ಶುಕ್ರವಾರ, ಜನವರಿ 27, 2023
17 °C

ಚುರುಮುರಿ| ಬಸ್ ಬಲಿ

ಮಣ್ಣೆ ರಾಜು Updated:

ಅಕ್ಷರ ಗಾತ್ರ : | |

Prajavani

ಮಹಾರಾಷ್ಟ್ರಕ್ಕೆ ಹೋಗಿದ್ದ ಕರ್ನಾಟಕ ಬಸ್ ಮಸಿ ಬಳಿಸಿಕೊಂಡು ಬಂದಿತ್ತು. ಕಿಟಕಿ ಗಾಜು ಒಡೆಸಿಕೊಂಡು ಗಾಯಗೊಂಡಿತ್ತು.

‘ಪರಿಸ್ಥಿತಿ ಉದ್ರಿಕ್ತವಾಗಿದೆ, ಗಡಿ ಗೆರೆ ದಾಟಿ ನೀನೂ ಬರಬೇಡ, ನಾನೂ ಬರುವುದಿಲ್ಲ’ ಎಂದು ಮಹಾರಾಷ್ಟ್ರ ಬಸ್ ಬುದ್ಧಿ ಹೇಳಿದರೂ ಕರ್ನಾಟಕದ ಬಸ್ ಕೇಳಿರಲಿಲ್ಲ, ಎಲ್ಲೆ ದಾಟಿ ಹೋಗಿ ಹಲ್ಲೆಗೊಳಗಾಗಿತ್ತು.

ಬಸ್ಸಿನ ಗ್ರಹಚಾರ ಸರಿಯಿಲ್ಲ. ಮಾರಿ ಕಣ್ಣು ಹೋರಿ ಮೇಲೆ ಎನ್ನುವಂತೆ ಉದ್ರಿಕ್ತರ ಕಣ್ಣು ಸದಾ ಬಸ್ಸಿನ ಮೇಲೆ ಇರುತ್ತದೆ. ಗಡಿ ಗಲಾಟೆಯಾಗಲಿ, ರಸ್ತೆತಡೆ, ಬಂದ್,
ಚಳವಳಿಗಳಾಗಲಿ ಪ್ರತಿಭಟನಾಕಾರರ
ಕೆಂಗಣ್ಣಿಗೆ ಮೊದಲು ಬಲಿಯಾಗುವುದು ಬಸ್ಸೇ. ಬೀದಿ ನಾಯಿ ಮೇಲೆ ಕಲ್ಲೆಸೆದು ಕೀಟಲೆ ಮಾಡುವಂತೆ ಕ್ಯಾತೆ ತೆಗೆದು ಬಸ್ಸಿನ ಮೇಲೆ ಕಲ್ಲೆಸೆಯುವ ವಿಕೃತ ಖುಷಿಕರೂ ಇದ್ದಾರೆ.

ಸಾಮಾಜಿಕ ಅನ್ಯಾಯ, ಆಕ್ರೋಶ ವ್ಯಕ್ತವಾದಾಗ ಅಮಾಯಕ ಬಸ್ ಸುಲಭದ ತುತ್ತಾಗುತ್ತದೆ. ಅಪಘಾತ ನಡೆದಾಗ ಅದರ ಪೂರ್ವಾಪರ ವಿಚಾರಿಸದೆ, ಬಸ್ಸನ್ನು ಚಚ್ಚಿರಿ, ಬೆಂಕಿ ಹಚ್ಚಿರಿ ಎಂದು ಜನ ರೊಚ್ಚಿಗೇಳುತ್ತಾರೆ.

ಜನಸೇವೆಯನ್ನೇ ಬದುಕಾಗಿಸಿಕೊಂಡು ಊರೂರು ಅಲೆಯುವ ಬಸ್‍ಗೆ ದಿನಬೆಳಗಾದರೆ ಆತಂಕ. ಎಲ್ಲಿ, ಯಾರು ರಸ್ತೆತಡೆ ಮಾಡುವರೋ ಇನ್ಯಾರು ಕಲ್ಲು ಹೊಡೆಯುವರೋ ಮತ್ಯಾರು ಬೆಂಕಿ ಹಚ್ಚುವರೋ ಎಂದು ಜೀವ ಕೈಯ್ಯಲ್ಲಿ ಹಿಡಿದು ಓಡಾಡುವಂತಾಗಿದೆ. ಆದರೆ, ತನಗೆ ಜೀವಭಯವಿದೆ ರಕ್ಷಣೆ ಕೊಡಿ, ಬಸ್ ಭದ್ರತಾ ಪಡೆ ನೇಮಿಸಿ, ಬಸ್ ರಕ್ಷಣೆಗೆ ಹೊಸ ಕಾಯ್ದೆ ರೂಪಿಸಿ ಎಂದು ಒತ್ತಾಯಿಸಿ ಇತರ ಬಸ್‍ಗಳನ್ನು ಸೇರಿಸಿಕೊಂಡು ಬಸ್ ಯಾವತ್ತೂ ಪ್ರತಿಭಟನೆ ಮಾಡಿಲ್ಲ, ಜೀವಭಯ, ಮಾರಣಾಂತಿಕ ಹಲ್ಲೆಗಳನ್ನು ಲೆಕ್ಕಿಸದೆ ಸಂಚಾರ ಮುಂದುವರಿಸುತ್ತದೆ.

ಬಸ್ ಅನ್ನು ಬದುಕಲು ಬಿಡಬೇಕು. ಪ್ರಾಣಿ ಹಿಂಸೆ ಮಹಾ ಪಾಪ, ಬಸ್ ಹಿಂಸೆ ಅಯ್ಯೋ ಪಾಪ...!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು