ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಹೂಡಿಕೆ ರಾಜ್ಯ

Last Updated 6 ನವೆಂಬರ್ 2022, 19:32 IST
ಅಕ್ಷರ ಗಾತ್ರ

‘ಮೊರ್ಬಿ ಸೇತುವೆ ದುರಸ್ತಿಗೆ ಎರಡು ಕೋಟಿ ರೂಪಾಯಿ ಮಂಜೂರು ಆಗಿದ್ರಾಗೆ ರಿಪೇರಿಗೆ ಬರೀ ಹನ್ನೆರಡು ಲಕ್ಷ ಖರ್ಚು ಮಾಡ್ಯಾರಂತ. ನೋಡು, ಮಿತವ್ಯಯದಾಗೆ ಕೆಲಸ ಮಾಡೂದು ಹೆಂಗಂತ ಕಂಡ್ ಹಿಡಿದಾರೆ!’ ಬೆಕ್ಕಣ್ಣ ಉದ್ಗರಿಸಿತು.

‘ಮಿತವ್ಯಯ ಅಲ್ಲಲೇ, ರೊಕ್ಕ ಗುಳುಂ ಮಾಡೂ ಹೊಸ ವಿಧಾನ ಕಂಡ್ ಹಿಡದು, ನೂರಾರು ಜನ ಸಾಯೂ ಹಂಗೆ ಮಾಡ್ಯಾರಲೇ’ ನಾನು ಬೈದೆ.

‘ದುರಸ್ತಿ ಮಾಡೂದು ನಮ್ಮ ಇಚ್ಛೆ, ಮಂದಿ ಸಾಯೂದು ದೇವರ ಇಚ್ಛೆ ಅಂತ ಆ ಕಂಪನಿಯವರು ಬರೋಬ್ಬರಿ ಹೇಳ್ಯಾರ. ಅದ್ಸರಿ, ನೀ ಯಾವಾಗ ನೋಡಿದ್ರೂ ಕೈಯಾಗೆ ಕಾಸಿಲ್ಲ ಅಂತ ಬಿಕ್ಕುತಾ ಇರತೀ. ಈ ಥರಾ ಏನಾರ ದುರಸ್ತಿ ಕಂಪನಿ ಶುರು ಮಾಡೂಣು. ಮಂಜೂರಾದ ರೊಕ್ಕದಾಗೆ ಬರೇ 6 ಪರ್ಸೆಂಟ್‌ ದುರಸ್ತಿಗೆ ಖರ್ಚು ಮಾಡಿ, 94 ಪರ್ಸೆಂಟ್‌ ಉಳಿಸಿದ್ರಾತು’ ಬೆಕ್ಕಣ್ಣ ಹೊಸ ಯೋಜನೆ ಮುಂದಿಟ್ಟಿತು.

‘ತೆಲಿ ಕೆಟ್ಟೈತಿ ನಿನಗ. ಹಂಗೆಲ್ಲ ಕಂಪನಿ ಶುರುಮಾಡಾಕೆ ಅದ್ರಾಗೆ ಪರಿಣತಿ ಇರಬೇಕಲೇ...’

‘ಪರಿಣತಿ ಗಿರಿಣತಿ ಏನೂ ಬ್ಯಾಡ, ಇದು ಹೊಸಾ ಗುಜರಾತ್ ಮಾದರಿ. ಡಬಲ್ ಎಂಜಿನ್ ಸರ್ಕಾರ ಇದ್ದಾಗ ನಿನಗ್ಯಾತರ ಅಂಜಿಕಿ?’ ಬೆಕ್ಕಣ್ಣ ವಾದಿಸಿತು.

‘ನಮಗ ಗುಜರಾತ್ ಮಾದರಿ ಎದಕ್ಕ ಬೇಕು? ಕರುನಾಡಿನ ಮಾದರಿಯೇ ಸಾಕು ಬಿಡಲೇ. ನೋಡು, ಮೊನ್ನೆ ಬಂಡವಾಳ ಹೂಡಿಕೆ ಸಮಾವೇಶದಾಗೆ ಹತ್ತು ಲಕ್ಷ ಕೋಟಿ ರೂಪಾಯಿ ಹೂಡಿಕೆ ಹರಿದುಬಂದೈತಿ. ನಮ್ಮದೀಗ ಹೂಡಿಕೆ ರಾಜ್ಯ. ಬ್ಯಾರೆಬ್ಯಾರೆ ಕ್ಷೇತ್ರದಾಗೆ ಹೂಡಿಕೆಗೆ ಮುಂದ್‌ ಬಂದಾರೆ’ ಸುದ್ದಿ ತೋರಿಸಿದೆ.

‘ಹೌದೇನು… ನಮ್ಮ ಸರ್ಕಾರಿ ಆಸ್ಪತ್ರೆ ಸುಧಾರಣೆ, ಬೆಂಗಳೂರಿನ ರಸ್ತೆ ಗುಂಡಿ ಮುಚ್ಚೂದು, ಕೆರೆ, ನದಿಗೆ ಬಿಡೋ ತ್ಯಾಜ್ಯ ನೀರು ಸ್ವಚ್ಛ ಮಾಡೂದು, ಮಲದ ಗುಂಡಿಗೆ ಮನುಷ್ಯರ ಬದಲಿಗೆ ಯಂತ್ರಗಳನ್ನ ಇಳಿಸೋದು, ಇಂಥಾ ಸುಧಾರಣೆ ಕ್ಷೇತ್ರದಾಗೂ ಏನರ ಹೂಡಿಕೆ ಮಾಡತಾರೇನು?’ ಬೆಕ್ಕಣ್ಣ ಅಮಾಯಕನಂತೆ ಕೇಳಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT