ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ: ಅಸಮಾನತೆಯ ತಕ್ಕಡಿ ಹೇಳುವುದೇನು?

ಆರ್ಥಿಕ ಸಮಾನತೆ ಕುರಿತ ಚರ್ಚೆಗೆ ಸಾಮಾಜಿಕ ಆಯಾಮವೂ ಸಿಗುವಂತೆ ಆಗಬೇಕು
Published : 9 ಸೆಪ್ಟೆಂಬರ್ 2024, 19:30 IST
Last Updated : 9 ಸೆಪ್ಟೆಂಬರ್ 2024, 19:30 IST
ಫಾಲೋ ಮಾಡಿ
Comments

ಅಸಮಾನತೆ ಎಂಬುದು ದೊಡ್ಡ ಸಮಸ್ಯೆ ಎಂದು ಎಲ್ಲರೂ ಮಾತನಾಡುತ್ತಲೇ ಇದ್ದಾರೆ. ಆದರೂ ಅಸಮಾನತೆಯ ಪ್ರಮಾಣ ಏರುತ್ತಲೇ ಇದೆ. 1900ರಿಂದ ಈಚೆಗಿನ ಯಾವ ಕಾಲದಲ್ಲಿಯೂ ಅದು ಈಗಿರುವಷ್ಟು ಪ್ರಮಾಣದಲ್ಲಿ ಇರಲಿಲ್ಲ ಎಂದು ಹೇಳಲಾಗುತ್ತದೆ. ಅಸಮಾನತೆಯು ಎರಡನೇ ಮಹಾಯುದ್ಧದ ನಂತರ 1980ರವರೆಗೂ ಕಡಿಮೆಯಾಗುತ್ತಾ ಬಂದಿತ್ತು. ಆದರೆ ಅಲ್ಲಿಂದ ಮುಂದಕ್ಕೆ ಏರುತ್ತಾ ಹೋಗಿ ಅದು ಈವರೆಗಿನ ಗರಿಷ್ಠ ಮಟ್ಟ ಮುಟ್ಟಿದೆ. 

ಅದಕ್ಕೆ ಕಾರಣ ಏನು? ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಅವರು ಇದಕ್ಕೆ ಉತ್ತರಿಸುತ್ತಾ, ಆ ಅವಧಿಯಲ್ಲಿ ಆದ ಬೆಳವಣಿಗೆಯನ್ನು ಗಮನಿಸುತ್ತಾರೆ. ಆಗ ಚೀನಾವು ಮುಕ್ತ ಮಾರುಕಟ್ಟೆಯನ್ನು ಒಪ್ಪಿಕೊಂಡಿತ್ತು. ಅಮೆರಿಕ ಹಾಗೂ ಬ್ರಿಟನ್‌ನಲ್ಲಿ ಆಡಳಿತಕ್ಕೆ ಬಂದ ರೊನಾಲ್ಡ್ ರೇಗನ್ ಮತ್ತು ಮಾರ್ಗರೇಟ್ ಥ್ಯಾಚರ್, ಶ್ರೀಮಂತರಿಗೆ ವಿಧಿಸುತ್ತಿದ್ದ ತೆರಿಗೆಯನ್ನು ದಿಢೀರನೆ ಇಳಿಸಿಬಿಟ್ಟರು. ಅಮೆರಿಕದಲ್ಲಿ ಅದು ಶೇಕಡ 70ರಷ್ಟು ಇದ್ದದ್ದು ಶೇ 40ಕ್ಕೆ ಇಳಿಯಿತು. ಅಷ್ಟೇ ಅಲ್ಲ, ಆರ್ಥಿಕ ಬೆಳವಣಿಗೆ ಆಗಬೇಕಾದರೆ ಅಸಮಾನತೆ ಅನಿವಾರ್ಯ ಮತ್ತು ಆರ್ಥಿಕತೆ ಬೆಳೆದಂತೆ ಅದರ ಫಲ ಎಲ್ಲರಿಗೂ ಹರಿದುಹೋಗುತ್ತದೆ ಅನ್ನುವುದು ಆಗಿನ ನಂಬಿಕೆಯಾಗಿತ್ತು. ಹಾಗಾಗಿ, ಅಸಮಾನತೆಗೆ ಒಂದು ಸಮರ್ಥನೆ ಸಿಕ್ಕಿಬಿಟ್ಟಿತು.

ಉದ್ದಿಮೆಗಳ ಸಿಇಒ ಸಂಬಳ ನೂರು ಪಟ್ಟು ಹೆಚ್ಚಾಯಿತು. ಅವರಿಂದ ಉದ್ದಿಮೆಗಳಲ್ಲಿ ಉತ್ಪಾದನೆಯ ಪ್ರಮಾಣ ಹೆಚ್ಚಾಯಿತು. ಅದಕ್ಕೆ ಸರಿಯಾಗಿ ಅವರಿಗೆ ವೇತನ ಕೊಡಬೇಕು ಎಂಬ ಒಮ್ಮತ ಬೆಳೆಯಿತು. ಈ ಪ್ರಕ್ರಿಯೆಯಲ್ಲಿ ಕೆಲಸಗಾರರ ಕೂಲಿ ಕನಿಷ್ಠವಾಯಿತು.

ಅಭಿಜಿತ್, ಮತ್ತೊಬ್ಬ ಅರ್ಥಶಾಸ್ತ್ರಜ್ಞ ಪಿಕೆಟ್ಟಿ ಇವರೆಲ್ಲಾ ಗಮನಿಸಿರುವಂತೆ, ಶ್ರೀಮಂತರಿಗೆ ವಿಧಿಸುತ್ತಿದ್ದ ತೆರಿಗೆಯ ಪ್ರಮಾಣವನ್ನು ಕಡಿತ ಮಾಡಿದ್ದರಿಂದ ಅಸಮಾನತೆಯ ಪ್ರಮಾಣ ಹೆಚ್ಚಾಗಿದೆ. ಆದರೆ ಬೆಳವಣಿಗೆಯ ಪ್ರಮಾಣ ಹೆಚ್ಚುವ ಬದಲು ಕುಸಿದಿದೆ. ಅಷ್ಟೇ ಅಲ್ಲ, ಅತಿ ಶ್ರೀಮಂತರ ಆದಾಯ ವಿಪರೀತ ಹೆಚ್ಚಾಗಿದೆ. ತಿಂಗಳಿಗೊಂದು ಫೆರಾರಿ ಕಾರು ಕೊಂಡರೂ ಮಕ್ಕಳ ಮದುವೆಗಾಗಿ ಕೋಟಿಗಟ್ಟಲೆ ಖರ್ಚು ಮಾಡಿದರೂ ಅವರ ಸಂಪತ್ತು ಕರಗುವುದಿಲ್ಲ, ಏರುತ್ತಲೇ ಹೋಗುತ್ತದೆ. ಹೆಚ್ಚಿದ ಸಂಪತ್ತು ಅವರ ಆದಾಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಹಾಗಾಗಿಯೇ ಶ್ರೀಮಂತರ ಆದಾಯದ ಬಹುಭಾಗ ಅವರ ಸಂಪತ್ತು ತಂದುಕೊಡುವ ಆದಾಯದಿಂದ ಬರುತ್ತಿದೆ. ಅವರ ಹೊಸ ಹೂಡಿಕೆಯಿಂದಾಗಲಿ, ಶ್ರಮದಿಂದಾಗಲಿ ಬಂದದ್ದು ಕಡಿಮೆ. ಅವರು ಬಹುತೇಕ ಉದ್ದಿಮೆಗಳಲ್ಲಿ ಏಕಸ್ವಾಮ್ಯ ಸಾಧಿಸಿರುವುದರಿಂದ ಅವರಿಗೆ ಸ್ಪರ್ಧೆಯ ಆತಂಕ ಇಲ್ಲ. ಹಾಗಾಗಿ ಹೆಚ್ಚಿನ ಹೂಡಿಕೆಯೂ ಬೇಕಾಗಿಲ್ಲ.

ಹೂಡಿಕೆ ಹಾಗೂ ಲಾಭದ ನಡುವಿನ ಸಂಬಂಧ ಕಡಿಮೆಯಾಗಿದೆ ಎಂದು ಅಭಿಜಿತ್ ಗುರುತಿಸುತ್ತಾರೆ. ಮಿಲ್ಟನ್ ಫ್ರೀಡ್‌ಮನ್ ಪ್ರಕಾರ, ಬಿಸಿನೆಸ್ಸಿನ ಬಿಸಿನೆಸ್ಸೇ ಬಿಸಿನೆಸ್. ಅಂದರೆ, ಗರಿಷ್ಠ ಲಾಭವೇ ಉದ್ದೇಶವಾಗಿರುವುದರಿಂದ ಅತಿ ಲಾಭವಿಲ್ಲದ ಕಡೆ ಅವರು ಹೂಡಿಕೆ ಮಾಡುವುದಿಲ್ಲ. ದೇಶದ ಆರ್ಥಿಕತೆಯ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ.

ಇಂದಿನ ಬೃಹತ್‌ ಉದ್ಯಮಪತಿಗಳು ಹಿಂದಿನವರಂತೆ ಬಟ್ಟೆಯಂತಹ ಸಾಂಪ್ರದಾಯಿಕ ವಲಯಗಳಿಗೆ ತಮ್ಮನ್ನು ಸೀಮಿತ ಮಾಡಿಕೊಂಡಿಲ್ಲ. ಬೃಹತ್ ಕೈಗಾರಿಕೆಗಳು, ಶಸ್ತ್ರಾಸ್ತ್ರ, ಪೆಟ್ರೋಲಿಯಂ, ಟೆಲಿಕಾಂನಂತಹ ಎಲ್ಲ ಕ್ಷೇತ್ರ ಗಳಲ್ಲೂ ದಾಂಗುಡಿ ಇಡುತ್ತಿದ್ದಾರೆ. ಅದಕ್ಕೆ ಬೇಕಾದ ರಾಜಕೀಯ ಬೆಂಬಲವನ್ನು ಒಟ್ಟುಮಾಡಿಕೊಳ್ಳಲು ರಾಜಕೀಯ ಪಕ್ಷಗಳಿಗೆ ಧಾರಾಳವಾಗಿ ದೇಣಿಗೆ ನೀಡುತ್ತಿದ್ದಾರೆ. ಸರ್ಕಾರಗಳು ಇವರಿಗಾಗಿ ನೀತಿಗಳನ್ನು ಸಡಿಲಿಸುತ್ತವೆ. ಹೊರದೇಶಗಳಲ್ಲೂ ಗುತ್ತಿಗೆ ಕೊಡಿಸಲು ನೆರವಾಗುತ್ತವೆ. ನೈಸರ್ಗಿಕ ಸಂಪನ್ಮೂಲಗಳು, ಸರ್ಕಾರಿ ಸ್ವತ್ತುಗಳು ಅಗ್ಗದ ದರದಲ್ಲಿ ಇವರ ಕೈಸೇರುತ್ತವೆ. ಸರ್ಕಾರದೊಂದಿಗೆ ಸಂಬಂಧ ಇಟ್ಟುಕೊಳ್ಳುವುದಕ್ಕೆ, ನೆರವು ಪಡೆದುಕೊಳ್ಳುವುದಕ್ಕೆ ಇವರಿಗೆ ಯಾವುದೇ ಹಿಂಜರಿಕೆ ಇರುವುದಿಲ್ಲ.

ಶತಕೋಟ್ಯಧಿಪತಿಗಳಿಗೆ ತಮ್ಮ ಸಂಪತ್ತನ್ನಾಗಲಿ, ರಾಜಕೀಯ ನಂಟನ್ನಾಗಲಿ ಸಾರ್ವಜನಿಕವಾಗಿ ಪ್ರದರ್ಶಿಸಿಕೊಳ್ಳುವುದಕ್ಕೆ ಸಂಕೋಚವಿಲ್ಲ. ಬದಲಿಗೆ ಸಂಭ್ರಮವಿದೆ. ಮದುವೆಗೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡುವುದು ಹೆಮ್ಮೆಯ ವಿಷಯವಾಗುತ್ತದೆ. ಅಸಮಾನತೆ ಗರಿಷ್ಠ ಮಟ್ಟದಲ್ಲಿದೆ, ಶೇ 56.5ರಷ್ಟು ಜನ ಆರೋಗ್ಯಕರ ಆಹಾರವನ್ನು ಕೊಳ್ಳುವ ಸ್ಥಿತಿಯಲ್ಲೂ ಇಲ್ಲ ಎಂಬಂತಹ ಸಂಗತಿಗಳನ್ನು ಪರಿಗಣಿಸಿದಾಗ, ಇದು ಅನವಶ್ಯಕ ದುಂದು ಅನ್ನಿಸಬಹುದು. ಕರ್ನಾಟಕ ಸರ್ಕಾರದ ಅನ್ನಭಾಗ್ಯ ಹಾಗೂ ಯುವನಿಧಿಯಂತಹ ಯೋಜನೆಗಳ ವೆಚ್ಚಕ್ಕೆ ಒಂದು ವರ್ಷಕ್ಕೆ ಆಗುತ್ತಿತ್ತಲ್ಲ ಎಂದು ಬೇಸರವಾಗಬಹುದು. ಆದರೆ ಅವರು ಈ ಬಗೆಯಲ್ಲಿ ಖರ್ಚುಗಳನ್ನು ಮಾಡುತ್ತಲೇ ಇರುತ್ತಾರೆ.

ಶ್ರೀಮಂತರು ಏಕೆ ಹೀಗೆ ಹಣ ಖರ್ಚು ಮಾಡುತ್ತಾರೆ ಅನ್ನುವುದು ಹಲವರನ್ನು ಕಾಡುತ್ತದೆ. ಇದಕ್ಕೆ ಆರ್ಥಿಕ ಕಾರಣಗಳಿಲ್ಲ. ಇದು ಬಹುತೇಕ ಅವರ ಸಾಮಾಜಿಕ ಸ್ಥಾನಮಾನ ಹಾಗೂ ಅಧಿಕಾರವನ್ನು ಪ್ರದರ್ಶಿಸುವ ಸಲುವಾಗಿ ಮಾಡುವ ಖರ್ಚಾಗಿರುತ್ತದೆ. ತೈಲಾಗಾರ, ಬಂದರು, ವಿಮಾನ ನಿಲ್ದಾಣ, ದೊಡ್ಡ ಉದ್ದಿಮೆಗಳು ಹೀಗೆ ಏನನ್ನು ಬೇಕಾದರೂ ಅವರು ಕೊಳ್ಳಬಹುದು. ಎಷ್ಟೇ ದೊಡ್ಡ ನಟರಾಗಿರಲಿ, ಕ್ರೀಡಾಪಟುವಾಗಿರಲಿ, ರಾಜಕಾರಣಿಯಾಗಿರಲಿ ಅವರ ಕರೆಯನ್ನು ತಿರಸ್ಕರಿಸುವ ಸ್ಥಿತಿಯಲ್ಲಿ ಇರುವುದಿಲ್ಲ. ಇವರು ಆಯೋಜಿಸುವ ಸಮಾರಂಭಗಳಲ್ಲಿ ನಡೆಯುವುದು ಇಂತಹ ಅಧಿಕಾರ ಪ್ರದರ್ಶನ.

ರಾಜಕೀಯಶಾಸ್ತ್ರಜ್ಞ ಮೈಕೆಲ್ ಸ್ಯಾಂಡೆಲ್‌ ಹೇಳುವಂತೆ, ತಮ್ಮ ಯಶಸ್ಸು ಹಾಗೂ ಸಂಪತ್ತಿಗೆ ತಮ್ಮ ಶ್ರಮ ಮತ್ತು ಪ್ರತಿಭೆಯೇ ಕಾರಣ ಅನ್ನುವ ಭಾವನೆ ಬಹುಪಾಲು ಶ್ರೀಮಂತರಲ್ಲಿ ಇರುತ್ತದೆ. ಹಾಗಾಗಿ, ಅದನ್ನು ತಾವು ತಮಗೆ ಇಚ್ಛೆ ಬಂದಂತೆ ಖರ್ಚು ಮಾಡಬಹುದು ಅನ್ನುವ ವಿಚಾರ ಅವರಲ್ಲಿ ಇರುತ್ತದೆ. ಆದರೆ ಇದು ಪೂರ್ತಿ ನಿಜವಲ್ಲ. ಹುಟ್ಟು, ಪರಿಸ್ಥಿತಿಯಂತಹ ಹಲವು ಅಂಶಗಳು ಅವರ ಸಂಪತ್ತಿಗೆ ಕಾರಣವಾಗಿರುತ್ತವೆ. ಪಿಕೆಟ್ಟಿ ಹೇಳುವಂತೆ, ಅತಿ ಶ್ರೀಮಂತರಲ್ಲಿ ಬಹುತೇಕರಿಗೆ ಸಂಪತ್ತು ಬಂದಿರುವುದು ವಂಶಪಾರಂಪರ್ಯವಾಗಿ. ಜೊತೆಗೆ ದೇಶದ ಕಾನೂನು, ಸರ್ಕಾರ ಒದಗಿಸಿದ ಮೂಲ ಸೌಕರ್ಯ, ಸಾಮಾಜಿಕ ನೀತಿಯಂತಹವುಗಳ ನೆರವು ಇಲ್ಲದೇ ಹೋಗಿದ್ದರೆ ಈ ಸಂಪತ್ತನ್ನು ಗಳಿಸುವುದಕ್ಕಾಗಲಿ, ಉಳಿಸಿಕೊಳ್ಳುವುದಕ್ಕಾಗಲಿ ಸಾಧ್ಯವಾಗುತ್ತಿರಲಿಲ್ಲ. 

ಸಂಪತ್ತು ಹಾಗೂ ಯಶಸ್ಸಿಗೆ ವೈಯಕ್ತಿಕ ಪ್ರತಿಭೆ ಮತ್ತು ಶ್ರಮ ಕಾರಣ ಅನ್ನುವ ಚಿಂತನೆಯಲ್ಲಿ ಇನ್ನೂ ಒಂದು ಸಮಸ್ಯೆ ಇದೆ. ಇದು ಈ ಪ್ರಕ್ರಿಯೆಯಲ್ಲಿ ಹಿಂದುಳಿದವರನ್ನು ‘ವಿಫಲರಾದವರು’ ಎಂದು ಪರಿಗಣಿಸುತ್ತದೆ. ಬಡತನಕ್ಕೆ ಬಡವರನ್ನೇ ಹೊಣೆಗಾರರನ್ನಾಗಿ ಮಾಡುತ್ತಿರುತ್ತೇವೆ. ದಡ್ಡರು, ಸೋಮಾರಿಗಳು, ಕುಡುಕರು ಹೀಗೆ ಹಲವು ನಕಾರಾತ್ಮಕ ಅಂಶಗಳನ್ನು ಅವರಿಗೆ ಆರೋಪಿಸುತ್ತೇವೆ. ದುರಂತವೆಂದರೆ ‘ವಿಫಲ’ರಾದವರೂ ಇದನ್ನು ಒಪ್ಪಿಕೊಂಡು ಸೋಲಿನ ಭಾವನೆಯಲ್ಲಿ ನರಳುತ್ತಿರುತ್ತಾರೆ. ಇಂತಹ ಹತಾಶೆಯು ಸಾಮಾಜಿಕವಾಗಿ ಹಿಂದುಳಿದವರನ್ನು, ಮಹಿಳೆಯರನ್ನು, ಅಲ್ಪಸಂಖ್ಯಾತರನ್ನು ಹೆಚ್ಚಾಗಿ ಕಾಡುತ್ತಿದೆ. ಜಾತಿ, ಲಿಂಗ, ಧರ್ಮ, ಜನಾಂಗದಂತಹ ಕಾರಣಗಳಿಂದಾಗಿ ಹಲವು ಸೌಲಭ್ಯಗಳಿಂದ ಅವರು ವಂಚಿತರಾಗಿರುತ್ತಾರೆ.

ಮಹಿಳೆಯರಿಗೆ ಮನೆಯ ಜವಾಬ್ದಾರಿ, ಸುರಕ್ಷತೆ ಹಾಗೂ ಸಾಮಾಜಿಕ ನಂಬಿಕೆಗಳ ಕಾರಣಗಳಿಂದಾಗಿ ಹಲವು ಅವಕಾಶಗಳು ತಪ್ಪಿಹೋಗುತ್ತವೆ. ಅವರಿಗೆ ಮೇಲ್ಮುಖ ಚಲನೆ ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ ಹಲವು ಸಮುದಾಯಗಳಿಗೆ ತಮ್ಮ ಜಾತಿ, ಕಸುಬು, ಆಹಾರ ಇವೆಲ್ಲಾ ಅವಮಾನದ, ಮುಚ್ಚಿಟ್ಟುಕೊಂಡೇ ಬದುಕಬೇಕಾದ ವಿಷಯಗಳಾಗಿರುತ್ತವೆ. ತೀವ್ರವಾದ ಸಾಮಾಜಿಕ ಕಳಂಕದ ಭಾರದ ಹೊರೆಯಿಂದಾಗಿ ಅವರಿಗೆ ಆರ್ಥಿಕ ಸ್ಥಿರತೆ ಸಾಧ್ಯವಾಗುವುದಿಲ್ಲ. ನೈತಿಕ ಅಧಃಪತನದಿಂದಾಗಿಯೇ ಅವರು ಈ ಸ್ಥಿತಿಯಲ್ಲಿದ್ದಾರೆ ಎಂಬ ಭಾವನೆ ಸಮಾಜದಲ್ಲಿದೆ. ಹಾಗಾಗಿ, ಸರ್ಕಾರ ಇವರಿಗೆ ನೀಡುವ ನೆರವುಗಳ ಬಗ್ಗೆ ಸಮಾಜಕ್ಕೆ ತಾತ್ಸಾರವಿರುತ್ತದೆ.

ಸಮಾಜವನ್ನು ಸುಧಾರಿಸುವ ಬಗ್ಗೆ ಯೋಚಿಸುವಾಗ, ಬಡತನ, ಅಸಮಾನತೆಯಂತಹ ಅಂಶಗಳ ಜೊತೆಯಲ್ಲೇ  ವಿಭಿನ್ನ ಸಮುದಾಯಗಳನ್ನು ‘ನೋಡುವ’ ಕ್ರಮವೂ ಮುಖ್ಯವಾಗುತ್ತದೆ. ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ಹುಟ್ಟಿನಿಂದ ಜನರ ಮೌಲ್ಯ, ಘನತೆ ನಿರ್ಧಾರವಾಗುತ್ತದೆ. ಒಂದು ಸಮುದಾಯಕ್ಕೆ ‘ದಕ್ಕಿ’ರುವ ಆ ಘನತೆಯು ಆ ಸಮುದಾಯದ ಜನರ ಆರ್ಥಿಕ  ಬೆಳವಣಿಗೆಯಲ್ಲಿ ಅತಿಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ, ಆರ್ಥಿಕ ಸಮಾನತೆ ಸಾಧ್ಯವಾದರಷ್ಟೇ ಸಾಲುವುದಿಲ್ಲ. ಎಲ್ಲರ ಘನತೆಯನ್ನು ಗುರುತಿಸುವ, ಗೌರವಿಸುವ ಕೆಲಸವೂ ಮುಖ್ಯವಾಗುತ್ತದೆ. ಆರ್ಥಿಕ ಸಮಾನತೆ ಕುರಿತ ಚರ್ಚೆಗೆ ಇಂತಹ ಸಾಮಾಜಿಕ ಆಯಾಮವೂ ಸಿಗುವಂತೆ ಆಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT