ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ತಿಂಡಿಪೋತೋಂ ಕೀ ಬಾತ್!

Last Updated 10 ನವೆಂಬರ್ 2021, 19:30 IST
ಅಕ್ಷರ ಗಾತ್ರ

ದಾವಣಗೆರೆ ನಗರ ತಿಂಡಿಬಾಕರ ಸಂಘದಲ್ಲಿ ಗಂಭೀರ ಚರ್ಚೆ ನಡೆದಿತ್ತು‌.

‘ಮೊನ್ನೆಯಿಂದ ನಮ್ಮೂರ ಬೆಣ್ಣೆ ದೋಸೆ ಪ್ಲೇಟಿಗೆ ತೊಂಬತ್ತು ರೂಪಾಯಿ ಆಗಿದೆ. ಹೀಗಾದ್ರೆ ನಮ್ಮ ಗತಿಯೇನು?’ ಚಿಕ್ಕೇಶಿ ಪೇಚಾಡಿದ.

‘ಸದ್ಯದಲ್ಲೇ ಅದು ಸೆಂಚುರಿ ಬಾರಿಸುತ್ತೆ. ನನ್ನ ಫೇವರಿಟ್ ಚೌಚೌ ಬಾತ್ ಕೂಡಾ ಅದ್ರೊಡನೆ ಕಾಂಪಿಟ್ ಮಾಡ್ತಿದೆಯಲ್ರೋ’ ಎಂದ ಪರಮೇಶಿ.

‘ಹೀಗೇ ಹೋಟೆಲ್‌ಗಳ ತಿಂಡಿ ದರಗಳು ಗಗನಕ್ಕೇರಿದ್ರೆ ನಮ್ಮ ಸಂಘವನ್ನು ಬರಖಾಸ್ತು ಮಾಡಿ, ತಿಂಡಿಗಾಗಿ ನಾವು ಹೋಟೆಲ್‌ಗಳಲ್ಲಿ ಪಾತ್ರೆ ತೊಳೀಬೇಕಾಗುತ್ತೆ’ ಚನ್ನೇಶಿಯ ಸಂಕಟ.

‘ಈ ಬಗ್ಗೆ ನಮೋ ಅವರಿಗೆ ಕಂಪ್ಲೇಂಟ್ ಕೊಡೋಣ. ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿ ದಂತೆ ಹೋಟೆಲ್ ತಿಂಡಿ ಬೆಲೇನೂ ಇಳಿಸ್ತಾರೆ’.

‘ಹೌದ್ಹೌದು. ಅವ್ರೀಗ ಫುಲ್ ಖುಷೀಲಿದಾರೆ’.

‘ಅದ್ಯಾಕೋ?’

‘ಸತತವಾಗಿ ಎರಡು ವರ್ಷ ಅವ್ರು ವಿಶ್ವದ ನಂಬರ್ ಒನ್ ಜನನಾಯಕರಾಗಿದಾರೇಂತ ಮೊನ್ನೆ ಸಮೀಕ್ಷೆ ಹೊರಬಂದಿದೆಯಲ್ಲ! ಅಮೆರಿಕದ ಅಧ್ಯಕ್ಷ ಬೈಡನ್‌ರನ್ನೇ ಬ್ರಿಟಿಷ್ ಪ್ರಧಾನಿ ಬೋರಿಸ್‌ರನ್ನೇ ಜನಪ್ರಿಯತೇಲಿ ಹಿಂದಿಕ್ಕಿದಾರಂತೆ! ಅಲ್ದೇ, ಈಚೆಗೆ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣೀನೂ ಅವ್ರಿಗೆ ಉಘೇ ಹೇಳಿ ‘ಹ್ಯಾಟ್ಸ್ ಆಫ್’ ಎಂದಿದೆ!

‘ಹಾಗಿದ್ರೆ ಪತ್ರ ಬರೆಯೋಣ. ಮನ್ ಕೀ ಬಾತ್‌ನಲ್ಲಿ ಮಾತಾಡಿ ನಮ್ಮ ಸಮಸ್ಯೆ ಬಗೆ ಹರಿಸ್ತಾರೆ... ಇದ್ರಿಂದ ಚುನಾವಣೆಗಳಲ್ಲಿ ಅವ್ರಿಗೇ ಅನುಕೂಲವಲ್ವೇ? ಆದ್ರಿಂದ್ಲೇ ಈ ಬಾತ್‌ಗಳನ್ನು ಚುನಾವಣೆಗಳಲ್ಲಿ ಪ್ರಸಾರ ಮಾಡ್ತಾರಂತೆ!’

‘ಸ್ವಲ್ಪ ನಿಧಾನವಾಗಿ ಬರೆಯೋಣ್ರಯ್ಯಾ... ಬಂಗಾಳಿ ಸಿನಿಮಾ ತಾರೆ ಪ್ರಸನ್ನಜಿತ್ ಚಟರ್ಜಿ ಅವರ ಪತ್ರಕ್ಕೆ ಅವ್ರ ಆ್ಯಕ್ಷನ್ ನೋಡಿಕೊಂಡೂ...’

‘ಅದೇನಯ್ಯಾ ಚಟರ್ಜಿ ಪತ್ರ?’

‘ಊಟ ಸರಬರಾಜು ಮಾಡೋ ಕಂಪನಿ ಸ್ವಿಗ್ಗಿ ಅವ್ರಿಗೆ ಆರ್ಡರ್ ಮಾಡಿದ ಆಹಾರ ತಂದುಕೊಟ್ಟಿಲ್ವಂತೆ, ಕ್ರಮ ಕೈಗೊಳ್ಳೀಂತ ಕೇಳಿದಾರೆ!’

‘ಹಾಗಾದ್ರೆ ನಮ್ಮ ಪ್ಲಾನ್ ಹಂಡ್ರೆಂಡ್ ಪರ್ಸೆಂಟ್ ಸಕ್ಸಸ್!’

ಮೂವರೂ ಹೈಫೈ ಚಪ್ಪಾಳೆ ತಟ್ಟಿದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT