ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಸ್ಥಳೀಯ ಭಾಷೆಗಳಲ್ಲಿ ಬ್ಯಾಂಕಿಂಗ್ ಸೇವೆ ಮಾತು ಸಾಕು, ಕಾನೂನು ಬಲ ಬೇಕು

Last Updated 19 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಬ್ಯಾಂಕ್‌ಗಳಲ್ಲಿ ಸ್ಥಳೀಯ ಭಾಷೆಗಳಲ್ಲಿ ಸೇವೆ ಒದಗಿಸುವ ವಿಚಾರವು ವರ್ಷಗಳಿಂದಲೂ ವಿವಾದದ ಸುಳಿಯಲ್ಲಿ ಸಿಲುಕುತ್ತಿದೆ. ಸಂವಿಧಾನದ ಎಂಟನೆಯ ಪರಿಚ್ಛೇದದ ಅಡಿಯಲ್ಲಿ ಗುರುತಿಸಲಾಗಿರುವ ಭಾಷೆಗಳಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ಪಡೆಯುವುದು ವಾಸ್ತವದಲ್ಲಿ ಚರ್ಚೆಯ ಅಗತ್ಯವೇ ಇರದ ಹಕ್ಕು ಎಂಬಂತಾಗಬೇಕಿತ್ತು. ಆದರೆ ಪರಿಸ್ಥಿತಿ ಬೇರೆಯೇ ಇದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ಕಡೆಗಳಲ್ಲಿ ಬ್ಯಾಂಕ್‌ಗಳ ಸಿಬ್ಬಂದಿ ಅಲ್ಲಿನ ಆಡಳಿತ ಭಾಷೆಯಲ್ಲಿ ಸೇವೆ ಒದಗಿಸದ ಕಾರಣಕ್ಕೆ ಗ್ರಾಹಕರು ತೊಂದರೆಗೆ ಸಿಲುಕಿದ ಪ್ರಸಂಗಗಳು ಆಗಾಗ ವರದಿಯಾಗುತ್ತಲೇ ಇವೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ವಿಷಯವನ್ನು ಬ್ಯಾಂಕ್‌ಗಳ ಒಕ್ಕೂಟದ ಕಾರ್ಯಕ್ರಮವೊಂದರಲ್ಲಿ ಪ್ರಸ್ತಾಪ ಮಾಡಿದ್ದಾರೆ. ಬ್ಯಾಂಕ್‌ಗಳಲ್ಲಿ ಪ್ರತಿನಿತ್ಯ ಗ್ರಾಹಕರ ಜೊತೆ ವ್ಯವಹರಿಸಬೇಕಾದವರು ಅಲ್ಲಿನ ಭಾಷೆಯನ್ನು ಕಲಿತಿರಬೇಕು, ಅಂತಹ ವ್ಯವಸ್ಥೆಯನ್ನು ಬ್ಯಾಂಕ್‌ಗಳು ರೂಪಿಸಬೇಕು ಎಂದು ಹೇಳಿದ್ದಾರೆ. ನಿರ್ಮಲಾ ಅವರ ಮಾತು ಸ್ವಾಗತಾರ್ಹ. ಆದರೆ, ಅವರು ಈ ಮಾತು ಆಡಿದ ಮಾತ್ರಕ್ಕೆ ತಳಮಟ್ಟದಲ್ಲಿ ಹೆಚ್ಚಿನ ಬದಲಾವಣೆ ಆಗುವುದಿಲ್ಲ ಎಂಬುದು ಸತ್ಯ. ಹಿಂದೆಯೂ ಅವರು ಇಂತಹ ಸೂಚನೆ ನೀಡಿದ ನಿದರ್ಶನಗಳು ಇವೆ. ಅವರು ಸೂಚನೆ ನೀಡಿದ ನಂತರದಲ್ಲಿಯೂ ಬ್ಯಾಂಕ್‌ ಶಾಖೆಗಳ ಮಟ್ಟದಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ಬ್ಯಾಂಕ್‌ಗಳು, ಅದರಲ್ಲೂ ಮುಖ್ಯವಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳು, ಸ್ಥಳೀಯ ಭಾಷೆಗಳಲ್ಲಿ ಸೇವೆಗಳನ್ನು ನೀಡುವಲ್ಲಿ ಸೋಲುತ್ತಿವೆ.

ನಿರ್ದಿಷ್ಟವಾದ ಭಾಷೆಯೊಂದರಲ್ಲಿ ಮಾತನಾಡಲು ಗ್ರಾಹಕನಿಗೆ ಆಗದಿದ್ದರೆ ಆತ ಭಾರತೀಯ ಅಲ್ಲ ಎಂಬಂತಹ ಮಾತುಗಳು ಬ್ಯಾಂಕ್‌ ಸಿಬ್ಬಂದಿಯಿಂದ ಬರಬಾರದು ಎಂಬ ಎಚ್ಚರಿಕೆಯನ್ನೂ ನಿರ್ಮಲಾ ಅವರು ನೀಡಿದ್ದಾರೆ ಎಂದು ವರದಿಯಾಗಿದೆ. ಬ್ಯಾಂಕ್‌ಗಳಲ್ಲಿ ಸ್ಥಳೀಯ ಭಾಷೆಗಳಲ್ಲಿ ಸೇವೆ ಸರಿಯಾಗಿ ಸಿಗದೆ ಸಮಸ್ಯೆ ಸೃಷ್ಟಿಯಾಗುತ್ತಿರುವುದಕ್ಕೆ ಎರಡು ಮುಖ್ಯ ಕಾರಣಗಳು ಇವೆ. ಅವು, ಬ್ಯಾಂಕಿಂಗ್‌ ಹುದ್ದೆಗಳಿಗೆ ನಡೆಯುವ ನೇಮಕಾತಿಯಲ್ಲಿನ ದೋಷಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳು ಪಾಲಿಸಿಕೊಂಡು ಬಂದಿರುವ ಸಿಬ್ಬಂದಿಯ ವರ್ಗಾವಣೆ ನೀತಿ. ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ನಡೆಯುವ ನೇಮಕಾತಿ ಪ್ರಕ್ರಿಯೆಯು ಕನ್ನಡದ ಅಥವಾ ದಕ್ಷಿಣ ಭಾರತದ ಅಭ್ಯರ್ಥಿಗಳಿಗೆ ಅನುಕೂಲಕರ ಆಗುವಂತೆ ಇಲ್ಲ. ಈ ವಿಚಾರವಾಗಿ ಹಲವು ಸಂಘಟನೆಗಳು, ರಾಜಕೀಯ ಪಕ್ಷಗಳು ದನಿಯೆತ್ತುತ್ತಲೇ ಇವೆ. ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪ ಸರಿಯಾಗದ ಹೊರತು ಬ್ಯಾಂಕಿಂಗ್ ವ್ಯವಸ್ಥೆಗೆ ದಕ್ಷಿಣದ ರಾಜ್ಯಗಳಿಂದ ಹೆಚ್ಚಿನವರು ಸೇರ್ಪಡೆ ಆಗುವುದಿಲ್ಲ. ಹಿಂದಿ ಭಾಷಿಕ ಪ್ರದೇಶಗಳ ಅಥವಾ ಈಶಾನ್ಯ ರಾಜ್ಯಗಳ ನೌಕರರನ್ನು ದಕ್ಷಿಣದ ರಾಜ್ಯಗಳಿಗೆ ನೇಮಕ ಮಾಡುವ ಮೊದಲು, ಅವರಿಗೆ ಇಲ್ಲಿನ ಭಾಷೆಯನ್ನು ಕಲಿಸುವ ಕೆಲಸವನ್ನು ಬ್ಯಾಂಕ್‌ಗಳೇ ಮಾಡಬೇಕು. ಹಾಗೆ ಮಾಡಲು ಸಾಧ್ಯವಿಲ್ಲ ಎಂದಾದರೆ, ತಮ್ಮ ವರ್ಗಾವಣೆ ನೀತಿಯನ್ನು ಅವು ಪುನರ್‌ವಿಮರ್ಶೆಗೆ ಒಡ್ಡಬೇಕು. ಸ್ಥಳೀಯ ಭಾಷೆ ಗೊತ್ತಿಲ್ಲದ ವ್ಯಕ್ತಿಯನ್ನು ಬ್ಯಾಂಕಿನಲ್ಲಿ ಕೂರಿಸಿ, ಸ್ಥಳೀಯರೆಲ್ಲ ಆತನ ಜೊತೆ ಆತನ ಭಾಷೆಯಲ್ಲೇ ಮಾತನಾಡಬೇಕು ಎಂದು ಬಯಸುವುದರಿಂದ ಬ್ಯಾಂಕಿಂಗ್ ಸೇವೆಗೆ ಅದೆಷ್ಟರ ಮಟ್ಟಿಗೆ ಅನುಕೂಲ ಆಗುತ್ತದೆ? ಇಂತಹ ಕ್ರಮಗಳು ವಾಸ್ತವದಲ್ಲಿ ಎಲ್ಲರನ್ನೂ ಒಳಗೊಳ್ಳುವ ರೀತಿಯಲ್ಲಿ ಹಣಕಾಸು ಸೇವೆ ಒದಗಿಸುವ ಆಶಯಕ್ಕೆ ಪೂರಕವಾಗಿಲ್ಲ.ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಜಾರಿಯಲ್ಲಿರುವ ವರ್ಗಾವಣೆಯ ನೀತಿಯ ಕಾರಣದಿಂದಾಗಿ ದಕ್ಷಿಣದ ರಾಜ್ಯಗಳ ಪ್ರತಿಭಾವಂತರು ಬ್ಯಾಂಕಿಂಗ್ ಉದ್ಯೋಗದ ಕಡೆ ಆಕರ್ಷಿತರಾಗುತ್ತಿಲ್ಲ; ಅವರು ವರ್ಗಾವಣೆ ಹೆಚ್ಚು ಇಲ್ಲದ ಉದ್ಯೋಗಗಳಲ್ಲಿ ಬದುಕು ಕಟ್ಟಿಕೊಳ್ಳಲು ಮುಂದಾಗುತ್ತಿದ್ದಾರೆ ಎಂಬ ವಾದ ಇದೆ.ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿನ ಇಂತಹ ರಾಚನಿಕ ಲೋಪಗಳನ್ನು ಸರಿಪಡಿಸದೇ ಇದ್ದರೆ ಸ್ಥಳೀಯ ಭಾಷೆಗಳಲ್ಲಿ ಸೇವೆ ಲಭ್ಯವಾಗುವುದಿಲ್ಲ. ನಿರ್ಮಲಾ ಅವರು ಈ ವಿಚಾರವಾಗಿ ಸಾರ್ವಜನಿಕವಾಗಿ ಮಾತುಗಳನ್ನು ಆಡುವುದಕ್ಕಿಂತ, ಪೂರಕವಾಗಿ ಕಾಯ್ದೆ, ಕಾನೂನುಗಳನ್ನು ಜಾರಿಗೆ ತರುವ ಬಗ್ಗೆ ಹೆಚ್ಚು ಗಮನ ನೀಡಬೇಕಾದ ಅಗತ್ಯ ಇದೆ. ನಿರ್ಮಲಾ ಅವರು ತಮ್ಮ ಆಶಯವನ್ನು ಮಾತುಗಳ ಮೂಲಕವಷ್ಟೇ ವ್ಯಕ್ತಪಡಿಸುವ ಬದಲು, ಕಾನೂನಿನ ಮೂಲಕ ಕಾರ್ಯರೂಪಕ್ಕೆ ತರುವುದು ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT