ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಳುಗುವ ನಗರವಾಗದಿರಲಿ ಬೆಂಗಳೂರು: ನಗರೋತ್ಥಾನಕ್ಕೆ ಬೇಕಿದೆ ನವ ವ್ಯಾಖ್ಯಾನ

ಮುಳುಗುವ ನಗರಗಳು!
Last Updated 11 ಸೆಪ್ಟೆಂಬರ್ 2022, 3:16 IST
ಅಕ್ಷರ ಗಾತ್ರ

ಸುಸ್ಥಿರ, ಸಮೃದ್ಧ ನಗರಗಳ ಕನಸು ನನಸಾಗಬೇಕಿದ್ದರೆ ನಾಗರಿಕ ಪ್ರಪಂಚದ ಕೆಲವು ಅನಾಗರಿಕ ವರ್ತನೆಗಳೂ ಕೊನೆಯಾಗಬೇಕಿದೆ. ಜನರು, ಸರ್ಕಾರ, ಅಧಿಕಾರಿಗಳು, ಕಂಪನಿಗಳು ಹೀಗೆ ಎಲ್ಲರ ಒಗ್ಗಟ್ಟಿನಿಂದ ಮಾತ್ರ ಉತ್ತಮ ನಗರ ನಿರ್ಮಾಣ ಸಾಧ್ಯ ಎಂಬುದನ್ನು ಮನಗಾಣಲೇಬೇಕು. ಇಲ್ಲವಾದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪ್ರಕೃತಿಗೆ ಯಾರೂ ಹೇಳಿಕೊಡಬೇಕಿಲ್ಲವಷ್ಟೇ?

**

ನಗರ ಮಹಾಪೂರ (Urban flood) ಎಂಬ ಪದವು ಭಾರತದಲ್ಲಿ ಮೊದಲು ಬಳಕೆಯಾದ ಸಂದರ್ಭವೆಂದರೆ ಪ್ರಾಯಶಃ ಅದು 2000ನೇ ಇಸ್ವಿ. ಹಳ್ಳ–ಕೊಳ್ಳ, ನದಿಗಳು ಉಕ್ಕಿ ಹರಿದಾಗ ಮಹಾಪೂರ ಉಂಟಾಗುವುದನ್ನು ಕೇಳಿದ್ದ ಜನ, ಅದೇ ಮೊದಲ ಬಾರಿಗೆ ನಗರ ಮಹಾಪೂರದ ಕುರಿತು ಕೇಳಿ ಮೂಗಿನ ಮೇಲೆ ಬೆರಳು ಇಟ್ಟಿದ್ದರು. ದೂರದ ನದಿ ತೀರದಲ್ಲೆಲ್ಲೊ ಕಾಣಿಸಿಕೊಳ್ಳುತ್ತಿದ್ದ ಅಂತಹ ಪ್ರವಾಹ ಕಾಂಕ್ರಿಟ್‌ ಕಾಡಿನ ನಡುವಿನ ಮನೆ ಅಂಗಳವನ್ನು ಹುಡುಕಿಕೊಂಡು ಬಂದ ವಿದ್ಯಮಾನವೇನು ಸುಮ್ಮನೆಯೇ ಮತ್ತೆ?

ಮೊದಮೊದಲು ಹೈದರಾಬಾದ್‌, ನಂತರ ಮುಂಬೈ, ದೆಹಲಿ, ಅಹಮದಾಬಾದ್‌, ಕೋಲ್ಕತ್ತ, ಚೆನ್ನೈ ಬಳಿಕ ಬೆಂಗಳೂರು... ಹೀಗೆ ‘ಮೆಟ್ರೊ ಸಿಟಿ’ಗಳನ್ನು ಹುಡುಕಿಕೊಂಡು ಈ ‘ನಗರ ಮಹಾಪೂರ’ ಧಾವಿಸಿ ಬಂದಾಗ ‘ಏಕೆ ಹೀಗೆ’ ಎಂದು ಜನ ತಲೆ ಕೆರೆದುಕೊಂಡರು. ಆಮೇಲೆ ಸುಮ್ಮನಾದರು. ಸಮಸ್ಯೆಯ ಆಳಕ್ಕೆ ಇಳಿಯಲಿಲ್ಲ. ಪರಿಹಾರದ ಮಾರ್ಗೋಪಾಯಗಳನ್ನೂ ಕಂಡುಕೊಂಡಲಿಲ್ಲ. ಅದರ ಪರಿಣಾಮವೇ ನಗರ ಮತ್ತು ಮಹಾಪೂರದ ನಿರಂತರ ಮುಖಾಮುಖಿ.

ನದಿ ತಟದ ನಾಗರಿಕತೆ ಹಾಗೂ ನಗರಗಳ ಸಮೃದ್ಧ ಇತಿಹಾಸ ಹೊಂದಿರುವ ದೇಶ ನಮ್ಮದು. ಸಿಂಧೂ ನದಿ ಪಾತ್ರದಲ್ಲಿ ಮೈತಳೆದ ಹರಪ್ಪ, ಮೊಹೆಂಜೊ-ದಾರೋ ನಾಗರಿಕತೆಯ ಬಗ್ಗೆ ಕೇಳುತ್ತಲೇ ಬೆಳೆದವರು ನಾವು. ಪುರಾತನ ನಾಗರಿಕತೆಯಲ್ಲಿ ಅಂತಹ ವ್ಯವಸ್ಥಿತ ಜನವಸತಿ ಪ್ರದೇಶ ಬೇರೆ ಇರಲಿಲ್ಲ ಎಂದು ತಿಳಿದವರೂ ನಾವು. ಹಾಗಿದ್ದೂ ನಮ್ಮ ನಗರಗಳಲ್ಲಿ ನಾವೀಗ ಈ ಪರಿಯ ಮಹಾಪೂರಕ್ಕೆ ಆಮಂತ್ರಣ ಕೊಟ್ಟು ಕರೆಯುತ್ತಿರುವುದೇಕೆ, ಮತ್ತೆ?

ನಗರವನ್ನು ಜನವಸತಿಗೆ ಬೇಕಾದ ಹೆಚ್ಚಿನ ಸೌಲಭ್ಯಗಳನ್ನು ಹೊಂದಿದ ಪ್ರದೇಶ ಎಂದು ಗುರ್ತಿಸಲಾಗುತ್ತದೆ. ನಮ್ಮಲ್ಲಿ ನಗರೀಕರಣದ ಭರಾಟೆ ಯಾವ ಪರಿ ನಡೆದಿದೆ ಎಂದರೆ ಅದರ ನಾಗಾಲೋಟದ ಹೊಡೆತಕ್ಕೆ ಹಳ್ಳಿಗಳೇ ಮಾಯವಾಗುತ್ತಿವೆ. ಬೆಂಗಳೂರಿನ ಉದಾಹರಣೆಯನ್ನೇ ತೆಗೆದುಕೊಂಡರೆ ನೂರೈವತ್ತು ಹಳ್ಳಿಗಳನ್ನು ಆಪೋಶನ ತೆಗೆದುಕೊಂಡು ಅಮೀಬಾದಂತೆ ಬೆಳೆದ ಊರಲ್ಲವೇ ಇದು? ಹೋಗಲಿ, ನಗರ ಸಂಸ್ಕೃತಿ ವಿಕಾಸ ಹೊಂದುವಾಗ ಅದು ಜನವಸತಿಗೆ ಇನ್ನಷ್ಟು ಉತ್ಕೃಷ್ಟವಾದ, ಪ್ರಕೃತಿ ವಿಕೋಪಗಳನ್ನೂ ತಾಳಿಕೊಳ್ಳುವಂತಹ ಧಾರಣಾಶಕ್ತಿಯುಳ್ಳ ಪ್ರದೇಶವಾಗಿ ರೂಪುಗೊಳ್ಳಬೇಕಿತ್ತಲ್ಲವೇ? ಹಾಗಾದರೆ ಏಕೆ ಈ ಪರಿಯ ಮಹಾಪೂರದ ಅಟಾಟೋಪ? ಮತ್ತೆ ಎಡವಿ ಬಿದ್ದದ್ದಾದರೂ ಎಲ್ಲಿ?

ನಗರ ಮಹಾಪೂರದ ಕುರಿತು ನಾವು ಮೊದಲು ಕೇಳಿದ್ದು 2000ರಲ್ಲಿ ಎಂದು ಹೇಳಿದೆನಲ್ಲವೇ? ಆ ವೇಳೆಗೆ ದೇಶ ಜಾಗತೀಕರಣಕ್ಕೆ ತೆರೆದುಕೊಂಡು ಒಂದು ದಶಕವಾಗಿತ್ತು. ನೂರಾರು ಉದ್ಯಮಗಳು ಭರದಿಂದ ತಲೆ ಎತ್ತುತ್ತಿದ್ದ ಕಾಲಘಟ್ಟ ಅದಾಗಿತ್ತು. ನಗರಗಳು ಅತಿಯಾದ ಹುಮ್ಮಸ್ಸಿನಿಂದ ಬೆಳೆಯತೊಡಗಿದ್ದವು. ಹಳ್ಳಿಗಳ ಜನ ನಗರದತ್ತ ದಾಂಗುಡಿ ಇಟ್ಟಿದ್ದರು. ದೇಶದ ಬೇರೆ ಬೇರೆ ಭಾಗಗಳಿಂದಲೂ ದೊಡ್ಡ ದೊಡ್ಡ ನಗರಗಳಿಗೆ ವಲಸೆ ಶುರುವಾಗಿತ್ತು. ಜನವಸತಿಗೆ ಜಾಗ ಸಾಲದಾದಾಗ ಕೆರೆ–ಕಟ್ಟೆ, ಕಾಲುವೆಗಳನ್ನು ಸಮಾಧಿ ಮಾಡಿ ಮನೆಗಳನ್ನು ನಿರ್ಮಿಸುವ ಭರಾಟೆ ಶುರುವಾಗಿತ್ತು. ಮಳೆಗಾಲದಲ್ಲಿ ಅಲ್ಲಿಯ ‘ಮೂಲನಿವಾಸಿ’ ಮತ್ತೆ ಬಂದೇ ಬರುತ್ತಾನೆ ಎಂಬುದನ್ನು ಜನ ಮರೆತುಬಿಟ್ಟಿದ್ದರು. ನಗರ ಮಹಾಪೂರ ಕೂಡ ಅಲ್ಲಿ ಜನ ವಾಸವಾಗಿದ್ದಾರೆ ಎಂಬುದನ್ನು ಮರೆತು ಮತ್ತೆ ಮತ್ತೆ ಬರತೊಡಗಿತು.

ಇಷ್ಟಕ್ಕೂ ಸುಸ್ಥಿರ ನಗರವೊಂದರ ಪ್ರಮುಖ ಲಕ್ಷಣಗಳಾದರೂ ಏನು? ಕುಡಿಯಲು ಸದಾ ಶುದ್ಧ ನೀರು ಸಿಗಬೇಕು. ಬಳಕೆಯಾದ ನೀರು ಅಡೆತಡೆ ಇಲ್ಲದೆ ಹರಿದು ಹೋಗಬೇಕು. ಮಳೆ ನೀರನ್ನು ಕೆರೆಗೋ, ಹೊಳೆಗೋ ಸಾಗಿಸಲು ಪ್ರತ್ಯೇಕ ರಾಜಕಾಲುವೆ ಇರಬೇಕು. ಓಡಾಡುವ ರಸ್ತೆಗಳು ದಟ್ಟಣೆಯಿಂದ, ಗುಂಡಿಗಳಿಂದ ಮುಕ್ತವಾಗಿರಬೇಕು ಮತ್ತು ನಿರಂತರ ವಿದ್ಯುತ್‌ ಪೂರೈಕೆಯೂ ಇರಬೇಕು. ನಗರವೊಂದರ ಬಹುಪಾಲು ಜನ ಬಯಸುವುದು ಇಷ್ಟನ್ನು ಮಾತ್ರ. ಆದರೆ, ಈ ಮೂಲ ಅಗತ್ಯಗಳನ್ನು ಪೂರೈಸಲಾಗದೆ ಆಡಳಿತ ವ್ಯವಸ್ಥೆಗಳು ಸೋತು ಕೈಚೆಲ್ಲಿವೆಯಲ್ಲ?

ಮಳೆಗಾಲದಲ್ಲಿ ಮಹಾಪೂರ, ಬೇಸಿಗೆಯಲ್ಲಿ ಬರ!

ಮಹಾಪೂರ ತಗ್ಗಿ, ಚಳಿಗಾಲವನ್ನು ಕಳೆದ ಮೇಲೆ ಮತ್ತೆ ಬೇಸಿಗೆ ಬರುತ್ತದೆ. ಈಗ ಪ್ರವಾಹಕ್ಕೀಡಾಗಿರುವ ಪ್ರದೇಶಗಳಲ್ಲಿ ಆಗ ಕುಡಿಯುವ ನೀರಿಗೂ ತತ್ವಾರ ಕಂಡುಬರುತ್ತದೆ (ಬೇಸಿಗೆಯ ಮಾತು ಬದಿಗಿರಲಿ, ರಸ್ತೆಯಲ್ಲಿ ಪ್ರವಾಹ ಸೃಷ್ಟಿಯಾಗಿರುವ ಈ ಸಂದರ್ಭದಲ್ಲೇ ಮನೆಗಳಲ್ಲಿ ಕುಡಿಯುವ ನೀರಿಗೆ ಬರವಿರುವುದು ನಿಜವಷ್ಟೆ). ಇದೆಂತಹ ಸೋಜಿಗ? ಪರಿಶುದ್ಧವಾದ ನೀರು ಭಾರಿ ಪ್ರಮಾಣದಲ್ಲಿ ಹರಿದುಹೋದ ಪ್ರದೇಶದಲ್ಲಿ ಆ ಬಳಿಕ ಕುಡಿಯಲು ನೀರಿಲ್ಲ! ಮುಂದಿನ ವರ್ಷ ಮತ್ತೆ ಮಳೆಗಾಲ, ಪ್ರವಾಹ ಬರುತ್ತದೆ ಎಂಬ ಒಂದಿನಿತೂ ಭಯ–ಭೀತಿ ಇಲ್ಲದೆ ಅತಿಕ್ರಮಣಗಳೂ ಮತ್ತೆ ನಡೆಯುತ್ತವೆ!

ಕೆರೆಗಳ ನಾಡೆಂದೇ ಪ್ರಸಿದ್ಧಿ ಪಡೆದಿದ್ದ, ಸಾವಿರಾರು ಕೆರೆಗಳಿದ್ದ ಬೆಂಗಳೂರಿಗೆ ಅವುಗಳೇ ಕುಡಿಯುವ ನೀರಿನ ಮುಖ್ಯ ಮೂಲಗಳಾಗಿದ್ದವು. ಪ್ರವಾಹ ಉಂಟಾಗದಂತೆ ನೀರನ್ನು ಸಂಗ್ರಹಿಸುವ ನೈಸರ್ಗಿಕ ಬೋಗುಣಿಗಳು ಅವಾಗಿದ್ದವು. ಈಗ ಉಳಿದಿರುವ ಕೆರೆಗಳ ಸಂಖ್ಯೆ ಅಜಮಾಸು ನೂರು. ಅವುಗಳೂ ಕೊಚ್ಚೆ ಗುಂಡಿಗಳಾಗಿವೆ. ಉಳಿದ ಕೆರೆಗಳೆಲ್ಲ ಎಲ್ಲಿ ಹೋದವು? ಅವುಗಳ ಜಾಗದಲ್ಲಿ ಹಾಗೂ ಅವುಗಳ ಕೋಡಿ ಬಿದ್ದು ನೀರು ಹರಿಯಬೇಕಾದ ಸ್ಥಳಗಳಲ್ಲಿ ವಸತಿ ಸಮುಚ್ಛಯಗಳು, ವಾಣಿಜ್ಯ ಸಂಕೀರ್ಣಗಳು, ಕ್ರೀಡಾಂಗಣಗಳು ತಲೆ ಎತ್ತಿವೆ. ಇತ್ತ ಕುಡಿಯಲು ನೀರು ಕೊಡುವ ಕೆರೆಗಳಿಲ್ಲ, ಅತ್ತ ಮಳೆನೀರು ಹರಿದುಹೋಗಲು ಕಾಲುವೆಗಳಿಲ್ಲ.

ಲಂಚ ಪಡೆದು ಎಲ್ಲೆಂದರಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡುವುದು, ಅಕ್ರಮವಾಗಿ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸುವುದು ದೇಶದ ಮಹಾ ನಗರಗಳಲ್ಲಿ ಮಾಮೂಲಿ ಆಗಿಬಿಟ್ಟಿದೆ. ಬಳಿಕ ಒತ್ತುವರಿ ತೆರವಿನ ಹೆಸರಿನಲ್ಲಿ ಮತ್ತೊಂದಷ್ಟು ದುಡ್ಡು ಮಾಡುವುದೂ ಗುಟ್ಟಾಗಿ ಉಳಿದಿಲ್ಲ. ರಾಜಕಾಲುವೆ ಒತ್ತುವರಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, ಕೊಳೆಗೇರಿ ಅಭಿವೃದ್ಧಿ ಮಂಡಳಿಗಳೇ ಭಾಗಿಯಾಗಿರುವುದನ್ನು ಅಲ್ಲಗಳೆಯುವಂತಿಲ್ಲವಲ್ಲ.

ಇಷ್ಟೆಲ್ಲ ಸಮಸ್ಯೆಗಳ ನಡುವೆ ಸರ್ಕಾರದ ಯೋಜನೆಗಳ ಆಮಗತಿಯ ಅನುಷ್ಠಾನಗಳು, ಕಾಮಗಾರಿಯಲ್ಲಿನ ಲೋಪಗಳು ಪ್ರಕೃತಿಯ ಮುನಿಸಿಗೆ ಮತ್ತಷ್ಟು ಇಂಬು ನೀಡುತ್ತಿವೆ. ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಕಾಮಗಾರಿಯ ವಿಳಂಬ ರಾಮನಗರ ಹಾಗೂ ಇತರ ಕೆಲವು ಕಡೆಗಳಲ್ಲಿ ಪ್ರವಾಹಕ್ಕೆ ಕಾರಣವಾದ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಶಿರಾಡಿ ಘಾಟಿ ರಸ್ತೆಯಲ್ಲಿ ಪ್ರತಿವರ್ಷ ಆಗುತ್ತಿರುವ ಅನಾಹುತಕ್ಕೆ ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತಿರುವುದೂ ಒಂದು ಕಾರಣವಷ್ಟೆ.

ಯಾವುದೇ ನಗರ ಒಂದು ಚೆಸ್‌ ಬೋರ್ಡ್‌ ಮಾದರಿಯಲ್ಲಿ ಅಭಿವೃದ್ಧಿಯಾಗಬೇಕು. ಚೆಸ್ ಬೋರ್ಡ್‌ನ ಬಿಳಿ ಮನೆಗಳು ಕಟ್ಟಡನಿರ್ಮಿತ ಪ್ರದೇಶವಾಗಿಯೂ ಕಪ್ಪು ಮನೆಗಳು ಹಸಿರು ಪ್ರದೇಶವಾಗಿಯೂ ಇರಬೇಕು.
ಯಾವುದೇ ನಗರ ಒಂದು ಚೆಸ್‌ ಬೋರ್ಡ್‌ ಮಾದರಿಯಲ್ಲಿ ಅಭಿವೃದ್ಧಿಯಾಗಬೇಕು. ಚೆಸ್ ಬೋರ್ಡ್‌ನ ಬಿಳಿ ಮನೆಗಳು ಕಟ್ಟಡನಿರ್ಮಿತ ಪ್ರದೇಶವಾಗಿಯೂ ಕಪ್ಪು ಮನೆಗಳು ಹಸಿರು ಪ್ರದೇಶವಾಗಿಯೂ ಇರಬೇಕು.

ನಮಗೆ ಎಂತಹ ನಗರ ಬೇಕು?

ದೂರದೃಷ್ಟಿತ್ವದಿಂದ ಕೂಡಿದ, ಸುಸಜ್ಜಿತ ಹಾಗೂ ಯೋಜನಾಬದ್ಧ ನಗರಗಳ ನಿರ್ಮಾಣ ಆಗದಿರುವುದೇ ಇಂದಿನ ಪ್ರಮುಖ ಸಮಸ್ಯೆ. ಜನಸಂಖ್ಯೆ ಹೆಚ್ಚಿದಂತೆಲ್ಲ ನಗರಗಳು ತನ್ನಿಂತಾನೆ, ಯೋಜನೆ ಇಲ್ಲದೆ ಬೆಳೆಯುತ್ತಾ ಹೋಗುವುದು ಒಂದು ದುರಂತ.

‘ಸುಸ್ಥಿರ ನಗರ ನಿರ್ಮಾಣದಲ್ಲಿ ಮೂರು ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಅವುಗಳೆಂದರೆ ‘ಸಮಾಜ, ಸರ್ಕಾರ, ಬಜಾರ (ಉದ್ದಿಮೆ ಅಥವಾ ಮಾರುಕಟ್ಟೆ)’. ಇವು ಮೂರೂ ಒಟ್ಟಾಗಿ ತಮ್ಮ ಜವಾಬ್ದಾರಿ ನಿರ್ವಹಿಸಬೇಕು’ ಎನ್ನುತ್ತಾರೆ ಜಲತಜ್ಞ ಹಾಗೂ ನಗರ ಯೋಜನಾ ತಜ್ಞ ವಿಶ್ವನಾಥ್ ಎಸ್.

ಸಮಾಜವು ಸರ್ಕಾರದ ಮೇಲೆ ಸದಾ ಕಣ್ಣಿಟ್ಟಿರಬೇಕು. ಆಡಳಿತದ ಮೇಲೆ ಒತ್ತಡ ತಂದು ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು. ಸರ್ಕಾರದ ಮೇಲೆ ಹದ್ದಿನ ಕಣ್ಣಿಡಬೇಕು. ಇದರ ಜತೆ, ತನ್ನ ಕರ್ತವ್ಯಗಳನ್ನೂ ಸಮರ್ಥವಾಗಿ ನಿಭಾಯಿಸಬೇಕು. ತ್ಯಾಜ್ಯ ನಿರ್ವಹಣೆಗೆ ಪೂರಕವಾಗಿ ಕಾರ್ಯನಿರ್ವಹಿಸುವುದು, ಮಳೆ ನೀರು ಕೊಯ್ಲು, ಸಸ್ಯ ಸಂಪತ್ತಿನ ರಕ್ಷಣೆಗೆ ಬದ್ಧವಾಗಿರುವ ಮೂಲಕ ಮಾದರಿ ನಗರ ನಿರ್ಮಾಣಕ್ಕೆ ಕಟಿಬದ್ಧವಾಗಿರಬೇಕು ಎಂಬುದು ಅವರ ಅಭಿಪ್ರಾಯ.

ಸರ್ಕಾರವು ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಅಧಿಕಾರ ವಿಕೇಂದ್ರೀಕರಣ ಮಾಡಿ ನಗರ ನಿರ್ಮಾಣಕ್ಕೆ ಒತ್ತು ನೀಡಬೇಕು. ಮಾರುಕಟ್ಟೆ ಅಥವಾ ಉದ್ದಿಮೆಗಳು ಜನರು ಸರ್ಕಾರದ ಮೇಲೆ ಒತ್ತಡ ತಂದು ಉಳಿದ ವ್ಯವಸ್ಥೆಗಳು ಚೆನ್ನಾಗಿರುವಂತೆ ನೋಡಿಕೊಳ್ಳಲು ಪ್ರೇರಕವಾಗಬೇಕು. ಇವು ಮೂರು ಅಂಶಗಳೂ ಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಮಾದರಿ ನಗರ ನಿರ್ಮಾಣ ಸಾಧ್ಯ ಎಂದು ಅವರು ವಿಶ್ಲೇಷಿಸುತ್ತಾರೆ.

ನಗರೀಕರಣ ಆದಾಗ ಮಳೆ ನೀರು ನಿಲ್ಲುವ ಪ್ರಮಾಣ ಜಾಸ್ತಿ ಆಗುತ್ತದೆ. ಕೆರೆ ಕೋಡಿ, ಕಾಲುವೆಗಳನ್ನು ನಿಭಾಯಿಸುವುದು ಕಷ್ಟ. ಇದಕ್ಕಾಗಿ ಆಧುನಿಕ ತಡೆಗೋಡೆಗಳನ್ನು ನಿರ್ಮಿಸಬೇಕು, ಕೆರೆಗಳಿಗೆ ಕಟ್ಟೆಗಳ ನಿರ್ಮಾಣ ಮಾಡಬೇಕು. ಕಾಲುವೆಗಳನ್ನು ತುಸು ಆಧುನೀಕರಣಗೊಳಿಸಿ ಕಾಂಕ್ರೀಟ್‌ ಗೋಡೆಗಳನ್ನು ಹಾಕಬೇಕು. ಕೆರೆ, ಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಡ ಅಥವಾ ವಸತಿ ಸಂಕೀರ್ಣ ನಿರ್ಮಾಣ ಮಾಡಿರುವ ಪ್ರದೇಶಗಳ ಮಾಹಿತಿ ಸಾರ್ವಜನಿಕವಾಗಿ ಲಭ್ಯವಾಗುವಂತೆ ಸರ್ಕಾರ ನೋಡಿಕೊಳ್ಳಬೇಕು. ಅಂಥ ಕಡೆಯಿಂದ ಜನರು ನಿವೇಶನ ಅಥವಾ ನಿವಾಸಗಳನ್ನು ಖರೀದಿಸಬಾರದು. ಈ ವಿಚಾರದಲ್ಲಿ ಜನರೇ ಎಚ್ಚರ ವಹಿಸಬೇಕು ಎಂದು ಸಲಹೆ ನೀಡುತ್ತಾರೆ ವಿಶ್ವನಾಥ್.

‘ತಮ್ಮ ಮಗು ಸುರಕ್ಷಿತವಾಗಿ ಶಾಲೆಗೆ, ಶಾಲೆಯಿಂದ ಮನೆಗೆ ತಲುಪಲಿದೆ ಎಂಬ ಭರವಸೆ ಅಪ್ಪ–ಅಮ್ಮನಲ್ಲಿ ಮೂಡಬೇಕು. ಆರಾಮದಾಯಕವಾಗಿ ಕಚೇರಿ ತಲುಪಲು ಉದ್ಯೋಗಿಗಳಿಗೆ ಸಾಧ್ಯವಾಗಬೇಕು. ನೆಮ್ಮದಿಯ ಜೀವನ ನಡೆಸುವುದಕ್ಕೆ ಪೂರಕ ವಾತಾವರಣವನ್ನು ಸೃಷ್ಟಿಸಬೇಕು. ಇವುಗಳಿಗೆ ತಕ್ಕ ಮೂಲಸೌಕರ್ಯಗಳಿರುವ ನಗರವನ್ನು ಸರ್ಕಾರವು ಅಭಿವೃದ್ಧಿಪಡಿಸಿದಲ್ಲಿ ಜನರಿಂದ ಹೆಚ್ಚಿನ ಉತ್ಪಾದಕತೆ ನಿರೀಕ್ಷಿಸಲು ಸಾಧ್ಯ’ ಎಂದು ಇನ್ಫೊಸಿಸ್‌ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಹೇಳುತ್ತಾರೆ.

ಗುಂಡಿಗಳಿಲ್ಲದ ರಸ್ತೆ, ನಿರ್ಮಲ ಬಡಾವಣೆಗಳು, ಬಡತನ ಮುಕ್ತ ಸಮಾಜ ನಗರಗಳಲ್ಲಿರಬೇಕು. ಅದಕ್ಕೆ ತಕ್ಕುದಾದ ವ್ಯವಸ್ಥೆಯನ್ನು ಆಡಳಿತ ವರ್ಗ ಮಾಡಿಕೊಡಬೇಕು. ಮುಖ್ಯವಾಗಿ ನಿಗದಿತ ಕಾಲಮಿತಿಯೊಳಗೆ, ನಿರ್ದಿಷ್ಟ ರೂಪುರೇಷೆಯಿಂದ ಕೂಡಿದ ಸುಸಜ್ಜಿತ ಹಾಗೂ ಸುಸಂಸ್ಕೃತ ನಗರ ನಿರ್ಮಾಣವಾಗಬೇಕು ಎಂಬ ಅವರ ಅಂಬೋಣ ಸರಿಯಷ್ಟೆ.

ಯಾವುದೇ ನಗರ ಒಂದು ಚೆಸ್‌ ಬೋರ್ಡ್‌ ಮಾದರಿಯಲ್ಲಿ ಅಭಿವೃದ್ಧಿಯಾಗಬೇಕು ಎನ್ನುತ್ತಾರೆ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ, ದೇಶದ ಪ್ರಮುಖ ಭೌತಶಾಸ್ತ್ರಜ್ಞ ಪ್ರೊ. ವಿಕ್ರಂ ಸೋನಿ. ಅಂದರೆ, ಚೆಸ್ ಬೋರ್ಡ್‌ನ ಬಿಳಿ ಮನೆಗಳು ಕಟ್ಟಡನಿರ್ಮಿತ ಪ್ರದೇಶವಾಗಿಯೂ ಕಪ್ಪು ಮನೆಗಳು ಹಸಿರು ಪ್ರದೇಶವಾಗಿಯೂ ಇರಬೇಕು. ಇಡೀ ನಗರ ಈ ರೀತಿ ಪುಟ್ಟ–ಪುಟ್ಟ ಪ್ರದೇಶಗಳಲ್ಲಿ ವಿಭಜನೆಯಾಗಬೇಕು. ಇದರಿಂದ ಪ್ರಾಕೃತಿಕ ಸಮತೋಲನ ಕಾಯ್ದುಕೊಳ್ಳುವುದು ಸಾಧ್ಯ ಎನ್ನುತ್ತಾರೆ ಅವರು. ಸೋನಿ ಅವರು ಬಿಡಿಸಿಟ್ಟ ಯೋಜನೆಯನ್ನು ಬೆಂಗಳೂರಿನಂತಹ ಬೆಳೆದ ನಗರದಲ್ಲಿ ಹೇಗೆ ಅನುಷ್ಠಾನಕ್ಕೆ ತರುವುದು ಎಂಬುದು ನಿಮ್ಮ ಪ್ರಶ್ನೆ ಆಗಿರಬಹುದು. ಆದರೆ, ಹೊಸ ಬಡಾವಣೆಗಳನ್ನು ಅಭಿವೃದ್ಧಿ ಮಾಡುವಾಗ ಇಂತಹ ಮಾದರಿ ಅಳವಡಿಸಿಕೊಳ್ಳಲು ಏನು ಕಷ್ಟ? ಪ್ರವಾಹಪೀಡಿತ ಬೆಂಗಳೂರಿನ ಪೂರ್ವಭಾಗದ ಹಲವು ಪ್ರದೇಶಗಳು ಹೊಸದಾಗಿಯೇ ಅಭಿವೃದ್ಧಿ ಆದಂಥವು. ಆಗ ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಿದ್ದರೆ ಇಂದಿನ ಹಳಹಳಿಕೆಗೆ ಕಾರಣ ಇರುತ್ತಿರಲಿಲ್ಲ.

ತನ್ನ ಬಹುಪಾಲು ಆಹಾರವನ್ನು ತಾನೇ ಬೆಳೆದುಕೊಳ್ಳುವ, ನೀರಿನ ಸ್ವಂತ ಮೂಲ ಹೊಂದುವ, ವಿದ್ಯುತ್‌ ಬಳಕೆ ಕಡಿಮೆ ಮಾಡುವ, ನಿಸರ್ಗದತ್ತವಾದ ವಾತಾನುಕೂಲ ವ್ಯವಸ್ಥೆ ಪಡೆದಿರುವ ಸುಸ್ಥಿರ, ನೈಸರ್ಗಿಕ ನಗರ ರೂಪುಗೊಳ್ಳಬೇಕು ಎಂಬ ಸೋನಿ ಅವರ ಅಭಿಪ್ರಾಯದ ಕುರಿತು ಸರ್ಕಾರ, ಸಮುದಾಯ ಎರಡೂ ಚಿಂತಿಸಬೇಕು.

ನಾಗರಿಕವಾಗಿರಲಿ ನಗರವಾಸಿಗಳ ವರ್ತನೆ!

ನಗರವೊಂದರ ಅಂದ, ಚೆಂದ, ಸಮತೋಲಿತ ಅಭಿವೃದ್ಧಿಯಲ್ಲಿ ಜನರ ಪಾತ್ರ ಬಹಳ ಹಿರಿದು. ನಗರದಲ್ಲಿದ್ದು ಅನಾಗರಿಕರಂತೆ ವರ್ತಿಸಿದರೆ ಮತ್ತೆ ಸರ್ಕಾರವನ್ನು ದೂರಲು ನಮಗೆಲ್ಲಿಯ ಅರ್ಹತೆಯಿದೆ? ನಿಯಮಗಳನ್ನು ಗಾಳಿಗೆ ತೂರಿ ಕಟ್ಟಡಗಳ ನಿರ್ಮಾಣಕ್ಕೆ ಮುಂದಾಗುವುದು, ಸಮ್ಮತಿ ಸಿಗದಿದ್ದರೆ ಲಂಚ ನೀಡಿಯಾದರೂ ದಕ್ಕಿಸಿಕೊಳ್ಳುವುದು, ಎಲ್ಲೆಂದರೆಲ್ಲಿ ಕಸ ಬಿಸಾಡುವುದು ಇತ್ಯಾದಿಗಳು ನಗರದಲ್ಲಿದ್ದು ಪ್ರದರ್ಶಿಸುವ ಅನಾಗರಿಕ ವರ್ತನೆಯಷ್ಟೆ.

ಅಲ್ಲಲ್ಲಿ ಎಸೆಯುವ ಪ್ಲಾಸ್ಟಿಕ್ ತ್ಯಾಜ್ಯಗಳು ಚರಂಡಿ ನೀರಿನ ಹರಿವಿಗೆ ತಡೆಯೊಡ್ಡಿ ಕೃತಕ ನೆರೆ ಸೃಷ್ಟಿಗೆ ಕಾರಣವಾಗುವುದು ಸುಳ್ಳಲ್ಲವಲ್ಲ. ವರ್ತಮಾನದಲ್ಲಿ ದೇಶದ ಮಹಾನಗರಗಳಲ್ಲಿ ಸೃಷ್ಟಿಯಾಗುವ ಕೃತಕ ನೆರೆಗಳಿಗೆ ಚರಂಡಿ ವ್ಯವಸ್ಥೆಯಲ್ಲಿನ ತೊಡಕುಗಳೂ ಮುಖ್ಯ ಕಾರಣವೆಂದರೆ ಅತಿಶಯೋಕ್ತಿ ಆಗಲಾರದು.

ಸುಸ್ಥಿರ, ಸಮೃದ್ಧ ನಗರಗಳ ಕನಸು ನನಸಾಗಬೇಕಿದ್ದರೆ ನಾಗರಿಕ ಪ್ರಪಂಚದ ಕೆಲವು ಅನಾಗರಿಕ ವರ್ತನೆಗಳೂ ಕೊನೆಯಾಗಬೇಕಿದೆ. ಜನರು, ಸರ್ಕಾರ, ಅಧಿಕಾರಿಗಳು, ಕಂಪನಿಗಳು ಹೀಗೆ ಎಲ್ಲರ ಒಗ್ಗಟ್ಟಿನಿಂದ ಮಾತ್ರ ಉತ್ತಮ ನಗರ ನಿರ್ಮಾಣ ಸಾಧ್ಯ ಎಂಬುದನ್ನು ಮನಗಾಣಲೇಬೇಕು. ಇಲ್ಲವಾದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪ್ರಕೃತಿಗೆ ಯಾರೂ ಹೇಳಿಕೊಡಬೇಕಿಲ್ಲವಷ್ಟೆ? ಅದು ತನ್ನ ಪಾಡಿಗೆ ತನ್ನ ಕೆಲಸ ಮುಂದುವರಿಸುತ್ತದೆ. ನಾವು ಒತ್ತುವರಿ ಮಾಡಿದ ಕೆರೆಯನ್ನು ಮರಳಿ ಜಲಾವೃತಗೊಳಿಸುವ ತಾಕತ್ತು ನಿಸರ್ಗಕ್ಕಿದೆ. ನಾವು ಅತಿಕ್ರಮಣ ಮಾಡಿರುವ ಕಾಲುವೆಗಳಲ್ಲಿ, ನದಿಗಳಲ್ಲಿ ಮರಳಿ ನೀರು ಹರಿಸುವ ಸಾಮರ್ಥ್ಯ ಪ್ರಕೃತಿಗಿದೆ. ಆಗ ಸಂತ್ರಸ್ತರಾಗುವ ಸರದಿ ಮರಳಿ ನಮ್ಮದಾಗುತ್ತದೆ. ಕೋಲ್ಕತ್ತವನ್ನು ಸಾಯುವ ನಗರಿ ಎಂದು ಕರೆಯಲಾಗುತ್ತದೆ. ಬೆಂಗಳೂರು ಮುಳುಗುವ ನಗರ ಆಗಬಾರದಷ್ಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT