ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ರೋಚಕ ಕ್ಷಣಗಳ ಕಣಜ ಐಪಿಎಲ್‌ಗೆ ಚೆನ್ನೈ ಬಳಗವೇ ‘ಸೂಪರ್ ಕಿಂಗ್’

Published 30 ಮೇ 2023, 22:34 IST
Last Updated 30 ಮೇ 2023, 22:34 IST
ಅಕ್ಷರ ಗಾತ್ರ

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯಂತ ರೋಚಕ ಟೂರ್ನಿಯಾಗಿ ಹದಿನಾರನೇ ಆವೃತ್ತಿಯು ದಾಖಲೆಯ ಪುಟ ಸೇರಿತು. ಮೊದಲ ಪಂದ್ಯದಿಂದ ಫೈನಲ್‌ ಹಣಾಹಣಿಯ ಕೊನೆಯ ಎಸೆತದವರೆಗೂ ರೋಚಕ ರಸದೌತಣ ನೀಡಿದ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿತು. 2008ರಲ್ಲಿ ಆರಂಭವಾದ ಐಪಿಎಲ್‌ನಲ್ಲಿ ಹತ್ತನೇ ಬಾರಿ ಫೈನಲ್ ಪ್ರವೇಶಿಸಿದ್ದ ಧೋನಿ ಬಳಗವು ಐದನೇ ಸಲ ಟ್ರೋಫಿ ಜಯಿಸಿತು. ಮುಂಬೈ ಇಂಡಿಯನ್ಸ್ ತಂಡದ ದಾಖಲೆಯನ್ನೂ ಸರಿಗಟ್ಟಿತು. ಅಲ್ಲದೇ ಧೋನಿ ಅವರಿಗೆ ಈ ಐಪಿಎಲ್ ಕೊನೆಯದಾಗುವ ಸಾಧ್ಯತೆ ಇದೆ. ಆದ್ದರಿಂದ ತಂಡದ ಆಟಗಾರರು ತಮ್ಮ ನೆಚ್ಚಿನ ನಾಯಕನಿಗೆ ‘ವಿಜಯದ ವಿದಾಯ’ ನೀಡಿದ್ದಾರೆಂಬ ಮಾತುಗಳೂ ಇವೆ. ಹೋದ ವರ್ಷದ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡವು ಇಲ್ಲಿ ರನ್ನರ್ಸ್ ಆಪ್ ಆಯಿತು. ಸೋಲು, ಗೆಲುವುಗಳಾಚೆ ನೋಡಿದಾಗ ಕೆಲವು ವಿಶೇಷಗಳು ಗಮನ ಸೆಳೆಯುತ್ತವೆ.

58 ದಿನಗಳ ಕ್ರಿಕೆಟ್‌ ಹಬ್ಬದಲ್ಲಿ ಹತ್ತು ತಂಡಗಳು ಆಡಿದವು. ಮೂರು ವರ್ಷಗಳ ನಂತರ ತವರು ಹಾಗೂ ತವರಿನಾಚೆ ಮಾದರಿಯಲ್ಲಿ ಪಂದ್ಯಗಳು ಆಯೋಜನೆಗೊಂಡಿದ್ದರಿಂದ ಕ್ರೀಡಾಂಗಣಗಳೂ ತುಂಬಿ ತುಳುಕಿದವು. ಕೋವಿಡ್ ಬಿಕ್ಕಟ್ಟಿನಿಂದಾಗಿ ಮೂರು ವರ್ಷ ತಟಸ್ಥ ತಾಣದಲ್ಲಿ ಟೂರ್ನಿ ಆಯೋಜನೆಗೊಂಡಿತ್ತು. ಈ ಸಲ ಒಟ್ಟು 74 ಪಂದ್ಯಗಳು ನಡೆದವು. ಅದರಲ್ಲಿ ಶೇ 95ರಷ್ಟು ಪಂದ್ಯಗಳ ಫಲಿತಾಂಶಗಳು ಕೊನೆಯ ಓವರ್‌ನಲ್ಲಿಯೇ ಹೊರಹೊಮ್ಮಿದ್ದು ವಿಶೇಷ. ಮೇ 28ರಂದು ಮಳೆ ಸುರಿದ ಕಾರಣ ಫೈನಲ್ ಪಂದ್ಯವನ್ನು ಮೀಸಲು ದಿನವಾದ ಮರುದಿನಕ್ಕೆ ಮುಂದೂಡಲಾಯಿತು. ಈ ರೀತಿಯಾಗಿದ್ದು ಇದು ಮೊದಲ ಬಾರಿ. ಅಲ್ಲದೇ ಈ ಟೂರ್ನಿಯು ಅನುಭವಿ ಆಟಗಾರರು ಮತ್ತು ಯುವಪ್ರತಿಭೆಗಳ ನಡುವಣ ಪೈಪೋಟಿಗೂ ವೇದಿಕೆಯಾಯಿತು. ಅಜಿಂಕ್ಯ ರಹಾನೆ, ಎರಡು ಭರ್ಜರಿ ಶತಕ ಗಳಿಸಿದ ವಿರಾಟ್‌ ಕೊಹ್ಲಿ, ಶಿಖರ್ ಧವನ್, ವೇಗಿ ಮೊಹಮ್ಮದ್ ಶಮಿ, ದಕ್ಷಿಣ ಆಫ್ರಿಕಾದ ಫಫ್ ಡುಪ್ಲೆಸಿ, ವೆಸ್ಟ್‌ ಇಂಡೀಸ್‌ನ ನಿಕೊಲಸ್ ಪೂರನ್, ಆಸ್ಟ್ರೇಲಿಯಾದ ಮಾರ್ಕಸ್ ಸ್ಟೊಯಿನಿಸ್ ಗಮನ ಸೆಳೆದರು. ಅಜಿಂಕ್ಯ ಮತ್ತೆ ಭಾರತ ತಂಡಕ್ಕೆ ಮರಳಲು ಇಲ್ಲಿಯ ಆಟ ನೆರವಾಗಿದ್ದು ಸುಳ್ಳಲ್ಲ. ಈ ಸ್ಪರ್ಧೆಯಲ್ಲಿ ಯುವ ಆಟಗಾರರೂ ಹಿಂದೆ ಬೀಳಲಿಲ್ಲ. ಅತಿ ಹೆಚ್ಚು ರನ್ ಗಳಿಸಿದ ಆರಂಭ ಆಟಗಾರರಾದ ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕವಾಡ್ ಜೊತೆ ಸಾಯಿ ಸುದರ್ಶನ್, ‘ಸಿಕ್ಸರ್‌ ಸಿಂಗ್‘ ಖ್ಯಾತಿಯ ರಿಂಕು ಸಿಂಗ್, ಬೌಲರ್ ಆಕಾಶ್ ಮಧ್ವಾಲ್ ಹಾಗೂ ಸುಯಶ್ ಶರ್ಮಾ ಭರವಸೆ ಮೂಡಿಸಿದರು.

ಆದರೆ ಕೆಲವು ನಿರಾಶೆಯ ಸಂಗತಿಗಳೂ ಇಣುಕಿದವು. ಲಖನೌ ಸೂಪರ್‌ಜೈಂಟ್ಸ್ ತಂಡದ ನಾಯಕ, ಕನ್ನಡಿಗ ಕೆ.ಎಲ್. ರಾಹುಲ್ ಗಾಯಗೊಂಡು ಅರ್ಧದಲ್ಲಿಯೇ ಐಪಿಎಲ್‌ನಿಂದ ಹೊರಬಿದ್ದರು. ಹರಾಜು ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಹಣ ಗಳಿಸಿದ್ದ ಇಂಗ್ಲೆಂಡ್‌ನ ಸ್ಯಾಮ್ ಕರನ್ ಹಾಗೂ ಮಯಂಕ್ ಅಗರವಾಲ್ ಅವರು ನಿರೀಕ್ಷೆ ಹುಸಿಗೊಳಿಸಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೈಫಲ್ಯ ಮುಂದುವರಿಯಿತು. ಪ್ಲೇ ಆಫ್‌ ಕೂಡ ಪ್ರವೇಶಿಸಲಿಲ್ಲ. ಆದರೆ ಕನ್ನಡಿಗ ವೈಶಾಖ ವಿಜಯಕುಮಾರ್ ಈ ತಂಡದ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದು ಸಮಾಧಾನಕರ ಸಂಗತಿ. ವೈಶಾಖ ಮೂಡಿಸಿರುವ ಭರವಸೆಯಿಂದಾಗಿ ಕರ್ನಾಟಕದ ಇನ್ನಷ್ಟು ಆಟಗಾರರಿಗೆ ಅವಕಾಶ ಕೊಡುವತ್ತ ಗಮನ ಹರಿಸಲು ಆರ್‌ಸಿಬಿಗೆ ಇದು ಸಕಾಲ. ಈ ಬಾರಿ ಕೆಲವು ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿತ್ತು. ಇದರಿಂದಾಗಿ ಟಾಸ್ ಹಾಕಿದ ನಂತರ ಉಭಯ ತಂಡಗಳ ನಾಯಕರು, ಆಡುವ ತಮ್ಮ 11ರ ಬಳಗವನ್ನು ನಿರ್ಧರಿಸುವ ಅವಕಾಶ ಲಭಿಸಿದೆ. ವೈಡ್‌, ನೋಬಾಲ್‌ಗಳಿಗೂ ಅಂಪೈರ್ ತೀರ್ಪು ಮರುಪರಿಶೀಲನೆ ಹಾಗೂ ಇಂಪ್ಯಾಕ್ಟ್ ಪ್ಲೇಯರ್‌ ಕಣಕ್ಕಿಳಿಸುವ ನಿಯಮಗಳನ್ನು ಕೆಲವು ತಂಡಗಳು ಸಮರ್ಥವಾಗಿ ಬಳಸಿಕೊಂಡವು. ಇವೆಲ್ಲದರ ಜೊತೆಗೆ ಮೊಬೈಲ್ ಆ್ಯಪ್ ಮೂಲಕ ಪಂದ್ಯಗಳ ನೇರಪ್ರಸಾರವನ್ನು ವೀಕ್ಷಿಸುವ ದೊಡ್ಡ ವರ್ಗವೊಂದು ಈಗ ಸೃಷ್ಟಿಯಾಗಿದೆ. ಟಿ.ವಿ. ನೇರಪ್ರಸಾರಕ್ಕೆ ಸ್ಮಾರ್ಟ್‌ ಫೋನ್ ಲೋಕದ ಪೈಪೋಟಿ ಶುರುವಾಗಿರುವ ಮುನ್ಸೂಚನೆ ಇದು. ಟಿ.ವಿ. ಹಾಗೂ ಡಿಜಿಟಲ್ ಪ್ರಸಾರ ಹಕ್ಕುಗಳನ್ನು ಪ್ರತ್ಯೇಕ ಸಂಸ್ಥೆಗಳು ಖರೀದಿಸಿರುವುದೇ ಇದಕ್ಕೆ ಕಾರಣ. ಇದರಿಂದಾಗಿ ಬಿಸಿಸಿಐ ಬೊಕ್ಕಸಕ್ಕೆ ₹ 48 ಸಾವಿರ ಕೋಟಿ ಹರಿದುಬಂದಿತ್ತು. ಆದರೆ ಇಷ್ಟೆಲ್ಲ ಹಣ ಹರಿದುಬಂದರೂ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಬರುವವರಿಗೆ ಸೂಕ್ತ ಮೂಲಸೌಲಭ್ಯಗಳನ್ನು ನೀಡುವಲ್ಲಿ ಮಂಡಳಿಯು ಹಿಂದೆ ಬಿದ್ದಿರುವುದು ಫೈನಲ್ ಪಂದ್ಯದ ವೇಳೆ ಬಹಿರಂಗವಾಗಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಳೆಯಿಂದ ರಕ್ಷಿಸಿಕೊಳ್ಳಲು ಜನರಿಗೆ ಸೂಕ್ತ ವ್ಯವಸ್ಥೆ ಇರಲಿಲ್ಲವೆಂಬ ದೂರುಗಳು ಕೇಳಿಬಂದವು. ಕೆಲವು ನಗರಗಳಲ್ಲಿ ಟಿಕೆಟ್‌ ಬೆಲೆ ದುಬಾರಿಯಾಗಿತ್ತು ಎಂಬ ಟೀಕೆ ಇದೆ. ಭಾರತವು ಇದೇ ವರ್ಷ ಏಕದಿನ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಲಿದೆ. ಈ ಸಂದರ್ಭದಲ್ಲಿ ಪ್ರೇಕ್ಷಕಸ್ನೇಹಿ ವ್ಯವಸ್ಥೆಗಳನ್ನು ನೀಡಲು ಮುಂದಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT