒಂದು ಕಾಲದಲ್ಲಿ ‘ಕೆಟ್ಟು ಪಟ್ಟಣ ಸೇರು’ ಎನ್ನುವ ನಾಣ್ನುಡಿ ಪ್ರಚಲಿತವಾಗಿತ್ತು. ಆಗ, ಪಟ್ಟಣಕ್ಕೆ ಹೋಗಿ ನೆಲೆ ಹುಡುಕುವವರ ಬಗ್ಗೆ ಹಳ್ಳಿಯಲ್ಲಿ ಬದುಕು ಕಟ್ಟಿಕೊಳ್ಳಲು ವಿಫಲರಾದವರು ಎನ್ನುವ ತಿರಸ್ಕಾರವಿತ್ತು. ಆದ್ದರಿಂದ, ದೂರದ ಪಟ್ಟಣವಾಸಿಗಳಿಗೆ ಹೆಣ್ಣು ಕೊಡಲು ಹಳ್ಳಿಯವರು ಹಿಂದೆ ಮುಂದೆ ನೋಡುತ್ತಿದ್ದರು. ಹಳ್ಳಿಯಲ್ಲಾದರೆ, ನೆಮ್ಮದಿಯ ವ್ಯವಸ್ಥಿತ ಬಾಳ್ವೆಗೆ ಏನೂ ಕೊರತೆಯಿಲ್ಲ, ಪಟ್ಟಣವೆಂದರೆ, ಬೇರು ಕಿತ್ತಂತಹ ಅಸ್ಥಿರ ಬದುಕು ಎನ್ನುವ ಮನಃಸ್ಥಿತಿಯಿತ್ತು. ಆದರೆ, ಇಂದು ಪರಿಸ್ಥಿತಿ ಸಂಪೂರ್ಣ ತದ್ವಿರುದ್ಧವಾಗಿದೆ.

ಪಟ್ಟಣವೆಂದರೆ ಸುಸ್ಥಿರ ಬದುಕು ನೀಡುವ ಮತ್ತು ಹಳ್ಳಿಗಳೆಂದರೆ ಮೂಲಭೂತ ವ್ಯವಸ್ಥೆಗಳಿಲ್ಲದ ತಾಣಗಳೆನ್ನುವ ಜನಾಭಿಪ್ರಾಯವಿದೆ. ಒಟ್ಟಿನಲ್ಲಿ, ಹಳ್ಳಿಗಳನ್ನು ಅನಕ್ಷರತೆ, ಅಜ್ಞಾನ, ಬಡತನ, ನಿರುದ್ಯೋಗ ಮತ್ತು ಅಸಮಾನತೆಯಂತಹ ಗಂಭೀರ ಸಮಸ್ಯೆಗಳನ್ನು ಒಳಗೊಂಡ ಅಸ್ಥಿರ ಬದುಕು ನೀಡುವ ಪ್ರದೇಶವೆಂದು ಗುರುತಿಸುತ್ತೇವೆ. ಹಳ್ಳಿಗಳಿಂದ ಪಟ್ಟಣಗಳಿಗೆ ನಾನಾ ಕಾರಣಗಳಿಂದ ವಲಸೆ ಹೆಚ್ಚಾಗಿರುವುದರಿಂದ, ಮಹಿಳೆಯರು, ದುರ್ಬಲ ಜಾತಿ ಮತ್ತು ವರ್ಗಗಳ ಜನಸಾಮಾನ್ಯರ ಪರಿಸ್ಥಿತಿ ಕೊಂಚ ಸುಧಾರಿಸಿರುವುದೇನೊ ನಿಜ. ಆದರೆ, ಖಾಲಿ ಹೊಡೆಯುತ್ತಿರುವ ಹಳ್ಳಿಗಳು ಇನ್ನಷ್ಟು ಅಧೋಮುಖ ಕಾಣದಂತೆ ತಡೆಯುವುದು ಹೇಗೆ?

ಇಂದು ಹಳ್ಳಿಗಳು ಎದುರಿಸುತ್ತಿರುವ ನಾನಾ ಸಮಸ್ಯೆಗಳ ನಡುವೆ ನಡೆಯುತ್ತಿರುವ ವಿಸ್ಮಯದ ವಿದ್ಯಮಾನವೆಂದರೆ, ಜನನಿಬಿಡ ನಗರಗಳಲ್ಲಿ ವಾಸವಾಗಿರುವ ಉದ್ಯೋಗಸ್ಥರು, ತಮ್ಮ ಬಿಡುವಿನ ವೇಳೆಯನ್ನು ಮತ್ತು ವಾರಾಂತ್ಯಗಳನ್ನು ಹಳ್ಳಿಗಳಲ್ಲಿ ಕಳೆಯಲು ಇಷ್ಟಪಡುವುದು. ಪಟ್ಟಣದವರ ಈ ತಾತ್ಕಾಲಿಕ ಖಯಾಲಿಗಳನ್ನು ಪೂರೈಸಲು ಹಳ್ಳಿಗಳಲ್ಲಿ ಹೋಮ್ ಸ್ಟೇಗಳು ಹೆಚ್ಚಾಗುತ್ತಿದ್ದು, ಇದೊಂದು ಲಾಭದಾಯಕ ವ್ಯವಹಾರವಾಗಿ ಪರಿವರ್ತನೆಯಾಗಿದೆ. ಗಾಂಧಿ, ದೇಶದ ಹಳ್ಳಿಗಳು ಸ್ವಾವಲಂಬನೆ ಸಾಧಿಸಿ, ದೇಶದ ಆರ್ಥಿಕತೆಯ ಕೇಂದ್ರಬಿಂದುವಾಗಬೇಕೆಂದು ಆಶಿಸಿದ್ದರು. ಈ ದಿಸೆಯಲ್ಲಿ, ಇಂದು ನಗರವಾಸಿಗಳು ತಮ್ಮ ಸ್ಪರ್ಧಾತ್ಮಕ ಜಂಜಾಟಗಳ ನಡುವೆ ನೆಮ್ಮದಿಯನ್ನು ಅರಸಿಕೊಂಡು ಹಳ್ಳಿಗಳಿಗೆ ಭೇಟಿ ನೀಡುತ್ತಿರುವುದು ಒಂದು ಉತ್ತಮ ಬೆಳವಣಿಗೆ ಎನ್ನಬಹುದು. ಆದರೆ, ವಿಷಾದದ ಸಂಗತಿಯೆಂದರೆ ನಗರವಾಸಿಗಳ ಆತಿಥ್ಯ, ವಸತಿ, ಮತ್ತು ಮನರಂಜನೆಯನ್ನು ನಿರ್ವಹಿಸಿ ದುಡ್ಡು ಮಾಡುತ್ತಿರುವವರು ಪಟ್ಟಣವಾಸಿಗಳೇ ವಿನಾ ಸ್ಥಳೀಯರಲ್ಲ.

ಇವುಗಳ ನಡುವೆ ಹಳ್ಳಿಯಲ್ಲಿ ಬದುಕು ಕಟ್ಟಿಕೊಳ್ಳಬೇಕೆಂದು ನಗರವಾಸಿ ಯುವಕರು ತಮ್ಮ ಉತ್ತಮ ಸಂಪಾದನೆಯ ಉದ್ಯೋಗಗಳನ್ನು ತ್ಯಜಿಸಿ ಹಳ್ಳಿಗಳಲ್ಲಿ ಪ್ರಯೋಗಾತ್ಮಕ ಕೃಷಿ, ತೋಟಗಾರಿಕೆ ಮತ್ತು ಪೂರಕ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಸಾಹಸಕ್ಕೆ ಮುಂದಾಗುತ್ತಿರುವುದು ಹೆಚ್ಚಾಗುತ್ತಿದೆ. ಇದರ ನಡುವೆ ಇಂದು ಹಳ್ಳಿಯಲ್ಲಿ ನೆಲೆ ನಿಂತಿರುವ ಗಂಡು ಮಕ್ಕಳು ಎದುರಿಸುತ್ತಿರುವ ಬಹು ದೊಡ್ಡ ಸಮಸ್ಯೆಯೆಂದರೆ, ಮದುವೆಗೆ ಹೆಣ್ಣು ಸಿಗದಿರುವುದು. ಈ ಸಮಸ್ಯೆ ದಿನದಿಂದ ದಿನಕ್ಕೆ ಬೃಹದಾಕಾರವಾಗಿ ಬೆಳೆಯುತ್ತಿದೆ. ಹಳ್ಳಿಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ, ಈ ಸಮಸ್ಯೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ. ಇದೊಂದು ಸಮಾಜದಲ್ಲಿ ಆಗಬೇಕಾದ ಮಾನಸಿಕ ಪರಿವರ್ತನೆ ಮತ್ತು ಹಳ್ಳಿಗಳ ಮೂಲ ಸೌಲಭ್ಯಗಳ ಸುವ್ಯವಸ್ಥೆ.

ಮೊದಲನೆಯದಾಗಿ, ಮದುವೆಗೆ ಹೆಣ್ಣು ಸಿಗುವುದಿಲ್ಲವೆಂದರೆ, ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆಯೇ? ಸದ್ಯ ಭಾರತದಲ್ಲಿ ಗಂಡು- ಹೆಣ್ಣಿನ ಸಂಖ್ಯಾ ಅನುಪಾತವು ಕ್ರಮವಾಗಿ ಶೇ 51.6 ಮತ್ತು ಶೇ 48.4ರಷ್ಟಿದೆ. ಈ ಶೇಕಡ ಮೂರರಷ್ಟು ಅಸಮತೋಲನದಿಂದ ವಧುಗಳ ಬರಗಾಲವಾಗಿದೆಯೇ? ಖಂಡಿತವಾಗಿಯೂ ಇದೊಂದೇ ಕಾರಣವಲ್ಲ. ಬಹಳಷ್ಟು ಇನ್ನಿತರ ಕಾರಣಗಳಿವೆ. ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ನಗರಗಳತ್ತ ವಲಸೆ ಹೋಗುತ್ತಿರುವುದು ಹೆಚ್ಚಾಗಿದೆ. ಹಳ್ಳಿಯಲ್ಲಿ ಮಹಿಳೆಯರ ಮೇಲೆ ಹೇರುವ ಶಿಷ್ಟಾಚಾರಗಳು, ಜಾತಿ ವ್ಯವಸ್ಥೆ, ಕೃಷಿಗೆ ಇಲ್ಲದ ಗೌರವ, ರೈತರ ಆತ್ಮಹತ್ಯೆ, ಉನ್ನತ ಶಿಕ್ಷಣದಲ್ಲಿ ಆಸಕ್ತಿ ಕಳೆದುಕೊಂಡ ಹಳ್ಳಿಯ ಗಂಡುಮಕ್ಕಳು, ಹೆಣ್ಣುಮಕ್ಕಳಲ್ಲಿ ಕೃಷಿಯ ಕುರಿತು ನಿರಾಸಕ್ತಿ, ಹಳ್ಳಿಗಳಲ್ಲಿ ಹೆಣ್ಣುಮಕ್ಕಳಿಗೆ ಇಲ್ಲದ ವೈಯಕ್ತಿಕ ಸ್ವಾತಂತ್ರ್ಯದಂತಹವು ಸೇರಿವೆ.

ಹಲವಾರು ವರ್ಷಗಳಿಂದ ದೇಶದ ಉನ್ನತ ಶಿಕ್ಷಣದಲ್ಲಿ ಕಂಡುಬರುತ್ತಿರುವ ವಿದ್ಯಮಾನವೆಂದರೆ, ತರಗತಿಗಳಲ್ಲಿ ಗಂಡುಮಕ್ಕಳಿಗೆ ಹೋಲಿಸಿದರೆ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಉದ್ಯೋಗ ಕ್ಷೇತ್ರದಲ್ಲಿ ಅದೇ ಪ್ರಮಾಣದಲ್ಲಿ ಹೆಣ್ಣುಮಕ್ಕಳನ್ನು ನಾವು ಕಾಣುತ್ತಿಲ್ಲ. ಹಾಗಿದ್ದರೆ, ಹೆಣ್ಣುಮಕ್ಕಳು ಎಲ್ಲಿ ಕಳೆದುಹೋಗುತ್ತಾರೆ? ಇಂದಿಗೂ, ಹೆಚ್ಚಿನ ಹೆತ್ತವರು ತಮ್ಮ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವುದು, ಅವರು ಉದ್ಯೋಗ ಪಡೆಯಲಿ ಎಂದಲ್ಲ, ಬದಲಾಗಿ ಒಳ್ಳೆಯ ಕೆಲಸದಲ್ಲಿರುವ ಗಂಡು ಸಿಗಲಿ ಎಂದು. ಹಾಗಾಗಿ, ಕಡಿಮೆ ವಿದ್ಯಾಭ್ಯಾಸ ಮಾಡಿದ ಹುಡುಗರಿಗೆ ಹೆಣ್ಣು ಸಿಗುವುದು ಸ್ವಲ್ಪ ಕಷ್ಟವೇ. ನಗರಗಳಲ್ಲಿ ವಾಸಿಸುವ ಉದ್ಯೋಗಸ್ಥ, ಕಡಿಮೆ ಶಿಕ್ಷಣ ಪಡೆದ ಹುಡುಗರಿಗೆ ಒಂದು ವೇಳೆ ಹೆಣ್ಣು ಸಿಗಬಹುದು. ನಗರಗಳಲ್ಲಿ ಹೆಣ್ಣುಮಕ್ಕಳಿಗೂ ಕೆಲಸಕ್ಕೆ ವಿಪುಲ ಅವಕಾಶಗಳಿರುವುದರಿಂದ, ಇಬ್ಬರೂ ದುಡಿದರೆ ಹೇಗೋ ಸಂಸಾರ ನಿರ್ವಹಿಸುತ್ತಾರೆ ಎನ್ನುವ ಧೈರ್ಯ ತೆಗೆದುಕೊಳ್ಳುತ್ತಾರೆ. ಆದರೆ, ಹಳ್ಳಿಯಲ್ಲಿ ಕೃಷಿಯನ್ನು ಹೊರತುಪಡಿಸಿ ಅನ್ಯ ಉದ್ಯೋಗಗಳ ಕೊರತೆಯಿರುವುದರಿಂದ ಮತ್ತು ಕೃಷಿ ಅವಲಂಬನೆ ಸದಾ ಅನಿಶ್ಚಿತತೆಯಿಂದ ಕೂಡಿರುವುದರಿಂದ, ಹೆಣ್ಣು ಮಕ್ಕಳು ಮತ್ತು ಅವರ ಹೆತ್ತವರು ಹಳ್ಳಿಗಳಲ್ಲಿ ಭವಿಷ್ಯ ಕಳೆಯುವ ಮನಸ್ಸು ಮಾಡುವುದು ದುರ್ಲಭ.

ಹಳ್ಳಿಯಲ್ಲಿ ಆಚರಣೆ, ಶಿಷ್ಟಾಚಾರ, ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯರ ಮೇಲೆ ನಿರ್ಬಂಧಗಳನ್ನು ಹೇರುವ ಪರಿಪಾಟ ಹೆಚ್ಚು. ಗ್ರಾಮೀಣ ಪರಿಸರಕ್ಕೆ ಹೋಲಿಸಿದರೆ, ಪಟ್ಟಣಗಳಲ್ಲಿ ಹೆಣ್ಣುಮಕ್ಕಳಿಗೆ ಸಂಪ್ರದಾಯಗಳನ್ನು ಅನುಸರಿಸುವ ಅಥವಾ ಅನುಸರಿಸದಿರುವ ವೈಯಕ್ತಿಕ ಸ್ವಾತಂತ್ರ್ಯ ಹೆಚ್ಚಿದೆ ಎನ್ನಬಹುದು.

ಇನ್ನು ಜಾತಿ ವ್ಯವಸ್ಥೆಯ ಬಿಗಿಬಂಧವು ಹಳ್ಳಿಗಳ ದೈನಂದಿನ ಜೀವನದ ಭಾಗವಾಗಿರುವುದರಿಂದ, ದುರ್ಬಲ ಜಾತಿಯ ಹೆಣ್ಣುಮಕ್ಕಳು ಹಳ್ಳಿಗಳಲ್ಲಿ ನೆಲೆ ನಿಲ್ಲಲು ಆಸಕ್ತಿ ತೋರಿಸದಿರಬಹುದು. ನಗರಗಳೇನೂ ಜಾತಿ ನಿಂದನೆಯಿಂದ ಮುಕ್ತವಾಗಿಲ್ಲ ನಿಜ, ಆದರೆ ಹಳ್ಳಿಗಳಂತೆ ನಿರ್ಭೀತಿಯಿಂದ ಆಚರಿಸುವಷ್ಟು ಧೈರ್ಯ ತೋರುವುದು ಬಹಳ ಕಡಿಮೆ, ಬದಲಾಗಿ ತೆರೆಮರೆಯಲ್ಲಿ ನಡೆದುಹೋಗುತ್ತದೆ.

ರೈತರನ್ನು ಅನ್ನದಾತ, ದೇಶದ ಬೆನ್ನೆಲುಬು ಎನ್ನುವ ಗೌರವ ಸೂಚಕ ವ್ಯಾಖ್ಯಾನಗಳ ನಡುವೆ ಇಂದು ಕೃಷಿಕರಿಗೆ ಸಿಗುವ ಗೌರವ ಕಡಿಮೆಯಾಗುತ್ತಿದೆ. ರೈತರೆಂದರೆ ಬಡವರು, ಆರ್ಥಿಕವಾಗಿ ದಿವಾಳಿಯಾಗಿರುವವರು ಮತ್ತು ಹತಾಶೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುವವರು ಎನ್ನುವ ಅಭಿಪ್ರಾಯ ಮಾಧ್ಯಮಗಳಲ್ಲಿ ಪ್ರಚಾರಗೊಂಡಷ್ಟೂ ರೈತರಿಗೆ ಹೆಣ್ಣು ಸಿಗುವುದು ಕಷ್ಟವಾಗುತ್ತಿದೆ. ಪ್ರಸಕ್ತ, ಕೃಷಿಕರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ, ಕೃಷಿಯಲ್ಲಿ ಇನ್ನಷ್ಟು ಯುವಕರು ತೊಡಗಿಸಿಕೊಳ್ಳಲು, ಯಶಸ್ವಿ ರೈತರ ಕುರಿತು ಸುದ್ದಿಗಳು ಮತ್ತು ಅವರು ಮಾಡುತ್ತಿರುವ ವಿಭಿನ್ನ ಪ್ರಯೋಗಗಳ ಮಾಹಿತಿ ಹೆಚ್ಚು ಪ್ರಸಾರವಾಗುವುದು ಕೂಡ ಮುಖ್ಯ. ಇದು ರೈತರಿಗೆ ಕೃಷಿಯಲ್ಲಿ ಮುಂದುವರಿಯಲು ಭರವಸೆ ನೀಡುತ್ತದೆ.

ಸಾಮಾನ್ಯವಾಗಿ, ನಮ್ಮ ಸಮಾಜದಲ್ಲಿ ಮದುವೆಯಾಗುವಾಗ ಗಂಡು ಹೆಣ್ಣಿಗಿಂತ ಹೆಚ್ಚು ಶಿಕ್ಷಣ ಹೊಂದಿರಬೇಕೆಂಬ ನಿರೀಕ್ಷೆ ಇದೆ. ಇದು ಬದಲಾಗಬೇಕಾದ ಸಂದರ್ಭವಿದು. ಉನ್ನತ ಶಿಕ್ಷಣದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಹಾಗಾಗಿ, ಅನಿವಾರ್ಯವಾಗಿ ಮದುವೆಯಾಗ ಬಯಸುವ ಹೆಣ್ಣುಮಕ್ಕಳು ತಮಗಿಂತ ಕಡಿಮೆ ಓದಿರುವ ಗಂಡನ್ನು ವಿವಾಹಯೋಗ್ಯವೆಂದು ಪರಿಗಣಿಸಬೇಕಾದ ಅಗತ್ಯವಿದೆ. ಹಿಂದೆ, ಒಳ್ಳೆಯ ಕೆಲಸ ಹೊಂದಿರುವ ಗಂಡು ಸಿಗಬೇಕೆಂದು ಹೆಣ್ಣುಮಕ್ಕಳನ್ನು ಓದಿಸುತ್ತಿದ್ದರು. ಆದರೆ, ಈಗ ಗಂಡುಮಕ್ಕಳು ಮದುವೆಯಾಗಬೇಕೆಂದರೆ ಶಿಕ್ಷಣ ಹೊಂದುವುದು ಅನಿವಾರ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ, ಹಳ್ಳಿಯಲ್ಲಿ ನೆಲೆ ನಿಲ್ಲಬಯಸುವ ಗಂಡುಮಕ್ಕಳೂ ಉನ್ನತ ಶಿಕ್ಷಣ ಪಡೆದು ಕೃಷಿ ಚಟುವಟಿಕೆಯಲ್ಲಿ ಮುಂದುವರಿಯಬಹುದು. ಶಿಕ್ಷಣ ವಂಚಿತರು ಮಾತ್ರ ಕೃಷಿಕರು ಎನ್ನುವ ಮನೋಭಾವ ಬದಲಾಗಬೇಕಿದೆ. ಜೊತೆಗೆ, ಶಿಕ್ಷಣ ಪಡೆದ ಕೃಷಿಕರು ತಮ್ಮ ವೃತ್ತಿಯಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥರಾಗಿದ್ದು, ಮಧ್ಯವರ್ತಿಗಳಿಂದ ಮೋಸ ಹೋಗುವುದನ್ನು ತಪ್ಪಿಸಬಹುದು ಮತ್ತು ಆರ್ಥಿಕ ಸಂಕಷ್ಟಗಳಿಂದ ಪಾರಾಗಬಹುದು. ಆದ್ದರಿಂದ, ಗಂಡುಮಕ್ಕಳು ತಮ್ಮ ವೃತ್ತಿ ಆಯ್ಕೆಗಳೇನೇ ಇದ್ದರೂ ಉನ್ನತ ಶಿಕ್ಷಣಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ತೆರೆದುಕೊಳ್ಳುವುದು ಸೂಕ್ತ.

ಇವುಗಳ ನಡುವೆ, ಇಂದು ಹಳ್ಳಿಯ ಗಂಡುಮಕ್ಕಳಿಗೆ ಹೆಣ್ಣು ಸಿಗದಿರಲು ಕಾರಣವೆಂದರೆ, ಹೆಣ್ಣುಮಕ್ಕಳಲ್ಲಿ ಕೃಷಿಯ ಕುರಿತು ನಿರಾಸಕ್ತಿ ಮತ್ತು ಅವರಲ್ಲಿ ಗಂಡನ ಉದ್ಯೋಗ ಹೀಗೆಯೇ ಇರಬೇಕೆಂಬ ನಿರೀಕ್ಷೆ. ಕೃಷಿಕರೆಂದರೆ, ಸಿನಿಮಾ ಹೀರೊಗಳಂತೆ ಕಾಣದಿರಬಹುದು, ಆದರೆ, ಪ್ರೀತಿಗೇನೂ ಕಡಿಮೆ ಮಾಡಲಾರರು. ಈ ಹಳ್ಳಿಯ ಕೃಷಿಕರನ್ನು ಕೈಹಿಡಿದು ಯಶಸ್ಸಿನ ದಾರಿಯಲ್ಲಿ ಜೊತೆಯಾಗುವ ಕೆಲಸವನ್ನು ಪಟ್ಟಣದ ವಿದ್ಯಾವಂತ ಹೆಣ್ಣುಮಕ್ಕಳು ಮಾಡಬೇಕಾಗಿದೆ. ಮೂಲತಃ ಕೃಷಿಯು ಹೆಣ್ಣುಮಕ್ಕಳಿಂದ ಆರಂಭವಾದ ಚಟುವಟಿಕೆ. ಕಾಲಾನಂತರ, ಸಲಕರಣೆಗಳು ಮತ್ತು ಪ್ರಾಣಿಗಳನ್ನು ಪಳಗಿಸಿ ಕೃಷಿಗೆ ಉಪಯೋಗಿಸಲು ಆರಂಭಿಸಿದ ನಂತರ ಕೃಷಿಯ ಆಧಿಪತ್ಯ ಗಂಡಿನ ಪಾಲಾಯಿತು. ಆದರೆ ದುಡಿಮೆಯಲ್ಲಿ ಹೆಣ್ಣುಮಕ್ಕಳ ಪಾಲೇ ಹೆಚ್ಚು. 

ವಿದ್ಯಾವಂತ ಹೆಣ್ಣಿನ ಮೇಲ್ವಿಚಾರಣೆಯಲ್ಲಿರುವ ಕೃಷಿ ಚಟುವಟಿಕೆಯಲ್ಲಿ ನಷ್ಟ ಕಾಣುವುದು ಬಹಳ ಅಪರೂಪ. ಆದ್ದರಿಂದ ಹೆಣ್ಣುಮಕ್ಕಳು ಕೃಷಿಯಲ್ಲಿ ಹೆಚ್ಚು ತೊಡಗುವುದರಿಂದ ಕೃಷಿ ಒಂದು ಲಾಭದಾಯಕ ಉದ್ಯಮವಾಗಬಹುದು, ಹಳ್ಳಿಗಳ ಜೀವನ ಮಟ್ಟ ಸುಧಾರಿಸಬಹುದು ಮತ್ತು ಹಳ್ಳಿಯ ಗಂಡುಮಕ್ಕಳು ತಮಗೆ ಹೆಣ್ಣು ಸಿಗುತ್ತಿಲ್ಲ ಎಂದು ಹಲುಬುವುದು ತಪ್ಪಬಹುದು.

ಪ್ರಪಂಚದ ಉಳಿವು ಮತ್ತು ಅಳಿವು ಎರಡೂ ಹೆಣ್ಣಿನ ಕೈಯಲ್ಲಿದೆ ಎನ್ನುವುದಕ್ಕೆ ಇದು ಮತ್ತೊಂದು ನಿದರ್ಶನ. ಹಾಗೆಯೇ, ಹಳ್ಳಿಯ ಗಂಡುಮಕ್ಕಳು ಹೆಣ್ಣು ಸಿಗುವುದಿಲ್ಲವೆಂದರೆ, ಹಳ್ಳಿಯ ಜೀವನದಲ್ಲಿ ಆಸಕ್ತಿಯಿರುವ ಬೇರೆ ಜಾತಿಯ ಹೆಣ್ಣುಮಕ್ಕಳನ್ನು ಮದುವೆಯಾಗುವ ಮನಸ್ಸು ಮಾಡಬೇಕು. ಮದುವೆಗೆ ಸಮಾನ ಆಸಕ್ತಿ, ಪರಸ್ಪರ ಗೌರವ ಮತ್ತು ಪ್ರೀತಿ ಮುಖ್ಯವೇ ವಿನಾ ಜಾತಿಯಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT