ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಸಾಲ ಮೇಳದ ಪ್ರಸ್ತಾವ: ಎಚ್ಚರಿಕೆಯ ನಡೆ ಬೇಕು

Last Updated 27 ಆಗಸ್ಟ್ 2020, 20:00 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಸಾಲ ಮೇಳ ನಡೆಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ. ‘ಸಾಲ ಮೇಳ’ ಎಂಬ ಹೆಸರಿನ ಜೊತೆಯಲ್ಲೇ ರಾಜಕೀಯದ ಒಂದಿಷ್ಟು ಆಯಾಮಗಳೂ ಬೆಸೆದುಕೊಂಡಿವೆ. ಹಾಗಾಗಿ, ಈ ಪದಗಳನ್ನು ಕೇಳಿದ ತಕ್ಷಣ ‘ಸಾಲ’ ಎನ್ನುವ ಹಣಕಾಸು ಉತ್ಪನ್ನದ ಜೊತೆಯಲ್ಲೇ ರಾಜಕಾರಣಕ್ಕೆ ಸಂಬಂಧಿಸಿದ ಒಂದಿಷ್ಟು ನೆನಪುಗಳೂ ಸ್ಮೃತಿಪಟಲದಲ್ಲಿ ಹಾದುಹೋಗಬಹುದು! ಈಗ ರಾಜ್ಯದಲ್ಲಿ ಸಾಲ ಮೇಳದ ಮಾತು ಕೇಳಿಸಿದೆ. ರಾಜ್ಯದ ನಾಲ್ಕೂ ಕಂದಾಯ ವಿಭಾಗಗಳ ವ್ಯಾಪ್ತಿಯಲ್ಲಿ ಸಾಲ ಮೇಳ ಆಯೋಜಿಸಿ, ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ವಿವಿಧ ಬಗೆಯ ಸಾಲಗಳನ್ನು ವಿತರಿಸಲಾಗುವುದು. ಈ ಸಾಲ ಮೇಳಕ್ಕೆ ನಬಾರ್ಡ್‌ ಮತ್ತು ಅಪೆಕ್ಸ್‌ ಬ್ಯಾಂಕ್‌ನ ನೆರವನ್ನು ಪಡೆಯಲಾಗುವುದು. ಎಲ್ಲರಿಗೂ ಸಾಲ ಸಿಗುವಂತೆ ಆಗಲು ಕ್ರಮ ಕೈಗೊಳ್ಳಲಾಗುವುದು ಎಂಬುದು ಸಹಕಾರ ಸಚಿವರ ಮಾತಿನ ಸಾರ. ಸಾಲ ಮೇಳವನ್ನು ನಡೆಸುವುದಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಅಥವಾ ಸಹಕಾರ ಬ್ಯಾಂಕ್‌ಗಳು ಘೋಷಣೆ ಮಾಡುವುದಕ್ಕೂ ರಾಜಕಾರಣಿಗಳು ಆ ಬಗೆಯ ಘೋಷಣೆ ಮಾಡುವುದಕ್ಕೂ ವ್ಯತ್ಯಾಸ ಇರುತ್ತದೆ. ಜನರಿಂದ ಠೇವಣಿ ರೂಪದಲ್ಲಿ ಹಣ ಪಡೆದುಕೊಳ್ಳುವ, ಅದನ್ನುಸಾಲವಾಗಿ ಕೊಡುವ, ಆ ಸಾಲವನ್ನು ನಿಯಮಿತವಾಗಿ ವಸೂಲು ಮಾಡುವ ವೃತ್ತಿಯಲ್ಲಿ ಇರುವ ಬ್ಯಾಂಕುಗಳಿಗೆ, ಸಾಲ ಮೇಳದ ಕಷ್ಟ–ನಷ್ಟಗಳ ಸಂಪೂರ್ಣ ಅರಿವು ಇರುತ್ತದೆ. ಆದರೆ, ಸಚಿವರು ಆ ಮಾತನ್ನು ಹೇಳಿದಾಗ, ಅವರ ಮಾತಿನ ಹಿಂದಿರುವ ಸದಾಶಯವನ್ನು ಒಪ್ಪಿಕೊಳ್ಳುತ್ತಲೇ, ಸಾಲ ಮೇಳವು ತರಬಹುದಾದ ಸಮಸ್ಯೆಗಳ ಬಗ್ಗೆಯೂ ಎಚ್ಚರಿಕೆಯ ಮಾತುಗಳನ್ನು ಆಡಬೇಕಾಗುತ್ತದೆ.

ರಾಜ್ಯದಲ್ಲಿ ಯಾವ ಬಗೆಯ ಸಾಲ ಮೇಳವನ್ನು ಆಯೋಜಿಸಲಾಗುತ್ತದೆ ಎಂಬುದನ್ನು ಸಹಕಾರ ಸಚಿವರು ಹೇಳಿಲ್ಲ. ಈ ಮೇಳದ ಮೂಲಕ ವಿತರಣೆ ಮಾಡಲಾಗುವ ಸಾಲ ಯಾವ ಸ್ವರೂಪದ್ದು, ಅದಕ್ಕೆ ವಿಶೇಷವಾದ ಬಡ್ಡಿ ದರ ನಿಗದಿ ಮಾಡಲಾಗುತ್ತದೆಯೇ, ಅದರ ಮರುಪಾವತಿಗೆ ವಿಶೇಷ ಯೋಜನೆಗಳು ಇರಲಿವೆಯೇ, ಕೊಡುವ ಸಾಲಕ್ಕೆ ಖಾತರಿ ರೂಪದಲ್ಲಿ ಏನನ್ನು ಪಡೆದುಕೊಳ್ಳಲಾಗುತ್ತದೆ ಎಂಬುದರ ವಿವರಗಳನ್ನು ಅವರು ತಿಳಿಸಿಲ್ಲ. ಆ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿ, ಮುಂಬರುವ ದಿನಗಳಲ್ಲಿ ವಿಸ್ತೃತ ಮಾರ್ಗಸೂಚಿಗಳನ್ನು ಸರ್ಕಾರ ಹೊರಡಿಸಬಹುದು. ಕೋವಿಡ್–19 ಸೃಷ್ಟಿಸಿದ ಆರ್ಥಿಕ ಬಿಕ್ಕಟ್ಟಿನಿಂದಾಗಿ ಜನಸಾಮಾನ್ಯರು ಕಷ್ಟಕ್ಕೆ ಸಿಲುಕಿದ್ದಾರೆ. ಉದ್ಯಮಗಳೂ ಸಂಕಷ್ಟ ಅನುಭವಿಸುತ್ತಿವೆ. ಇಂತಹ ಸಂದರ್ಭದಲ್ಲಿ ಸಾಲ ಮೇಳ ನಡೆಸಿ ಜನರ ಕೈಗೆ ಹಣ ಬರುವಂತೆ ಮಾಡಿ, ಆ ಮೂಲಕ ಕೊಳ್ಳುವ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಇರಾದೆ ಅವರದಾಗಿದ್ದರೆ, ಅದರ ಹಿಂದೆ ಸದಾಶಯ ಇದೆ ಎನ್ನಬಹುದು. ಆದರೆ, ಸಾಲ ಮೇಳ ನಡೆಸುವುದಾಗಿ ಹೇಳುವಾಗ ಅಧಿಕಾರದಲ್ಲಿ ಇರುವವರು ‘ಬ್ಯಾಂಕುಗಳು ತಮ್ಮ ಸರ್ಕಾರದ ಇಲಾಖೆ ಇದ್ದಂತೆ’ ಎಂಬ ಭಾವನೆ ಹೊಂದಿರಬಾರದು. ಅಂತಹ ಭಾವನೆ ಇಟ್ಟುಕೊಂಡು, ನಿರ್ದಿಷ್ಟ ವರ್ಗಕ್ಕೆ ಇಂತಿಷ್ಟು ಸಾಲ ಮಂಜೂರು ಮಾಡಬೇಕು ಎಂಬ ಗುರಿಯನ್ನು ನಿಗದಿ ಮಾಡುವುದರಿಂದ ಬ್ಯಾಂಕುಗಳು ಒತ್ತಡಕ್ಕೆ ಸಿಲುಕುತ್ತವೆ. ಒತ್ತಡಕ್ಕೆ ಸಿಲುಕಿ ಕೊಡುವ ಸಾಲ ಮರಳಿ ಬಾರದಿದ್ದರೆ, ಸಾಲ ಪಡೆದವರೂ ಸಂಕಷ್ಟಕ್ಕೆ ಸಿಲುಕುತ್ತಾರೆ, ಬ್ಯಾಂಕುಗಳೂ ಚೈತನ್ಯ ಕಳೆದುಕೊಳ್ಳುತ್ತವೆ. ಸಾಲ ಮೇಳ ಆಯೋಜನೆ ಮಾಡುವುದೇ ಆದಲ್ಲಿ, ಅದಕ್ಕೆ ಸಂಬಂಧಿಸಿದ ತೀರ್ಮಾನಗಳನ್ನು ಕೈಗೊಳ್ಳುವಾಗ ಬ್ಯಾಂಕುಗಳ ಪ್ರತಿನಿಧಿಗಳ ಮಾತುಗಳನ್ನು ಆಲಿಸಬೇಕು. ಇಷ್ಟು ಸಾಲ ನೀಡಬೇಕು ಎಂಬ ಗುರಿ ನಿಗದಿ ಮಾಡದೆಯೇ, ಬ್ಯಾಂಕಿಂಗ್‌ ಕ್ಷೇತ್ರದ ನಿಯಮಗಳ ಚೌಕಟ್ಟಿನಲ್ಲಿ ಸಾಲ ವಿತರಣೆ ಮಾಡಲು ಅವಕಾಶ ಕಲ್ಪಿಸಬೇಕು. ಆಗ ಮಾತ್ರ ಸಾಲವು ಪಡೆದವರ ಪಾಲಿಗೆ ಮತ್ತು ಕೊಟ್ಟವರ ಪಾಲಿಗೆ ಶೂಲವಾಗಿ ಪರಿಣಮಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT