ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಕಾರ್ಖಾನೆಗಳ ಕಾಯ್ದೆಗೆ ತಿದ್ದುಪಡಿ ಸಮತೋಲನದ ನಡೆ ಬೇಕು

Last Updated 8 ಮಾರ್ಚ್ 2023, 19:45 IST
ಅಕ್ಷರ ಗಾತ್ರ

1948ರ ಕಾರ್ಖಾನೆಗಳ ಕಾಯ್ದೆಗೆ ತಂದ ತಿದ್ದುಪಡಿಯನ್ನು ರಾಜ್ಯ ವಿಧಾನ ಮಂಡಲವು ಕಳೆದ ತಿಂಗಳಲ್ಲಿ ಅನುಮೋದಿಸಿದೆ. ಈ ತಿದ್ದುಪಡಿಯು ದಿನದ ಕೆಲಸದ ಅವಧಿಯನ್ನು 12 ತಾಸುಗಳಿಗೆ ವಿಸ್ತರಿಸಲು ಕೈಗಾರಿಕೆಗಳಿಗೆ ಅವಕಾಶ ಕಲ್ಪಿಸುತ್ತದೆ. ದಿನದ ಕೆಲಸದ ಅವಧಿಯನ್ನು ವಿಸ್ತರಿಸಿದರೂ, ವಾರದಲ್ಲಿ ಒಟ್ಟು ಕೆಲಸದ ಅವಧಿಯು 48 ತಾಸುಗಳನ್ನು ಮೀರುವಂತಿಲ್ಲ ಎಂದು ತಿದ್ದುಪಡಿ ಹೇಳುತ್ತದೆ. ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲಿಕ್ಕೆ ಕೂಡ ಇದು ಅವಕಾಶ ಕಲ್ಪಿಸುತ್ತದೆ.

ಈ ತಿದ್ದುಪಡಿಯು ಕೈಗಾರಿಕಾ ಸ್ನೇಹಿಯಾಗಿದೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಎಂದು ಸರ್ಕಾರ ಹೇಳಿದೆಯಾದರೂ, ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳದೇ ಇದ್ದರೆ ಇದು ಕಾರ್ಮಿಕ ವಿರೋಧಿಯಾಗಿ ‍ಪರಿವರ್ತನೆ ಕಾಣುವ ಅಪಾಯವೂ ಇದೆ. ವಿಧಾನಸಭೆಯಲ್ಲಿ ತಿದ್ದುಪಡಿ ಮಸೂದೆಯು ಚರ್ಚೆಯಿಲ್ಲದೆ ಅನುಮೋದನೆ ಪಡೆದುಕೊಂಡಿತು. ಆದರೆ ವಿಧಾನ ಪರಿಷತ್ತಿನಲ್ಲಿ ಇದಕ್ಕೆ ಕಾಂಗ್ರೆಸ್, ಜೆಡಿಎಸ್‌ ಸದಸ್ಯರು ಹಾಗೂ ಆಡಳಿತಾರೂಢ ಬಿಜೆಪಿಯ ಇಬ್ಬರು ಸದಸ್ಯರು ವಿರೋಧ ವ್ಯಕ್ತಪಡಿಸಿದರು. ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಕಾರಣ, ಈ ತಿದ್ದುಪಡಿ ಮಸೂದೆ ಚರ್ಚೆಗೆ ಬಂದಿದ್ದು ಹಾಲಿ ವಿಧಾನಸಭೆಯ ಕಡೆಯ ಅಧಿವೇಶನದಲ್ಲಿ ಆಗಿರುವ ಕಾರಣ ಕೆಲವು ಶಾಸಕರು ಶಾಸನ ರಚಿಸುವ ಕೆಲಸಗಳಲ್ಲಿ ಆಸಕ್ತಿ ಕಳೆದುಕೊಂಡಿದ್ದರು ಎಂದು ಅನಿಸುತ್ತದೆ.

ಕೆಲಸದ ಅವಧಿಯನ್ನು ವಿಸ್ತರಿಸುವುದು ಆಯ್ಕೆ ಮಾತ್ರ, ಅದು ಕಡ್ಡಾಯವಲ್ಲ. ಆದರೆ ಈ ಆಯ್ಕೆಯಿಂದಾಗಿ, ದೇಶದ ತಯಾರಿಕಾ ವಲಯಕ್ಕೆ ಹೆಚ್ಚಿನ ಬಲ ಬರುತ್ತದೆ ಎಂಬುದು ಸರ್ಕಾರದ ವಾದ. ತಯಾರಿಕಾ ವಲಯದಲ್ಲಿ ಭಾರತವು ಈಗಲೂ ಚೀನಾಕ್ಕಿಂತ ಹಿಂದೆ ಉಳಿದಿದೆ. ತಿದ್ದುಪಡಿಯು ಮೂರು ತಿಂಗಳ ಅವಧಿಯಲ್ಲಿ ಹೆಚ್ಚುವರಿ ಕೆಲಸದ ಅವಧಿಯನ್ನು 75 ತಾಸುಗಳ ಬದಲಾಗಿ 145 ತಾಸುಗಳಿಗೆ ವಿಸ್ತರಿಸಲು ಅವಕಾಶ ಕಲ್ಪಿಸುತ್ತದೆ. ಇದು ಭಾರತವನ್ನು ಹೆಚ್ಚು ಸ್ಪರ್ಧಾತ್ಮಕ ಆಗಿಸಲಿದೆ ಹಾಗೂ ಹೆಚ್ಚಿನ ಹೂಡಿಕೆ ಆಕರ್ಷಿಸಲು ನೆರವಾಗಲಿದೆ ಎಂಬುದು ಸರ್ಕಾರದ ವಾದ. ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಿರುವುದು ಸ್ವಾಗತಾರ್ಹ. ಇದು ಕೆಲಸದ ಸ್ಥಳಗಳಲ್ಲಿ ಸಮಾನ ಅವಕಾಶಗಳಿಗೆ ದಾರಿ ಮಾಡಿಕೊಡುತ್ತದೆ. ಆದರೆ, ತಿದ್ದುಪಡಿಗೆ ಸಂಬಂಧಿಸಿದ ಮಾರ್ಗಸೂಚಿಗಳು ಮಹಿಳೆಯರ ಸುರಕ್ಷತೆಗೆ ಅಗತ್ಯ ಗಮನ ನೀಡಬೇಕು ಹಾಗೂ ಆ ಮಾರ್ಗಸೂಚಿಗಳು ಕಡ್ಡಾಯವಾಗಿ ಅನುಷ್ಠಾನಕ್ಕೆ ಬರಬೇಕು.

ವಿಧಾನ ಪರಿಷತ್ತಿನಲ್ಲಿ ಕೆಲವು ಸದಸ್ಯರು ಪಕ್ಷಾತೀತವಾಗಿ ಈ ತಿದ್ದುಪಡಿಯನ್ನು ಹಿಂಪಡೆಯುವಂತೆ ಸರ್ಕಾರವನ್ನು ಆಗ್ರಹಿಸಿದರು. ಈ ತಿದ್ದುಪಡಿಯು ಮಾನವ ಹಕ್ಕುಗಳ ಉಲ್ಲಂಘನೆಗೆ ದಾರಿ ಮಾಡಿಕೊಡುತ್ತದೆ ಎಂಬ ಆತಂಕ ವ್ಯಕ್ತಪಡಿಸಿದರು. ಕಾರ್ಖಾನೆಗಳ ಮಾಲೀಕರಿಗೆ ಮಾತ್ರ ಲಾಭ ಮಾಡಿಕೊಡುವ ಉದ್ದೇಶದಿಂದ ಈ ತಿದ್ದುಪಡಿಯನ್ನು ಸರ್ಕಾರ ಸಿದ್ಧಪಡಿಸಿದೆ, ಕಾರ್ಮಿಕರ ಜೊತೆ ಸಮಾಲೋಚನೆಯನ್ನೇ ನಡೆಸಿಲ್ಲ ಎಂದು ಅವರು ಆರೋಪಿಸಿದರು. ತಿದ್ದುಪಡಿಯು ಮಹಿಳೆಯರನ್ನು ಲೈಂಗಿಕ ದೌರ್ಜನ್ಯಕ್ಕೆ ಹೆಚ್ಚು ಗುರಿಮಾಡಬಹುದು ಎಂದು ಕೆಲವು ಸದಸ್ಯರು ವ್ಯಕ್ತಪಡಿಸಿದ ಆತಂಕವನ್ನು ದೂರಮಾಡಲು ಯತ್ನಿಸಿದ ಸರ್ಕಾರವು ಆರೋಗ್ಯಸೇವೆ, ಆತಿಥ್ಯ, ಮಾಹಿತಿ ತಂತ್ರಜ್ಞಾನ ಹಾಗೂ ಇತರ ಕೆಲವು ವಲಯಗಳಲ್ಲಿ ಮಹಿಳೆಯರು ಈಗಾಗಲೇ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿತು.

ಕಾರ್ಮಿಕರು ಶೋಷಣೆಗೆ ಗುರಿಯಾಗದಂತೆ ಮಾಡಲು ತಿದ್ದುಪಡಿಯು ಕೆಲವು ಅಂಶಗಳನ್ನು ಹೊಂದಿದೆಯಾದರೂ, ಅಂತಹ ಮಾರ್ಗಸೂಚಿಗಳು ಸಾಮಾನ್ಯವಾಗಿ ಕಾಗದದ ಮೇಲೆ ಮಾತ್ರವೇ ಉಳಿದುಕೊಳ್ಳುತ್ತವೆ. ಹೆಚ್ಚುವರಿ ಪ್ರಯೋಜನ ಇಲ್ಲದೆಯೇ, ಹೆಚ್ಚಿನ ಅವಧಿಗೆ ಕೆಲಸ ಮಾಡಬೇಕಾದ ಅನಿವಾರ್ಯವು ಕಾರ್ಮಿಕರಿಗೆ ಎದುರಾಗುತ್ತದೆ. ಕೆಲಸದ ಸ್ಥಳದಲ್ಲಿನ ಸ್ಥಿತಿಯೂ ಚೆನ್ನಾಗಿರುವುದಿಲ್ಲ. ಈ ತಿದ್ದುಪಡಿಯನ್ನು ಜಾರಿಗೆ ತರಲು ಸರ್ಕಾರ ಹೊಂದಿರುವ ಆಶಯವು ಒಳ್ಳೆಯದೇ ಆಗಿರಬಹುದು. ಈ ತಿದ್ದುಪಡಿಯು ತಯಾರಿಕಾ ವಲಯಕ್ಕೆ ನೆರವು ನೀಡುವಂತೆಯೇ ಇದ್ದಿರಬಹುದು. ಆದರೆ ಹೊಸ ಅಂಶಗಳನ್ನು ಕಾರ್ಖಾನೆಗಳು ತಮ್ಮ ಕಾರ್ಮಿಕರನ್ನು ಶೋಷಿಸಲು ಬಳಸಿಕೊಳ್ಳದಂತೆ ನೋಡಿಕೊಳ್ಳಲು ವ್ಯವಸ್ಥೆಯೊಂದನ್ನು ರೂಪಿಸಬೇಕು. ಒಳ್ಳೆಯ ಕೈಗಾರಿಕಾ ವಾತಾವರಣ ಸೃಷ್ಟಿ ಹಾಗೂ ಕಾರ್ಮಿಕರ ಹಿತಾಸಕ್ತಿಯ ರಕ್ಷಣೆ ನಡುವೆ ಸಮತೋಲನವನ್ನು ಸಾಧಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT