ಶನಿವಾರ, ಸೆಪ್ಟೆಂಬರ್ 25, 2021
29 °C

ಚುರುಮುರಿ| ಕಲಾಪದ ಕಿಕ್‍ಬ್ಯಾಕ್

ಮಣ್ಣೆ ರಾಜು Updated:

ಅಕ್ಷರ ಗಾತ್ರ : | |

Prajavani

‘ವಿಧಾನಮಂಡಲ ಅಧಿವೇಶನಕ್ಕೆ ಎತ್ತಿನಗಾಡಿಯಲ್ಲಿ ಬಂದ ಕಾಂಗ್ರೆಸ್ ಶಾಸಕರನ್ನು ಆಡಳಿತ ಪಕ್ಷದವರು ಬಂದು ಸ್ವಾಗತಿಸುವ ಸೌಜನ್ಯ ತೋರಿಸಲಿಲ್ಲವಲ್ಲಾರೀ...’ ಅಂದಳು ಸುಮಿ.

‘ಆರತಿ ಎತ್ತಿ ಬರಮಾಡಿಕೊಳ್ಳಲು ಅದೇನು ಮದುವೆ ದಿಬ್ಬಣವೇ? ಹೇಳಿಕೇಳಿ ಅವರು ವಿರೋಧ ಪಕ್ಷದವರು. ಸರ್ಕಾರದ ಚಳಿ ಬಿಡಿಸಲು ಚಳವಳಿ ಮಾಡುವವರನ್ನು ಬರಮಾಡಿಕೊಂಡು ಬಾಗಿನ ಕೊಡಬೇಕಾಗಿತ್ತಾ?’ ಅಂದ ಶಂಕ್ರಿ.

‘ದಿನಬಳಕೆ ಪದಾರ್ಥಗಳ ಬೆಲೆ ಹೆಚ್ಚಾಗಿ ನಮ್ಮಂಥವರು ಜೀವನ ಮಾಡೋದು ಕಷ್ಟ ಆಗಿದೆ. ಸೇವ್ ಪೆಟ್ರೋಲ್, ಸೇವ್ ಪೀಪಲ್ ಎಂದು ಅವರು ನಮ್ಮ ಪರವಾಗಿ ಎತ್ತಿನಗಾಡಿ ಹೋರಾಟ ಮಾಡಿದ್ರು ಕಣ್ರೀ’.

‘ಹೌದು, ಪದಾರ್ಥಗಳ ಬೆಲೆ ಇಳಿಸಿ, ಪರದಾಡುತ್ತಿರುವ ಜನರನ್ನು ಉಳಿಸಿ ಅಂತ ವಿಪಕ್ಷದವರು ಸರ್ಕಾರದ ಬೆವರು ಇಳಿಸಲು ಕಲಾಪ ಕದನ ಶುರು ಮಾಡಿದ್ದಾರೆ. ಏನೇನು ಇಳಿಯುತ್ತದೋ ಕಾದು ನೋಡೋಣ...’

‘ಮೊದಲು ಗ್ಯಾಸ್ ಸಿಲಿಂಡರ್ ಬೆಲೆ ಇಳಿಸಿ ಅಡುಗೆಮನೆ ಕಷ್ಟ ನಿವಾರಣೆ ಮಾಡಲಿ’.

‘ಅದಕ್ಕೋಸ್ಕರ ಖಾಲಿ ಸಿಲಿಂಡರ್ ಪ್ರದರ್ಶಿಸಿ ಹೋರಾಟ ಮಾಡಿದರು, ಕಾಂಗ್ರೆಸ್ ನಾಯಕರು ಅಡುಗೆ ಮನೆಯಿಂದಲೇ ಟ್ವೀಟ್ ಟೀಕೆ ಮಾಡಿದ್ರು. ಈಗ ಭ್ರಷ್ಟಾಚಾರ ಇಷ್ಟಾಚಾರಗಳ ವಿರುದ್ಧ ಕಲಾಪದಲ್ಲಿ ಸರ್ಕಾರಕ್ಕೆ ಕಿಕ್‍ಬ್ಯಾಕ್ ನೀಡುತ್ತಾರಂತೆ’.

‘ಕಿಕ್‍ಬ್ಯಾಕ್ ಅಂದ್ರೆ ಲಂಚವೋ ತಿರುಗೇಟೊ?’

‘ಅವರವರ ಭಾವಕ್ಕೆ, ಅವರವರ ಅನುಭವಕ್ಕೆ ತಕ್ಕಂತೆ ಕಿಕ್‍ಬ್ಯಾಕ್‍ಗೆ ಅಪಾರ್ಥ, ಅಪಾರ ಅರ್ಥಗಳಿವೆ. ಇದೆಲ್ಲವನ್ನೂ ಕಂಟ್ರೋಲ್ ಮಾಡಬೇಕಾಗಿದ್ದ ಕಾನೂನು, ಜಾರಿಯಾಗಬೇಕಾದ ಕಡೆಗಳಲ್ಲಿ ಜಾರಿಹೋಗ್ತಿದೆಯಂತೆ. ಸರ್ಕಾರವನ್ನು ಸರಿದಾರಿಗೆ ತಂದು ಸರಿಮಾಡೋವರೆಗೂ ಹೋರಾಟ ನಿಲ್ಲಿಸುವುದಿಲ್ಲ ಅಂತ ವಿಪಕ್ಷ ನಾಯಕರು ಹೇಳಿಕೊಂಡಿದ್ದಾರೆ’.

‘ಏನೋ, ಒಳ್ಳೆಯದಾದರೆ ಸಾಕು. ಆಡಳಿತ- ವಿಪಕ್ಷದ ಕಲಾಪ ಕದನವು ಅಕ್ಕಪಕ್ಕದ ಮನೆಯವರಿಗೆ ಮನರಂಜನೆ ನೀಡುವ ಗಂಡಹೆಂಡ್ತಿ ಜಗಳದ ಥರ ಆಗಬಾರದಷ್ಟೇ...’ ಎಂದು ಸುಮಿ ಟಿ.ವಿ. ಆಫ್ ಮಾಡಿದಳು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.