ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ– ವ್ಯವಸ್ಥೆಯಲ್ಲಿ ಬೇಕು ಬದಲಾವಣೆ

Published 4 ಫೆಬ್ರುವರಿ 2024, 20:03 IST
Last Updated 4 ಫೆಬ್ರುವರಿ 2024, 20:03 IST
ಅಕ್ಷರ ಗಾತ್ರ

ಜೆಇಇ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಯೊಬ್ಬಳು ರಾಜಸ್ಥಾನದ ಕೋಟಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜೆಇಇ ಪರೀಕ್ಷೆ ಬರೆಯಲು ತನ್ನಿಂದ ಸಾಧ್ಯವಿಲ್ಲ ಎಂದು ಆಕೆ ತನ್ನ ತಂದೆ–ತಾಯಿಗೆ ಆತ್ಮಹತ್ಯೆಗೂ ಮೊದಲು ಬರೆದಿಟ್ಟಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾಳೆ. ತಾನು ಸೋಲುವ ವ್ಯಕ್ತಿ ಎಂದೂ ಆಕೆ ಬರೆದಿದ್ದಾಳೆ. ‘ನೀವು ನಿಮ್ಮ ಜೊತೆ ಸ್ಪರ್ಧೆಗೆ ಇಳಿಯಬೇಕೇ ವಿನಾ ಬೇರೊಬ್ಬರ ಜೊತೆಯಲ್ಲಿ ಅಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪರೀಕ್ಷೆ ಬರೆಯಬೇಕಿರುವ ಮಕ್ಕಳನ್ನು ಉದ್ದೇಶಿಸಿ ಹಿತವಚನ ಆಡಿದ ದಿನವೇ ಈಕೆ ಇಂತಹ ಹೆಜ್ಜೆ ಇರಿಸಿದ್ದಾಳೆ. ನೀಟ್‌ ಪರೀಕ್ಷೆಗೆ ಸಿದ್ಧತೆ ನಡೆಸಲು ತೆರಳಿದ್ದ ವಿದ್ಯಾರ್ಥಿಯೊಬ್ಬ ಕೋಟಾದಲ್ಲಿ ಕೆಲವು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಂದು ವರ್ಷದ ಅವಧಿಯಲ್ಲಿ ಕೋಟಾದಲ್ಲಿ ಸರಿಸುಮಾರು 29 ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವರದಿಗಳು ಇವೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳನ್ನು ತಯಾರು ಮಾಡುವ ಕಾರ್ಖಾನೆಯಂತೆ ಆಗಿದೆ ರಾಜಸ್ಥಾನದ ಕೋಟಾ. ದೇಶದ ಬೇರೆ ಬೇರೆ ಕಡೆಗಳಲ್ಲಿ ಕೂಡ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ವರದಿಗಳು ಇವೆ ಎಂಬುದು ನಿಜ. ಪರೀಕ್ಷೆಗಳು ನಡೆಯುವ ಅವಧಿಯು ವಿದ್ಯಾರ್ಥಿಗಳ ಜೀವಕ್ಕೆ ಎರವಾಗುತ್ತಿದೆ. ಪರೀಕ್ಷೆ
ಗಳೆಂದರೆ ವಿದ್ಯಾರ್ಥಿಗಳು ಹೆದರುವಂತೆ ಮಾಡುವ ಹಲವು ಸಂಗತಿಗಳು ಇವೆ. ಇಂತಹ ಪರೀಕ್ಷೆಗಳಿಂದ ಪಲಾಯನ ಮಾಡಲು ವಿದ್ಯಾರ್ಥಿಗಳು ಮಾರ್ಗಗಳನ್ನು ಅರಸುತ್ತಿರುತ್ತಾರೆ, ಕೆಲವರು ತಮ್ಮ ಜೀವನಕ್ಕೇ ಬೆನ್ನು ತಿರುಗಿಸಲು ಮುಂದಾಗುತ್ತಾರೆ.

ಕೋಟಾದಲ್ಲಿ ಕೋಚಿಂಗ್ ಪಡೆಯಲು ಮುಂದಾಗುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿದವರು. ಅವರಲ್ಲದೆ, ಇತರ ವರ್ಗಗಳಿಗೆ ಸೇರಿದವರೂ ಇದ್ದಾರೆ ಎಂಬುದೂ ನಿಜ. ಇವರೆಲ್ಲರ ಉದ್ದೇಶ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ ಆಗುವುದು. ವಾಸ್ತವದಲ್ಲಿ, ಪಾಲಕರಲ್ಲಿ ಇರುವ ಮಹತ್ವಾಕಾಂಕ್ಷೆಯೇ ವಿದ್ಯಾರ್ಥಿಗಳ ಮೇಲೆ ಹೆಚ್ಚು ಪ್ರಭಾವ ಬೀರಿರುತ್ತದೆ. ಸ್ಪರ್ಧೆಗೆ ಇಳಿದ ನಂತರದಲ್ಲಿ ವಿದ್ಯಾರ್ಥಿಗಳ ಮೇಲೆ ಜೊತೆಗಾರರಿಂದಲೂ ಒತ್ತಡ ಸೃಷ್ಟಿಯಾಗಿರುತ್ತದೆ. ಮಹತ್ವಾಕಾಂಕ್ಷೆಗಳು, ಬಯಕೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಇದೇ ಸಂದರ್ಭದಲ್ಲಿ ಶೈಕ್ಷಣಿಕ ಹಾಗೂ ಉದ್ಯೋಗ ಅವಕಾಶಗಳು ವರ್ಷದಿಂದ ವರ್ಷಕ್ಕೆ ಕುಸಿಯುತ್ತ ಸಾಗಿವೆ. ತಮ್ಮ ಮಕ್ಕಳು ಅತ್ಯುತ್ತಮ ಕೋರ್ಸ್‌ ಸೇರುವಂತೆ ಮಾಡಬೇಕು ಎಂಬ ಸಾಮಾಜಿಕ ಒತ್ತಡವು ಪಾಲಕರ ಮೇಲೆ ಬಿದ್ದಿರುತ್ತದೆ. ಎಂಜಿನಿಯರಿಂಗ್ ಹಾಗೂ ಆಡಳಿತ ನಿರ್ವಹಣಾ ಕೋರ್ಸ್‌ಗಳು ಮಾನವಿಕ ಅಥವಾ ಕಲಾ ವಿಭಾಗದ ಕೋರ್ಸ್‌ಗಳಿಗಿಂತ ಹೆಚ್ಚು ಪ್ರತಿಷ್ಠಿತ, ಹೆಚ್ಚು ಪ್ರಯೋಜನಗಳನ್ನು ತಂದುಕೊಡುತ್ತವೆ ಎಂಬ ಭಾವನೆಯು ಪಾಲಕರಲ್ಲಿ, ಸಮಾಜದಲ್ಲಿ ಇದೆ. ಕೋರ್ಸ್‌ ಆಯ್ಕೆ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಯ ಸಾಮರ್ಥ್ಯವನ್ನು ಪರಿಗಣಿಸುವ ಗೋಜಿಗೇ ಹೋಗುವುದಿಲ್ಲ. ಕೆಲವು ವಿದ್ಯಾರ್ಥಿಗಳಿಗೆ ತಮ್ಮ ನಿಜವಾದ ಆಸಕ್ತಿಯ ಕ್ಷೇತ್ರ ಯಾವುದು ಎಂಬುದನ್ನು ಗುರುತಿಸಲು ಕೂಡ ಆಗಿರುವುದಿಲ್ಲ. ಆದರೆ ಅವರನ್ನು ಕೂಡ ಶಾಲಾ ದಿನಗಳಿಂದಲೂ ಅಪಾರ ಒತ್ತಡಕ್ಕೆ ಸಿಲುಕಿಸಲಾಗುತ್ತದೆ. ಕೋಟಾದಲ್ಲಿ ವಿದ್ಯಾರ್ಥಿಗಳು ತಮ್ಮ ಕುಟುಂಬದಿಂದ ದೂರ ಇರುತ್ತಾರೆ. ಇದು ಕೂಡ ಅವರ ಮೇಲಿನ ಒತ್ತಡವನ್ನು ಇಮ್ಮಡಿಗೊಳಿಸುತ್ತದೆ. ವಿದ್ಯಾರ್ಥಿಗಳು ಎಲ್ಲೆಡೆಗಳಲ್ಲಿಯೂ ಒತ್ತಡದಲ್ಲೇ ಇರುತ್ತಾರೆ. ಆದರೆ ಕೋಟಾದಲ್ಲಿ ಪರಿಸ್ಥಿತಿ ಅತಿರೇಕಕ್ಕೆ ಹೋಗಿರುವಂತಿದೆ.

ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು, ಅದಕ್ಕೆ ಸಿದ್ಧತೆ ನಡೆಸುವ ಅವಧಿಯಲ್ಲಿ ಹಾಕಿದ್ದ ಶ್ರಮದ ಕಾರಣದಿಂದಾಗಿಯೇ ಶಕ್ತಿ ಕುಂದಿದವರಂತೆ ಆಗಿರುತ್ತಾರೆ. ಒತ್ತಡವು ವಿದ್ಯಾರ್ಥಿಗಳ ಸೃಜನಶೀಲತೆಯನ್ನು, ಬದುಕಿನ ಸವಾಲು ಎದುರಿಸುವ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಇವೆಲ್ಲವುಗಳ ಪರಿಣಾಮವು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಆಗುತ್ತದೆ. ಕೆಲವು ವಿದ್ಯಾರ್ಥಿಗಳು ಆತ್ಮಗೌರವವನ್ನು, ಆತ್ಮವಿಶ್ವಾಸವನ್ನು ಕಳೆದುಕೊಳ್ಳುವ ಹಂತ ತಲುಪುತ್ತಾರೆ. ಕೋಟಾದಲ್ಲಿನ ಕೋಚಿಂಗ್ ಕೇಂದ್ರಗಳು ಅನುಸರಿಸಬೇಕಿರುವ ಹಲವು ಮಾರ್ಗಸೂಚಿಗಳು ಇವೆ. ಆದರೆ ಇವು ಯಾವುವೂ ವಿದ್ಯಾರ್ಥಿಗಳ ಆತ್ಮಹತ್ಯೆಯ ಪ್ರಮಾಣವನ್ನು ತಗ್ಗಿಸಲು ನೆರವಾಗಿಲ್ಲ. ಕೋಟಾದ ಕೋಚಿಂಗ್ ವ್ಯವಸ್ಥೆಯಲ್ಲಿಯೇ ಆಮೂಲಾಗ್ರವಾದ ಬದಲಾವಣೆಗಳು ಆಗಬೇಕಿವೆ. ಬಹುತೇಕ ಕಡೆಗಳಲ್ಲಿ ವಿದ್ಯಾರ್ಥಿಗಳ ಹಾಗೂ ಅವರ ಪಾಲಕರ ಆಪ್ತಸಮಾಲೋಚನೆಗೆ ವ್ಯವಸ್ಥೆ ಇಲ್ಲ. ವಿದ್ಯಾರ್ಥಿ ಜೀವನದಲ್ಲಿ ಖುಷಿಯನ್ನು ಪಡೆಯುವ ಅವಕಾಶಗಳು ಬತ್ತುತ್ತಿವೆ. ಇದು ಬಹುತೇಕರಿಗೆ ಒಂದು ಗಂಭೀರ ಸವಾಲು. ಶಿಕ್ಷಣದ ಬಗ್ಗೆ ಈಗ ಇರುವ ಧೋರಣೆಯಲ್ಲಿಯೂ ಬದಲಾವಣೆ ಆಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT