ಶನಿವಾರ, ಅಕ್ಟೋಬರ್ 31, 2020
24 °C
ಕ್ರೀಡಾ ಜೀವನದುದ್ದಕ್ಕೂ ತಾವೂ ಬೆಳೆಯುತ್ತಾ ಕಿರಿಯರ ಬೆನ್ನುತಟ್ಟುತ್ತಾ ಸಾಗಿದ ಧೋನಿ ಅವರದು ಅನುಕರಣೀಯ ನಡೆ

ಸಂಪಾದಕೀಯ | ದೇಶದಲ್ಲಿ ಕ್ರಿಕೆಟ್‌ಗೆ ಹೊಸ ಹೊಳಪು ತುಂಬಿದ ನಾಯಕ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರದು ಒಂದು ಮಹತ್ವದ ಅಧ್ಯಾಯ. ತಮ್ಮ ಆಟ, ನಾಯಕತ್ವ ಮತ್ತು ವ್ಯಕ್ತಿತ್ವದ ಸ್ಫೂರ್ತಿದಾಯಕ ಪಾಠಗಳನ್ನು ಯುವಸಮುದಾಯಕ್ಕೆ ಕಾಣಿಕೆಯಾಗಿ ಕೊಟ್ಟು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಅವರ ವಿಕೆಟ್‌ ಕೀಪಿಂಗ್ ಮತ್ತು ಬ್ಯಾಟಿಂಗ್ ದಾಖಲೆಗಳನ್ನು ಸರಿಗಟ್ಟುವ ಆಟಗಾರರು ಭವಿಷ್ಯದಲ್ಲಿ ಬರಬಹುದು. ಆದರೆ, ಎಂತಹ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳದೆ ತಂಡಕ್ಕೆ ದಿಟ್ಟ ನಾಯಕತ್ವ ಕೊಟ್ಟ ಅವರಂತಹ ಆಟಗಾರ ಮತ್ತೆ ಕ್ರಿಕೆಟ್‌ ಅಂಗಳದಲ್ಲಿ ಕಾಣಸಿಗುವರೇ ಎಂಬ ಪ್ರಶ್ನೆ ಕಾಡುತ್ತಿರುವುದು ಸುಳ್ಳಲ್ಲ.

ಕಿರಿಯ ಆಟಗಾರರಿಗೆ ಅನುಭವವನ್ನು ಧಾರೆಯೆರೆಯುವ ವಿಷಯದಲ್ಲಿ ಧೋನಿಯವರಿಗೆ ಅವರೇ ಸರಿಸಾಟಿ. ಕ್ರಿಕೆಟ್‌ ಬಗ್ಗೆ ಹೆಚ್ಚು ಒಲವಿರದ ‍ರಾಂಚಿಯ ಮಧ್ಯಮವರ್ಗದ ಕುಟುಂಬದ ಕುಡಿ, ದೇಶ– ವಿದೇಶಗಳ ಎಲ್ಲ ವರ್ಗಗಳ ಜನಮಾನಸದಲ್ಲಿ ಸ್ಥಾನ ಗಳಿಸಿಕೊಂಡಿದ್ದು ಕಡಿಮೆ ಸಾಧನೆಯಲ್ಲ. ಇಂತಹದ್ದೊಂದು ಸಾರ್ಥಕ ಪಯಣಕ್ಕೆ ಅವರಲ್ಲಿದ್ದ ಆಟದ ಕೌಶಲವಷ್ಟೇ ಕಾರಣವಲ್ಲ; ಅದರಾಚೆಗಿನ ಅವರ ಶಾಂತಸ್ವಭಾವ, ನಡೆ–ನುಡಿಯೂ ಕಾರಣ. ಕಾರ್ಖಾನೆಯೊಂದರ ನೀರಿನ ಪಂಪ್ ನಿರ್ವಹಣೆಯ ಉದ್ಯೋಗಿಯೊಬ್ಬರ ಪುತ್ರ ಇಷ್ಟೊಂದು ಎತ್ತರಕ್ಕೆ ಬೆಳೆದಿದ್ದು ಹೆಮ್ಮೆಯ ಸಾಧನೆ.

ಕಪಿಲ್‌ ದೇವ್ ಅವರಂತೆಯೇ ಧೋನಿ ಅವರೂ ದೇಶಕ್ಕೆ ಏಕದಿನ ವಿಶ್ವಕಪ್‌ ತಂದ ತಂಡದ ನೇತೃತ್ವವನ್ನು ವಹಿಸಿದ್ದವರು. ಕಪಿಲ್ ಬಳಗವು 1983ರ ವಿಶ್ವಕಪ್ ಗೆದ್ದ ಸಾಧನೆಯು ದೇಶದಲ್ಲಿ ಕ್ರಿಕೆಟ್‌ ಬೆಳವಣಿಗೆಗೆ ಶರವೇಗ ತುಂಬಿತು. ಈ ಕ್ರೀಡೆ ಆರ್ಥಿಕವಾಗಿಯೂ ಶ್ರೀಮಂತವಾಯಿತು. ಆದರೆ, 1999–2000ದಲ್ಲಿ ಸದ್ದು ಮಾಡಿದ ಮೋಸದಾಟದ ಪ್ರಕರಣದಿಂದಾಗಿ ಜನರಿಗೆ ಕ್ರಿಕೆಟಿಗರ ಬಗ್ಗೆ ಅಪನಂಬಿಕೆ ಮೂಡಿತು. ಅದರ ನಂತರ ತಂಡದ ಚುಕ್ಕಾಣಿ ಹಿಡಿದ ಸೌರವ್ ಗಂಗೂಲಿ ಅವರೊಂದಿಗೆ ಇದ್ದ ಸಚಿನ್‌ ತೆಂಡೂಲ್ಕರ್‌, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಮೊಹಮ್ಮದ್ ಕೈಫ್ ಅವರಂತಹ ಪ್ರತಿಭಾನ್ವಿತ ಆಟಗಾರರು ಭಾರತದ ಕ್ರಿಕೆಟ್‌ ಮೇಲೆ ವಿಶ್ವಾಸ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 2004ರಲ್ಲಿ ಇವರಿದ್ದ ತಂಡಕ್ಕೆ ಪದಾರ್ಪಣೆ ಮಾಡಿದವರು ಧೋನಿ. ಆದರೆ, ವೆಸ್ಟ್‌ ಇಂಡೀಸ್‌ನಲ್ಲಿ ನಡೆದ 2007ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅನುಭವಿಸಿದ ಹೀನಾಯ ಸೋಲಿನಿಂದಾಗಿ ಭಾರತೀಯ ಕ್ರಿಕೆಟ್‌ ಮತ್ತೆ ವೈಫಲ್ಯದ ಹಾದಿ ಹಿಡಿಯಿತೇನೋ ಎಂಬ ಅನುಮಾನ ಆವರಿಸಿತು.

ಅದೇ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಟ್ವೆಂಟಿ–20 ವಿಶ್ವಕಪ್ ಟೂರ್ನಿಯಲ್ಲಿ ಅನುಭವಿ ಆಟಗಾರರು ಲಭ್ಯರಿರಲಿಲ್ಲ. ಧೋನಿ ಅವರಿಗೆ ನಾಯಕತ್ವ ವಹಿಸಲಾಯಿತು. ವಿಶ್ವಕಪ್ ಜಯಿಸಿದ ಧೋನಿ ಬಳಗದ ಸಾಧನೆಯಿಂದಾಗಿ ಭಾರತದ ಕ್ರಿಕೆಟ್‌ ಮತ್ತೊಮ್ಮೆ ಮಗ್ಗುಲು ಬದಲಿಸಿತ್ತು. ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕೊನೆಯ ಓವರ್‌ನಲ್ಲಿಯೂ ಭಾರತ ತಂಡವು ಜಯಿಸುವ ಸಾಮರ್ಥ್ಯ ಹೊಂದಿದೆ ಎಂಬ ವಿಶ್ವಾಸ ಮೂಡಿದ್ದು ಆಗಲೇ. ಅದರ ಹಿಂದೆ ಧೋನಿಯವರ ಛಲಗಾರಿಕೆ ಇತ್ತು. ಅಲ್ಲದೇ ಸಾಧನೆಯ ತುಡಿತವಿರುವ ಯುವ ಆಟಗಾರರಿಂದ ಜಯದ ಫಸಲು ಬೆಳೆಯುವ ಹೊಳಹು ಸಿಕ್ಕಿದ್ದು ಕೂಡ ಆಗಲೇ.

2008ರಲ್ಲಿ ಗಂಗೂಲಿ ಮತ್ತು ಕುಂಬ್ಳೆ ವೃತ್ತಿಜೀವನಕ್ಕೆ ವಿದಾಯ ಹೇಳಿದರು. ಆಗ ಪೂರ್ಣಾವಧಿ ನಾಯಕತ್ವ ವಹಿಸಿಕೊಂಡ ಧೋನಿ ಅವರು, ತೆಂಡೂಲ್ಕರ್‌, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಅವರಂತಹ ಅನುಭವಿಗಳೊಂದಿಗೆ ಯುವ ಆಟಗಾರರಿಗೂ ಮಣೆ ಹಾಕಿದರು. ವಿದೇಶದಲ್ಲಿ ಜಯಿಸಲು ನಮ್ಮ ಆಟಗಾರರ ದೈಹಿಕ ಕ್ಷಮತೆಯ ಕೊರತೆಯೇ ಕಾರಣ ಎಂಬುದನ್ನು ಅರಿತಿದ್ದ ಧೋನಿ, ಫಿಟ್‌ನೆಸ್‌ಗೆ ಕೊಟ್ಟ ಒತ್ತು ಫಲ ನೀಡಿತು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ಅಗ್ರಪಟ್ಟಕ್ಕೇರಿತು. ತಂಡವು 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದುಕೊಂಡಿತು. 2013ರಲ್ಲಿ ಚಾಂಪಿಯನ್ಸ್‌ ಟ್ರೋಫಿ ವಿಜಯವೂ ದಕ್ಕಿತು.

ಈ ಹಾದಿಯಲ್ಲಿ ಅವರು ತಂಡದ ಆಯ್ಕೆ ವಿಷಯಗಳಲ್ಲಿ ತಳೆದ ಕೆಲವು ನಿಲುವುಗಳಿಂದಾಗಿ ಟೀಕೆಗೂ ಗುರಿಯಾದರು. ಐಪಿಎಲ್ ಸ್ಪಾಟ್‌ ಫಿಕ್ಸಿಂಗ್ ಪ್ರಕರಣದಲ್ಲಿ ಅವರ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ನಿಷೇಧಕ್ಕೊಳಗಾಗಿದ್ದು ಅವರ ವೃತ್ತಿಬದುಕಿನ ಕಹಿ ಅನುಭವವಾಗಿ ಕಾಡಿರಲಿಕ್ಕೂ ಸಾಕು. ಇವೆಲ್ಲದರ ನಡುವೆ ಕ್ರೀಡಾ ಜೀವನದುದ್ದಕ್ಕೂ ತಾವೂ ಬೆಳೆಯುತ್ತಾ ಕಿರಿಯರ ಬೆನ್ನುತಟ್ಟುತ್ತಾ ಸಾಗಿದ ಧೋನಿಯವರ ದಾರಿಯಂತೂ ಅನುಕರಣೀಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು