ಭಾನುವಾರ, ಅಕ್ಟೋಬರ್ 24, 2021
29 °C

ಸಂಪಾದಕೀಯ| ವಿಐಪಿ ಸಂಸ್ಕೃತಿಗೆ ಶಾಸಕರು ಮರುಳಾಗುವುದು ಬೇಡ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಶಾಸಕರು ಹಾಗೂ ಇತರ ಅತಿಗಣ್ಯ ವ್ಯಕ್ತಿಗಳಿಗೆ (ವಿಐಪಿ) ಸುಗಮವಾಗಿ ಸಂಚರಿಸಲು ಅನುಕೂಲ ಆಗುವಂತೆ ಟೋಲ್‌ ಕೇಂದ್ರಗಳಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಲೋಕೋಪ ಯೋಗಿ ಸಚಿವ ಸಿ.ಸಿ. ಪಾಟೀಲ ಅವರು ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ. ಅಲ್ಲದೆ, ಆಂಬುಲೆನ್ಸ್‌ ಸಂಚಾರಕ್ಕೆ ಇರುವ ಪ್ರತ್ಯೇಕ ಲೇನ್‌ನಲ್ಲಿ ಶಾಸಕರು ಹಾಗೂ ಇತರ ವಿಐಪಿಗಳ ಸುಗಮ ಸಂಚಾರಕ್ಕೆ ಸಹ ಅವಕಾಶ ಕಲ್ಪಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದು ಸದನದಲ್ಲೇ ಭರವಸೆ ನೀಡಿದ್ದಾರೆ. ಟೋಲ್ ಕೇಂದ್ರಗಳಲ್ಲಿ ತಮಗೆ ವಿಶೇಷ ಮನ್ನಣೆ ಇರಬೇಕು ಎಂದು ಕೆಲವು ಶಾಸಕರು ಸದನದಲ್ಲಿ ಒತ್ತಾಯಿಸಿದ್ದು, ಸರ್ಕಾರವು ಅವರ ಒತ್ತಾಯಕ್ಕೆ ಮಣಿದಿದ್ದು ಸರಿಯೇ ಎಂಬುದು ಆತ್ಮಾವಲೋಕನಕ್ಕೆ ಸೂಕ್ತವಾದ ವಿಷಯ. ಮಳವಳ್ಳಿ ಕ್ಷೇತ್ರದ ಶಾಸಕ, ಜೆಡಿಎಸ್‌ನ ಕೆ. ಅನ್ನದಾನಿ ಅವರ ಗಮನ ಸೆಳೆಯುವ ಸೂಚನೆಗೆ ಪ್ರತಿಯಾಗಿ ಸಚಿವ ಪಾಟೀಲ ಅವರು, ಆಂಬುಲೆನ್ಸ್‌ಗೆ ಮೀಸಲಾದ ಲೇನ್‌ ಅನ್ನು ಶಾಸಕರು ಹಾಗೂ ಇತರ ವಿಐಪಿಗಳು ಬಳಸಬಹುದು ಎಂದು ಹೇಳಿದ್ದಾರೆ. ಅನ್ನದಾನಿ ಅವರ ಆಗ್ರಹವನ್ನು ಅವರ ಪಕ್ಷದ ಇತರ ಕೆಲವು ಶಾಸಕರೂ ಬೆಂಬಲಿಸಿದ್ದರು. ವಾಹನಗಳು ಟೋಲ್‌ ಕೇಂದ್ರಗಳನ್ನು ದಾಟಿ ಹೋಗಲು ಈಗ ಮೊದಲಿನಷ್ಟು ಸಮಯ ತೆಗೆದುಕೊಳ್ಳುತ್ತಿಲ್ಲ. ಫಾಸ್ಟ್‌ಟ್ಯಾಗ್‌ ವ್ಯವಸ್ಥೆಯು ಎಲ್ಲ ಕಡೆ ಜಾರಿಗೆ ಬಂದ ನಂತರ ಆಗಿರುವ ಸುಧಾರಣೆ ಇದು. ಈ ಮಾತಿಗೆ ಕೆಲವು ಅಪವಾದಗಳು ಇರ ಬಹುದು. ಆದರೆ, ಟೋಲ್‌ ಕೇಂದ್ರಗಳಲ್ಲಿ ಸರತಿ ಸಾಲಿನಲ್ಲಿ ವಾಹನಗಳನ್ನು ನಿಲ್ಲಿಸಿಕೊಳ್ಳುವುದು ತಮ್ಮ ಘನತೆಗೆ ತಕ್ಕುದಲ್ಲ ಎಂದು ಕೆಲವು ಶಾಸಕರಿಗೆ ಅನ್ನಿಸಿದೆ. ಚುನಾಯಿತ ಪ್ರತಿನಿಧಿಗಳಿಗೆ ಟೋಲ್ ಪಾವತಿಯಿಂದ ವಿನಾಯಿತಿ ಇದೆ. ಆದರೆ ಅವರು ಟೋಲ್ ಕೇಂದ್ರಗಳಲ್ಲಿ ತಮ್ಮ ಗುರುತಿನ ಚೀಟಿಯನ್ನು ತೋರಿಸಬೇಕು. ಚುನಾಯಿತ ಪ್ರತಿನಿಧಿಗಳ ಸ್ಥಾನಮಾನ ವನ್ನು ಇತರರು ದುರುಪಯೋಗ ಮಾಡಿಕೊಳ್ಳಬಾರದು ಎಂಬ ಉದ್ದೇಶದಿಂದ ಈ ಕ್ರಮ. ಆದರೆ, ಗುರುತಿನ ಚೀಟಿಯನ್ನು ತೋರಿಸುವುದು ಹಾಗೂ ಆ ಚೀಟಿಯನ್ನು ಟೋಲ್ ಸಿಬ್ಬಂದಿ ಪರಿಶೀಲಿಸುವುದು ಚುನಾಯಿತ ಪ್ರತಿನಿಧಿಗಳಿಗೆ ಅವಮಾನಕರ ಎಂಬ ಅರ್ಥ ಬರುವ ಮಾತುಗಳನ್ನು ಕೆಲವು ಶಾಸಕರು ಆಡಿದ್ದಾರೆ.

ತಮಗೆ ವಿಶೇಷ ಮನ್ನಣೆ ಬೇಕು ಎಂದು ಜನ ಪ್ರತಿನಿಧಿಗಳು ಬಯಸುವುದನ್ನು ಕಂಡು ಜನ ಏನೆಂದುಕೊಂಡಾರು ಎಂಬ ಬಗ್ಗೆ ಆಡಳಿತ ಪಕ್ಷದ ಸದಸ್ಯರಾಗಲೀ ಸರ್ಕಾರದ ಪ್ರತಿನಿಧಿಗಳಾಗಲೀ ವಿರೋಧ ಪಕ್ಷಗಳ ಹಿರಿಯರಾಗಲೀ ಆಲೋಚಿಸಿದಂತೆ ಕಾಣುತ್ತಿಲ್ಲ. ವಿಐಪಿ ಸಂಸ್ಕೃತಿಯ ಬಗ್ಗೆ ಜನರಲ್ಲಿ ಮೂಡುತ್ತಿರುವ ಸಿಟ್ಟಿನ ಬಗ್ಗೆಯೂ ಅವರಿಗೆ ಅರಿವು ಇದ್ದಂತಿಲ್ಲ. ಆದರೆ, ಸದನದಲ್ಲಿ ಈ ಕುರಿತು ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಜನರ ಅನಿಸಿಕೆಗಳಿಗೆ ದನಿ ಕೊಡುವಂತಹ ಮಾತುಗಳನ್ನು ಆಡಿದ್ದಾರೆ. ‘ಇಲ್ಲಿ (ಸದನದಲ್ಲಿ) ಜನರ ಸಮಸ್ಯೆಗಳ ಬಗ್ಗೆ ಚರ್ಚಿಸೋಣ. 224 ಜನರ (ವಿಧಾನಸಭೆ ಸದಸ್ಯರ) ಸಮಸ್ಯೆಯ ಬಗ್ಗೆ ಪ್ರತ್ಯೇಕವಾಗಿ ಕುಳಿತು ಚರ್ಚೆ ಮಾಡೋಣ’ ಎಂದು ಕಾಗೇರಿ ಹೇಳಿದ್ದಾರೆ. ಈ ಕಿವಿಮಾತು ಹೇಳುವ ಮೂಲಕ, ಪ್ರತ್ಯೇಕ ಲೇನ್ ಬಯಸಿ ನಡೆಯುತ್ತಿದ್ದ ಚರ್ಚೆಗೆ ಒಂದು ಅಂತ್ಯ ಹೇಳುವ ಯತ್ನ ನಡೆಸಿದ್ದಾರೆ. ದೇಶದಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಹತ್ತುಹಲವು ವಿಶೇಷ ಸೌಲಭ್ಯಗಳು ಈಗಾಗಲೇ ಇವೆ. ಆದರೆ, ಅವು ಯಾವುವೂ ಅವರಿಗೆ ಪೂರ್ತಿ ಸಮಾಧಾನ ನೀಡಿದಂತೆ ಕಾಣುತ್ತಿಲ್ಲ. ಬೇಡಿಕೆಗಳು ಹೊಸ ರೂಪವನ್ನು ಹೊತ್ತು ಬರುತ್ತಲೇ ಇರುತ್ತವೆ. ಅವರು ತಮ್ಮ ಬೇಡಿಕೆಗಳನ್ನು ಈಡೇರಿಸಿ ಕೊಳ್ಳಲು ತಮ್ಮ ಕೈಯಲ್ಲೇ ಇರುವ ಅಧಿಕಾರವನ್ನು ಬಳಸಿಕೊಳ್ಳುತ್ತಾ ಇರುತ್ತಾರೆ.

ಕೋವಿಡ್‌ ಸಾಂಕ್ರಾಮಿಕದ ಕಾರಣದಿಂದಾಗಿ ರಾಜ್ಯದಲ್ಲಿ ವಿಧಾನಮಂಡಲದ ಎರಡೂ ಸದನಗಳು ಬಹಳ ಕಾಲದ ನಂತರ ಕಲಾಪ ನಡೆಸಿದ್ದವು. ಜನರನ್ನು ತೀವ್ರವಾಗಿ ಕಾಡುತ್ತ ಇರುವ ಹತ್ತು ಹಲವು ಸಮಸ್ಯೆಗಳನ್ನು ಶಾಸಕರು ಅಲ್ಲಿ ಪ್ರಸ್ತಾಪಿಸಬೇಕಾಗಿತ್ತು. ಸರ್ಕಾರದ ಕಿವಿ ಹಿಂಡಿ, ಸಂಬಂಧಪಟ್ಟ ಸಚಿವರಿಂದ ಉತ್ತರ ಪಡೆದುಕೊಳ್ಳಬೇಕಿತ್ತು. ತಮ್ಮನ್ನು ಮಾತ್ರ ಕಾಡುತ್ತಿರುವ ಸಮಸ್ಯೆಯ ಬಗ್ಗೆ ಸದನ ದಲ್ಲಿ ಪ್ರಸ್ತಾಪಿಸುವ ಅಗತ್ಯ ಇತ್ತೇ? ಟೋಲ್‌ ಕೇಂದ್ರಗಳಲ್ಲಿ ವಿಐಪಿಗಳಿಗೆ ಮನ್ನಣೆ ನೀಡುವ ಕುರಿತ ಚರ್ಚೆಯಿಂದ ಜನಸಾಮಾನ್ಯರಿಗೆ ಯಾವ ಪ್ರಯೋಜನವೂ ಆದಂತಿಲ್ಲ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಐಪಿ ಸಂಸ್ಕೃತಿ ಬಗ್ಗೆ ಒಲವು ಹೊಂದಿಲ್ಲ ಎಂಬುದು ಅವರ ಕೆಲವು ನಡೆಗಳಿಂದ ಗೊತ್ತಾಗುತ್ತದೆ. ಬೊಮ್ಮಾಯಿ ಅವರ ಕೆಲವು ನಡೆಗಳು ಇತರ ಜನಪ್ರತಿನಿಧಿಗಳಿಗೆ ಮಾದರಿ ಆಗಬಹುದು. ಹಾಗೆಯೇ, ವಿಧಾನಸಭಾಧ್ಯಕ್ಷ ಕಾಗೇರಿ ಅವರು ಹೇಳಿದ ‘ಇಲ್ಲಿ (ಸದನದಲ್ಲಿ) ನಾವು ಉಳಿದವರ (ಜನರ) ಸಮಸ್ಯೆಗಳ ಬಗ್ಗೆ ಚರ್ಚಿಸೋಣ’ ಎನ್ನುವ ಮಾತು ಕೂಡ ಎಲ್ಲ ಶಾಸಕರಿಗೆ ಒಂದು ಒಳ್ಳೆಯ ಕಿವಿಮಾತು ಆಗಬಹುದು. ತಮಗೆ ತಾವೇ ಪ್ರಾಧಾನ್ಯ ಕೊಟ್ಟುಕೊಳ್ಳುವ ವಿಐಪಿ ಸಂಸ್ಕೃತಿಯಿಂದ ಸಮುದಾಯಕ್ಕೆ ಹೆಚ್ಚಿನ ಪ್ರಯೋಜನವೇನೂ ಇಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು