ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಜನಗಣತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿರುವುದು ದುರದೃಷ್ಟಕರ

Last Updated 17 ಜನವರಿ 2023, 22:09 IST
ಅಕ್ಷರ ಗಾತ್ರ

ಪ್ರತೀ ಹತ್ತು ವರ್ಷಕ್ಕೆ ಒಮ್ಮೆ ನಡೆಸುವ ಜನಗಣತಿಯು 2021ರಲ್ಲಿ ನಡೆಯಬೇಕಿತ್ತು. ಆದರೆ, ಕೋವಿಡ್‌ ಸಾಂಕ್ರಾಮಿಕದ ಕಾರಣದಿಂದ ಇದು ನಡೆಯಲಿಲ್ಲ. ಈಗ, ಜನಗಣತಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಅದಕ್ಕೆ ತಪ್ಪು ಕಾರಣಗಳನ್ನು ನೀಡಲಾಗಿದೆ ಮತ್ತು ಈ ಕಾರಣಗಳು ಮನವರಿಕೆ ಆಗುವ ರೀತಿಯಲ್ಲಿಯೂ ಇಲ್ಲ. 1911ರಿಂದ ಈತನಕ ಒಮ್ಮೆಯೂ ತಪ್ಪದಂತೆ ಜನಗಣತಿ ನಡೆಸಲಾಗಿದೆ. ಗಣತಿ ಮಾಡುವವರು ಮನೆಮನೆಗೆ ತೆರಳಿ ಜನರ ಹತ್ತಿರಕ್ಕೆ ಹೋಗಿ ಮಾಹಿತಿ ಸಂಗ್ರಹಿಸಬೇಕು. ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಹೇರಲಾಗಿದ್ದ ಲಾಕ್‌ಡೌನ್‌ ಮತ್ತು ಸೋಂಕಿನಿಂದ ರಕ್ಷಣೆ ಪಡೆಯಲು ಅಂತರ ಕಾಯ್ದುಕೊಳ್ಳಬೇಕಾಗಿದ್ದುದರಿಂದ ಆಗ ಗಣತಿ ನಡೆಸುವುದು ಸಾಧ್ಯವಿರಲಿಲ್ಲ. ಸಾಂಕ್ರಾಮಿಕದ ಅಬ್ಬರವು ತಗ್ಗಿದ ಬಳಿಕವೂ ಗಣತಿ ನಡೆಸಲು ಬೇಕಾದ ಸಿದ್ಧತೆಗಳನ್ನು ಸರ್ಕಾರ ಮಾಡಿಕೊಳ್ಳಲಿಲ್ಲ.

ಜನಗಣತಿ ನಡೆಸುವ ಹೊಣೆಗಾರಿಕೆ ಹೊತ್ತಿರುವ ಭಾರತದ ರಿಜಿಸ್ಟ್ರಾರ್‌ ಜನರಲ್‌ ಕಚೇರಿಯು ಮನೆಗಳ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿಲ್ಲ. ಆಡಳಿತ ಘಟಕಗಳ ಗಡಿ ನಿಗದಿ ಮಾಡುವ ಕೆಲಸದ ಗಡುವನ್ನು ಜೂನ್‌ 30ರವರೆಗೆ ವಿಸ್ತರಿಸಲಾಗಿದೆ. ಈ ಕೆಲಸ ಪೂರ್ಣಗೊಂಡು ಕೆಲವು ತಿಂಗಳ ಬಳಿಕವೇ ಗಣತಿ ನಡೆಸಬೇಕಾಗುತ್ತದೆ. ಹಾಗಾಗಿ, ಜನಗಣತಿಯು ಸದ್ಯಕ್ಕೆ ನಡೆಯುವ ಸಾಧ್ಯತೆ ಇಲ್ಲ.

ಜನಗಣತಿಯಲ್ಲಿ ದೊರೆಯುವ ಪ್ರಾಥಮಿಕ ದತ್ತಾಂಶಗಳು ಆಡಳಿತದ ವಿವಿಧ ಉದ್ದೇಶಗಳಿಗೆ ಅತ್ಯಗತ್ಯ. ಹಾಗಾಗಿ, ಜನಗಣತಿಯ ಮಹತ್ವವನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ಜನರ ಜೀವನದ ಎಲ್ಲ ವಿಚಾರಗಳ ಸ್ಪ‍ಷ್ಟ ಚಿತ್ರಣವನ್ನು ಗಣತಿಯು ನೀಡುತ್ತದೆ. ರಾಷ್ಟ್ರ, ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ಇರುವ ಜನಸಂಖ್ಯೆ ಎಷ್ಟು ಎಂಬುದರ ಮಾಹಿತಿ ದೊರೆಯುವುದು ಒಂದು ಪ್ರಯೋಜನ ಮಾತ್ರ. ಯಾವ ವಯೋಮಾನದ ಎಷ್ಟು ಜನರಿದ್ದಾರೆ, ಅವರ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳೇನು ಎಂಬೆಲ್ಲ ಮಾಹಿತಿಯು ನೀತಿ ನಿರೂಪಣೆಗೆ ಅಗತ್ಯವಾಗಿದೆ. ವಸತಿ, ಶಿಕ್ಷಣ, ಆರೋಗ್ಯ, ಫಲವಂತಿಕೆ, ಸಾಕ್ಷರತೆಯ ಸ್ಥಿತಿಗತಿ ಮತ್ತು ಇವುಗಳ ಹಂಚಿಕೆಯು ರಾಜ್ಯ, ಪ್ರಾಂತ್ಯ ಮತ್ತು ಜಿಲ್ಲೆಗಳ ಮಟ್ಟದಲ್ಲಿ ಯಾವ ರೀತಿ ಇದೆ ಎಂಬ ದತ್ತಾಂಶಗಳು ಅಭಿವೃದ್ಧಿ ಕಾರ್ಯಕ್ರಮ ಗಳನ್ನು ರೂಪಿಸಲು ಬೇಕು. ಸ್ಥಳೀಯ ಮಟ್ಟದ ಯೋಜನೆಗಳನ್ನು ರೂಪಿಸುವುದಕ್ಕೂ ಇಂತಹ ದತ್ತಾಂಶಗಳು ಬೇಕು. ಒಂದು ಪ್ರದೇಶದಲ್ಲಿ ಶಾಲೆ ಅಥವಾ ಆಸ್ಪತ್ರೆಯ ಅಗತ್ಯ ಇದೆಯೇ ಎಂಬುದನ್ನು ಆ ಪ್ರದೇಶದ ನಿರ್ದಿಷ್ಟ ದತ್ತಾಂಶಗಳ ಆಧಾರದಲ್ಲಿ ನಿರ್ಧರಿಸಬೇಕಾಗುತ್ತದೆ. ನಗರೀಕರಣ ಮತ್ತು ಜನರ ವಲಸೆಯ ಮಾಹಿತಿಯು ಹಲವು ವಿಚಾರಗಳ ಕುರಿತು ನಿರ್ಧಾರ ಕೈಗೊಳ್ಳಲು ನಿರ್ಣಾಯಕ. ಜನಕಲ್ಯಾಣ ಯೋಜನೆಗಳನ್ನು ರೂಪಿಸಲು ಜನರ ಕುರಿತ ದತ್ತಾಂಶಗಳು ಬಹಳ ಮುಖ್ಯ. ವಸತಿ, ಸ್ವಚ್ಛ ಭಾರತ ಅಭಿಯಾನ ಮುಂತಾದ ಯೋಜನೆಗಳ ಯಶಸ್ಸಿನ ಕುರಿತು ಸರ್ಕಾರವು ಹೇಳಿಕೊಳ್ಳುತ್ತಿರುವುದು ಸರಿಯಾಗಿದೆಯೇ ಎಂಬುದನ್ನು ಕಂಡುಕೊಳ್ಳುವುದಕ್ಕೂ ಜನಗಣತಿಯ ದತ್ತಾಂಶಗಳು ಬೇಕಾಗುತ್ತವೆ.

ಈಗ ನಮ್ಮಲ್ಲಿ ಇರುವುದು 2011ರ ಜನಗಣತಿಯ ದತ್ತಾಂಶಗಳು. ಅವು ಹಳೆಯವಾಗಿವೆ. ಸರ್ಕಾರವು ಜನಗಣತಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ದುರದೃಷ್ಟಕರ. ದತ್ತಾಂಶ ಕುರಿತ ಸರ್ಕಾರದ ನೀತಿಯು ಈ ಹಿಂದೆಯೂ ಸಮರ್ಪಕವಾಗಿ ಇರಲಿಲ್ಲ. ಲೋಕಸಭೆಗೆ 2024ರಲ್ಲಿ ನಡೆಯಲಿರುವ ಚುನಾವಣೆಗೆ ಮೊದಲು ಜನಗಣತಿ ನಡೆಸಲು ಸರ್ಕಾರ ಸಿದ್ಧವಿಲ್ಲ. ಇದಕ್ಕೆ ರಾಜಕೀಯವಾದ ಕಾರಣಗಳಷ್ಟೇ ಇವೆ. ಇದು ತಪ್ಪು. ಸರ್ಕಾರ ಬಯಸಿದರೆ ಈಗಲೂ ಜನಗಣತಿ ನಡೆಸಲು ಸಾಧ್ಯ. ಜನಗಣತಿಯು ದೇಶದ ಚಿತ್ರಣವನ್ನು ಕಾಲಕಾಲಕ್ಕೆ ನೀಡುತ್ತದೆ. ಇಂತಹ ಚಿತ್ರಣವು ಇಲ್ಲದಂತೆ ಆಗುವುದು ಸರಿಯಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT