ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಅಫ್ಗಾನಿಸ್ತಾನದ ಜನರ ರಕ್ಷಣೆಗೆಜಾಗತಿಕ ಸಮುದಾಯ ಒಗ್ಗೂಡಲಿ

Last Updated 17 ಆಗಸ್ಟ್ 2021, 19:45 IST
ಅಕ್ಷರ ಗಾತ್ರ

ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಮತ್ತೆ ಅಧಿಕಾರ ಕೈವಶ ಮಾಡಿಕೊಂಡಿದ್ದಾರೆ. ರಾಜಧಾನಿ ಕಾಬೂಲಿನ ಸುತ್ತ ತಾಲಿಬಾನ್ ಪಡೆಗಳು ಜಮಾಯಿಸಿದ ಸುದ್ದಿ ತಿಳಿದ ಬೆನ್ನಿಗೇ ಅಲ್ಲಿನ ಅಧ್ಯಕ್ಷ ಅಶ್ರಫ್ ಘನಿ ಅವರು ದೇಶದಿಂದ ಪಲಾಯನ ಮಾಡಿದ್ದಾರೆ. ಅಮೆರಿಕ ಸೇನೆಯ ನೆರವಿನಿಂದ ಪ್ರಜಾಸತ್ತಾತ್ಮಕವಾಗಿ ಬೆಳೆಯುವ ಭರವಸೆ ತೋರಿದ್ದ ಅಫ್ಗಾನಿಸ್ತಾನಮತ್ತೆ ತಾಲಿಬಾನ್‌ ಉಗ್ರರ ಕರಾಳ ಆಡಳಿತದ ತೆಕ್ಕೆಗೆ ಜಾರಿದೆ.20 ವರ್ಷಗಳ ನಂತರ ಆ ದೇಶದ ಮಟ್ಟಿಗೆ ಇತಿಹಾಸಚಕ್ರ ಒಂದು ಸುತ್ತು ಬಂದಂತಾಗಿದೆ.

ಹಿಂದೆ ತಾಲಿಬಾನ್ ಪಡೆಗಳ ‘ಉಗ್ರ ಆಡಳಿತ’ದ ಕಹಿ ಉಂಡಿರುವ ಅಫ್ಗಾನಿಸ್ತಾನದ ಜನ ಸಹಜವಾಗಿಯೇ ಆತಂಕಕ್ಕೆ ಒಳಗಾಗಿದ್ದಾರೆ. ಸಾವಿರಾರು ನಾಗರಿಕರು ದೇಶ ಬಿಟ್ಟು ಹೊರಡಲು ನಿರ್ಧರಿಸಿ ವಿಮಾನ ನಿಲ್ದಾಣಕ್ಕೆ ನುಗ್ಗಿದಾಗ ಉಂಟಾದ ನೂಕುನುಗ್ಗಲಿನಲ್ಲಿ ಏಳು ಮಂದಿ ಮೃತಪಟ್ಟಿರುವ ಸುದ್ದಿಯೂ ಬಂದಿದೆ. ಅಫ್ಗಾನಿಸ್ತಾನದಿಂದ ಅಮೆರಿಕದ ಸೇನೆ ಹಿಂತೆಗೆತ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ತಾಲಿಬಾನ್ ಪಡೆಯು ಕ್ಷಿಪ್ರಗತಿಯಲ್ಲಿ ರಾಜಧಾನಿ ಕಾಬೂಲ್ ಸಹಿತ ದೇಶದ ಬಹುತೇಕ ಪ್ರಾಂತ್ಯಗಳನ್ನು ತನ್ನ ವಶಕ್ಕೆ ಪಡೆದಿರುವುದು ಜಾಗತಿಕ ವಲಯದಲ್ಲಿ ಆಘಾತಕ್ಕೆ ಕಾರಣವಾಗಿದೆ.

ಅಲ್ಲಿನ ಸರ್ಕಾರವು ಹೆಚ್ಚಿನಪ್ರತಿರೋಧವನ್ನೇ ತೋರದೆ ಶರಣಾಗಿದೆ.ಜಗತ್ತಿನ ಶಕ್ತರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಅಮೆರಿಕದ ಮಟ್ಟಿಗೆ ಇದೊಂದು ರಾಜಕೀಯ ಸೋಲು ಎನ್ನದೆ ನಿರ್ವಾಹವಿಲ್ಲ. 20 ವರ್ಷಗಳ ಹಿಂದೆ ಭಯೋತ್ಪಾದನೆಯ ವಿರುದ್ಧ ಜಾಗತಿಕ ಸಮರ ಘೋಷಿಸಿದ್ದ ಅಮೆರಿಕಕ್ಕೆ ಈಗಿನ ವಿದ್ಯಮಾನವು ಮುಜುಗರ ಉಂಟುಮಾಡುವಂತಹುದು. ಅಫ್ಗಾನಿಸ್ತಾನ ಸರ್ಕಾರವನ್ನು ಬಂದೂಕಿನ ಬಲದಿಂದ ಪತನಗೊಳಿಸಿ ಅಧಿಕಾರಕ್ಕೆ ಬರುವ ಹೊಸ ಸರ್ಕಾರಕ್ಕೆ ಮಾನ್ಯತೆ ನೀಡುವುದಿಲ್ಲ ಎಂದು ಪ್ರಜಾತಂತ್ರ ವ್ಯವಸ್ಥೆಯನ್ನು ಒಪ್ಪಿರುವ ಪ್ರಮುಖ ದೇಶಗಳು ಹೇಳಿವೆ.

ಇದೇ ವೇಳೆ, ತಾಲಿಬಾನಿನ ಹೊಸ ಸರ್ಕಾರಕ್ಕೆ ಪಾಕಿಸ್ತಾನವು ಮಾನ್ಯತೆ ನೀಡುವ ಲಕ್ಷಣಗಳು ಗೋಚರಿಸಿವೆ. ಅಫ್ಗಾನಿಸ್ತಾನವು ‘ದಾಸ್ಯದ ಸಂಕೋಲೆಯನ್ನು ಕಳಚಿಕೊಂಡಿದೆ’ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಪ್ರತಿಕ್ರಿಯಿಸಿರುವುದರ ಒಳಮರ್ಮ ಇದನ್ನೇ ಧ್ವನಿಸುತ್ತದೆ. ಚೀನಾ ಸಹಕಾರಹಸ್ತ ಚಾಚುವ ಸಾಧ್ಯತೆಯೂ ಇದೆ ಎಂಬ ವಿಶ್ಲೇಷಣೆಗಳು ಇವೆ. ಕಠಿಣ ನಿಯಮಗಳ ಇಸ್ಲಾಮಿಕ್ ಆಡಳಿತವನ್ನು ಮತ್ತೆ ಜಾರಿಗೆ ತರುವುದಾಗಿ ತಾಲಿಬಾನ್ ಪಡೆಗಳ ಮುಖ್ಯಸ್ಥರು ಹೇಳಿರುವುದು ಜನರ ಆತಂಕವನ್ನು ಹೆಚ್ಚಿಸಿದೆ. 20 ವರ್ಷಗಳ ಹಿಂದೆ ತಾಲಿಬಾನ್ ಆಡಳಿತದಲ್ಲಿ ರಾಜಕೀಯ ವಿರೋಧಿಗಳನ್ನು ಹಿಂಸಾತ್ಮಕವಾಗಿ ಬಗ್ಗುಬಡಿದ ಮತ್ತು ಪ್ರಜಾಪ್ರಭುತ್ವದ ನಿಯಮಗಳನ್ನು ಕಾಲಕಸದಂತೆ ಕಂಡ ವಿದ್ಯಮಾನಗಳ ನೆನಪು ಈಗಲೂ ಅಲ್ಲಿಯ ಜನರಿಗಿದೆ.

ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಹಕ್ಕುಗಳನ್ನು ಕಿತ್ತುಕೊಂಡ ತಾಲಿಬಾನ್ ಸರ್ಕಾರ, ಮಧ್ಯಯುಗದ ಕಾನೂನುಗಳನ್ನು ಜನರ ಮೇಲೆ ಹೇರಿತ್ತು. ಟಿ.ವಿ, ಸಂಗೀತ, ಚಿತ್ರಕಲೆ ಮತ್ತು ಫೋಟೊಗ್ರಫಿಯೂ ಅಲ್ಲಿ ನಿಷೇಧಕ್ಕೆ ಒಳಗಾಗಿದ್ದವು. ಈಗ ಮತ್ತೆ ಅಂತಹ ದಮನಕಾರಿ ಆಡಳಿತ ಮರುಕಳಿಸಬಹುದೆನ್ನುವ ಬಗ್ಗೆ ಇಡೀ ಜಗತ್ತೇ ಚಿಂತಿತವಾಗಿದೆ. 20 ವರ್ಷಗಳ ಕಾಲ ಅಫ್ಗಾನಿಸ್ತಾನವನ್ನು ಪ್ರಜಾಪ್ರಭುತ್ವವಾದಿ ಸಮಾಜವಾಗಿ ರೂಪಿಸಲು ಮತ್ತು ಶಾಂತಿ-ಸಹನೆಯ ಆಡಳಿತವನ್ನು ಅಲ್ಲಿ ನೆಲೆಗೊಳಿಸಲು ದುಡಿದ ಲಕ್ಷಾಂತರ ಜನರಿಗೆ ಈಗ ಭ್ರಮನಿರಸನವಾಗಿರಬಹುದು.

ಸಮರ್ಥ ಸರ್ಕಾರವೊಂದರ ಸುಳಿವೇ ಇಲ್ಲದಂತೆ, ಯಾವ ಸೈನಿಕ ಪ್ರತಿರೋಧವೂ ಎದುರಾಗದೆ, ದೇಶವೊಂದು ಉಗ್ರಪಡೆಗಳ ಹಿಡಿತಕ್ಕೆ ಸಿಲುಕಿದ ಈ ವಿದ್ಯಮಾನವು ಹಲವುಪ್ರಶ್ನೆಗಳನ್ನೂ ಹುಟ್ಟುಹಾಕಿದೆ. ಅಮೆರಿಕದ ಬೆಂಬಲವನ್ನು ಹೊಂದಿದ್ದ ಅಫ್ಗಾನಿಸ್ತಾನದ ಸೇನೆಯುಪ್ರತಿರೋಧವನ್ನೇ ತೋರಲಾರದೆ ಶರಣಾಗಲು ಕಾರಣವಾದರೂ ಏನು? ರಾಜಧಾನಿ ಕಾಬೂಲ್‌ ನಿರಾಯಾಸವಾಗಿತಾಲಿಬಾನ್‌ ತೆಕ್ಕೆಗೆ ಸೇರುವುದು ಹೇಗೆ ಸಾಧ್ಯವಾಯಿತು? ಅಫ್ಗಾನಿಸ್ತಾನದಲ್ಲಿ ಅಧಿಕಾರ ದಲ್ಲಿದ್ದ ಯಾವುದಾದರೂ ಶಕ್ತಿಯೊಂದಿಗೆ ತಾಲಿಬಾನ್ ಒಳಒಪ್ಪಂದ ಮಾಡಿಕೊಂಡಿರಬಹುದೇ ಎಂಬ ಅನುಮಾನ ಮೂಡಿದೆ.

ಅಶ್ರಫ್ ಘನಿ ನೇತೃತ್ವದ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದ ಹಿನ್ನೆಲೆಯಲ್ಲಿ ಅಲ್ಲಿನ ಸೇನೆಯೂ ನೈತಿಕ ಸ್ಥೈರ್ಯ ಕಳೆದುಕೊಂಡಿತ್ತು ಎಂಬ ವರದಿಗಳಿವೆ. ತಾಲಿಬಾನ್ ಪುನಃ ಅಧಿಕಾರ ಪಡೆಯುವಲ್ಲಿ ಪಾಕಿಸ್ತಾನದ ಕೈವಾಡ ಇದೆ ಎಂದೂ ಹೇಳಲಾಗುತ್ತಿದೆ. ರಾಜಕೀಯ ಪಲ್ಲಟಗಳೇನೇ ಇರಲಿ, ಹಿಂಸಾತ್ಮಕ ರಾಜಕೀಯ ಪ್ರತೀಕಾರಕ್ಕೆ ಒಳಗಾಗುವ ಅಪಾಯದಿಂದ ಅಫ್ಗಾನಿಸ್ತಾನದ ಜನರನ್ನು ರಕ್ಷಿಸಬೇಕಾದ ಹೊಣೆಗಾರಿಕೆ ಭಾರತ ಸಹಿತ ಜಗತ್ತಿನ ಎಲ್ಲ ಪ್ರಜಾಪ್ರಭುತ್ವವಾದಿ ದೇಶಗಳ ಮೇಲಿದೆ. ಜನರ ಹಕ್ಕುಗಳನ್ನು ಕಸಿದುಕೊಂಡು ಅಲ್ಲಿ ದಮನಕಾರಿ ಆಡಳಿತ ನಡೆಸದಂತೆ ತಾಲಿಬಾನ್ ಪಡೆಗಳ ಮೇಲೆ ಒತ್ತಡ ಹೇರುವ ಕೆಲಸ ವಿಶ್ವಸಂಸ್ಥೆಯಿಂದಲೂ ಪರಿಣಾಮಕಾರಿಯಾಗಿ ಆಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT