ಶುಕ್ರವಾರ, ಮಾರ್ಚ್ 24, 2023
30 °C

ಸಂಪಾದಕೀಯ | ‘ಪಠಾಣ್‌’ ಬದಲಾವಣೆಗೆ ಸೂಚನೆ ರಾಜಕೀಯ ಪೂರ್ವಗ್ರಹವೇ ಕಾರಣ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಶಾರುಕ್‌ ಖಾನ್‌ ಮತ್ತು ದೀಪಿಕಾ ಪಡುಕೋಣೆ ಮುಖ್ಯಪಾತ್ರದಲ್ಲಿರುವ ‘ಪಠಾಣ್‌’ ಸಿನಿಮಾದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು ಎಂದು ಕೇಂದ್ರ ಸಿನಿಮಾ ಪ್ರಮಾಣೀಕರಣ ಮಂಡಳಿಯು (ಸಿಬಿಎಫ್‌ಸಿ) ನಿರ್ಮಾಪಕರಿಗೆ ಸೂಚಿಸಿರುವುದು ಸರಿಯಲ್ಲ. ಈ ಸೂಚನೆಯ ಮೂಲಕ ಕಲಾ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಾಗಿದೆ. ಮಂಡಳಿಯ ಮಾರ್ಗಸೂಚಿಗೆ ಅನುಸಾರವಾಗಿ ಸಿನಿಮಾ ಮತ್ತು ಅದರ ಹಾಡುಗಳಲ್ಲಿ ಬದಲಾವಣೆ ಮಾಡಬೇಕು ಎಂದು ಸಿಬಿಎಫ್‌ಸಿ ಅಧ್ಯಕ್ಷ ಪ್ರಸೂನ್‌ ಜೋಷಿ ಹೇಳಿದ್ದಾರೆ.

ಯಾವೆಲ್ಲ ಬದಲಾವಣೆಗಳನ್ನು ಮಾಡಬೇಕು ಎಂಬುದನ್ನು ಅವರು ಬಹಿರಂಗವಾಗಿ ಹೇಳಿಲ್ಲ. ‘ಬೇಷರಮ್‌ ರಂಗ್‌’ ಹಾಡಿನ ಸನ್ನಿವೇಶದಲ್ಲಿ ನರ್ತಿಸುವಾಗ ದೀಪಿಕಾ ಅವರು ಧರಿಸಿದ್ದ ದಿರಿಸು ಮತ್ತು ಆ ಹಾಡಿನ ಸಾಲುಗಳನ್ನು ಗುರಿಯಾಗಿಸಿ ಇತ್ತೀಚೆಗೆ ಟೀಕೆಗಳು ಬಂದಿವೆ. ಸಿನಿಮಾದ ಹೆಸರಿನ ಬಗ್ಗೆಯೂ ತಕರಾರು ಎತ್ತಲಾಗಿದೆ. ಸಿಬಿಎಫ್‌ಸಿ ತನ್ನ ಆದೇಶವನ್ನು ನೀಡಿದೆ ಎಂದು ವರದಿಗಳು ಬಂದಿವೆಯಾದರೂ ಅದನ್ನು ಅಧಿಕೃತವಾಗಿ ಪ್ರಕಟಿಸಲಾಗಿಲ್ಲ.

ಸಮಾಜದ ಧರ್ಮಾಂಧ ಮತ್ತು ಮಡಿವಂತಿಕೆಯ ವರ್ಗವು ಸಿನಿಮಾದ ಹಾಡಿನ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ. ಇದರ ಹಿಂದೆ ಇರುವುದು ಕೋಮುವಾದಿ ಭಾವನೆ. ಅಷ್ಟೇ ಅಲ್ಲದೆ, ಸಿನಿಮಾದಲ್ಲಿ ಅಭಿನಯಿಸಿರುವ ನಟ–ನಟಿಯರ ಕುರಿತ ವೈಯಕ್ತಿಕ ಮತ್ತು ರಾಜಕೀಯ ಪೂರ್ವಗ್ರಹವೂ ಇದಕ್ಕೆ ಕಾರಣ. ಈ ವರ್ಗದ ವಿವೇಚನಾರಹಿತ ಆಗ್ರಹಕ್ಕೆ ಅನುಗುಣವಾಗಿ ಸಿಬಿಎಫ್‌ಸಿ ನಡೆದುಕೊಳ್ಳಬಾರದಿತ್ತು. 

ಈ ನಿರ್ಧಾರಕ್ಕೆ ‘ಸಂಸ್ಕೃತಿ ಮತ್ತು ಧರ್ಮ’ ಕಾರಣ ಎಂದು ಪ್ರಸೂನ್‌ ಅವರು ಹೇಳಿಕೊಂಡಿದ್ದಾರೆ. ‘ವಾಸ್ತವ ಮತ್ತು ಸತ್ಯದಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಕ್ಷುದ್ರ ಶಕ್ತಿಗಳು ಸಂಸ್ಕೃತಿ ಮತ್ತು ಧರ್ಮವನ್ನು ವ್ಯಾಖ್ಯಾನಿಸಲು ಅವಕಾಶ ಕೊಡುವುದಿಲ್ಲ’ ಎಂದೂ ಅವರು ಹೇಳಿದ್ದಾರೆ. ಇದರ ಅರ್ಥ ಏನೇ ಆಗಿರಲಿ. ಇತರ ಎಲ್ಲೆಡೆಯಂತೆ, ಸಿನಿಮಾ ಕ್ಷೇತ್ರದಲ್ಲಿ ಕೂಡ ಸಂಸ್ಕೃತಿ ಮತ್ತು ಧರ್ಮವನ್ನು ಅಧಿಕಾರ ಸ್ಥಾನದಲ್ಲಿರುವವರೇ ವ್ಯಾಖ್ಯಾನಿಸುತ್ತಿದ್ದಾರೆ ಎಂಬ ಸಂದೇಶ ರವಾನೆಯಾಗಿದೆ. ಸಂಸ್ಕೃತಿ, ಪರಂಪರೆ ಮತ್ತು ಧರ್ಮ ಎಂಬುದು ಬೇರೆ ಬೇರೆ ಜನರಿಗೆ ಬೇರೆ ಬೇರೆಯಾಗಿದೆ.

ಯಾವುದೋ ಒಂದು ವ್ಯಾಖ್ಯಾನವೇ ಸರಿ ಎಂದು ಪರಿಗಣಿಸಲಾಗದು ಮತ್ತು ಅದನ್ನೇ ಇತರರ ಮೇಲೆ ಹೇರುವುದಕ್ಕೂ ಅವಕಾಶ ಇಲ್ಲ. ಇವುಗಳನ್ನು ಯಾರಾದರೂ ಭಿನ್ನವಾಗಿ ಅರ್ಥ ಮಾಡಿಕೊಂಡರೆ, ಆ ನಿಲುವಿಗಾಗಿ ಅವರ ಮೇಲೆ ದಾಳಿ ನಡೆಸುವುದು ಸಲ್ಲದು. ದೇಶವು ಹೆಚ್ಚು ಹೆಚ್ಚು ಧರ್ಮಾಂಧವೂ ಅಸಹಿಷ್ಣುವೂ ಆಗುತ್ತಿದೆ. ಕೋಮು ನೆಲೆಯ ವಿಭಜನೆ ಹೆಚ್ಚುತ್ತಿದೆ. ಒಂದು ಸಿನಿಮಾ ಅಥವಾ ಪುಸ್ತಕ ಅಥವಾ ಕಲಾಕೃತಿಯ ಮೇಲೆ ದಾಳಿ ನಡೆಸಲು ಸಾಮಾನ್ಯವಾಗಿ ನೀಡಲಾಗುವ ಕಾರಣ ಅದು ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬುದಾಗಿದೆ– ಬಹುಸಂಖ್ಯಾತರು, ಅಲ್ಪಸಂಖ್ಯಾತರು ಅಥವಾ ಇತರ ಯಾವುದೇ ವರ್ಗದ ಹೆಸರಿನಲ್ಲಿ ಇದನ್ನು ಮಾಡಲಾಗುತ್ತಿದೆ. ಕಲೆಯು ಪ್ರಚೋದಿಸಬೇಕು ಮತ್ತು ಅದು ವೇದನೆಯನ್ನೂ ಉಂಟು ಮಾಡಬೇಕು. ಹಾಗಿದ್ದಾಗ ಮಾತ್ರ ಸಮುದಾಯವು ಆತ್ಮಾವಲೋಕನ ಮಾಡಿಕೊಂಡು ಇನ್ನಷ್ಟು ಉತ್ತಮಗೊಳ್ಳಲು ಸಾಧ್ಯ. ಅದು ಕಲೆಯ ಸಾಮಾಜಿಕ ಹೊಣೆಗಾರಿಕೆಯೂ ಹೌದು. 

ಸಿಬಿಎಫ್‌ಸಿ ಒಂದು ಸ್ವಾಯತ್ತ ಸಂಸ್ಥೆ. ಇದು ರಾಜಕೀಯ ಸಂಜ್ಞೆಗಳು ಅಥವಾ ಒತ್ತಡದ ಆಧಾರದಲ್ಲಿ ನಿರ್ಧಾರಗಳನ್ನು ಕೈಗೊಳ್ಳಬಾರದು. ಸಿಬಿಎಫ್‌ಸಿಯ ನಿರ್ಧಾರವನ್ನು ಸಿಬಿಎಫ್‌ಸಿಯ ಮಾಜಿ ಅಧ್ಯಕ್ಷ ಪಹಲಜ್‌ ನಿಹಲಾನಿ ಅವರು ಟೀಕಿಸಿದ್ದಾರೆ. ಒತ್ತಡದಿಂದಾಗಿಯೇ ಈ ನಿರ್ಧಾರ ಕೈಗೊಂಡಿರಬಹುದು ಎಂದೂ ಅವರು ಹೇಳಿದ್ದಾರೆ. ಮಧ್ಯಪ್ರದೇಶದ ಸಚಿವ ನರೋತ್ತಮ ಮಿಶ್ರಾ ಸೇರಿದಂತೆ ಆಡಳಿತಾರೂಢ ಪಕ್ಷದ ಹಲವರು ಈ ಸಿನಿಮಾವನ್ನು ಟೀಕಿಸಿದ್ದಾರೆ ಮತ್ತು ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ. ಶಾರುಕ್‌ ಖಾನ್‌ ಮತ್ತು ದೀಪಿಕಾ ಅವರು ಹೊಂದಿರುವ ರಾಜಕೀಯ ನಿಲುವು ಕೂಡ ಈ ಎಲ್ಲದರ ಹಿಂದೆ ಕೆಲಸ ಮಾಡಿದೆ ಎನ್ನಲಾಗುತ್ತಿದೆ. ಹೀಗೆ ಸಿನಿಮಾಕ್ಕೆ ಸಂಬಂಧಿಸಿದ್ದಲ್ಲದ ಕಾರಣಗಳನ್ನು ಇರಿಸಿಕೊಂಡು ಈ ರೀತಿಯ ಅಭಿಯಾನ ನಡೆಸುವುದು ಮತ್ತು ಸಿನಿಮಾ ಮೇಲೆ ದಾಳಿ ಮಾಡುವುದು ಪೌರರು ಮತ್ತು ಕಲಾವಿದರ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ. ಸಿಬಿಎಫ್‌ಸಿ, ತಾನು ರೂಪಿಸಿಕೊಂಡ ಮಾನದಂಡಗಳಿಗೆ ಅನುಗುಣವಾಗಿ ಸಿನಿಮಾವನ್ನು ಪರಿಶೀಲಿಸಬೇಕೇ ಹೊರತು ರಾಜಕಾರಣದ ಕಾರಣಗಳಿಗೆ ಅನುಸಾರವಾಗಿ ಅಲ್ಲ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು