ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಕಾಶಿ: ಸಡಗರದ ಹಿಂದಿನ ಸಂಕಟ– ಟಿ.ಎನ್.‌ ವಾಸುದೇವಮೂರ್ತಿ ಅವರ ವಿಶ್ಲೇಷಣೆ

ಪಟಾಕಿ ತಯಾರಿಕೆಯ ಹಿಂದಿನ ರೌರವ ವಾಸ್ತವವನ್ನೊಮ್ಮೆ ಅವಲೋಕಿಸಿದಾಗ...
Published 18 ಅಕ್ಟೋಬರ್ 2023, 20:49 IST
Last Updated 18 ಅಕ್ಟೋಬರ್ 2023, 20:49 IST
ಅಕ್ಷರ ಗಾತ್ರ

ತಮಿಳುನಾಡಿನ ಮುತ್ಸದ್ದಿಯೂ ಮುಖ್ಯಮಂತ್ರಿಯೂ ಆಗಿದ್ದ ಕೆ.ಕಾಮರಾಜ್‌ ಅವರಿಗೆ ಬಾಲ್ಯದ ಶಾಲಾಶಿಕ್ಷಣ ವನ್ನು ಪೂರ್ಣಗೊಳಿಸಲಾಗಲಿಲ್ಲ. ಅವರ ಈ ಕೊರತೆ ತಮಿಳುನಾಡಿನ ಪಾಲಿಗೆ ಒಂದು ಅನುಗ್ರಹವಾಗಿ ಪರಿಣಮಿಸಿತು. ಆರಂಭಿಕ ಬಾಲ್ಯ ಶಿಕ್ಷಣದ ಮಹತ್ವವನ್ನು ಚೆನ್ನಾಗಿ ಅರಿತಿದ್ದ ಕಾಮರಾಜ್‌, ಮುಖ್ಯಮಂತ್ರಿಯಾದ ಮೇಲೆ ತಮಿಳುನಾಡಿನಾದ್ಯಂತ ಸಾವಿರಾರು ಶಾಲೆಗಳನ್ನು ಸ್ಥಾಪಿಸಿದರು. ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗುವ ಯಾವ ಮಗುವಿಗೂ ಶಾಲೆ ಮೂರು ಕಿ.ಮೀ.ಗಿಂತ ಹೆಚ್ಚು ದೂರ ಇರಕೂಡದು ಎಂದು ಶಿಕ್ಷಣ ಇಲಾಖೆಗೆ ಸೂಚಿಸಿದರು. ಒಂದರಿಂದ ಹತ್ತನೇ ತರಗತಿಯವರೆಗೆ ಪ್ರತಿಯೊಬ್ಬ
ರಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣದ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರು.

ಬಡಮಕ್ಕಳು ಒಪ್ಪೊತ್ತಿನ ಊಟಕ್ಕಾಗಿ ಶಾಲೆ ತೊರೆದು ಕೂಲಿಗೆ ಹೋಗುತ್ತಾರೆ ಎಂಬುದನ್ನು ಅರಿತಿದ್ದ ಅವರು ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೊಳಿಸಿದರು. ಭಾರತಕ್ಕೆ ಪ್ರಥಮ ಬಾರಿಗೆ ಈ ಯೋಜನೆಯನ್ನು ಪರಿಚಯಿಸಿದ ಹೆಗ್ಗಳಿಕೆ ಕಾಮರಾಜ್‌ ಅವರದು. ಪಟಾಕಿ ತಯಾರಿಕೆಗೆ ಹೆಸರಾಗಿರುವ ಶಿವಕಾಶಿಯು ಕಾಮರಾಜ್‌ ಅವರ ತವರು ಜಿಲ್ಲೆ ವಿರುದುನಗರದ ವ್ಯಾಪ್ತಿಗೆ ಒಳಪಟ್ಟಿದೆ. ಇಂತಹ ಶಿವಕಾಶಿಯ ಮಕ್ಕಳಲ್ಲಿ ಅನೇಕರು ಇಂದು ಶಾಲಾಶಿಕ್ಷಣದಿಂದ ವಂಚಿತರಾಗಿದ್ದಾರೆ, ದಿನಗೂಲಿ ಮಾಡುತ್ತಿದ್ದಾರೆ.

ಹಾಗೆ ನೋಡಿದರೆ, ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ಮಕ್ಕಳಿಂದ ಕೆಲಸ ಮಾಡಿಸಿಕೊಳ್ಳುವುದು ಸರ್ವೇಸಾಮಾನ್ಯ. ಆದರೆ ನಾಲ್ಕೈದು ವರ್ಷದ ಮಕ್ಕಳು ಅಪಾಯಕಾರಿ ರಾಸಾಯನಿಕಗಳನ್ನು ಹೊರಸೂಸುವ ಫ್ಯಾಕ್ಟರಿಗಳಲ್ಲಿ ದುಡಿಯುವುದು, ಆಟ-ಪಾಠಗಳಿಲ್ಲದೇ ದಿನದ ಹತ್ತು-ಹದಿನೈದು ಗಂಟೆಗಳನ್ನು ದುಡಿಮೆಯಲ್ಲಿ ಕಳೆಯುವುದು ನಿಜವಾಗಿಯೂ ಆಘಾತಕಾರಿ ಸಂಗತಿ. ಶಿವಕಾಶಿಯಲ್ಲಿ ಈ ಪರಿಪಾಟವು ಹಲವು ದಶಕಗಳಿಂದಲೂ ಮುಂದುವರಿದುಕೊಂಡು ಬಂದಿದೆ.

ಅರವತ್ತರ ದಶಕದಲ್ಲಿ ಶಿವಕಾಶಿ ತೀವ್ರವಾದ ಕ್ಷಾಮದಿಂದ ತತ್ತರಿಸಿತು. ಜನ ನಿರುದ್ಯೋಗಿಗಳಾ
ದರು, ರೈತಾಪಿ ವರ್ಗ ಗುಳೆ ಹೋಗಲಾರಂಭಿಸಿತು. ಆಗ ಉದ್ಯಮಶೀಲ ಪ್ರವೃತ್ತಿಯುಳ್ಳ ಒಂದಿಷ್ಟು ಯುವಕರು ಅಲ್ಲಿ ಪಟಾಕಿ ಉದ್ಯಮವನ್ನು ಪ್ರಾರಂಭಿಸಿದರು. ಎಷ್ಟಾದರೂ ಪಟಾಕಿ ತಯಾರಿಕೆಗೆ ತೇವಾಂಶಭರಿತ ಹವಾಮಾನಕ್ಕಿಂತ ಶಿವಕಾಶಿಯಂತಹ ಬರಪೀಡಿತವಾದ ಬಿಸಿಲಿನ ವಾತಾವರಣವೇ ಸೂಕ್ತ. ಅಂದು ಅಲ್ಲಿ ಪ್ರಾರಂಭವಾದ ಪಟಾಕಿ ಉದ್ಯಮ ಇಂದಿನವರೆಗೂ ಯಶಸ್ವಿಯಾಗಿ ಬೆಳೆಯುತ್ತಾ ಬಂದಿದೆ.

ಅಂದು ಶಿವಕಾಶಿಯನ್ನು ಆವರಿಸಿದ ಕ್ಷಾಮವು ಉದ್ಯಮಿಗಳು ಮತ್ತು ರಾಜಕಾರಣಿಗಳಿಗೆ ಸುಗ್ಗಿಯಾಗಿ ಪರಿಣಮಿಸಿತು. ಇಂದು ಶಿವಕಾಶಿಯು ಪಟಾಕಿ ಉದ್ಯಮದ ಕಾಶಿ ಎನಿಸಿದೆ. ದೇಶದ ಶೇ 90ರಷ್ಟು ಪಟಾಕಿಗಳು ಮತ್ತು ಶೇ 80ರಷ್ಟು ಬೆಂಕಿಪೊಟ್ಟಣಗಳು ಶಿವಕಾಶಿಯಲ್ಲಿ ತಯಾರಾಗುತ್ತವೆ. ಅಲ್ಲಿ 2.6 ಲಕ್ಷ ಮಂದಿ ಪಟಾಕಿ ಕಾರ್ಖಾನೆಗಳಲ್ಲಿ ದಿನಗೂಲಿಗಳಾಗಿ ದುಡಿಯುತ್ತಿದ್ದಾರೆ ಎಂಬ ವರದಿಗಳಿವೆ. ದಿನಗೂಲಿಗಳ ಪೈಕಿ ಶೇ 50ಕ್ಕೂ ಹೆಚ್ಚು ಪಾಲು ಬಾಲಕಾರ್ಮಿಕರದ್ದು. ಇವರಲ್ಲಿ ಶೇ 90ರಷ್ಟು ಮಂದಿ ಹೆಣ್ಣುಮಕ್ಕಳಾಗಿದ್ದು, ಹೆಚ್ಚಿನ ಬಾಲಕಾರ್ಮಿಕರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ.

ಕೇಂದ್ರ ಸರ್ಕಾರವು 1986ರಲ್ಲೇ ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯನ್ನು ಜಾರಿಗೆ ತಂದಿದೆ. ಹಾಗಿದ್ದೂ ಈ ಊರಿನಲ್ಲಿ ಈ ಅನಿಷ್ಟ ಪದ್ಧತಿ ಇಂದಿಗೂ ರಾಜಾರೋಷವಾಗಿ ಮುಂದುವರಿದಿದೆ. ಶಿವಕಾಶಿಯಂತಹ ಸಣ್ಣ ಪಟ್ಟಣದಲ್ಲಿ ವಾರ್ಷಿಕ ವಹಿವಾಟು ಸಾವಿರಾರು ಕೋಟಿ ತಲುಪಿರುವಾಗ, ಉದ್ಯಮಿಗಳು ಮತ್ತು ರಾಜಕಾರಣಿಗಳ ಮನೆಬಾಗಿಲಿಗೆ ನಿರಂತರವಾಗಿ ಹಣದ ಹೊಳೆ ಹರಿದುಬರುತ್ತಿರುವಾಗ, ಕಡತದೊಳಗಿರುವ ಕಾಯ್ದೆಯನ್ನು ಉಲ್ಲಂಘಿಸುವುದು, ಉಲ್ಲಂಘಿಸಿಯೂ ನುಣುಚಿಕೊಳ್ಳುವುದು ಕಷ್ಟದ ಕೆಲಸವೇ? ದಲ್ಲಾಳಿಗಳು ಎಗ್ಗಿಲ್ಲದೇ ಮಕ್ಕಳ ಕೈಲಿ 10ರಿಂದ 15 ಗಂಟೆಗಳ ಕಾಲ ದುಡಿಸಿಕೊಳ್ಳುತ್ತಿದ್ದಾರೆ. ಕಚ್ಚಾ ಸಾಮಗ್ರಿಗಳನ್ನು ಕೊಟ್ಟು, ಮನೆಯಿಂದಲೇ ಕೆಲಸ ಮಾಡಿಸಿಕೊಂಡು ದಿನಗೂಲಿಯ ಹೆಸರಲ್ಲಿ ಪುಡಿಗಾಸನ್ನು ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪವಿದೆ.

ಪಟಾಕಿ ಉದ್ಯಮದಿಂದಾಗಿ ಶಿವಕಾಶಿಯಲ್ಲಿ ಶೇ 100ರಷ್ಟು ಉದ್ಯೋಗ ಸೃಷ್ಟಿಯಾಗಿದೆ, ಈ ಉದ್ಯಮ ಇರದೇ ಹೋಗಿದ್ದರೆ, ಕೃಷಿ ಚಟುವಟಿಕೆ ಇಲ್ಲದ ಕಾರಣ ಇಡೀ ಊರು ಹಸಿವಿನಿಂದ ಸಾಯಬೇಕಾಗು
ತ್ತಿತ್ತು ಎಂಬುದು ಅಲ್ಲಿನ ಕೆಲವರ ಸಮರ್ಥನೆ. ಆದರೆ, ಇವರಾರೂ ಜನಪರವಾಗಿ ಯೋಚಿಸುವವರಲ್ಲ. ಹಾಗೆ ಯೋಚಿಸುವವರಾಗಿದ್ದರೆ ಬಾಲಕಾರ್ಮಿಕ ಪದ್ಧತಿಯನ್ನು ಹೀಗೆ ಅನುಮೋದಿಸುತ್ತಿರಲಿಲ್ಲ.

‘ಮಕ್ಕಳನ್ನು ಉದ್ಯೋಗಕ್ಕೆ ಸೇರಿಸಿಕೊಳ್ಳುವುದು, ಅವರು ಬೆಳೆದು ದೊಡ್ಡವರಾದ ಕೂಡಲೇ ಅವರನ್ನು ಕೆಲಸದಿಂದ ತೆಗೆದುಹಾಕುವುದು ಇಲ್ಲಿ ಮಾಮೂಲು. ಏಕೆಂದರೆ, ದೊಡ್ಡವರಾದ ಮೇಲೆ ಅವರು ಕಾರ್ಮಿಕ ಕಾನೂನಿನ ಜಾರಿಗೆ ಒತ್ತಾಯಿಸುತ್ತಾರೆ, ನ್ಯಾಯಯುತ ಹಕ್ಕು, ಸೌಲಭ್ಯಗಳಿಗಾಗಿ ಆಗ್ರಹಿಸುತ್ತಾರೆ. ಶಿವಕಾಶಿಯಲ್ಲಿ ಪ್ರೌಢವಯಸ್ಕರಾದ ಪುರುಷರ್‍ಯಾರೂ ಪಟಾಕಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವುದಿಲ್ಲ. ಕ್ವಾರಿ ಕೆಲಸ ಮಾಡುತ್ತಾರೆ, ಇಲ್ಲವೇ ಗುಳೆ ಹೋಗುತ್ತಾರೆ’ ಎಂದು ಬಾಲಕಾರ್ಮಿಕ ಪದ್ಧತಿಯ ವಿರುದ್ಧ ಚಳವಳಿ ನಡೆಸುತ್ತಿರುವ ಪ್ರಭಾಕರನ್‌ ಹೇಳುತ್ತಾರೆ. ತಮಿಳುನಾಡಿನ ಇತರ ಗ್ರಾಮಗಳ ಮಕ್ಕಳ ಸ್ಥಿತಿಗತಿಗೂ ನಿರ್ದಿಷ್ಟವಾಗಿ ಶಿವಕಾಶಿಯ ಮಕ್ಕಳ ಸ್ಥಿತಿಗತಿಗೂ ಇರುವ ವ್ಯತ್ಯಾಸವನ್ನು ಗಮನಿಸಿದರೆ ವಸ್ತುಸ್ಥಿತಿ ತಿಳಿಯುತ್ತದೆ. ಶಿವಕಾಶಿಯಲ್ಲಿ ಮಕ್ಕಳು ಆಟವಾಡುವುದು ಕಾಣಸಿಗುವುದಿಲ್ಲ. ಮುಂಜಾನೆ ತಮ್ಮ ಮಕ್ಕಳನ್ನು ಕೂಲಿಗೆ ಕರೆದೊಯ್ಯುವ ಅಲ್ಲಿಯ ತಾಯ್ತಂದೆಯರು ಹಾಗೆ ಆಟವಾಡಲು ಆಸ್ಪದವನ್ನೇ ನೀಡುವುದಿಲ್ಲ ಎನ್ನುತ್ತಾರೆ.

ಹಿಂದೆಲ್ಲ ಹಿರಿಯ ತಲೆಮಾರಿನವರು ತಮ್ಮ ವಿವೇಕ, ಕೌಶಲ ಮತ್ತು ಜೀವನಾನುಭವಗಳನ್ನು ಕಿರಿಯ ತಲೆಮಾರಿ ನವರಿಗೆ ಧಾರೆ ಎರೆಯುತ್ತಿದ್ದರು. ಆದರೆ ಒಂದು ಪ್ರದೇಶದ ಸಾವಿರಾರು ಮಂದಿ ಹೀಗೆ ಹಲವು ದಶಕಗಳ ವರೆಗೆ ಒಂದೇ ನಮೂನೆಯ ಕೆಲಸ ಮಾಡುತ್ತಿದ್ದರೆ ಅವರ ಅಂತರಂಗ ವಿಕಾಸವಾಗುವುದು ಹೇಗೆ? ಅವರ ಮನಸ್ಸುಗಳು ಅರಳುವ ಬಗೆ ಹೇಗೆ? ಭೂತ, ವರ್ತಮಾನ, ಭವಿಷ್ಯದ ವ್ಯತ್ಯಾಸಗಳೇ ಅಳಿಸಿಹೋದ ಏಕರೂಪಿ ಯಂತ್ರಮಯ ಜೀವನಪದ್ಧತಿಯಲ್ಲಿ ಯಾರು ಯಾರಿಗೆ ಏನನ್ನು ಧಾರೆ ಎರೆಯಬಲ್ಲರು?

ನಿಯಮಗಳನ್ನು ಗಾಳಿಗೆ ತೂರಿ ಉದ್ಯಮ– ವ್ಯಾಪಾರ ನಡೆಸುವಲ್ಲಿ ಭ್ರಷ್ಟತನ, ಅಕ್ರಮ ವಹಿವಾಟುಗಳು ಇದ್ದೇ ಇರುತ್ತವೆ. ಇದಕ್ಕೆ ಶಿವಕಾಶಿಯೂ ಹೊರತಲ್ಲ. ಅನಧಿಕೃತ ಗೋದಾಮುಗಳ ನಿರ್ಮಾಣ, ಮಿತಿಮೀರಿ ಸಿಡಿಮದ್ದುಗಳ ದಾಸ್ತಾನು, ಅವೈಜ್ಞಾನಿಕ ರೀತಿಯಲ್ಲಿ ಪಟಾಕಿ ತಯಾರಿಕಾ ಘಟಕಗಳ ನಿರ್ಮಾಣದಂಥ ಕಾರಣಗಳಿಂದ ಅಲ್ಲಿ ಪದೇಪದೇ ಅಗ್ನಿ ದುರಂತಗಳು ಸಂಭವಿಸುತ್ತಿವೆ. ಅಗ್ನಿ ಅವಘಡಗಳಿಗೆ 1990ರಲ್ಲಿ 90 ಮಂದಿ, 2009ರಲ್ಲಿ 40 ಮಂದಿ, 2011ರಲ್ಲಿ 12 ಮಂದಿ, 2012ರಲ್ಲಿ 80 ಮಂದಿ  ಬಲಿಯಾಗಿದ್ದಾರೆ. ಮೊನ್ನೆ ಮಂಗಳವಾರ ಸಹ ಅಗ್ನಿ ದುರಂತದಲ್ಲಿ 13 ಮಂದಿ ಸುಟ್ಟು ಕರಕಲಾಗಿದ್ದಾರೆ.

ಮಕ್ಕಳು ಗಂಟೆಗಟ್ಟಲೆ ಕೂತಲ್ಲೇ ಕೂತು ಕೆಲಸ ಮಾಡುವುದರಿಂದ ಬೆನ್ನುನೋವು, ಕುತ್ತಿಗೆ ನೋವು, ಸುಟ್ಟಗಾಯ, ಕ್ಷಯ, ಅಪೌಷ್ಟಿಕತೆ, ಜೀರ್ಣಾಂಗ ಸಮಸ್ಯೆಗಳು, ಚರ್ಮರೋಗ, ಉಸಿರಾಟದ ತೊಂದರೆ ಯಂತಹ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ (ಎಕ್ಸ್‌ಪ್ಲಾಯ್‌ಟೆಡ್‌ ಚೈಲ್ಡ್‌, ಲೇ: ಟಿ.ಎನ್. ಕಿಚ್‌ಲು, ಎಂ.ಡಿ.ಪಬ್ಲಿಕೇಷನ್‌, ನವದೆಹಲಿ).

ಮಕ್ಕಳ ಬಾಲ್ಯವನ್ನು ನುಂಗಿ ನೊಣೆಯುತ್ತಿರುವ ಇಂತಹ ಅಮಾನವೀಯ ಕಸುಬನ್ನು ಪ್ರವರ್ಧಿಸುತ್ತಿರುವ ಶಿವಕಾಶಿಯನ್ನು, ಅದು ಸದಾ ಕ್ರಿಯಾಶೀಲವಾಗಿರುತ್ತದೆ ಎಂಬ ಕಾರಣಕ್ಕೆ, ‘ಕುಟ್ಟಿ ಜಪಾನ್‌’ (ಮಿನಿ ಜಪಾನ್‌) ಎಂದು ಬಣ್ಣಿಸಲಾಗುತ್ತದೆ. ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಸಾಮಾಜಿಕ ಆರೋಗ್ಯ, ಸುಭಿಕ್ಷ ಜೀವನಪದ್ಧತಿಗಳಿಗೆ ಹೆಸರುವಾಸಿಯಾದ ಜಪಾನ್‌ನಂತಹ ಶ್ರೀಮಂತ ದೇಶವನ್ನು ಹಸುಗೂಸುಗಳ ಪಾಲಿನ ನರಕವಾಗಿರುವ ಶಿವಕಾಶಿಗೆ ಹೋಲಿಸುವುದು ಕುಚೋದ್ಯವಲ್ಲವೇ?

ನಾವು ನಮ್ಮ ರಾಜಕಾರಣಿಗಳನ್ನು ಮೆರೆಸುವಾಗ, ಚುನಾವಣಾ ಫಲಿತಾಂಶ ಬಂದಾಗ, ಕ್ರಿಕೆಟ್‌ ಮ್ಯಾಚ್‌ನಲ್ಲಿ ಗೆದ್ದಾಗ, ಇಷ್ಟದೈವದ ಮೆರವಣಿಗೆ ಮಾಡುವಾಗ, ದೀಪಾವಳಿ ಹಬ್ಬವನ್ನು ಆಚರಿಸುವಾಗ ಪಟಾಕಿ, ಬಾಣ ಬಿರುಸುಗಳನ್ನು ಸಿಡಿಸಿ ಸಂಭ್ರಮಿಸುತ್ತೇವೆ. ಹಾಗೆ ಸಂಭ್ರಮಿಸುವ ಮುನ್ನ ಪಟಾಕಿ ಉತ್ಪಾದನೆಯ ಹಿಂದಿರುವ ಈ ರೌರವ ವಾಸ್ತವವನ್ನೊಮ್ಮೆ ಅವಲೋಕಿಸೋಣ.

ಲೇಖಕ: ಸಹಪ್ರಾಧ್ಯಾಪಕ ಆದಿಚುಂಚನಗಿರಿ ವಿಶ್ವವಿದ್ಯಾಲಯ

[object Object]

ಟಿ.ಎನ್.‌ ವಾಸುದೇವಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT