‘ನಮ್ಮನ್ನೂ ಕೊಂದುಬಿಡಿ’.

‘ಹೆಂಗಸರು, ಮಕ್ಕಳನ್ನು ನಾವು ಕೊಲ್ಲುವುದಿಲ್ಲ’.

ಪಹಲ್ಗಾಮ್ನಲ್ಲಿ ತಮ್ಮ ಗಂಡಂದಿರನ್ನು ಕೊಂದಾಗ ಹೆಂಡತಿಯರ ಆಕ್ರೋಶದ ನುಡಿಗಳಿಗೆ ಭಯೋತ್ಪಾದಕರು ಆಡಿದ ಮಾತುಗಳಿವು. ಅದರರ್ಥ ಹೆಂಗಸರು, ಮಕ್ಕಳನ್ನು ಕೊಲ್ಲುವುದು ತಮ್ಮ ಪೌರುಷಕ್ಕೆ ಸಮನಲ್ಲ ಎಂದು ಅವರು ಭಾವಿಸಿರುವುದು!

ಶಸ್ತ್ರವಿಲ್ಲದೆ ವಿಹಾರದಲ್ಲಿ ಇರುವವರನ್ನು ಮೋಸ ದಿಂದ ಕೊಲ್ಲುವುದು ಯಾವ ಸೀಮೆ ಪೌರುಷವೋ? ಆದರೆ, ಹೆಂಗಸನ್ನು ಮತ್ತು ಹೆಂಗಸಿಗೆ ಸಮನಾದ ಮಕ್ಕಳನ್ನು ಗಂಡಸರ ಅಧೀನ ಎಂದು ಯೋಚಿಸುವ ಈ ಯೋಚನಾ ಕ್ರಮಕ್ಕೂ ಜಗತ್ತಿನಾದ್ಯಂತದ ಎಲ್ಲಾ ಆಕ್ರಮಣ, ಸಂಘರ್ಷಗಳಿಗೂ ನೇರವಾದ ಸಂಬಂಧವಿದೆ. ಪ್ರೀತಿ, ಮಮತೆ, ಹಂಚಿ ಉಣ್ಣುವ ಸರಳತೆ, ಪೋಷಣೆ, ಕರುಣೆ, ಪರಾನುಭೂತಿಯನ್ನು ಹೆಣ್ಣಿನ ಗುಣಗಳು ಎಂದು ತಾತ್ಸಾರ ಮಾಡಿದಾಗಲೂ, ಅವನ್ನು ಹೃದಯದಲ್ಲಿ ಹೊತ್ತು, ಅವು ಮನುಷ್ಯರೆಲ್ಲರ ಗುಣಗಳಾದಾಗ ಮಾತ್ರ ಮನುಷ್ಯ ಮತ್ತು ಜಗತ್ತು ನಿಜವಾದ ಸುಖವನ್ನು ಅನುಭವಿಸಲು ಸಾಧ್ಯ ಎಂದು ಬುದ್ಧನೂ ಸೇರಿದಂತೆ ಹಲವು ಪುರುಷರೂ ಆಗಾಗ ಹೇಳುತ್ತಲೇ ಬಂದಿದ್ದಾರೆ. ಆ ಮೂಲಕ ಮನುಕುಲವನ್ನು ಇಂದಿಗೂ ಕಾಪಿಟ್ಟಿದ್ದಾರೆ.

ಆದರೆ ಅದಕ್ಕೆ ವಿರುದ್ಧವಾಗಿ ‘ಪುರುಷ ಮಾತ್ರ ಪ್ರಧಾನ’ ಎಂದು ಹೇಳುತ್ತಾ ಅವನ ಲಕ್ಷಣಗಳನ್ನು ಯುದ್ಧ, ಆಕ್ರಮಣ, ಹಿಂಸೆ, ದೌರ್ಜನ್ಯ, ಲಗಾಮಿಲ್ಲದವನು ಎಂದೆಲ್ಲಾ ತಳಕು ಹಾಕಿ, ಹುಡುಗರನ್ನು ಹಾಗೆ ಬೆಳೆಸುವುದು ಮನೆಯೊಳಗೂ ಹೊರಗೂ ಇನ್ನಿಲ್ಲದ ಕ್ಷೋಭೆಗಳನ್ನು ಸೃಷ್ಟಿಸಿದೆ. ಕೃತಕ ಗಡಿಗಳನ್ನು ಮನುಷ್ಯತ್ವಕ್ಕಿಂತ ಮಿಗಿಲಾದವು ಎಂದು ತಲೆಗೆ ತುಂಬಿಸಿಕೊಂಡಿರುವ ಎಲ್ಲಾ ಗಂಡು– ಹೆಣ್ಣುಗಳು ಈ ಉನ್ಮಾದದಲ್ಲಿ ಹೂಂಕರಿಸುತ್ತಿರುತ್ತಾರೆ. ಹೀಗೆ ಜೊತೆಯ ಜೀವವಾದ ಹೆಣ್ಣಿನ ಮೇಲೆಯೇ ಮಾಡುವ ಸವಾರಿಯ ವಿಸ್ತರಿತ ರೂಪಗಳೇ ಇನ್ನೆಲ್ಲಾ ಸವಾರಿಗಳಾಗಿರುತ್ತವೆ.

ಭಯೋತ್ಪಾದನೆಯಿರಲಿ, ಹಲವೊಮ್ಮೆ ಯುದ್ಧಗಳೇ ಇರಲಿ- ಇವೆಲ್ಲವೂ ತನ್ನ ಸಾಮ್ರಾಜ್ಯ, ತನ್ನ ನಿಲುವುಗಳು, ತನ್ನ ಧರ್ಮ, ತನ್ನ ಸಿದ್ಧಾಂತಗಳನ್ನು ವಿಸ್ತರಿಸುವುದಕ್ಕೆ ತನಗಿಂತ ದುರ್ಬಲರ ಮೇಲೆ ತಾನು ಹೂಡುವ ಆಟ, ಕೂಟಗಳಿಗೆ ಎಲ್ಲೆ ಮೀರಿದ ಹಿಂಸೆಯನ್ನು ಬಳಸಲು ತಾನೇ ಕೊಟ್ಟುಕೊಂಡಿರುವ ಅಪ್ಪಣೆಗಳಾಗಿವೆ.

ನಾವು ಕ್ರೌರ್ಯದ ಮೂಲಬೇರನ್ನು ಹುಡುಕಿ ನಾಶ ಮಾಡುವ ಯುದ್ಧವನ್ನು ಮಾಡಬೇಕಿದೆ. ಆದರೆ ನಾವೆಲ್ಲರೂ ಹುಸಿಯುದ್ಧಗಳನ್ನು ಮಾಡುತ್ತಲೇ ಇದ್ದೇವೆ. ಈ ಒಂದು ತಿಂಗಳಿನಿಂದ ಫೇಸ್ಬುಕ್ನಲ್ಲಿ ಹೆಣ್ಣುಮಕ್ಕಳ ವಿರುದ್ಧದ ಟ್ರೋಲ್ಗಳಲ್ಲಿ ಬಳಕೆಯಾದ ಅಸಹ್ಯ ಭಾಷೆಯನ್ನು ನೋಡಿದಾಗ, ಇಷ್ಟು ನಿರ್ಲಜ್ಜೆಯಿಂದ ಸಾರ್ವಜನಿಕವಾಗಿ ಹೀಗೆಲ್ಲಾ ಮಾತಾಡುವ ಇವರು ಮುಖ ಮುಚ್ಚಿಕೊಂಡವರೇ ಅಥವಾ ಮುಖ ಇರುವವರೇ ಎನ್ನುವುದಕ್ಕಿಂತ ಹೀಗೆ ಹೆಣ್ಣುಮಕ್ಕಳ ಮೇಲೆ ದಾಳಿ ಮಾಡುತ್ತಿರುವವರ ಗುರಿ ಏನು ಎಂದು ಯೋಚಿಸುತ್ತಿದ್ದೆ. ನಮಗೀಗ ನಮ್ಮ ಮೊಬೈಲ್ ಫೋನ್ನಲ್ಲಿ ಡಾಕ್ಯುಮೆಂಟನ್ನು ಕೂಡ ನಿರುಮ್ಮಳವಾಗಿ ಓಪನ್ ಮಾಡಲು ಸಾಧ್ಯವಾಗುತ್ತಿಲ್ಲ.

ಧುತ್ತೆಂದು ಜಾಹೀರಾತು ಬರುತ್ತದೆ. ಕೃತಕ ಬುದ್ಧಿಮತ್ತೆ (ಎ.ಐ) ಮೂಲಕ ಚಿಕ್ಕ ಚಿಕ್ಕ ವಯಸ್ಸಿನ ಹುಡುಗಿಯರನ್ನು ಸೃಷ್ಟಿಸಿ ಲೈಂಗಿಕ ಸನ್ನೆಗಳನ್ನು ಮಾಡು ತ್ತಿರುವಂತಹ ವಿಡಿಯೊಗಳು ಎಗ್ಗಿಲ್ಲದೆ ಹರಿದಾಡುತ್ತಿವೆ. ಇವು ಯಾರ್ಯಾರ ಮೇಲೆ ಏನೇನು ಪರಿಣಾಮ ಬೀರುತ್ತಿರಬಹುದು ಎಂಬ ಬಗ್ಗೆ ಚರ್ಚೆಯಾಗುವುದಿಲ್ಲ. ಅವುಗಳನ್ನು ನಿಯಂತ್ರಿಸಲು ಸರ್ಕಾರಗಳು ಏನು ಮಾಡಬಹುದು ಎಂಬ ಬಗ್ಗೆ ಚಿಂತಿಸುತ್ತಿಲ್ಲ.

ಸೆಕ್ಸ್ ವಿಡಿಯೊಗಳನ್ನು ನಿಯಂತ್ರಿಸುವಂತೆ ಸುಪ್ರೀಂ ಕೋರ್ಟ್ ಈಚೆಗೆ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿತು. ಆದರೆ ತಮಗೆ ಬೇಡದ ಯೂಟ್ಯೂಬ್ ಚಾನೆಲ್ಗಳನ್ನು ನಿಯಂತ್ರಿಸಬಲ್ಲ ಸರ್ಕಾರಕ್ಕೆ ಸೆಕ್ಸ್ ವಿಡಿಯೊಗಳು ಸಲೀಸಾಗಿ ಸಿಗುವ ಬಗ್ಗೆ, ಸೈಬರ್ ಅಪರಾಧಗಳನ್ನು ನಿಯಂತ್ರಿಸುವ ಬಗ್ಗೆ ಆಸಕ್ತಿ ಇಲ್ಲ. ಪ್ರಜೆಗಳೂ ಅವರಿಂದ ಅದನ್ನು ನಿರೀಕ್ಷಿಸುತ್ತಿಲ್ಲ. ಆದರೆ ಮಹಿಳೆಯರ ಕವಿಗೋಷ್ಠಿ ಯೊಂದರ ಭಾಷೆಯ ವಿರುದ್ಧ ಮುಗಿಬಿದ್ದಿದ್ದು ಹಾಸ್ಯಾಸ್ಪದ ವಾಗಿತ್ತು. ಅಯ್ಯೋ ಮರ್ಯಾದೆಯೇ ಹೋಯ್ತು ಎಂದು ಗಾಬರಿಯಾಗಿ, ಮರ್ಯಾದೆ ಉಳಿಸಲು ಹೋರಾಡು ತ್ತಿರುವ ಉಗ್ರ ವೀರರು ತಾವು ಎಂಬ ಭ್ರಮೆಯಲ್ಲಿ ಸಮಾಧಾನ ತಾಳಲಾಯಿತು.

ಕವಿತೆಗಳಲ್ಲಿ ದೇಹದ ಅಂಗಾಂಗಗಳನ್ನು ಉಲ್ಲೇಖಿಸದೆ ಮುಚ್ಚಿಡುವುದರಿಂದ ಸಮಸ್ಯೆ ಪರಿಹಾರ ಆಗುವುದಾದರೆ ಈ ಮೊದಲೇ ಆಗಬೇಕಿತ್ತಲ್ಲವೇ? ಹೆಣ್ಣೊಬ್ಬಳು ನಿರ್ಬಿಢೆಯಿಂದ ಮಾತಾಡಿದರೆ ನಮ್ಮ ನಿಯಂತ್ರಣದಿಂದ ತಪ್ಪಿಸಿಕೊಳ್ಳುತ್ತಿದ್ದಾಳೆ ಎಂಬ ಆತಂಕವೇ ಆಕೆಯನ್ನು ಟ್ರೋಲ್ ಮಾಡುವುದರ ಉದ್ದೇಶ ಎಂಬುದು ನಮ್ಮ ಹೆಣ್ಣುಮಕ್ಕಳಿಗೇ ಗೋಚರವಾಗುವುದಿಲ್ಲ. ಯಾಕೆಂದರೆ, ಪುರುಷನೇ ಪ್ರಧಾನ ಎಂಬುದನ್ನು ತಮಗೆ ಗೊತ್ತಿಲ್ಲದೇ ಅಂತರ್ಗತ ಮಾಡಿಕೊಂಡಿರುವ ಹೆಂಗಸರು, ಹೀಗೆಲ್ಲಾ ಅವನ ಮುಂದೆ ಹೇಳುವುದು ನಾಚಿಕೆಗೇಡು ಎಂದು ಮುಜುಗರಕ್ಕೆ ಒಳಗಾಗುತ್ತಾರೆ. ಮಾತೆತ್ತಿದರೆ ಹೆಣ್ಣನ್ನು ಅಂಗಾಂಗಕ್ಕೆ ಸೀಮಿತಗೊಳಿಸಿ ಬಯ್ಗುಳ ಸೃಷ್ಟಿಸಿದವರ ಮಾತುಗಳ ವಿರುದ್ಧ ಯುದ್ಧ ಮಾಡದೆ, ಪ್ರತಿಭಟಿಸಿದವರ ಮೇಲೇ ಯುದ್ಧ ಮಾಡುವ ವೈಚಿತ್ರ್ಯವಿದು.

ಇನ್ನೊಂದೆಡೆ, ಹೇಳಬೇಕಾದ್ದನ್ನು ಹೇಳಿದರೆ, ‘ದೇಶಭಕ್ತ’ರೆಂದು ಕರೆದುಕೊಳ್ಳುವವರ ಉಗ್ರಭಾಷೆಯ ಪೌರುಷ. ಇದೂ ಹೆಣ್ಣಿನ ಬಾಯಿ ಮುಚ್ಚಿಸುವ ಮೂಲ ಉದ್ದೇಶವನ್ನೇ ಹೊಂದಿರುತ್ತದೆ. ಭೂಲೋಕದ ಸ್ವರ್ಗದಲ್ಲಿ ನಾವಿದ್ದೇವೆ ಎಂಬ ಸಾರ್ಥಕತೆಯಲ್ಲಿ ಮಿಂದುಂಡು ಸಂತೋಷದ ಶಿಖರದಲ್ಲಿರುವಾಗ, ರೆಪ್ಪೆ ಮುಚ್ಚಿ ತೆರೆಯು ವಷ್ಟರಲ್ಲಿ ದುಃಖದ ಕಣಿವೆಯ ಪ್ರಪಾತಕ್ಕೆ ಬಿದ್ದು, ಆಘಾತ ದಿಂದ ಮಂಜುಗಡ್ಡೆಯಂತೆ ಕಣ್ಣೀರು ಕಲ್ಲಾದವರನ್ನು ಸಮಾಧಾನ ಮಾಡುವ ಬದಲು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಲಾಗುತ್ತದೆ.

ಬರೆದಿಟ್ಟ ಸ್ಕ್ರಿಪ್ಟನ್ನು ಅಮೋಘವಾಗಿ ಅಭಿನಯಿಸಬೇಕು ಎಂಬಂತೆ ‘ಅವರು ಧರ್ಮ ಕೇಳಿದರಾ?’ ಎಂದ ತಕ್ಷಣವೇ ಇವರು ‘ಹೌದು, ಕೇಳಿ ಕೇಳಿ ಕೊಂದರು’ ಎನ್ನುತ್ತಾ ಗೊಳೋ ಎಂದು ಅಳಬೇಕು. ಅದು ಬಿಟ್ಟು ಕಠಿಣ ಸನ್ನಿವೇಶದಲ್ಲಿ ಧೈರ್ಯ ತೋರಿಸುವ ಹೆಂಗಸರು ಸವಾಲಿನಂತೆ ಕಾಣಿಸುತ್ತಾರೆ. ಕೆಲವರು ಕೇಳಿದ್ದು ನಿಜ ಎಂದರು. ಕೆಲವರು ತಮ್ಮನ್ನು ಕೇಳಿಲ್ಲ ಅಂದರು. ಅವರ ಅನುಭವದ ನುಡಿಗಳಿಗೆ ಗೌರವ ಕೊಡಬೇಕು ತಾನೇ? ಮತ್ತೆ ಮತ್ತೆ ಕೇಳಿದಾಗಲೂ ‘ಸ್ಥಳೀಯರು ಧರ್ಮ ಮೀರಿ ಸಹಾಯ ಮಾಡಿದರು, ನಾವಲ್ಲಿ ಅನಾಥರಾಗಿ
ದ್ದೆವು, ನಮಗೆ ಯಾವುದೇ ರಕ್ಷಣೆ ಇರಲಿಲ್ಲ’ ಎಂದು ನಿಜ ಹೇಳಿದವರ ಮೇಲೆ ಮುಗಿಬಿದ್ದ ಟ್ರೋಲ್ ಪಡೆಗಳು ಏನನ್ನು ಹೇಳುತ್ತಿದ್ದವು? ‘ಅವಳ ಕಣ್ಣಲ್ಲಿ ನೀರಿರಲಿಲ್ಲ’, ‘ಅವಳಿಗೆ ಗಂಡ ಸತ್ತಿದ್ದೇ ಒಳ್ಳೆಯದು ಅನ್ನಿಸಿರಬೇಕು’ ಎಂಬಲ್ಲಿಂದ ಹಿಡಿದು ಊಹಾತೀತ ಕಾಮೆಂಟ್ಗಳು.

ಕಣ್ಣಮುಂದೇ ತಮ್ಮವರನ್ನು ಕಳೆದುಕೊಂಡವರು, ಅಪಾಯಕಾರಿ ಪ್ರದೇಶಗಳಲ್ಲಿ ಪ್ರವಾಸೋದ್ಯಮಕ್ಕೆ ಅನುಮತಿ ಕೊಟ್ಟ ಸರ್ಕಾರವನ್ನು ಬಯ್ದರೆ ಆ ಕ್ಷಣಕ್ಕೆ ಅದು ಅತ್ಯಂತ ಸಹಜ. ಆದರೆ ಸತ್ತರೂ ‘ನಮ್ಮವರ’ ಸರ್ಕಾರವನ್ನು ಬಯ್ಯಬಾರದು ಎಂಬ ಫತ್ವಾ ಹೊರಡಿಸುವವರ ಮನಃಸ್ಥಿತಿ ಉಗ್ರಗಾಮಿಗಳಿಗಿಂತ ಬೇರೆಯಾದುದೇ? ಬಲಿಯಾದವರ ಮೇಲೇ ಯುದ್ಧ ಮಾಡುವ ವಿಪರ್ಯಾಸವಿದು.

ಇನ್ನೊಂದು ಸಂದರ್ಭದಲ್ಲಿ, ಬಾಂಬೆ ಹೈಕೋರ್ಟ್ ‘ದಾಂಪತ್ಯದೊಳಗೆ ಕೂಡ ಸಮ್ಮತಿ ಇಲ್ಲದ ಸಂಬಂಧ ಅತ್ಯಾಚಾರಕ್ಕೆ ಸಮ’ ಎಂದಿತು. ಇದಕ್ಕೆ ಬಂದ ಕಾಮೆಂಟ್ ಗಳನ್ನು ಅವರವರ ಹೆಂಡತಿಯರು ನೋಡಿದರೆ ಮರುಕ್ಷಣ ತಮ್ಮ ಗಂಡಂದಿರ ಬಗೆಗೆ ಹೇವರಿಕೆ ಹುಟ್ಟಬಹುದು. ಇಂತಹ ಹಲವು ಸಂದರ್ಭಗಳಲ್ಲಿ ಹೆಣ್ಣನ್ನು ‘ನೋಡುವ’ ದೃಷ್ಟಿಯು ಸಾವಿರಾರು ವರ್ಷಗಳಿಂದಲೂ ಚೂರೂ ಬದಲೇ ಆಗದಿರುವುದನ್ನು ಹೇಳುತ್ತದೆ. ಹೆಣ್ಣನ್ನು ಸಾರ್ವಜನಿಕ ವಲಯದಿಂದ ಬೇರ್ಪಡಿಸಿ ಕೂಡಿಹಾಕುವವ ರಿಗೂ, ಇವರಿಗೂ ಚಿಂತನೆಯಲ್ಲಿ ಬಹಳ ವ್ಯತ್ಯಾಸವೇನೂ ಇಲ್ಲ. ಅಲ್ಲಿ ನೇರ ನಿಯಂತ್ರಣ ಇದೆ.

ಇಲ್ಲಿ ಹೆಣ್ಣೇ ಸ್ವನಿಯಂತ್ರಣದಲ್ಲಿ, ತಾನೇ ಅಂಕೆಯೊಳಗೆ ಇರಬೇಕು ಎಂಬ ಹದ್ದಿನ ಕಣ್ಣು ಇದೆ. ಸ್ವಲ್ಪ ಉದಾರವಾಗಿ ಯೋಚಿಸುವ, ನಡೆದುಕೊಳ್ಳುವ ಪುರುಷರನ್ನೂ ಇವರು ಬಿಡುವುದಿಲ್ಲ. ನಮ್ಮದೇ ಅಕ್ಕ ತಂಗಿಯರು, ಅಣ್ಣ ತಮ್ಮಂದಿರ ಮೇಲೆ ಮಾತಿನಿಂದ ಇರಿದು ಯುದ್ಧ ಮಾಡುವ ದೌರ್ಭಾಗ್ಯವಿದು.

ಇದೀಗ ಕದನ ವಿರಾಮ ಘೋಷಣೆಯಾದಾಗ ಇಂದಿರಾ ಗಾಂಧಿಯವರೊಂದಿಗೆ ಹೋಲಿಸುತ್ತಾ ಇಂದಿನವರನ್ನು ಆಡಿಕೊಳ್ಳುತ್ತಿರುವ ಮಾತುಗಳಲ್ಲಿಯೂ...

ಹೌದು, ವಿಚಿತ್ರ ಅನ್ನಿಸಬಹುದು. ಆದರೆ ಈ ಎಲ್ಲಾ ಮನಃಸ್ಥಿತಿಗಳ ಮೂಲ, ಪೌರುಷಕ್ಕೆ ಆರೋಪಿಸಿರುವ ತಪ್ಪು ಗುಣಗಳ ಆರಾಧನೆಯೇ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.