ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಬೆಲೆ ಏರಿಕೆಯ ಹೊಡೆತದಿಂದ ಜನರನ್ನು ರಕ್ಷಿಸಲು ಕ್ರಮ ಅಗತ್ಯ

Last Updated 13 ಜೂನ್ 2020, 1:05 IST
ಅಕ್ಷರ ಗಾತ್ರ

ಕೋವಿಡ್‌ ಮಹಾಮಾರಿಯ ಹೊಡೆತಕ್ಕೆ ಸಿಲುಕಿ ಜನಜೀವನ ತಲ್ಲಣಿಸಿದೆ. ಎರಡೂವರೆ ತಿಂಗಳ ಕಾಲ ಇಡೀ ದೇಶವೇ ಲಾಕ್‌ಡೌನ್‌ ಅನುಭವಿಸಿದ್ದರಿಂದ ಅರ್ಥವ್ಯವಸ್ಥೆಯ ಮೇಲೆ ಬಿದ್ದಿರುವ ಏಟು ಸಣ್ಣದೇನಲ್ಲ. ಕೊರೊನಾ ಸೋಂಕು ತಡೆಗೆ ಲಾಕ್‌ಡೌನ್ ಅನಿವಾರ್ಯವೇನೋ ಆಗಿತ್ತು. ಆದರೆ ಇದರ ಪರಿಣಾಮವಾಗಿ‌ ಉತ್ಪಾದನೆ, ರಫ್ತು ಮತ್ತು ಸೇವಾವಲಯ ಎಲ್ಲವೂ ತೀವ್ರ ನಷ್ಟ ಅನುಭವಿಸಿವೆ. ಯಾವ ಕ್ಷೇತ್ರವನ್ನು ಗಮನಿಸಿದರೂ ಉದ್ಯೋಗ ನಷ್ಟ, ಸಂಬಳ ಕಡಿತ, ವಹಿವಾಟು ಬಂದ್‌ ಸಾಮಾನ್ಯ ಎಂಬಂತಾಗಿದ್ದು, ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ನಿಶ್ಚಿತ ಆದಾಯಕ್ಕೆ ಬಿದ್ದ ಹೊಡೆತದಿಂದ ಜನ ಚೇತರಿಸಿಕೊಳ್ಳಲು ಇನ್ನೂ ಆಗುತ್ತಿಲ್ಲ. ಕಡಿಮೆ ಆದಾಯದ ಜನರ ಆರ್ಥಿಕ ಸಂಕಷ್ಟವನ್ನು ಹಗುರ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಪರಿಹಾರ ಪ್ಯಾಕೇಜ್‌ಗಳನ್ನು ಪ್ರಕಟಿಸಿವೆಯಾದರೂ ಅವು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿರುವುದು ಸ್ಪಷ್ಟ.

ದೇಶದ ಆರ್ಥಿಕ ಪ್ರಗತಿ ದರವು ಕುಸಿಯುತ್ತಲೇ ಸಾಗಿದ್ದನ್ನು ಕಳೆದ ಕೆಲವು ತ್ರೈಮಾಸಿಕಗಳ ಪ್ರಗತಿ ವರದಿಯು ಸ್ಪಷ್ಟವಾಗಿ ತೋರಿಸಿತ್ತು. ಲಾಕ್‌ಡೌನ್‌ ಘೋಷಣೆಗೂ ಮೊದಲೇ ನಿರುದ್ಯೋಗ ಸಮಸ್ಯೆಯ ಬಗ್ಗೆ ಚರ್ಚೆ ಆರಂಭವಾಗಿತ್ತು. ನೋಟು ರದ್ದತಿ ಮತ್ತು ಅವಸರದಿಂದ ಜಾರಿಗೆ ತಂದ ಜಿಎಸ್‌ಟಿ ಪದ್ಧತಿಯು ದೇಶದ ಅರ್ಥವ್ಯವಸ್ಥೆಯ ಮೇಲೆ ಉಂಟು ಮಾಡಿದ ವ್ಯತಿರಿಕ್ತ ಪರಿಣಾಮಗಳು ಆಗಲೇ ಎದ್ದುಕಂಡಿದ್ದವು. ಆ ದುಃಸ್ಥಿತಿಯ ಸಂದರ್ಭದಲ್ಲಿಯೇ ಕೊರೊನಾ ಸೋಂಕಿನ ಆಘಾತವೂ ಎರಗಿ ಕುಸಿದು ಕುಳಿತಿದ್ದ ಜನಸಾಮಾನ್ಯರು ನೆಲಕಚ್ಚುವಂತಾಗಿದೆ.

ಕೋವಿಡ್‌ನಿಂದಾಗಿ ಬಹುತೇಕ ಕುಟುಂಬಗಳು ಇಂದು ಆರ್ಥಿಕ ತುರ್ತುಸ್ಥಿತಿಯನ್ನು ಎದುರಿಸುತ್ತಿವೆ. ಇಂತಹ ಅಸಾಮಾನ್ಯ ಸಂದರ್ಭದಲ್ಲಿ, ನಿಶ್ಚಿತ ಆದಾಯ ಮೂಲವೇ ಅತಂತ್ರವಾಗಿರುವಾಗ ಜನಸಾಮಾನ್ಯರ ಜೀವನ ನಿರ್ವಹಣಾ ವೆಚ್ಚ ಅಧಿಕಗೊಳ್ಳದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯವಾಗಬೇಕು. ಆದರೆ, ಸರ್ಕಾರವು ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿರುವಂತೆ ಕಾಣಿಸುತ್ತಿದೆ. ಪೆಟ್ರೋಲ್‌ ಮತ್ತು ಡೀಸೆಲ್ ಬೆಲೆ ಈ ವಾರದಲ್ಲಿ ಪ್ರತಿದಿನ ಏರಿಕೆ ಕಂಡಿದೆ. ಕಚ್ಚಾ ತೈಲದ ಬೆಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಕಡಿಮೆ ಇದ್ದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು, ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಸುಮಾರು ಮೂರು ಪಟ್ಟು ತೆರಿಗೆ ಭಾರ ಹೇರಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿದಾಗ ಆ ಲಾಭವನ್ನು ಪೂರ್ಣಪ್ರಮಾಣದಲ್ಲಿ ಗ್ರಾಹಕರಿಗೆ ವರ್ಗಾಯಿಸಲು ಕೇಂದ್ರ ಸರ್ಕಾರವು ಮುಂದಾದ ಉದಾಹರಣೆ ಇಲ್ಲ. ಬದಲಿಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೈಪೋಟಿಯಲ್ಲಿ ತೆರಿಗೆ ಹೇರುವ ಕೆಲಸ ಮಾಡಿವೆ. ‍ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯು ಜನರ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುತ್ತದೆ.

ತೈಲಬೆಲೆ ಏರಿಕೆಯಿಂದಾಗಿ ಸಂಚಾರ ಮತ್ತು ಸರಕು ಸಾಗಣೆ ವೆಚ್ಚದಲ್ಲಿ ಹೆಚ್ಚಳವಾಗುತ್ತದೆ. ಅದರಿಂದಾಗಿ, ಅಗತ್ಯ ವಸ್ತುಗಳ ಬೆಲೆಯೂ ಏರುತ್ತದೆ. ಆಹಾರಧಾನ್ಯ, ತರಕಾರಿ, ಕೋಳಿ– ಕುರಿ ಮಾಂಸದ ಬೆಲೆಯಲ್ಲಿ ದೊಡ್ಡ ಮಟ್ಟದ ಏರಿಕೆ ಇತ್ತೀಚಿನ ದಿನಗಳಲ್ಲಿ ಆಗಿದೆ. ಜನರು ಹಣದ ತೀವ್ರ ಮುಗ್ಗಟ್ಟಿನಲ್ಲಿ ಇರುವಾಗ, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗದಂತೆ ಸರ್ಕಾರ ಅತೀವ ಎಚ್ಚರ ವಹಿಸಬೇಕು. ಇನ್ನೊಂದೆಡೆ, ಬ್ಯಾಂಕ್‌ ಸಾಲದ ಬಡ್ಡಿಯ ಹೊರೆ ಅಧಿಕವಾಗುತ್ತಿದೆ. ಬ್ಯಾಂಕ್‌ಗಳು ನೀಡಿರುವ ಗೃಹ, ವಾಹನ ಮತ್ತು ವೈಯಕ್ತಿಕ ಸಾಲದ ಕಂತುಗಳನ್ನು ಕಟ್ಟಲು ಆರು ತಿಂಗಳ ವಿನಾಯಿತಿಯನ್ನು ಆರ್‌ಬಿಐ ಘೋಷಿಸಿದೆ. ಆದರೆ, ಈ ಅವಧಿಗೆ ಬಡ್ಡಿ ಕಟ್ಟಬೇಕಾದ ಸಂಕಷ್ಟಕ್ಕೆ ಸಾಲಗಾರರು ಒಳಗಾಗಿದ್ದಾರೆ. ಈ ವಿಚಾರದಲ್ಲಿಯೂ ಜನರಿಗೆ ಅನುಕೂಲಕರವಾದ ತೀರ್ಮಾನವೊಂದನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಲೇಬೇಕಿದೆ. ಜನರ ಮೇಲೆ ಈಗಾಗಲೇ ಇರುವ ಆರ್ಥಿಕ ಹೊರೆಯನ್ನು ತಗ್ಗಿಸಲು ಮತ್ತು ಇನ್ನಷ್ಟು ಹೊರೆ ಬೀಳುವುದನ್ನು ತಡೆಯಲು ಅಗತ್ಯವಾದ ಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಳ್ಳಬೇಕಾಗಿರುವುದು ಈಗಿನ ತುರ್ತು ಅಗತ್ಯ. ಕೋವಿಡ್‌ ಕಷ್ಟಕಾಲದಲ್ಲಿ ಜನರ ಸಂಕಷ್ಟಕ್ಕೆ ಹೆಗಲು ಕೊಡುವ ಜವಾಬ್ದಾರಿಯಿಂದ ಸರ್ಕಾರಗಳು ನುಣುಚಿಕೊಳ್ಳಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT