ಬುಧವಾರ, ಸೆಪ್ಟೆಂಬರ್ 23, 2020
27 °C

ಚರ್ಚೆ | ಶಿಕ್ಷಕ ಎಂಬ ವ್ಯವಸ್ಥೆಯ ಕೊಡುಗೆ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಶಿಕ್ಷಕರು–ಸಾಂದರ್ಭಿಕ ಚಿತ್ರ

ಸಾಮಾಜಿಕ ವ್ಯವಸ್ಥೆಯು ತಾನು ಮಾತ್ರ ಬಹಳ ದೂರ ಬಂದು, ಶಿಕ್ಷಕ ಮಾತ್ರ ಹೇಗಿದ್ದನೋ ಹಾಗೆಯೇ ಇರಬೇಕೆಂದು ಬಯಸುವುದು ತರವಲ್ಲ.

‘ಶಿಕ್ಷಕರಿಂದಲೇ ಶಿಕ್ಷಣ ವ್ಯವಸ್ಥೆ ಹಾಳಾಗಿದೆ’ ಎಂಬ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಮಿತಿ ಸದಸ್ಯ ಡಾ. ತೇಜಸ್ವಿ ಕಟ್ಟೀಮನಿಯವರ ಹೇಳಿಕೆಯನ್ನು ಸಂಪೂರ್ಣವಾಗಿ ಒಪ್ಪಲಾಗದು. ಆದರೂ ನಾವು ಶಿಕ್ಷಕರು ನಮ್ಮ ವೃತ್ತಿಯನ್ನು ಎಷ್ಟು ಪ್ರೀತಿಸುತ್ತಿದ್ದೇವೆ, ನಮ್ಮ ಕರ್ತವ್ಯಕ್ಕೆ ಎಷ್ಟು ನಿಷ್ಠರಾಗಿದ್ದೇವೆ, ಶಾಲೆಯ ಅಭಿವೃದ್ಧಿಯಲ್ಲಿ ನಮ್ಮ ಪಾತ್ರವೇನು ಎಂಬಿತ್ಯಾದಿ ಪ್ರಶ್ನೆಗಳನ್ನು ನಮಗೆ ನಾವೇ ಹಾಕಿಕೊಳ್ಳಬೇಕಿದೆ.

ಕೆಲವೊಮ್ಮೆ ನಮ್ಮ ಲೋಪಗಳ ಬಗ್ಗೆ ಯಾರಾದರೂ ಮಾತಾಡಿದಾಗ ಅದನ್ನು ತೆರೆದ ಮನಸ್ಸಿನಿಂದ ಸ್ವೀಕರಿಸುವ ಗುಣ ನಮ್ಮದಾಗಬೇಕಿದೆ.

ಯಾವುದ್ಯಾವುದೋ ಸಮಿತಿಯ ಸದಸ್ಯರ ಮೂಗು ತೂರಿಸುವಿಕೆ, ಇವರು ಹೇಳಿದ ಹಾಗೆ ಶಿಕ್ಷಕರು ತಲೆಯಾಡಿಸಬೇಕಾದ ಸ್ಥಿತಿ, ಇವೆಲ್ಲಾ ಸಮಸ್ಯೆಗಳು ಮೇಲ್ನೋಟಕ್ಕೆ ಯಾರಿಗೂ ಕಾಣಿಸದಿರುವ ಸಂಗತಿಗಳು. ವಾಸ್ತವವನ್ನು ಅರಿಯುವುದು, ಶಿಕ್ಷಕರು ನಿಜವಾಗಿಯೂ ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥೈಸಿಕೊಂಡು ಅದಕ್ಕೆ ಪರಿಹಾರ ನೀಡುವುದು ಮುಖ್ಯ. ಸರ್ಕಾರ, ಅಧಿಕಾರಿಗಳು ಹಾಗೂ ಶಿಕ್ಷಕರು ಬದ್ಧತೆಯಿಂದ ಕೆಲಸ ಮಾಡಿದರೆ, ಸೊರಗಿರುವ ಶಾಲೆಗಳನ್ನು, ಹದಗೆಟ್ಟ ಶಿಕ್ಷಣ ವ್ಯವಸ್ಥೆಯನ್ನು ಹಳಿಗೆ ತರಲು ಖಂಡಿತವಾಗಿಯೂ ಸಾಧ್ಯ.

-ಮಂಜುನಾಥ್ ಟಿ.ಎಸ್., ಚಿಕ್ಕಮಗಳೂರು

ತ್ರಿಕೂಟ ತಾಡನ

ತೇಜಸ್ವಿಯವರ ಅಭಿಪ್ರಾಯಕ್ಕೆ ಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅದು ಸಹಜವೇ. ರಾಜಕಾರಣಿಗಳು, ಅಧಿಕಾರಶಾಹಿ ಮತ್ತು ಶಿಕ್ಷಕರ ತ್ರಿಕೂಟ ತಾಡನಕ್ಕೆ ಸಿಲುಕಿ ಶಿಕ್ಷಣವಂತೂ ಹಾಳಾಗಿದೆ ಎಂಬುದನ್ನು ಎಲ್ಲರೂ ಒಪ್ಪುತ್ತಾರೋ ಏನೋ. ಆದರೆ ಇದನ್ನು ಸರಿಪಡಿಸುವ ದಿಸೆಯಲ್ಲಿ ಕ್ರಿಯಾಶೀಲರಾಗಬೇಕಾದದ್ದು ಮಾತ್ರ ಶಿಕ್ಷಕರೇ. ಇದನ್ನು ಶೈಕ್ಷಣಿಕ ಹೊಣೆಗಾರಿಕೆ ಎಂದಷ್ಟೇ ಭಾವಿಸದೆ ಸಾಮಾಜಿಕ ಜವಾಬ್ದಾರಿ ಎಂದು ನಿರ್ವಹಿಸಬೇಕಾಗಿದೆ. ಕಟ್ಟೀಮನಿ ಅವರು ಪ್ರಾಥಮಿಕ, ಪ್ರೌಢ ಅಥವಾ ಉನ್ನತ ಶಿಕ್ಷಣ ಹಾಳಾಗಿದೆ ಎಂದು ನಿರ್ದಿಷ್ಟವಾಗಿ ಹೇಳಿಲ್ಲ. ಇಡೀ ಶಿಕ್ಷಣ ವ್ಯವಸ್ಥೆ ಹಾಳಾಗಿರುವ ಬಗ್ಗೆ ಅವರಿಗೆ ಆತಂಕವಿರುವಂತಿದೆ. ಆದುದರಿಂದ ಅವರ ಮಾತನ್ನು ಪ್ರಜ್ಞಾವಂತ ಶಿಕ್ಷಣ ತಜ್ಞನೊಬ್ಬನ ನೋವಿನ ಪ್ರತಿಕ್ರಿಯೆ ಎಂದು ಗ್ರಹಿಸಿ ಶಿಕ್ಷಕ ಸಮುದಾಯ ಆತ್ಮಾವಲೋಕನ
ಮಾಡಿಕೊಳ್ಳಬೇಕಾಗಿದೆ.

ಶಿಕ್ಷಕ ಸಮುದಾಯದ ಉನ್ನತಿಗೆ ಸರ್ಕಾರದಿಂದ ಸಿಗುವ ತರಬೇತಿಗಳನ್ನು ಶೈಕ್ಷಣಿಕ ಉತ್ತಮಿಕೆಗೆ ದೊರೆತ ಅವಕಾಶ ಎಂದು ಬಳಸಿಕೊಳ್ಳುವ ಬಹುಸಂಖ್ಯೆಯ ಶಿಕ್ಷಕರ ನಡುವೆ, ಅದೊಂದು ಕಾಟಾಚಾರದಂತೆ ಅಥವಾ ಬಡ್ತಿಗೆ ಬೇಕಾದ ಅರ್ಹತೆ ಪಡೆಯಲು ಮಾತ್ರ ಎಂಬಂತೆ ಪೂರೈಸಿಕೊಳ್ಳುವ ಕೆಲವೇ ಶಿಕ್ಷಕರಿಂದ ಇಡೀ ಸಮುದಾಯ ಸಾಮಾಜಿಕ ಸಹಾನುಭೂತಿಯನ್ನು ಕಳೆದುಕೊಳ್ಳುವಂತಾಗಿದೆ. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ವಿಶ್ವವಿದ್ಯಾಲಯದವರೆಗೂ ಇದು ಸಾಮಾನ್ಯವಾಗಿದೆ.

ಇನ್ನು ಶಿಕ್ಷಣ ತರಬೇತಿ ಪಡೆಯುವ ಕೆಲವು ವಿದ್ಯಾರ್ಥಿಗಳು ಮುಂದೆ ಶಿಕ್ಷಕರಾಗಿ ಬಂದು, ನಂತರ ನೀಡುವ ಶಿಕ್ಷಣವನ್ನು ದೇವರೇ ಕಾಪಾಡಬೇಕು. ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ಬೇಕು, ನಮಗೆ ದುಡ್ಡು ಬೇಕು ಅಷ್ಟೇ ಅನ್ನುವಂತಾಗಿದೆ. ದೇಶವೊಂದನ್ನು ಹಾಳು ಮಾಡಬೇಕೆಂದರೆ ಕೆಟ್ಟ ಶಿಕ್ಷಕರನ್ನು ನೇಮಿಸಿದರೆ ಸಾಕು- ಮತ್ತೇನೂ ಮಾಡಬೇಕಿಲ್ಲ ಎಂದು ನೆಲ್ಸನ್ ಮಂಡೇಲಾ ಹೇಳಿದ್ದರು. ನಮ್ಮಲ್ಲಿ ಏನಾಗುತ್ತಿದೆ? ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ, ದಾರಿ ಸಾಗುವುದೆಂತೋ ನೋಡಬೇಕು.

-ದಾದಾಪೀರ್ ನವಿಲೇಹಾಳ್, ದಾವಣಗೆರೆ

ಜೀವನೋಪಾಯದ ವೃತ್ತಿ

‘ಗುರು ದೊಡ್ಡ ಹೆಸರು, ನಾನು ಸಂಬಳದ ಉಪಾಧ್ಯಾಯ’ ಎಂದಿದ್ದರು ದ.ರಾ. ಬೇಂದ್ರೆ. ಮೇಷ್ಟ್ರುಗಳು ಗುರುವಿನ ಪಟ್ಟ ಬಿಡಿಸಿಕೊಂಡು ತುಂಬಾ ದಿನಗಳೇ ಆದವು. ಮೇಷ್ಟ್ರು ಆದವನು ಸಮಾಜದ ಮಧ್ಯದಿಂದಲೇ ಬಂದವನು ವಿನಾ ಅವನು ಎಲ್ಲಿಂದಲೋ ಅವತರಿಸಿದವನಲ್ಲ. ಹಾಗಾಗಿ ಇವತ್ತಿನ ಸಮಾಜದಂತೆ ಅವನು ಕೂಡ ಇರುತ್ತಾನೆ. ಅಷ್ಟಕ್ಕೂ ಪಾಠ ಹೇಳುವುದು ಒಂದು ಜೀವನೋಪಾಯದ ವೃತ್ತಿಯಾಗಿದೆಯೇ ಹೊರತು ಅದು ಸೇವೆಯ ಗಡಿ ದಾಟಿ ತುಂಬಾ ದಿನಗಳಾದವು. ಸಾಮಾಜಿಕ ವ್ಯವಸ್ಥೆಯು ತಾನು ಮಾತ್ರ ಬಹಳ ದೂರ ಬಂದು, ಶಿಕ್ಷಕ ಮಾತ್ರ ಹೇಗಿದ್ದನೋ ಹಾಗೆಯೇ ಇರಬೇಕೆಂದು ಬಯಸುವುದು ತರವಲ್ಲ.

ಯಾವುದೋ ಹುಡುಗನ ಉದ್ಧಟತನ ಕಂಡ ಸಮಾಜ ‘ಯಾರು ನಿಂಗೆ ಪಾಠ ಹೇಳಿದ್ದು?’ ಅಂತ ನೇರವಾಗಿ ಶಿಕ್ಷಕನ ಬುಡಕ್ಕೇ ಬರುತ್ತದೆ. ಮಗು ಹಾಳಾಗಲಿ, ಕೆಟ್ಟ ದಾರಿ ಹಿಡಿಯಲಿ ಎಂದು ಯಾವ ಶಿಕ್ಷಕನೂ ಬಯಸುವುದಿಲ್ಲ. ಈಗೀಗ ಮಗುವಿನ ಮೇಲೆ ಶಿಕ್ಷಕರಿಗಿಂತ, ಶಾಲೆಗಿಂತ ಹೆಚ್ಚು ಪ್ರಭಾವ ಬೀರಲು ಅದರದೇ ಮನೆಯ ಪರಿಸರ, ಮಾಧ್ಯಮಗಳಿವೆ. ಶಿಕ್ಷಕ ಗೌಣವಾಗುತ್ತಿರುವುದು ಇದೇ ಕಾರಣಕ್ಕೆ. ‘ಯ ರ ಲ ವ ಕಲಿಸಿದವನನ್ನೇ ಯಾರ‍್ಲ ಅಂವ?’ ಅನ್ನುವ ಪೀಳಿಗೆಯ ಮಧ್ಯೆ ಒಬ್ಬ ಒಳ್ಳೆಯ ಶಿಕ್ಷಕ ನಿಜಕ್ಕೂ ಕಳೆದು ಹೋಗುತ್ತಿದ್ದಾನೆ. ಶಿಕ್ಷಕ ಈ ವ್ಯವಸ್ಥೆಯ ಕೊಡುಗೆ. ಶಿಕ್ಷಕನಲ್ಲಿ ತಪ್ಪಿದೆ ಅಂದರೆ ವ್ಯವಸ್ಥೆಯಲ್ಲೂ ತಪ್ಪಿದೆ ಎಂದೇ ಅರ್ಥ.

-ಸದಾಶಿವ್ ಸೊರಟೂರು, ದೊಡ್ಡಬೊಮ್ಮನಹಳ್ಳಿ, ಚಿಂತಾಮಣಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು