ಭಾನುವಾರ, ಜನವರಿ 19, 2020
27 °C
ಬಳಕೆದಾರರು ಮತ್ತು ಆರ್ಥಿಕತೆಯ ಪಾಲಿಗೆ ಹೊಸ ಸಂಕಟ ರೂಪದಲ್ಲಿ ಎದುರಾಗಿರುವ ಹಣದುಬ್ಬರ ನಿಯಂತ್ರಣಕ್ಕೆ ಸರ್ಕಾರ ಆದ್ಯತೆ ನೀಡಲಿ

ಸಂಪಾದಕೀಯ | ಚಿಲ್ಲರೆ, ಸಗಟು ಹಣದುಬ್ಬರ ಹೆಚ್ಚಳ: ಆರ್ಥಿಕತೆಗೆ ಹೊರೆ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಆರ್ಥಿಕತೆಗೆ ಚೈತನ್ಯ ತುಂಬುವ ಪ್ರಯತ್ನಗಳು ನಡೆದಿರುವ ಹೊತ್ತಿನಲ್ಲೇ ಚಿಲ್ಲರೆ ಹಣದುಬ್ಬರವು ಆರು ವರ್ಷಗಳಲ್ಲಿ ಗರಿಷ್ಠ ಮಟ್ಟ ತಲುಪಿರುವ ಕಹಿಸುದ್ದಿ ಹೊರಬಿದ್ದಿದೆ. ಕೊಳ್ಳುವ ಶಕ್ತಿ ಹೆಚ್ಚಿಸಿ, ಬೇಡಿಕೆಗೆ ಬಲ ತುಂಬುವ ಉದ್ದೇಶಕ್ಕೆ ಇದರಿಂದ ಬಾಧಕವಾಗುವ ಅಪಾಯ ಇದೆ. ಈರುಳ್ಳಿ ಪೂರೈಕೆಯಲ್ಲಿ ತೀವ್ರ ಕೊರತೆ ಉಂಟಾಗಿದೆ. ವಿವಿಧ ತರಕಾರಿಗಳ ಬೆಲೆ ಏರಿಕೆಯೂ ಅದರೊಂದಿಗೆ ಸೇರಿಕೊಂಡು ಚಿಲ್ಲರೆ ಹುಣದುಬ್ಬರವು ಶೇ 7.35ಕ್ಕೆ ಏರಲು ಕಾರಣವಾಗಿದೆ. 2014ರ ಜುಲೈ ನಂತರ ಇದೇ ಗರಿಷ್ಠ ಏರಿಕೆ. ಡಿಸೆಂಬರ್‌ನಲ್ಲಿ ಸಗಟು ಬೆಲೆ ಸೂಚ್ಯಂಕದಲ್ಲೂ ಏರಿಕೆಯಾಗಿದ್ದು, ಅದು ಶೇ 2.59ಕ್ಕೆ ತಲುಪಿದೆ. ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಮತ್ತು ಮೊಬೈಲ್‌ ಕರೆ ದರ ಹೆಚ್ಚಳಗೊಂಡಿರುವುದರ ಜೊತೆಗೆ ಆಹಾರ ಪದಾರ್ಥಗಳೂ ದುಬಾರಿಯಾಗಿವೆ. ಉದ್ಯೋಗ ಅವಕಾಶಗಳು ಕಡಿಮೆಯಾಗುತ್ತಿವೆ.

ಜನರ ಖರೀದಿ ಸಾಮರ್ಥ್ಯ ಕುಸಿದಿದೆ. ಅದರ ಬೆನ್ನಿಗೇ ಹಣದುಬ್ಬರ ಹೆಚ್ಚಳದ ಸಂಕಟವೂ ಸೇರಿಕೊಂಡು ಜನಸಾಮಾನ್ಯರ ಬವಣೆ ಹೆಚ್ಚಿಸಿದೆ. ಈ ಬೆಳವಣಿಗೆಯು ಆರ್ಥಿಕತೆಗೆ ಚೈತನ್ಯ ತುಂಬುವ ಪ್ರಯತ್ನಗಳಿಗೆ ತೊಡರುಗಾಲಾಗುವ ಸಾಧ್ಯತೆ ಇದೆ. ಅಲ್ಲದೆ, ಬಡ್ಡಿ ದರ ಕಡಿಮೆ ಮಾಡಿ ಆರ್ಥಿಕತೆಗೆ ಉತ್ತೇಜನ ನೀಡುವ ಆರ್‌ಬಿಐನ ಉದ್ದೇಶಕ್ಕೂ ಅಡ್ಡಿಯಾಗಲಿದೆ. ಆಹಾರ, ಇಂಧನ ಸೇರಿದಂತೆ ವಿವಿಧ ಸರಕು ಮತ್ತು ಸೇವೆಗಳ ಬೆಲೆಯನ್ನು ಈ ಹಿಂದಿನ ವರ್ಷಕ್ಕೆ ಹೋಲಿಸಿದಾಗ ಆಗುವ ಹೆಚ್ಚಳದ ಪ್ರಮಾಣಕ್ಕೆ ಹಣದುಬ್ಬರ ಎನ್ನುತ್ತಾರೆ. ಗ್ರಾಹಕರ ಬೆಲೆ ಸೂಚ್ಯಂಕ ಆಧರಿಸಿದ (ಸಿಪಿಐ) ಚಿಲ್ಲರೆ ಹಣದುಬ್ಬರವನ್ನು ಶೇ 2ರಿಂದ ಶೇ 6ರ ಮಟ್ಟದಲ್ಲಿ ನಿಯಂತ್ರಿಸುವುದು ಹಿತಕರ ಎನ್ನುವುದು ಸರ್ಕಾರ ಮತ್ತು ಆರ್‌ಬಿಐನ ಆಶಯ. ಡಿಸೆಂಬರ್‌ನ ಹಣದುಬ್ಬರದ ಪ್ರಮಾಣವು ಈ ಆಶಯದ ಮಿತಿ ಮೀರಿ ಮುಂದಕ್ಕೆ ಹೋಗಿರುವುದು ಕಳವಳಕಾರಿ.

ಮುಂಗಾರು ವಿಳಂಬ ಮತ್ತು ಹಲವು ರಾಜ್ಯಗಳಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿಯ ಕಾರಣಕ್ಕೆ ಆಹಾರ ಪದಾರ್ಥಗಳ ಪೂರೈಕೆಯಲ್ಲಿ ಗಮನಾರ್ಹ ಕುಸಿತ ಉಂಟಾಗಿದೆ. ಪರಿಣಾಮವಾಗಿ ಆಹಾರ
ಧಾನ್ಯಗಳ ಬೆಲೆ ತೀವ್ರಗತಿಯಲ್ಲಿ ಏರಿಕೆ ಕಂಡಿದೆ. ಅದರಲ್ಲೂ ಹಲವು ತರಕಾರಿಗಳ ಬೆಲೆ ವಿಪರೀತ ಏರಿಕೆಯಾಗಿದೆ. ಇದರ ಬಿಸಿ, ಬಳಕೆದಾರರಿಗಷ್ಟೇ ತಟ್ಟುವುದಿಲ್ಲ. ವಹಿವಾಟು ಮತ್ತು ಸಾಲದ ಲಭ್ಯತೆಯ ಮೇಲೂ ಪರಿಣಾಮ ಬೀರುತ್ತದೆ. ಇದರಿಂದಾಗಿ, ಕೈಗಾರಿಕಾ ಚಟುವಟಿಕೆಗಳ ಉತ್ಸಾಹ ಉಡುಗಬಹುದು. ಅರ್ಥವ್ಯವಸ್ಥೆ ಬೆಳವಣಿಗೆ ಕಾಣುತ್ತಿದೆ ಎಂದಾದರೆ ಅಲ್ಲಿ ಹಣದುಬ್ಬರವು ಇದ್ದೇ ಇರುತ್ತದೆ. ಆದರೆ, ಅದು ನಿಯಂತ್ರಣದಲ್ಲಿ ಇರಬೇಕು. ನಿಯಂತ್ರಣದಲ್ಲಿದ್ದರೆ ಆರ್ಥಿಕ ಬೆಳವಣಿಗೆಗೆ ಪೂರಕ. ಖರೀದಿಗೆ ಜನರ ಬಳಿ ಹಣ ಲಭ್ಯವಿರುತ್ತದೆ, ಉತ್ಪಾದನಾ ಚಟುವಟಿಕೆ ಹೆಚ್ಚಲು ನೆರವಾಗುತ್ತದೆ. ನಿಯಂತ್ರಣ ಮೀರಿದ, ನಾಗಾಲೋಟದ ಹಣದುಬ್ಬರವು ಬೇರೆ ಬೇರೆ ನೆಲೆಯಲ್ಲಿ ಅಪಾಯಕಾರಿಯಾಗಿ ಪರಿಣಮಿಸಲಿದೆ. ಬೆಲೆ ಏರಿಕೆಯಿಂದ ಖರೀದಿ ಸಾಮರ್ಥ್ಯ ಕ್ಷೀಣಿಸುತ್ತದೆ.

ಠೇವಣಿಗಳ ಮೇಲಿನ ಬಡ್ಡಿ ದರದ ಮಟ್ಟಕ್ಕೆ ಹಣದುಬ್ಬರ ತಲುಪಿದರೆ, ಠೇವಣಿ ಇಡುವುದರ ಉದ್ದೇಶವೇ ನಿರರ್ಥಕವಾಗುತ್ತದೆ. ಉಳಿತಾಯ ಮನೋಭಾವವನ್ನು ಇದು ಚಿವುಟಿ ಹಾಕುತ್ತದೆ. ದವಸಧಾನ್ಯ, ಬೇಳೆಕಾಳು ಪೂರೈಕೆ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಅಕ್ರಮವಾಗಿ ಸಂಗ್ರಹಿಸಿಟ್ಟು, ಕೃತಕ ಬೆಲೆ ಏರಿಕೆ ಸೃಷ್ಟಿಸುವ ಪ್ರಯತ್ನಗಳನ್ನು ಹತ್ತಿಕ್ಕಬೇಕು. ಮುಂದಿನ ತಿಂಗಳು ಮಂಡನೆಯಾಗಲಿರುವ ಬಜೆಟ್‌ನಲ್ಲಿ ಈ ದಿಸೆಯಲ್ಲಿ ಪರಿಹಾರೋಪಾಯಗಳು ಪ್ರಕಟಗೊಂಡು, ಹಣದುಬ್ಬರದ ಓಟಕ್ಕೆ ಮೂಗುದಾರ ಹಾಕುವಲ್ಲಿ ಯಶಸ್ವಿಯಾದರೆ ಮಾತ್ರ ಬೆಲೆ ಏರಿಕೆಯ ಬವಣೆ ದೂರವಾಗಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು